‘ಜೊತೆ ಜೊತೆಯಲಿ’ ಕಿರುತೆರೆ ಸರಣಿ ಖ್ಯಾತಿಯ ಮೇಘ ಶೆಟ್ಟಿ ಮತ್ತು ಕವೀಶ್‌ ಜೋಡಿಯ ಸಿನಿಮಾ ಆರು ಭಾಷೆಗಳಲ್ಲಿ ತೆರೆಕಾಣಲಿದೆ. ಮೊದಲನೇ ಹಂತದ ಚಿತ್ರೀಕರಣ ಮುಗಿಯಿತಾದರೂ ಚಿತ್ರದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ.

ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮೊದಲ ಬಾರಿ ಜೊತೆಜೊತೆಯಾಗಿ ನಟಿಸುತ್ತಿರುವ ನಿರ್ದೇಶಕ ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ಬಹುಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಚಿತ್ರಕ್ಕಿನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. ನಿರ್ದೇಶಕ ಸಡಗರ ರಾಘವೇಂದ್ರ ಶೀರ್ಷಿಕೆಗೆ ಸಂಬಂಧಿಸಿದಂತೆ ಪ್ರೇಕ್ಷಕರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾರೆ. ಈ ಚಿತ್ರಕ್ಕಾಗಿ ಸತತವಾಗಿ ಜಿಮ್ಮಿನಲ್ಲಿ ಬೆವರು ಹರಿಸುತ್ತಾ ಫೈಟ್ ಮತ್ತು ಡ್ಯಾನ್ಸ್ ರಿಹರ್ಸಲ್‌ನಲ್ಲಿ ತೊಡಗಿಸಿಕೊಂಡಿರುವ ಕವೀಶ್ ಶೆಟ್ಟಿಯವರನ್ನು ನೋಡಿದರೆ ಇದೊಂದು ಅಪ್ಪಟ ಔಟ್ ಆಂಡ್ ಔಟ್ ಮಾಸ್ ಆಕ್ಷನ್ ಥ್ರಿಲ್ಲರ್ ಚಿತ್ರ ಎಂದು ಊಹಿಸಬಹುದು. ‘ಜೊತೆಜೊತೆಯಲಿ’ ಕಿರುತೆರೆ ಸರಣಿ ಖ್ಯಾತಿಯ ಮೇಘಾ ಶೆಟ್ಟಿ ಇವರ ಜೊತೆಗೂಡಿದ್ದಾರೆ. ಅವರೂ ಕೂಡ ಈ ಚಿತ್ರಕ್ಕೆ ವಿಶೇಷವಾಗಿ ಸಮಯ ಮೀಸಲಿಟ್ಟು ನೃತ್ಯ ಇತ್ಯಾದಿ ತಯಾರಿಯಲ್ಲಿ ತೊಡಗಿದ್ದಾರೆ.

ಮರಾಠಿ ಸಿನಿಮಾ ತಾರೆಯರಾದ ಶಿವಾನಿ ಸುರ್ವೆ ಮತ್ತು ವಿರಾಟ್ ಮಡ್ಕೆ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತಯಾರಾಗುತ್ತಿದ್ದು, ಖಂಡಿತವಾಗಿಯೂ ಚಿತ್ರದ ಟೈಟಲ್ ಕೂಡ ಆ ಮಟ್ಟದಲ್ಲಿಯೇ ಇರುತ್ತದೆ ಎನ್ನುವುದು ನಿರ್ದೇಶಕರ ಹೇಳಿಕೆ. ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧಗೊಳ್ಳುತ್ತಿದೆ. ಆದರೂ ಚಿತ್ರತಂಡ ಇನ್ನೂ ಚಿತ್ರದ ಟೈಟಲ್ ಗುಟ್ಟು ಬಿಟ್ಟು ಕೊಟ್ಟಿಲ್ಲ ಎನ್ನುವುದು ಒಂದು ಕಡೆಯಾದರೆ ಚಿತ್ರದ ಫಸ್ಟ್ ಲುಕ್ ಹೇಗಿರುತ್ತದೆ ಎನ್ನುವುದು ಮತ್ತೊಂದು ಕುತೂಹಲ. ಎಲ್ಲಾ ಕುತೂಹಲಗಳಿಗೂ ಸದ್ಯದಲ್ಲಿಯೇ ತೆರೆ ಎಳೆಯುತ್ತೇವೆ ಎನ್ನುವ ನಿರ್ದೇಶಕರು ಮುಂದಿನ ಹಂತದ ಚಿತ್ರೀಕರಣದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕವೀಶ್‌ ಶೆಟ್ಟಿ

LEAVE A REPLY

Connect with

Please enter your comment!
Please enter your name here