ಚಿತ್ರವನ್ನು ನೋಡಲು ಇರುವ ಏಕೈಕ ಕಾರಣ ಊರ್ವಶಿ. ಚಿತ್ರವನ್ನು ನಂಬಲರ್ಹವಾಗಿಸುವುದು, ಅಲ್ಲಿ ಬರುವ ಸನ್ನಿವೇಶಗಳನ್ನು ಪ್ರೇಕ್ಷಕರು ಒಂದು ಹಂತಕ್ಕೆ ಒಪ್ಪಿಕೊಳ್ಳುವಂತೆ ಮಾಡುವುದು ಊರ್ವಶಿಯೇ. ತಮ್ಮ ವಿಶಿಷ್ಟ ನಟನೆ, ದನಿಯ ಏರಿಳಿತ, ಹಾವಭಾವಗಳಿಂದ ‘ಅಪ್ಪತ್ತ’ವನ್ನು ಆಪ್ತವಾಗಿಸಿರುವುದು ಅವರ ಅಗಾಧ ಪ್ರತಿಭೆಗೆ ಸಾಕ್ಷಿ. ‘ಅಪ್ಪತ್ತ’ JioCinemaದಲ್ಲಿ ಸ್ಟ್ರೀಮ್ ಆಗುತ್ತಿದೆ.
ಹೊಸ ತಮಿಳು ಚಿತ್ರ ‘ಅಪ್ಪತ್ತ’ ಪ್ರಮುಖವಾಗಿ ಸೆಳೆಯುವುದು ಎರಡು ಹೆಸರುಗಳಿಂದಾಗಿ. ನಟಿ ಊರ್ವಶಿ ಮತ್ತು ನಿರ್ದೇಶಕ ಪ್ರಿಯದರ್ಶನ್. ತಮಿಳು ಚಿತ್ರರಂಗದಲ್ಲಿ ಇಬ್ಬರದ್ದೂ ಚಿರಪರಿಚಿತ ಹೆಸರಾದರೂ, ತಮ್ಮ ಮಾತೃಭಾಷೆ ಮಲಯಾಳಂ ಬಿಟ್ಟು ತಮಿಳಿನಲ್ಲಿ ಚಿತ್ರ ಹೊರತಂದಿರುವುದು ಸ್ವಲ್ಪ ವಿಶೇಷವೇ. ಜೊತೆಗೆ, ಅತ್ಯುತ್ತಮ ನಟಿಯರ ಸಾಲಿನಲ್ಲಿ ಭದ್ರ ಸ್ಥಾನ ಪಡೆದಿರುವ ಊರ್ವಶಿ ಅವರ 700ನೇ ಚಿತ್ರ ಇದು ಎನ್ನುವುದು ಮತ್ತೊಂದು ಹೆಗ್ಗಳಿಕೆ.
ಊರಿನ ಹೆಣ್ಣುಮಕ್ಕಳನ್ನು ಸೇರಿಸಿಕೊಂಡು ಸಣ್ಣ ಮಟ್ಟದ ಉಪ್ಪಿನಕಾಯಿ ಉದ್ಯಮ ನಡೆಸುವ ಕಣ್ಣಮ್ಮ (ಊರ್ವಶಿ) ತನ್ನೂರಿನಲ್ಲಿ ಅಪ್ಪತ್ತ ಎಂದೇ ಹೆಸರುವಾಸಿ. ಗಂಡನನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿರುವವಳಿಗೆ ತನ್ನ ಒಬ್ಬನೇ ಮಗ ಸ್ಯಾಮ್ ಮೇಲೆ ಪ್ರಾಣ. ಆದರೆ, ಚೆನ್ನೈ ನಿವಾಸಿ ಮಗನಿಗೆ ಅಮ್ಮನ ನೆನಪಾಗುವುದೇ ಅಪರೂಪ. ಇಂತಹ ಮಗ ಒಮ್ಮಿಂದೊಮ್ಮೆಲೇ ಫೋನ್ ಮಾಡಿ ತನ್ನ ಚೆನ್ನೈ ಮನೆಗೆ ಬಾ ಎಂದಾಗ, ಅಪ್ಪತ್ತ ಸಡಗರದಿಂದಲೇ ಚೆನ್ನೈಗೆ ಹೊರಡುತ್ತಾಳೆ. ಆಕೆಯ ಮಗನ ಅಹ್ವಾನದ ಹಿಂದಿರುವ ನಿಜವಾದ ಕಾರಣ ಮತ್ತು ಚೆನ್ನೈನಲ್ಲಿ ಆಕೆ ಎದುರಿಸುವ ಸವಾಲುಗಳನ್ನು ನಿರ್ದೇಶಕ ಪ್ರಿಯದರ್ಶನ್ ತಮ್ಮ ಬ್ರಾಂಡಿನ ಹಾಸ್ಯ, ಮೆಲೋಡ್ರಾಮಾಗಳ ಮೂಲಕ ಹೇಳುತ್ತಾರೆ.
