ಕಿರುತೆರೆ ಮೂಲಕ ಹಿರಿತೆರೆಗೆ ಪರಿಚಯವಾದ ನಟಿ ಅಪೂರ್ವ ಭಾರದ್ವಾಜ್‌ ‘BAD’ ಸಿನಿಮಾದಲ್ಲಿ ಪ್ರೀತಿಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪಿ ಸಿ ಶೇಖರ್‌ ಚಿತ್ರದಲ್ಲಿ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳನ್ನು ಸೃಷ್ಟಿಸಿದ್ದು, ಈ ಪೈಕಿ ಅಪೂರ್ವ ಅವರದ್ದೊಂದು ಪಾತ್ರವಿದೆ.

‘ಚಿತ್ರದಲ್ಲಿ ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಿವೆ. ಆ ಪೈಕಿ ಕಾಮ ಎಂಬ‌ ವರ್ಗವನ್ನು ಅನು ಎಂಬ ಪಾತ್ರದ ಮೂಲಕ ತೋರಿಸಲಾಗುತ್ತಿದೆ. ಈ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ಮ ಚಿತ್ರದಲ್ಲಿ ಕಾಮವನ್ನು ಪ್ರೀತಿಗೆ ಬದಲಾಯಿಸಿ ತೋರಿಸಲಾಗುತ್ತಿದೆ’ ಎನ್ನುತ್ತಾರೆ ‘BAD’ ಚಿತ್ರದ ನಿರ್ದೇಶಕ ಪಿ ಸಿ ಶೇಖರ್‌. ಅಪೂರ್ವ ಅವರ ಪಾತ್ರವನ್ನು ಪರಿಚಯಿಸುವ ಅವರು, ‘ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆಸರೆಯಲ್ಲಿ ಬೆಳೆದ ಹುಡುಗಿ ಅನು. ತಾಯಿ ಪ್ರೀತಿ ಕಾಣದ ಈ ಹುಡುಗಿಗೆ ಯಾರ ಬಳಿ ಹೇಗೆ ಪ್ರೀತಿ ವ್ಯಕ್ತಪಡಿಸಬೇಕೆಂದು ತಿಳಿದಿರುವುದಿಲ್ಲ. ಈ ಪಾತ್ರಕ್ಕೆ ಮಾತು ಕಡಿಮೆ. ಕಣ್ಣಿನಲ್ಲೇ ಭಾವನೆಗಳನ್ನು ಹೇಳುವ ಹಾಗೂ ಗುಂಗುರು ಕೂದಲುಳ್ಳ ಸಹಜ ಸುಂದರಿಯಂತೆ ಕಾಣುವ ಪಾತ್ರವಿದು.‌ ಈ ಪಾತ್ರಕ್ಕೆ ಅಪೂರ್ವ ಅವರ ಆಯ್ಕೆ ಅತ್ಯಂತ ಸೂಕ್ತ ಎನಿಸಿದೆ’ ಎನ್ನುತ್ತಾರೆ.

ಸಾಕಷ್ಟು ಜನಪ್ರಿಯ ಧಾರಾವಾಹಿಗಳ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಅಪೂರ್ವ ಇತ್ತೀಚೆಗೆ ತೆರೆಕಂಡ ‘ನಾನು, ಅದು ಮತ್ತು ಸರೋಜ’ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘BAD’ ಚಿತ್ರದಲ್ಲಿ ಅವರ ಪಾತ್ರ ಬರುವ ಕಡೆಯೆಲ್ಲಾ ಪಿಂಕ್ (ಗುಲಾಬಿ ಬಣ್ಣ) ಶೇಡ್‌ನಲ್ಲಿ ಚಿತ್ರಿಸಿದ್ದಾರಂತೆ ನಿರ್ದೇಶಕರು. ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿದೆ. ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ‘ಪ್ರೀತಿಯ ರಾಯಭಾರಿ’ ಚಿತ್ರದ ಮೂಲಕ ಹೀರೋ ಆದ ನಕುಲ್ ಗೌಡ ‘BAD’ ಚಿತ್ರದಲ್ಲಿ ‘ಕ್ರೋಧ’ವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನ್ವಿತ ಹರೀಶ್, ಸಾಯಿ ಕೃಷ್ಣ, ಮಂಜುನಾಥ್, ಅಶ್ವಿನಿ ಚಿತ್ರದ ಇತರೆ ಪ್ರಮುಖ ಕಲಾವಿದರು.

Previous article‘ನನಗೂ ಹೆಂಡ್ತಿ ಬೇಕು’ | ಅಂಧನಾಗಿ ತಬಲಾ ನಾಣಿ, ಮೂಗಿ ಪಾತ್ರದಲ್ಲಿ ಚೈತ್ರಾ ಕೋಟೂರು
Next articleಸೆಟ್ಟೇರಿದ ‘Aaina’ | ಬಾಲಿವುಡ್‌ ನಟಿ ರಿಚಾ ಛಡ್ಡಾ ನಟನೆಯ ಮೊದಲ ಹಾಲಿವುಡ್‌ ಸಿನಿಮಾ

LEAVE A REPLY

Connect with

Please enter your comment!
Please enter your name here