ಮೂರು ಕತೆಗಳ ಈ ಹಿಂದಿ ಆಂಥಾಲಜಿ ಸಿನಿಮಾದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿಯವರ ‘ದಗಡೂ ಪರಬನ ಅಶ್ವಮೇಧ’ ಸಂಕಲನದ ‘ಮಧ್ಯಂತರ’ ಕತೆಯೂ ಚಿತ್ರವಾಗಿದೆ. ‘ಅನ್‌ಕಹಿ ಕಹಾನಿಯಾ’ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕೋಟ್ಯಾಂತರ ಮಂದಿ ನಡುವೇ ಇದ್ದರೂ ಕಾಡುವ ಏಕಾಂತ, ಮುಟ್ಟದೆ ಮುದ್ದಾಡದೆ ಅನುಭವಿಸೋ ಪ್ರೀತಿಯ ಚಡಪಡಿಕೆ, ಎಲ್ಲಾ ಇದ್ದೂ ಏನೋ ಕೊರತೆ ಅನಿಸಿಯೋ, ಅತಿ ಮೋಹದಿಂದಲೋ ಮತ್ತೆಲ್ಲೋ ಕವಲೊಡೆಯುವ ಸಂಬಂಧಗಳು, ಒಂಟಿತನ, ಪ್ರೀತಿ, ತಿಳುವಳಿಕೆಯಿಂದ ಬೆಸೆದುಕೊಳ್ಳಬಹುದಾದ ಭಾವನಾತ್ಮಕ ಬಂಧ, ಇವೆಲ್ಲದರ ದೃಶ್ಯರೂಪಕವೇ ‘ಅನ್‌ಕಹಿ ಕಹಾನಿಯಾ’ ಸಿನಿಮಾ ಕಥಾಗುಚ್ಛ.
ಚಿತ್ರದಲ್ಲಿ ಮೂರು ಪ್ರೇಮಕಥೆಗಳಿವೆ. ಮೊದಲನೆಯದ್ದು ಹಳ್ಳಿಯೊಂದರಿಂದ ಕಾಯಕ ಅರಸಿ ಮಹಾನಾಗರ ತಲುಪಿ ಒಂದು ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಯುವಕ ಪ್ರದೀಪನ ಒಂಟಿತನದ ಭಾವನಾತ್ಮಕ ತೊಳಲಾಟವನ್ನು ತೆರೆದಿಡುವ ಕತೆ. ಅವನ ವಾಸದ ರೂಮಿನಲ್ಲಿ ಜೊತೆಗಾರನಿದ್ದಾನೆ. ರಾತ್ರಿ ಹಗಲೆನ್ನದೆ ಕಿವಿಗೊಂದು ಯಿಯರ್ ಫೋನು ತುರುಕಿಕೊಂಡು ಸದಾ ತನ್ನ ಪ್ರೇಯಸಿಯೊಂದಿಗೆ ಪಿಸುಗುಡುತ್ತ ಅವನೊಂದು ಲೋಕದಲ್ಲಿ ಕಳೆದುಹೋಗಿದ್ದಾನೆ. ಇತ್ತ ಕೆಲಸ ಮಾಡುವ ಜಾಗದಲ್ಲೂ ಒಬ್ಬ ಜೊತೆಗಾರನಿದ್ದಾನೆ. ಅವನೂ ನಿತ್ಯ ತನ್ನ ಗೆಳೆಯತಿಯೊಂದಿಗೆ ಡೇಟಿಂಗ್‌ನಲ್ಲಿ ಬ್ಯುಸಿ ಇರುತ್ತಾನೆ. ಹೀಗೆ ಎಲ್ಲರೂ ಅವರವರ ಬದುಕಿನಲ್ಲಿ ಕಳೆದು ಹೋಗಿದ್ದಾರೆ.