ಭಾರತೀಯ ಚಿತ್ರರಂಗದಲ್ಲಿ ಹೆತ್ತವರನ್ನು ಕಡೆಗಣಿಸುವ , ಕೀಳಾಗಿ ನೋಡುವ ಸ್ವಾರ್ಥಿ ಮಕ್ಕಳ ಕತೆಗಳು ಸಾಕಷ್ಚಿವೆ. ವಿಪರ್ಯಾಸವೆಂದರೆ, ಇಂತಹ ಬಹುತೇಕ ಚಿತ್ರಗಳು ಎರಡು ಪೀಳಿಗೆಯ ನಡುವಣ ಅಂತರ, ಇಬ್ಬರ ನಿರೀಕ್ಷೆಗಳಲ್ಲಿರುವ ಭಿನ್ನತೆ, ಆಶೋತ್ತರಗಳಲ್ಲಿರುವ ವ್ಯತ್ಯಾಸವನ್ನು ಚರ್ಚಿಸದೆ, ಆ ಸಂಬಂಧಗಳಲ್ಲಿರುವ ಗ್ರೇ ಏರಿಯಾಗಳನ್ನು ಗುರುತಿಸದೆ ಒಬ್ಬರ ಪರವಾಗಿ ತೀರ್ಪು ಕೊಟ್ಟು ಬಿಡುತ್ತವೆ. ಅಪ್ಪತ್ತ ಕೂಡ ಈ ತೊಂದರೆಯಿಂದ ಹೊರತಾಗಿಲ್ಲ ಮತ್ತು ಬಹುತೇಕ ಈಗಾಗಲೇ ನೋಡಿರುವ ಕತೆಯನ್ನೇ, ಹೊಸ ಯಾವುದೇ ಆಯಾಮಗಳಿಲ್ಲದೆ ಮತ್ತೆ ಹೇಳಿದೆ. ಇಲ್ಲಿ ಮಗನ ಪಾತ್ರ ಅನಾವಶ್ಯಕವಾಗಿ ಮತ್ತು ಅಗತ್ಯಕ್ಕಿಂತ ಹೆಚ್ಚು ಅಸೂಕ್ಷ್ಮವಾಗಿದೆ. ಇಡೀ ಸಿನಿಮಾದಲ್ಲಿ ಯಾರ ಬಳಿಯೂ, ಯಾವ ಸಂದರ್ಭದಲ್ಲೂ ನಕ್ಕು ಮಾತನಾಡದ, ಮುಖ ಸಡಿಲಿಸದ ಸ್ಯಾಮ್ನನ್ನು ಅವನ ಹೆಂಡತಿಯಾದರೂ ಯಾಕೆ ಸಹಿಸಿಕೊಂಡಿದ್ದಾಳೋ ಅರ್ಥವಾಗುವುದಿಲ್ಲ. ಒಂದೇ ಸಮಾಧಾನವೆಂದರೆ ಆ ಪೀಳಿಗೆಯ ಎಲ್ಲರಿಗೂ ಒಂದೇ ಬಣ್ಣ ಹಚ್ಚದೆ ಸೊಸೆಗೆ ಖಳ ಛಾಯೆ ನೀಡದೆ ಆಕೆಯ ಪಾತ್ರವನ್ನು ಹೆಚ್ಚು ನೈಜವಾಗಿ ತೋರಿಸಲಾಗಿದೆ. ಆದರೆ, ಸೊಸೆಯ ಪಾತ್ರಕ್ಕೆ ಹೆಚ್ಚಿನ ಅವಕಾಶವೇನು ಚಿತ್ರದಲ್ಲಿ ಇಲ್ಲ.
