ಭಾರತದ ಖ್ಯಾತ ಕವಿ, ನಾಟಕಕಾರ ರವೀಂದ್ರನಾಥ ಟ್ಯಾಗೋರ್‌ ಅವರ ಬಯೋಪಿಕ್‌ ಸಿನಿಮಾಗೆ ಸಿದ್ಧತೆ ನಡೆದಿದೆ. ಶೀರ್ಷಿಕೆ ಪಾತ್ರದಲ್ಲಿ ಅನುಪಮ್‌ ಖೇರ್‌ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಅನುಪಮ್‌.

ಬಾಲಿವುಡ್ ನಟ ಅನುಪಮ್ ಖೇರ್ ಅವರು ರವೀಂದ್ರನಾಥ ಟ್ಯಾಗೋರ್‌ ಬಯೋಪಿಕ್ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಮುಖ ಪ್ರತಿಭೆ ಅನುಪಮ್‌ ಅವರು ಕವಿ, ದಿವಂಗತ ರವೀಂದ್ರನಾಥ ಟ್ಯಾಗೋರ್ ಅವರ ಜೀವನ ಆಧರಿಸಿದ ಯೋಜನೆಯ ಭಾಗವಾಗಲಿದ್ದಾರೆ. ನಟ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ, ಮುಂಬರುವ ಯೋಜನೆಯ ಕ್ಲಿಪ್‌ ಒಂದನ್ನು ಹಂಚಿಕೊಂಡು, ‘ನನ್ನ 538ನೇ ಚಿತ್ರದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಜೀವನ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿಯಿದೆ. ಗುರುದೇವನನ್ನು ತೆರೆಯ ಮೇಲೆ ಸಾಕಾರಗೊಳಿಸುವ ಭಾಗ್ಯ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ಚಿತ್ರದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ’ ಎಂದು ಬರೆದಿದ್ದಾರೆ.

ರವೀಂದ್ರನಾಥ ಟ್ಯಾಗೋರ್ ಅವರು ಬೆಂಗಾಲಿ ಭಾಷೆಯ ಮಹಾ ವಿದ್ವಾಂಸರು, ಕವಿ, ಕಾದಂಬರಿಕಾರ, ಸಂಗೀತಗಾರ ಮತ್ತು ನಾಟಕಕಾರ. 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಬೆಂಗಾಲಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟವರು. ಅವರು ರಚಿಸಿದ ‘ಗೀತಾಂಜಲಿ’ ಕಾವ್ಯಕ್ಕೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಈ ಮೂಲಕ ಅವರು ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ರಚಿಸಿದ ಕೀರ್ತಿಯೂ ಟ್ಯಾಗೋರ್ ಅವರಿಗೆ ಸಲ್ಲುತ್ತದೆ.

LEAVE A REPLY

Connect with

Please enter your comment!
Please enter your name here