ಇತ್ತ ಪ್ರದೀಪ ತನ್ನ ನೋವು, ನಲಿವು ನುಂಗಿಕೊಂಡು ಶ್ರದ್ಧಾ ಭಕ್ತಿಯಿಂದ ತನ್ನ ಕಾಯಕ ನಿಭಾಯಿಸುತ್ತಾ ಯಾಂತ್ರಿಕ ಬದುಕಿನಲ್ಲಿ ಏಕಾಂಗಿ ಜೀವನ ಸಾಗಿಸುತ್ತಿದ್ದಾನೆ. ಹೀಗೆ ಸಾಗುವ ಕತೆಗೆ ತಿರುವು ಸಿಗುವುದು ಪ್ರದೀಪನು ಕೆಲಸ ಮಾಡುವ ಅಂಗಡಿಗೆ ಹೆಣ್ಣಿನ ಗೊಂಬೆ ಬಂದಾಗ. ಸ್ತ್ರೀಯರ ಉಡುಪುಗಳನ್ನು ಪ್ರದರ್ಶಿಸಲು ಮಾಲೀಕ ಈ ಗೊಂಬೆಯನ್ನು ತರುತ್ತಾನೆ. ಪ್ರದೀಪ ಈ ಗೊಂಬೆಯೊಂದಿಗೆ ಭಾವನಾತ್ಮಕ ಬಂಧ ಬೆಳೆಸಿಕೊಳ್ಳುತ್ತಾನೆ. ಅದರೊಂದಿಗೆ ಮಾತನಾಡುತ್ತ, ಕಾಲ ಕಳೆಯುತ್ತಾ ಸುತ್ತಾಡುವುದಕ್ಕೆ ಶುರುಮಾಡುತ್ತಾನೆ. ಅವನ ಈ ನಡವಳಿಕೆಯನ್ನು ಅನುಮಾನಿಸುವ ಸುತ್ತಲಿನವರು ಆತನನ್ನು ಹುಚ್ಚ ಎನ್ನುವಂತೆ ಕಾಣತೊಡಗುತ್ತಾರೆ. ಮಾಲೀಕ ಆತನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ತನಗಾದ ಅವಮಾನದಿಂದ ಬೇಸರವಾಗಿ ತನ್ನ ಊರು ತಲುತ್ತಾನೆ ಪ್ರದೀಪ. ನಂತರದಲ್ಲಿ ಸಂಧಿಸುವ ಸಾಂಗತ್ಯ ಸಮಾಧಾನ ತರುತ್ತದೆ. ಪಟ್ಟಣಕ್ಕೆ ಹಿಂದಿರುಗುತ್ತಾನೆ. ಅವನ ಒಡಲಾಳದ ನೋವು ಮಾತಾಗಿ ಹರಿದು ಪ್ರೇಕ್ಷಕರನ್ನು ತಲುಪುತ್ತದೆ. ಮಹಾನಾಗರಗಳಲ್ಲಿ ಬದುಕುತ್ತಿರುವ ಯುವ ಸಮೂಹಕ್ಕೆ ಬಹಳ ಹತ್ತಿರವೆನಿಸಿ ಪ್ರದೀಪನ ಏಕಾಂತ ಮತ್ತು ಗೊಂಬೆಯೊಂದಿಗಿನ ಸಂಬಂಧ ಪ್ರೇಕ್ಷಕರನ್ನು ಕಾಡುತ್ತಾ ‘ಹೇಳಿರದ ಕತೆ’ಯ ಮರೆಯಲಾರದ ಕತೆಯಾಗಿ ಉಳಿಯುತ್ತದೆ.
ಎರಡನೆಯ ಕಥೆ ಜಯಂತ್ ಕಾಯ್ಕಿಣಿಯವರ ‘ಮಧ್ಯಂತರ’ ಕಥೆಯನ್ನಾಧರಿಸಿದ ಚಿತ್ರಕಥೆ. ಮುಂಬೈನ ಹಳೆಯ ಚಿತ್ರಮಂದಿರಗಳ ರೂಪು ರೇಶೆ ಸಂಭ್ರಮ ಸಡಗರ ಮತ್ತು ಯುವ ಪ್ರೇಮಿಗಳ ವಿಭಿನ್ನ ಪ್ರೇಮ ತೆರೆದಿಡುವಂತ ಚಿತ್ರ. ನಂದು ಥಿಯೇಟರ್‌ನಲ್ಲಿ ಬ್ಯಾಟರಿ ಬಿಡುವ ಹುಡುಗ. ಸಿನಿಮಾ ಹುಚ್ಚಿನ ಮರಾಠಿ ಹುಡುಗಿ ಮಂಜರಿ. ಇಬ್ಬರದು ತಳವರ್ಗದ ಕುಟುಂಬಗಳೇ. ಇಬ್ಬರಿಗೂ ಅವರದ್ದೇ ಆದ ಜಂಜಾಟಗಳಿವೆ. ಈ ಇಬ್ಬರೂ ಚಲನಚಿತ್ರ ಪ್ರದರ್ಶನದ ಸಮಯದಲ್ಲಿ ಚಿತ್ರ ಮಂದಿರದಲ್ಲಿ ಭೇಟಿಯಾಗುತ್ತಾರಾದರೂ ನಡುವೆ ಮಾತಿಲ್ಲ. ಒಮ್ಮೆ ಮಂಜರಿ ಚಿತ್ರಮಂದಿರದೊಳಗೆ ಪರ್ಸ್ ಬಿಟ್ಟು ಬಂದಿರುತ್ತಾಳೆ. ಮತ್ತೆ ಹುಡಿಕಿ ಬರುವಾಗಲೇ ಮೊದಲಿಗೆ ನಂದುವಿನೊಂದಿಗೆ ಮಾತಾಗುವುದು.
ಇಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ನಿತ್ಯ ನೋಟಗಳ ವಿನಿಮಯದಿಂದಲೇ ಪ್ರೇಮಿಗಳಾಗಿ ಪರಿವರ್ತನೆಗೊಳ್ಳುತ್ತಾರೆ. ಇಬ್ಬರಲ್ಲೂ ಪ್ರೀತಿ ಚಿಗುರಿ ಒಬ್ಬರನ್ನೊಬ್ಬರು ಚಲನಚಿತ್ರ ನಾಯಕ, ನಾಯಕಿಯರಂತೆ ಕಲ್ಪಿಸಿಕೊಳ್ಳುವಂತ ದೃಶ್ಯಗಳೊಂದಿಗೆ ಕತೆ ಸಾಗುತ್ತದೆ. ಕಾಲಾಂತರದಲ್ಲಿ ಈ ಇಬ್ಬರೂ ನಮ್ಮ ಬದುಕಿನ ಸುಖ ದುಖಃಗಳ ವಿನಿಮಯವಾಗಿಸಿಕೊಳ್ಳುತ್ತ, ತಮ್ಮ ಗೋಜಲಿಂದ ಹೊರಬಂದು ಕವಲೊಡೆದು ತಮ್ಮ ಕನಿಸಿನಂತೆ ಹೊಸ ಬದುಕು ರೂಪಿಸಿಕೊಳ್ಳಲು ದಾರಿ ರೂಪಿಸಿಕೊಳ್ಳುತ್ತಾ, ಹೊಸ ಹೊಸದಿಕ್ಕುಗಳ ಪಯಣದ ಶುರುವಿನೊಂದಿಗೆ ಚಿತ್ರ ಕೊನೆಯಾಗುತ್ತದೆ. ಮೂಲ ಕತೆಯಿಂದ ಸಿನಿಮವಾಗುವುದರಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿವೆ. ಪ್ರೇಕ್ಷರನ್ನು ಚಿತ್ರದಿಂದ ಚಿತ್ರಮಂದಿರಕ್ಕೆ ಕರೆದೊಯ್ಯುವಂತ ತಂತ್ರಗಾರಿಕೆ ಅಚ್ಚುಕಟ್ಟಾಗಿ ರೂಪುಗೊಂಡಿದೆ. ಪ್ರೇಕ್ಷಕರಿಗೆ ಅಂದಿನ ಚಿತ್ರಮಂದಿರಗಳ ಅನುಭವಗಳನ್ನು ನೆನೆಪಿಸುವ ತಂತ್ರಗಾರಿಕೆ ಮತ್ತ ವಿಭಿನ್ನ ಪ್ರೇಮಕತೆ ಗಮನ ಸೆಳೆಯುತ್ತದೆ.
