ಪ್ರಿಯದರ್ಶನ್‌ ನಿರ್ದೇಶನದಲ್ಲಿ ಊರ್ವಶಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅಪ್ಪತ್ತ’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಹುಭಾಷಾ ತಾರೆ ಊರ್ವಶಿ ಅವರ 700ನೇ ಚಿತ್ರವಿದು. ಜುಲೈ 29ರಿಂದ ಸಿನಿಮಾ ನೇರವಾಗಿ JioCinemaದಲ್ಲಿ ಸ್ಟ್ರೀಮ್‌ ಆಗಲಿದೆ.

ಬಹುಭಾಷಾ ನಟಿ ಊರ್ವಶಿ ಅಭಿನಯದ ‘ಅಪ್ಪತ್ತ’ (Appatha) ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಈ ಚಿತ್ರವು ನಟಿಯ 700ನೇ ಚಿತ್ರವಾಗಿದ್ದು, ನಿರ್ದೇಶಕ ಪ್ರಿಯದರ್ಶನ್ ಅವರೊಂದಿಗೆ ಮಲಯಾಳಂ ಚಿತ್ರ ‘ಮಿಥುನಂ’ (1993) ನಂತರ ಎರಡನೇ ಸಹಯೋಗವಾಗಿದೆ. ಚಿತ್ರದ ಟ್ರೈಲರ್‌ ಕೌಟುಂಬಿಕ ಜೀವನದ ಬಾಂಧವ್ಯಗಳ ಅರ್ಥವನ್ನು ವಿವರಿಸಿದೆ. ಹಳ್ಳಿಯಿಂದ ನಗರದಲ್ಲಿರುವ ಮಗನ ಮನೆಗೆ ತಾಯಿ (ಊರ್ವಶಿ) ಬರುತ್ತಾಳೆ. ಮಗನ ಮನೆಯಲ್ಲಿ ಸಾಕಿದ ನಾಯಿಯೊಂದಿಗೆ ಹೊಂದಾಣಿಕೆಯಾಗದೆ ಆಕೆ ಪೇಚಾಡುವುದು, ಆ ನಾಯಿಯಿಂದ ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಾಳೆ ಮತ್ತು ನೆರೆಹೊರೆಯವರಿಂದ ಹೇಗೆ ಮುಜುಗರಕ್ಕೆ ಒಳಗಾಗುತ್ತಾಳೆ ಎನ್ನುವುದನ್ನು ಟ್ರೈಲರ್‌ ತೋರಿಸಿದೆ.

ಚಿತ್ರದಲ್ಲಿ ನಟಿಸಿರುವ ಅನುಭವದ ಕುರಿತು ನಟಿ ಊರ್ವಶಿ, ‘ನನ್ನ 700ನೇ ಚಿತ್ರವು ಅದ್ಬುತ ಅನುಭವ ನೀಡಿದೆ. ಈ ಸಿನಿಮಾ ಕೌಟುಂಬಿಕ ಬಂಧಗಳ ಮಹತ್ವವನ್ನು ತೋರಿಸಿದೆ. ಪ್ರತಿಭಾವಂತ ತಂಡ ಹಾಗೂ ನಿರ್ದೇಶಕ ಪ್ರಿಯದರ್ಶನ್ ಚಿತ್ರದ ಭಾಗವಾಗಿರುವುದು ಹೆಮ್ಮೆಯ ಸಂಗತಿ. ಚಿತ್ರವು ಪ್ರೇಕ್ಷಕರ ಮೇಲೆ ನೇರವಾಗಿ ಪ್ರಭಾವ ಬೀರಲಿದೆ’ ಎಂದಿದ್ದಾರೆ. ನಿರ್ದೇಶಕ ಪ್ರಿಯದರ್ಶನ್ ಚಿತ್ರದ ಕುರಿತು ‘ಈ ಹೃದಯ ಸ್ಪರ್ಶಿ ಕಥೆಯನ್ನು ತೆರೆಯಮೇಲೆ ತಂದಿರುವುದಕ್ಕೆ ಖುಷಿಯಿದೆ. ಚಿತ್ರವು ತಾಯಿ ತನ್ನ ಮಗನ ಜೊತೆಗಿನ ಬಂಧವನ್ನು ಮತ್ತಷ್ಟು ಬಲಗೊಳಿಸಿ, ತನ್ನೊಳಗಿನ ಭಯವನ್ನು ಹೋಗಲಾಡಿಸಿ, ವೃದ್ಧಾಪ್ಯದಲ್ಲಿ ತನ್ನನ್ನು ತಾನು ಕಂಡುಕೊಳ್ಳಲು ಮಾಡುವ ಪ್ರಯತ್ನವನ್ನು ತೋರಿಸಲಿದೆ. ‘ಅಪ್ಪತ್ತ’ದ ಭಾವನೆಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ಚಿತ್ರವನ್ನು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದು, ರಾಜೇಶ್‌ ಮುರುಗನ್‌ ಸಂಗೀತಕ್ಕೆ K S ಚಿತ್ರ ದನಿಯಾಗಿದ್ದಾರೆ. ಚಿತ್ರ ಇದೇ ಜುಲೈ 29ರಿಂದ ನೇರವಾಗಿ JioCinemaದಲ್ಲಿ ಸ್ಟ್ರೀಮ್ ಆಗಲಿದೆ. ನಟಿ ಊರ್ವಶಿ ದಕ್ಷಿಣ ಚಲನಚಿತ್ರೋದ್ಯಮದ ಖ್ಯಾತ ನಟಿ, ಡಬ್ಬಿಂಗ್ ಕಲಾವಿದೆ, ದೂರದರ್ಶನ ನಿರೂಪಕಿ, ಚಿತ್ರಕಥೆ ಮತ್ತು ಚಲನಚಿತ್ರ ನಿರ್ಮಾಪಕಿ, ಪ್ರಧಾನವಾಗಿ ಮಲಯಾಳಂ ಮತ್ತು ತಮಿಳು ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಅವರು ತಮ್ಮ 10ನೇ ವಯಸ್ಸಿನಲ್ಲಿ, 1979ರಲ್ಲಿ ಬಿಡುಗಡೆಯಾದ ‘ಕತಿರ್ಮಂಡಪಂ’ ಮಲಯಾಳಂ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಚಿತ್ರದಲ್ಲಿ ಜಯಭಾರತಿ ಅವರ ಮಗಳ ಪಾತ್ರದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಭಾಷೆಗಳಲ್ಲಿ ಸುಮಾರು 700ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ‘ನಾನು ನನ್ನ ಹೆಂಡ್ತಿ’, ‘ಜೀವನದಿ’, ‘ಕತ್ತೆಗಳು ಸಾರ್‌ ಕತ್ತೆಗಳು’, ‘ಯಾರಿಗೆ ಸಾಲುತ್ತೆ ಸಂಬಳ’, ‘ಹಬ್ಬ’, ‘ಅರ್ಜುನ್’, ‘ರಾಮಾ ಶಾಮಾ ಭಾಮಾ’, ‘ಶಿವಲಿಂಗ’, ‘ರಾಮಲೀಲಾ’, ‘ಜಗ್ಗು ದಾದಾ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಇತ್ತೀಚಿಗೆ ಪೋಷಕ ಪಾತ್ರಗಳಲ್ಲಿ ನಟರಾದ ಶಿವರಾಜ್‌ ಕುಮಾರ್‌, ದರ್ಶನ್‌ ಸೇರಿದಂತೆ ಹಲವು ಹೀರೋಗಳಿಗೆ ಅಮ್ಮನಾಗಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here