ಚಿತ್ರದ ಆರಂಭದಲ್ಲಿರುವ ಹಳ್ಳಿಯ ದೃಶ್ಯಗಳು ಚಿತ್ರಕ್ಕೊಂದು ಉತ್ತಮ ಆರಂಭ ನೀಡುತ್ತವೆ. ಅಪ್ಪತ್ತ ಮತ್ತು ಹಳ್ಳಿಯ ಜನರ ನಡುವೆ ಇರುವ ಬಾಂಧವ್ಯ, ಆಕೆಯ ಬುದ್ದಿವಂತಿಕೆ, ಧೈರ್ಯ, ಮುಂದಾಳತ್ವ ಇವೆಲ್ಲ ಆಕೆಗೊಂದು ಗಟ್ಟಿ ವ್ಯಕ್ತಿತ್ವ ಕಟ್ಟಿಕೊಡುತ್ತದೆ. ಚಿತ್ರದ ಮೊದಲಿಗೆ ದಿನಾ ಕುಡಿದು ಬಂದು ತನ್ನ ಹೆಂಡತಿಗೆ ಹೊಡೆಯುವ ಗಂಡನೊಬ್ಬನ ವಿರುದ್ಧ ಅಪ್ಪತ್ತ, ಪೋಲೀಸರಿಗೆ ತಾನೇ ದೂರು ನೀಡುತ್ತಾಳೆ. ಆದರೆ, ಕುಡುಕನ ಹೆಂಡತಿ ತಾನು ಬಿದ್ದು ಮಾಡಿಕೊಂಡ ಗಾಯಗಳೆಂದು ಹೇಳಿ ಗಂಡ ಜೈಲಿಗೆ ಹೋಗುವುದನ್ನು ತಪ್ಪಿಸುತ್ತಾಳೆ. ಇಂತಹ ವಿವೇಕಿ, ಧೈರ್ಯಶಾಲಿ, ತನ್ನದೇ ರೀತಿಯಲ್ಲಿ ಮಹಿಳಾವಾದಿಯಾಗಿರುವ ಅಪ್ಪತ್ತ ಮಗನ ವಿಷಯ ಬಂದಾಗ ಅದೇ ಗಾಯ ಮುಚ್ಚಿಡುವ ಹೆಣ್ಣಾಗಿ ಬಿಡುತ್ತಾಳೆ. ಮಗನ ಅನಗತ್ಯ ಟೀಕೆ, ಅಸಹನೆ, ಸಿಟ್ಟುಗಳನ್ನು ನುಂಗಿ ಮತ್ತೆ ಅವನಿಗೇ ಹಂಬಲಿಸುವ ಅಪ್ಪಟ ಅಮ್ಮನಾಗಿ ಬಿಡುತ್ತಾಳೆ.
ಆಕೆ, ದೈಹಿಕವಾಗಿ ಶೋಷಣೆಗೆ ಒಳಗಾಗುತ್ತಿರುವ ಹೆಂಡತಿಯಾದರೆ, ತಾನು ಮಾನಸಿಕವಾಗಿ ಶೋಷಿತಳಾಗಿರುವ ಅಮ್ಮ ಎಂದು ಆಕೆಗೆ ಅನಿಸದೇ ಇರುವುದು ಅಸಹಜವಾಗಿದೆ. ಇದು ಆಕೆಯ ವ್ಯಕ್ತಿತ್ವದ ವೈರುಧ್ಯವಾಗಿ ಕಾಣದೆ, ಅರಗಿಸಿಕೊಳ್ಳುವುದು ಕಷ್ಚವಾಗುತ್ತದೆ. ಅಪ್ಪತ್ತ, ಚೆನ್ನೈಗೆ ಬಂದ ಮೇಲೆ ನಾಯಿಗಳ ಬಗ್ಗೆ ಆಕೆಗಿರುವ ಭಯ ಒಂದು ಪ್ರಮುಖ ಕಥಾಂಶವಾಗಿ ಮುಂದುವರಿಯುತ್ತದೆ. ಇದು ಚಿತ್ರದ ಭಾವವನ್ನೇ ಬದಲಿಸುತ್ತದೆ. ಚಿತ್ರ ಏಕಾಏಕಿ ಸ್ಲ್ಯಾಪ್ಸ್ಟಿಕ್ ಕಾಮಿಡಿಯ ರೂಪ ಪಡೆಯುತ್ತದೆ. ಈ ರೀತಿಯ ಫಿಸಿಕಲ್ ಕಾಮಿಡಿಯನ್ನು ತಮ್ಮ ಚಿತ್ರಗಳಲ್ಲಿ ಹೆಚ್ಚಾಗಿ ಬಳಸುವ ಪ್ರಿಯದರ್ಶನ್, ಇಲ್ಲೂ ಅದನ್ನು ಪ್ರಯೋಗಿಸಿದ್ದಾರೆ. ಆದರೆ, ಅದು ಹೆಚ್ಚು ನಗು ತರಿಸುವುದಿಲ್ಲ ಮತ್ತು ಚಿತ್ರದ ಒಟ್ಟಾರೆ ಫಲಿತಾಂಶಕ್ಕೆ ಯಾವುದೇ ರೀತಿಯಲ್ಲಿ ನೆರವಾಗುವುದಿಲ್ಲ. ಬಹುತೇಕ ವಾಸ್ತವಕ್ಕೆ ದೂರವಾಗಿರುವಂತೆ ಕಾಣುತ್ತದೆ. ಸ್ವಲ್ಪ ಸಮಯದ ನಂತರ ಮತ್ತೆ ಚಿತ್ರ ತನ್ನ ಸ್ಲ್ಯಾಪ್ಸ್ಟಿಕ್ ಕಾಮಿಡಿಯನ್ನು ಬಿಟ್ಟು, ಮೂಲ ಛಾಯೆಗೆ ಮರಳುತ್ತದೆ ಮತ್ತು ನಿರೀಕ್ಷಿತ ರೀತಿಯಲ್ಲೇ ಕತೆ ಸಾಗುತ್ತದೆ.