ಮೂರನೆಯದು ಇವೆರಡಕ್ಕಿಂತಲೂ ತುಸು ವಿಭಿನ್ನ ಕತೆ. ಇದು ಹೈಕ್ಲಾಸ್ ಮಂದಿಯ ವೈವಾಹಿಕ ಜೀವನದ ಪ್ರಾಮಾಣಿಕತೆ, ನ್ಯೂನ್ಯತೆ, ಹೊಂದಾಣಿಕೆಯ ಕುರಿತು ಮಾತಾಡುವ ಚಿತ್ರ. ತನು ಮಾಥುರ್ ತನ್ನ ಪತಿ ಅರ್ಜುನ್ ಮಾಥುರ್‌ನೊಂದಿಗೆ ಸಂತೋಷದಿಂದಿರುವ ಪತ್ನಿ. ಗಂಡ ಉಡುಗೊರೆಯಾಗಿ ಆಕೆಗೊಂದು ನೆಕ್ಲೇಸ್ ಕೊಡಿಸಿದ್ದಾನೆ. ನೆಕ್ಲೇಸ್‌ನ ಕೊಂಡಿ ಹಾಳಾಗಿದ್ದು, ಅದರ ರೀಪ್ಲೇಸ್‌ಮೆಂಟ್‌ಗಾಗಿ ಶೋರೂಂಗೆ ಕರೆಮಾಡಿದಾಗ, ಗಂಡ ಎರಡು ನೆಕ್ಲೇಸ್ ಖರೀದಿಸಿರುವ ಮಾಹಿತಿ ತಿಳಿಯುತ್ತದೆ. ಅನುಮಾನಗೊಂಡು ಬೇಹುಗಾರಿಕೆ ಆರಂಬಿಸಿದಾಗ ಸಂಸಾರದ ಕೊಂಡಿಯೇ ಕಳಚಿರುವುದು ಗೋಚರಿಸುತ್ತದೆ. ಅರ್ಜುನ್ ತನ್ನ ಸಹೋದ್ಯೋಗಿ ನತಾಶಾ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸುವಂತೆ ಕತೆ ಸಾಗುತ್ತದೆ.
ನಂತರದಲ್ಲಿ ಪೂರ್ಣ ಸತ್ಯವನ್ನು ಕಂಡುಕೊಳ್ಳಲು ನಿರ್ಧರಿಸಿ ನತಾಶಾಳ ಪತಿ ಮಾನವ್‌ನನ್ನು ಸಂಪರ್ಕಿಸುತ್ತಾಳೆ. ಅವನಿಗೂ ವಿಷಯ ತಿಳಿಸಿ ಆಗಿರುವ ತಪ್ಪನ್ನು ಸರಿಪಡಿಸಲು ಸಹಾಯ ಕೇಳುತ್ತಾಳೆ. ತನು ಮತ್ತು ಮಾನವ್ ತಮ್ಮ ಸಂಗಾತಿಗಳು ಮೋಸ ಮಾಡಲು ಪ್ರೇರೇಪಿಸಿರಬಹುದಾದ ವಿವರಗಳನ್ನು ಕಲ್ಪಿಸಿಕೊಳ್ಳುವ ಶೈಲಿಯಲ್ಲಿ ಚಿತ್ರಕಥೆ ಸಾಗುತ್ತದೆ. ದೃಶ್ಯಗಳು ಸಾಗುತ್ತಾ ತನು ಮತ್ತು ಮಾನವ್ ಪರಸ್ಪರ ಇಷ್ಟವಾಗುವಂತೆ ಬಿಂಬಿತವಾಗುತ್ತದೆ. ಅವರಿಬ್ಬರ ತಿಳುವಳಿಕೆ ಹೆಚ್ಚಾಗುವುದರೊಂದಿಗೆ ಭಾವನಾತ್ಮಕ ಬಂಧವೊಂದು ಏರ್ಪಡುತ್ತದೆ. ಆದರೆ ಇಲ್ಲಿ ಎಲ್ಲಾ ಕಲ್ಪಿತವಾಗಿರುವುದರಿಂದ ಯಾವುದೂ ಖಚಿತ ಅಂತಲೂ, ಖಚಿತವಲ್ಲ ಎಂದೂ ನಿರ್ಧರಿಸಲೂ ಸಾಧ್ಯವಾಗುವುದಿಲ್ಲ. ಸಮಸ್ಯೆ ಬಗೆಹರಿಯಿತು ಎನಿಸುವುದೂ ಇಲ್ಲ. ಎಲ್ಲಾ ಪ್ರೇಕ್ಷಕರ ಗ್ರಹಿಕೆಗೆ ಬಿಟ್ಟದ್ದು ಎನ್ನುವಂತಹ ತರ್ಕ.
