ಉತ್ಸವ್‌ ಗೋನವಾರ ನಿರ್ದೇಶನದ ‘ಫೋಟೊ’ ಸಿನಿಮಾ ಮಾರ್ಚ್‌ 15ರಂದು ಥಿಯೇಟರ್‌ಗೆ ಬರುತ್ತಿದೆ. ಬಹುಭಾಷಾ ನಟ ಪ್ರಕಾಶ್‌ ರೈ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ನಟ ಧನಂಜಯ ಮತ್ತು ನಿರ್ದೇಶಕ ಪವನ್‌ ಕುಮಾರ್‌ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ಶುಭಹಾರೈಸಿದ್ದಾರೆ.

ಕಳೆದ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದ ‘ಫೋಟೊ’ ಥಿಯೇಟರ್‌ಗೆ ಬರುತ್ತಿದೆ. ಈ ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಜನಮೆಚ್ಚುಗೆ ಪಡೆದಿತ್ತು. ಉತ್ಸವ್‌ ಗೋನವಾರ ನಿರ್ದೇಶನದ ಈ ಸಿನಿಮಾದ ಬೆಂಬಲಕ್ಕೆ ಬಹುಭಾಷಾ ನಟ ಪ್ರಕಾಶ್‌ ರೈ ನಿಂತಿದ್ದಾರೆ. ನಟ ಧನಂಜಯ್‌ ಮತ್ತು ನಿರ್ದೇಶಕ ಪವನ್‌ ಕುಮಾರ್‌ ಮೊನ್ನೆ ಸಿನಿಮಾದ ಟ್ರೇಲರ್‌ ಬಿಡುಗಡೆಗೊಳಿಸಿದ್ದಾರೆ. ನಟ ಧನಂಜಯ್‌ ಮಾತನಾಡಿ, ‘ಉತ್ಸವ್ ತುಂಬಾ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ತುಂಬಾ ಖುಷಿ ವಿಚಾರ ಏನೆಂದರೆ ಇತ್ತೀಚೆಗೆ ಬರುತ್ತಿರುವ ಯುವ ನಿರ್ದೇಶಕರು ಒಳ್ಳೊಳ್ಳೆ ಸಿನಿಮಾಗಳನ್ನು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ನಮ್ಮ ಕನ್ನಡದ ಜನಗಳ ಮುಂದೆ ಬರುತ್ತಿದ್ದಾರೆ. ಅದು ತುಂಬಾ ಖುಷಿ ವಿಚಾರ. ಆ ರೀತಿಯ ಸಿನಿಮಾಗಳಿಗೆ ಒಬ್ಬೊಬ್ಬರು ಜೊತೆಯಾಗುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ರಾಜ್ ಸರ್ ಜೊತೆಯಾಗಿದ್ದಾರೆ. ಫೋಟೋ ಕಾಡುವ ಸಿನಿಮಾ. ಉತ್ಸವ್‌ ಅವರಿಗೆ ಒಳಿತಾಗಲಿ’ ಎಂದು ಶುಭ ಹಾರೈಸಿದರು.

‘ನಾನು ಸಿನಿಮಾ ನೋಡಿದ್ದೇನೆ. ತುಂಬಾ ಪ್ರಭಾವ ಬೀರಿತು. ಮೇಕಿಂಗ್ ನೋಡಿದಾಗ ಬಹಳಷ್ಟು ಸ್ಪೂರ್ತಿಯಾಯ್ತು. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎನ್ನುವುದು ನಿರ್ದೇಶಕ ಪವನ್‌ ಕುಮಾರ್‌ ಮಾತು. ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿರುವ ಪ್ರಕಾಶ್‌ ರಾಜ್‌ ಮಾತನಾಡಿ, ‘ನನಗೆ ಉತ್ಸವ್ ಸಿನಿಮಾವನ್ನು ಬಹಳ ದಿನಗಳಿಂದ ತೋರಿಸುವ ಆಸೆ ಇತ್ತು. ಬೇರೆ ಬೇರೆ ಕಾರಣಗಳಿಂದ ಬ್ಯುಸಿ ಇದ್ದೆ. ಸಿನಿಮಾ ನೋಡಿ ಆದ್ಮೇಲೆ 15 ರಿಂದ 20 ನಿಮಿಷ ಮಾತನಾಡಲು ಆಗಲಿಲ್ಲ. ಅಷ್ಟು ದುಃಖವಾಯ್ತು. ಇದನ್ನು ದಾಖಲೆ ಮಾಡ್ಬೇಕು ಅಂತಾ 21 ವರ್ಷದ ಹುಡುಗನಿಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು’ ಎನ್ನುತ್ತಾರೆ. ಮಸಾರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಫೋಟೋ ಸಿನಿಮಾದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್, ಮತ್ತು ವೀರೇಶ್ ಗೊನ್ವಾರ್ ನಟಿಸಿದ್ದಾರೆ. ದಿನೇಶ್ ದಿವಾಕರನ್ ಕ್ಯಾಮೆರಾ, ರವಿ ಹಿರೇಮಠ್ ಹಿನ್ನೆಲೆ ಸಂಗೀತ, ಶಿವರಾಜ್ ಮೆಹೂ ಸಂಕಲನ ಚಿತ್ರಕ್ಕಿದೆ. ಮಾರ್ಚ್ 15ರಂದು ಸಿನಿಮಾ ತೆರೆಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here