ಚಿತ್ರದ ತುಂಬಾ ಸಾಮಾನ್ಯವಾದ ಕತೆಯನ್ನು ಮೇಲೆತ್ತುವ ರೀತಿಯ ನಿರೂಪಣೆಯೂ ಇಲ್ಲದಿರುವುದು ಮತ್ತೊಂದು ತೊಂದರೆ. ಸಿನಿಮಾವನ್ನು ಒಂದೇ ರೇಖೆಯಲ್ಲಿ, ಆಗಾಗ, ಸಣ್ಣ ಫ್ಲಾಶ್ಬ್ಯಾಕ್ಗಳ ಸಹಾಯದೊಂದಿಗೆ ನಿರೂಪಿಸಲಾಗಿದೆ. ಈ ಫ್ಲಾಷ್ಬ್ಯಾಕ್ಗಳನ್ನು ಬಳಸಿರುವ ರೀತಿ ತೀರಾ ಹಳೆಯ ಶೈಲಿಯಲ್ಲಿದ್ದು, ಚಿತ್ರವನ್ನು ಅತೀ ಸರಳವಾಗಿಸುತ್ತದೆ. ಹೀಗಾಗಿ, ಸಂಕಲನದಲ್ಲಿ ಯಾವುದೇ ವಿಶೇಷತೆ ಇಲ್ಲ. ಮತ್ತು ನಡುವೆ ಅನಗತ್ಯ ಎನಿಸುವ ಒಂದು ದೀಪಾವಳಿ ಹಾಡು ಬಂದು ಹೋಗುತ್ತದೆ. ಕ್ಯಾಮೆರಾ ವರ್ಕ್ ಪೂರಕವಾಗಿದೆ.
ಚಿತ್ರವನ್ನು ನೋಡಲು ಇರುವ ಏಕೈಕ ಕಾರಣ ಊರ್ವಶಿ. ಚಿತ್ರವನ್ನು ನಂಬಲರ್ಹವಾಗಿಸುವುದು, ಅಲ್ಲಿ ಬರುವ ಸನ್ನಿವೇಶಗಳನ್ನು ಪ್ರೇಕ್ಷಕರು ಒಂದು ಹಂತಕ್ಕೆ ಒಪ್ಪಿಕೊಳ್ಳುವಂತೆ ಮಾಡುವುದು ಊರ್ವಶಿಯೇ. ತಮ್ಮ ವಿಶಿಷ್ಟ ನಟನೆ, ದನಿಯ ಏರಿಳಿತ, ಹಾವಭಾವಗಳಿಂದ ‘ಅಪ್ಪತ್ತ’ವನ್ನು ಆಪ್ತವಾಗಿಸಿರುವುದು ಅವರ ಅಗಾಧ ಪ್ರತಿಭೆಗೆ ಸಾಕ್ಷಿ. ಊರ್ವಶಿ ಹೊರತಾಗಿ ಈ ಚಿತ್ರ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಿಯದರ್ಶನ್ ಹೇಳಿದ್ದಾರೆ ಮತ್ತು ಅವರ ಮಾತಲ್ಲಿ ಕಿಂಚಿತ್ತೂ ಅತಿಶಯೋಕ್ತಿ ಇಲ್ಲ. ತಲೆಗೆ ಹೆಚ್ಚು ಕೆಲಸ ಕೊಡದ, ಲಘು ಧಾಟಿಯ, ಸರಳ ಫ್ಯಾಮಿಲಿ ಎಂಟರ್ಟೇನರ್ ನೋಡುವ ಆಸಕ್ತಿ ಇದ್ದರೆ JioCinemaದಲ್ಲಿ ಪ್ರಸಾರವಾಗುತ್ತಿರುವ ‘ಅಪ್ಪತ್ತ’ವನ್ನು ಆಯ್ದುಕೊಳ್ಳಬಹುದು.