ಮೂರು ಕತೆಗಳ ಚಿತ್ರಕಥೆ ಹೆಣಿಗೆಯಲ್ಲಿನ ತಂತ್ರಗಾರಿಕೆ, ನಿರೂಪಣೆಯಲ್ಲಿ ಭಿನ್ನತೆಯಿದೆ. ಮೊದಲ ಕತೆ ನಗಿಸುತ್ತಲೇ ಕಾಡುತ್ತದೆ. ‘ಮಧ್ಯಂತರ’ ಯುವ ಪ್ರೇಮಿಗಳ ಚಡಪಡಿಕೆ ತೆರೆಡುತ್ತದೆ. ಮೂರನೆಯದು ಒಂದು ವರ್ಗದ ಪ್ರೇಕ್ಷಕರಿಗೆ ಪೇಲವ ಕತೆ ಎನಿಸಿದರೆ, ಮತ್ತೊಂದು ವರ್ಗಕ್ಕೆ ಗಟ್ಟಿಯಾದ ವಸ್ತು ಎಂದು ಎನಿಸಬಹುದು. ಒಟ್ಟಾರೆಯಾಗಿ ಇದೊಂದು ಸಾಮಾನ್ಯ ಸಿನಿಮಾ ಎನಿಸಿದರೂ ವಿಶಿಷ್ಟ ಕಥೆಗಳು ಚಿಂತನೆಗೆ ಹಚ್ಚುತ್ತವೆ. ಪಾತ್ರವರ್ಗ ಪ್ರಭಾವಶಾಲಿಯಾಗಿದೆ. ಮುಂದೇನಾಗಬಹುದು ಎನ್ನುವ ಪ್ರಶ್ನೆಯನ್ನು ಕಡೇವರೆಗೂ ಜೀವಂತವಾಗಿಡುವ ನಿರೂಪಣೆಯಿದೆ. ಸದ್ಯ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಈ ಸಿನಿಮಾ ಚಿತ್ರರಸಿಕರಿಗೆ ವಿಭಿನ್ನ ಪ್ರಯೋಗ ಅನಿಸಬಹುದು. ಇಲ್ಲಿ ಚಲಚಿತ್ರ ವಿಭಾಗದ ಎರಡು ಸಂಸ್ಕೃತಿ ಸಮಾಗಮವಾಗಿವೆ. ಒಂದು, ಅಂದಿನಿಂದ ನಡೆದು ಬಂದಿರುವಂತಹ ಕಾದಂಬರಿ ಆಧರಿಸಿ ಚಿತ್ರ ತಯಾರಿಸುವಂಥದ್ದು. ಇನ್ನೊಂದು, ಎಂದೋ ಪ್ರಯೋಗವಾಗಿ ಇಂದಿಗೆ ಪ್ರಚಲಿತವಾಗುತ್ತಿರುವಂಥ ಆಂಥಾಲಜಿ ಮಾದರಿ. ಇವೆರೆಡೂ ಒಂದೇ ಚಿತ್ರದಲ್ಲಿ ಸಂಭವಿಸಿರುವುದು ವಿಶೇಷ ಸಂದರ್ಭ.
ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲೇ ಕಾದಂಬರಿ ಆಧರಿಸಿದ ಸಿನಿಮಾಗಳು ತಯಾರಾಗಿವೆ. ಕಾದಂಬರಿ ಆಧರಿಸಿ ಪ್ರತಿಭಾವಂತ ನಿರ್ದೇಶಕರು ತಯಾರಿಸಿದ ಚಿತ್ರಗಳು ತಮ್ಮದೇ ಆದ ಛಾಪು ಮೂಡಿಸಿವೆ. ಸದ್ಯ ಅಂತಹ ಪ್ರಯೋಗಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ಜಯಂತ್ ಕಾಯ್ಕಿಣಿಯವರು ಬರೆದಿದ್ದ ಕನ್ನಡದ ಕತೆಯೊಂದು ಭಾಷಾಂತರಗೊಂಡು ಹಿಂದಿ ಚಿತ್ರಕ್ಕೆ ಕತೆಯಾಗಿರುವುದು ಹೆಮ್ಮೆಯ ವಿಷಯ.