ನಟ ಚೇತನ್‌ ಸೂರ್ಯ ಅವರ ಮುಂದಾಳತ್ವದಲ್ಲಿ ‘ಅಪ್ಪು ಕಪ್‌’ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ. PRK ಆಡಿಯೋದ ಸಹಕಾರದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಹತ್ತು ತಂಡಗಳು ಸೆಣೆಸಲಿವೆ. ನಟ ಪುನೀತ್‌ ರಾಜಕುಮಾರ್‌ ಅವರಿಗೆ ಸಂಬಂಧಿಸಿದ ಹೆಸರುಗಳನ್ನು ತಂಡಗಳಿಗೆ ನಾಮಕರಣ ಮಾಡಲಾಗಿದೆ.

‘ಅಪ್ಪು ಕಪ್‌’ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ ಸೆಕೆಂಡ್‌ ಸೀಸನ್‌ಗೆ ಜುಲೈನಲ್ಲಿ ಚಾಲನೆ ಸಿಗಲಿದೆ. ಕಿರುತೆರೆ ಮತ್ತು ಸಿನಿಮಾ ನಟ ಚೇತನ ಅವರ ಸ್ಟೆಲ್ಲರ್‌ ಸ್ಟುಡಿಯೋ ಮತ್ತು PRK ಆಡಿಯೋ ಸಹಯೋಗದೊಂದಿಗೆ ಟೂರ್ನಿ ನಡೆಯಲಿದೆ. ಮೊನ್ನೆ ನಡೆದ ಟೂರ್ನಿಯ ಟೀಮ್ ಬಿಲ್ಡಿಂಗ್ ಇವೆಂಟ್‌ನಲ್ಲಿ ಚಿತ್ರನಿರ್ಮಾಪಕಿ, PRK ಆಡಿಯೋದ ಅಶ್ವಿನಿ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಕೋರಿದರು. ಸಾಯಿ ಗೋಲ್ಡ್ ಪ್ಯಾಲೇಸ್‌ ಮಾಲೀಕ, ವಿಧಾನ ಪರಿಷತ್ ಸದಸ್ಯರೂ ಆದ ಶರವಣ ಸೇರಿದಂತೆ ಹಲವು ಗಣ್ಯರು ಹಾಗೂ ಕಿರುತೆರೆ – ಸಿನಿಮಾ ಕಲಾವಿದರು ಪಾಲ್ಗೊಂಡಿದ್ದರು.

ಟೂರ್ನಿ ಬಗ್ಗೆ ಮಾತನಾಡಿದ ನಟ ಚೇತನ್‌ ಸೂರ್ಯ, ‘ನಾನು ಕಳೆದ ಹನ್ನೆರಡು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯನಾಗಿದ್ದೇನೆ. ನನಗೆ ಸಾಕಷ್ಟು ಇವೆಂಟ್‌ಗಳನ್ನು ಆಯೋಜಿಸಿರುವ ಅನುಭವವಿದೆ. ನಟ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಮ್ಮ ಸಂಸ್ಥೆಯ ಮೂಲಕ ಕಳೆದವರ್ಷ ‘ಅಪ್ಪು ಕಪ್ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿತ್ತು. ಟೂರ್ನಿ ಬಹಳ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಬಾರಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಟೂರ್ನಿಗೆ PRK ಆಡಿಯೋದ ಸಹಯೋಗವಿದೆ ಎಂದು ತಿಳಿಸಿದ್ದಾರೆ. ಅವರಿಗೆ ಧನ್ಯವಾದ’ ಎಂದರು. ಈ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳಿರುತ್ತದೆ. ಒಂದೊಂದು ತಂಡದಲ್ಲಿ ಹದಿಮೂರು ಆಟಗಾರರಿರುತ್ತಾರೆ. ಹಿರಿತೆರೆ, ಕಿರುತೆರೆ ಹಾಗೂ ವಿವಿಧ ಕ್ಷೇತ್ರಗಳ ತಾರೆಯರು ತಂಡಗಳಲ್ಲಿರುತ್ತಾರೆ. ಪುನೀತ್ ಅವರಿಗೆ ಸಂಬಂಧಿಸಿದ ಹಾಗೆ ಹತ್ತು ತಂಡಗಳ ಹೆಸರುಗಳಿದೆ. ಹತ್ತು ತಂಡಗಳಿಗೂ ಮಾಲೀಕರಿರುತ್ತಾರೆ‌. ಈ ಬಾರಿ ಜುಲೈ 13ರಂದು ಅದ್ಧೂರಿ ಸಮಾರಂಭದ ಮೂಲಕ ಟೂರ್ನಿಗೆ ಚಾಲನೆ ನೀಡಲಾಗುತ್ತಿದೆ. ಟೂರ್ನಿಯ ಪಂದ್ಯಗಳು ಜುಲೈ ಕೊನೆಯಲ್ಲಿ ನಡೆಯಲಿವೆ.

