ಸೂರ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ ನಟನೆಯ ‘ಗೌಳಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನೈಜ ಘಟನೆಯೊಂದನ್ನು ಆಧರಿಸಿದ ಕತೆ. ಪಾವನಾ ನಾಯಕಿಯಾಗಿ ನಟಿಸಿದ್ದು ಇದೊಂದು ಆಕ್ಷನ್‌ – ಡ್ರಾಮಾ ಎನ್ನುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ.

ವರ್ಷಗಳಿಂದ ಸಿನಿಮಾದಿಂದ ದೂರವಿದ್ದ ಶ್ರೀನಗರ ಕಿಟ್ಟಿ ‘ಗೌಳಿ’ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಆಕ್ಷನ್‌ ಸನ್ನಿವೇಶಗಳ ಚಿತ್ರೀಕರಣದೊಂದಿಗೆ ಗಮನ ಸೆಳೆದಿತ್ತು. ಬೆಂಗಳೂರು ನೆಲಮಂಗಲ ಬಳಿಯ ಅರಿಶಿನಕುಂಟೆ ಸುತ್ತಮುತ್ತ ಚಿತ್ರಕ್ಕೆ ಸಾಹಸ ಸನ್ನಿವೇಶಗಳನ್ನು ಚಿತ್ರಿಸಿದ್ದರು. ಬಾಳೆ, ಮೆಕ್ಕೆಜೋಳದ ಹೊಲಗಳನ್ನು ಗುತ್ತಿಗೆ ಪಡೆದು ದುಬಾರಿ ವೆಚ್ಚದಲ್ಲಿ ಆಕ್ಷನ್‌ ಸೀನ್‌ಗಳು ಚಿತ್ರಣಗೊಂಡಿದ್ದವು. ಈ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ನೂರಕ್ಕೂ ಹೆಚ್ಚು ಸಾಹಸ ಕಲಾವಿದರು ಪಾಲ್ಗೊಂಡಿದ್ದರು. ನಿರ್ಮಾಪಕ ರಘು ಸಿಂಗಂ ಅವರು ಸಾಹಸ ಕಲಾವಿದರಿಗೆ ಇನ್‌ಷೂರೆನ್ಸ್‌ ಮಾಡಿಸಿದ್ದು ಆಗ ಸುದ್ದಿಯಾಗಿತ್ತು. ಅಲ್ಲಿ ಚಿತ್ರಿಸಿರುವ ಆಕ್ಷನ್‌ ಸನ್ನಿವೇಶಗಳು ಟ್ರೈಲರ್‌ನಲ್ಲಿವೆ. ಕೌಟುಂಬಿಕ ದೃಶ್ಯಗಳ ಒಂದೆರೆಡು ದೃಶ್ಯಗಳಿದ್ದರೂ, ಚಿತ್ರದಲ್ಲಿ ಆಕ್ಷನ್‌ಗೆ ಒತ್ತು ನೀಡಿರುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ.

ಮೂಲತಃ ಫೋಟೊಗ್ರಾಫರ್‌ ಆದ ಸೂರ ಅವರು ‘ಗೌಳಿ’ ಚಿತ್ರದೊಂದಿಗೆ ನಿರ್ದೇಶಕರಾಗಿದ್ದಾರೆ. ನೈಜ ಘಟನೆಯೊಂದರ ಪ್ರೇರಣೆಯಿಂದ ಕತೆ, ಚಿತ್ರಕಥೆ ಮಾಡಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನ ಹಲವು ನಾಯಕನಟರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಚಿತ್ರದ ನಿರ್ಮಾಪಕ ರಘು ಸಿಂಗಂ ಅವರದ್ದು ಚಿತ್ರರಂಗದ ಜೊತೆ ಹಳೆಯ ನಂಟು. ತಮ್ಮ ಪುತ್ರನ ಹೆಸರಿನಲ್ಲಿ ಸೋಹನ್‌ ಫಿಲಂ ಫ್ಯಾಕ್ಟರಿ ಬ್ಯಾನರ್‌ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ನಿರ್ದೇಶಕರ ಪ್ರಕಾರ ‘ಗೌಳಿ’ ಸಮುದಾಯದವರು ಮಹಾರಾಷ್ಟ್ರದಿಂದ ವಲಸೆ ಬಂದವರು. ಹಾಲು ಮಾರುವುದು ಅವರ ವೃತ್ತಿ. ಶೀರ್ಷಿಕೆ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದು, ಇದು ಅವರ ವೃತ್ತಿ ಬದುಕಿನ ದುಬಾರಿ ವೆಚ್ಚದ ಚಿತ್ರವಾಗಲಿದೆ ಎನ್ನಲಾಗುತ್ತಿದೆ. ಅವರಿಗೆ ನಾಯಕಿಯಾಗಿ ಪಾವನಾ ಇದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here