ತಂಡಗಳು | ಅರಸು ಹಂಟರ್ಸ್ ಮಾಲೀಕರು ಆನಂದ್, ನಾಯಕ ಹರೀಶ್ ನಾಗರಾಜ್ | ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ರವಿ ಚೇತನ್ | ಪವರ್ ಪೈತಾನ್ಸ್ ಮಾಲೀಕರು ಐಶ್ವರ್ಯ, ‌ನಾಯಕ ಸದಾಶಿವ ಶೆಣೈ | ದೊಡ್ಮನೆ ಡ್ರಾಗನ್ಸ್ ಮಾಲೀಕರು ಮಹೇಶ್ ಗೌಡ, ನಾಯಕ ಪ್ರಮೋದ್ ಶೆಟ್ಟಿ | ಜಾಕಿ ರೈಡರ್ಸ್ ಮಾಲೀಕರು ಶ್ರೀಹರ್ಷ, ನಾಯಕ ಮನು ರವಿಚಂದ್ರನ್ | ರಾಜಕುಮಾರ ಕಿಂಗ್ಸ್ ಮಾಲೀಕರು ವಿ ರವಿಕುಮಾರ್ & ಶಂಶುದ್ದೀನ್, ನಾಯಕ ವಿಕ್ರಮ್ ರವಿಚಂದ್ರನ್ | ಗಂಧದಗುಡಿ ವಾರಿಯರ್ಸ್ ಮಾಲೀಕರು ಡಾ ಚೇತನ ಆರ್ ಎಸ್, ನಾಯಕ ಭುವನ್ ಗೌಡ | ವೀರ ಕನ್ನಡಿಗ ಬುಲ್ಸ್ ಮಾಲೀಕರು ಮೋನೀಶ್ ಸಿ, ನಾಯಕ ದಿಲೀಪ್ ರಾಜ್ | ಯುವರತ್ನ ಚಾಂಪಿಯನ್ಸ್ ಮಾಲೀಕರು ಬಿ ಎಂ ಶ್ರೀರಾಮ್ ಕೋಲಾರ, ನಾಯಕ ಪ್ರವೀಣ್ ತೇಜ್ | ಮೌರ್ಯ ವೈಟ್ ಗೋಲ್ಡ್ ಮಾಲೀಕರು ಬಾಬು ಸಿ ಜೆ, ನಾಯಕ ನಿರಂಜನ್ ದೇಶಪಾಂಡೆ.

ಸತತವಾಗಿ ಮೂರು ವರ್ಷಗಳ ಕಾಲ ಗೆದ್ದ ತಂಡಕ್ಕೆ ಅಪ್ಪು ಅವರ ಭಾವಚಿತ್ರವುಳ್ಳ ಬೆಳ್ಳಿಯ ಐದು ಕೆಜಿ ತೂಕದ ಟ್ರೋಫಿ ನೀಡಲಾಗುವುದು. ಈ ರೋಲಿಂಗ್ ಟ್ರೋಫಿ ಪ್ರಯೋಜಕರಾಗಿರೂ ಆಗಿರುವ ಶ್ರೀಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯ ಶರವಣ ಅವರು ಈ ಬಾರಿ ಮೊದಲ ವಿಜೇತರಿಗೆ ನೂರು ಗ್ರಾಮ್ ಚಿನ್ನ, ಎರಡನೇ ವಿಜೇತರಿಗೆ ಐವತ್ತು ಗ್ರಾಮ್ ಚಿನ್ನ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಮ್ ಚಿನ್ನ ನೀಡುವುದಾಗಿ ತಿಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here