‘ವಾರ್ 2’, ‘ಸಿಕಂದರ್’, ‘ಆಲ್ಫಾ’ ಆಕ್ಷನ್ – ಡ್ರಾಮಾ ಸಿನಿಮಾಗಳ ಜೊತೆ ಅಮೀರ್ ಖಾನ್‌ರ ‘ಸಿತಾರೇ ಜಮೀನ್ ಪರ್’ ನಿರೀಕ್ಷೆ ಹುಟ್ಟುಹಾಕಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಎರಡು ಹಿಂದಿ ಸಿನಿಮಾಗಳು 2025ರಲ್ಲಿ ಬರುತ್ತಿವೆ. ವಿಕ್ಕಿ ಕೌಶಲ್‌ರ ‘ಛಾವಾ’, ಬಹುತಾರಾಗಣದ ‘ಧುರಂಧರ್’ ಸಿನಿಮಾಗಳನ್ನೂ ಸಿನಿಪ್ರಿಯರು ಕಾಯುತ್ತಿದ್ದಾರೆ.
War 2 | ಹೃತಿಕ್ ರೋಷನ್ ಮತ್ತು ದಕ್ಷಿಣದ ಸ್ಟಾರ್ ಹೀರೋ ಜ್ಯೂನಿಯರ್ NTR ಜೊತೆಯಾಗಿ ನಟಿಸಿರುವ ಸಿನಿಮಾ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್, ಟೈಗರ್ 3 ಸಿನಿಮಾಗಳ ನಂತರ YRF Spy ಯೂನಿವರ್ಸ್‌ನ ಮುಂದಿನ ಚಿತ್ರವಿದು. ಅಯನ್ ಮುಖರ್ಜಿ ನಿರ್ದೇಶನದ ಸಿನಿಮಾದ ನಾಯಕಿಯಾಗಿ ಕೈರಾ ಅಡ್ವಾನಿ ಇದ್ದಾರೆ. ಆಗಸ್ಟ್ 14ರಂದು ಸಿನಿಮಾ ತೆರೆಕಾಣಲಿದೆ.
ಛಾವಾ | ವಿಕ್ಕಿ ಕೌಶಲ್ ನಟನೆಯ ಐತಿಹಾಸಿಕ ಸಿನಿಮಾ 2024ರ ಡಿಸೆಂಬರ್‌ನಲ್ಲೇ ಬರಬೇಕಿತ್ತು. ‘ಪುಷ್ಪ2’ ಸಿನಿಮಾದ ಭರಾಟೆ ಇದ್ದುದರಿಂದ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಯ್ತು. ಶಿವಾಜಿ ಸಾವಂತ್ ರಚನೆಯ ಮರಾಠಿ ಕಾದಂಬರಿ ಆಧರಿಸಿ ಅದೇ ಶೀರ್ಷಿಕೆಯಡಿ ಸಿನಿಮಾ ತಯಾರಾಗಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿದೆ.
ಸಿತಾರೇ ಜಮೀನ್ ಪರ್ | ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಅಮೀರ್ ಅವರಿಗೆ ಸೋಲುಣುಸಿತು. ಅವರು ತುಂಬಾ ಮಹತ್ವಾಕಾಂಕ್ಷೆಯಿಂದ ಮಾಡಿದ್ದ ಚಿತ್ರವಿದು. ಇದೀಗ ಅವರು ‘ಸಿತಾರೇ ಜಮೀನ್ ಪರ್’ ಸಿನಿಮಾದಿಂದ ಗೆಲುವಿಗೆ ಮರಳುವ ಉಮೇದಿನಲ್ಲಿದ್ದಾರೆ. 2018ರಲ್ಲಿ ತೆರೆಕಂಡ ‘ಚಾಂಪಿಯನ್ಸ್’ ಸ್ಪಾನಿಷ್ sports – comedy ಚಿತ್ರದ ಅಧಿಕೃತ ರೀಮೇಕ್ ಇದು. ಆರ್ ಎಸ್ ಪ್ರಸನ್ನ ನಿರ್ದೇಶನದ ಚಿತ್ರದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ.
ಜಾಲಿ LLB 3 | ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಚಿತ್ರದ ಹೀರೋಗಳು. ಅಕ್ಷಯ್ ಕುಮಾರ್ ಅವರಿಗೀಗ ದೊಡ್ಡ ಯಶಸ್ಸು ಬೇಕಿದೆ. ಈ ಸಿನಿಮಾ ಮೂಲಕ ಅವರು ಗೆಲುವಿಗೆ ಮರಳುವ ಉಮೇದಿನಲ್ಲಿದ್ದಾರೆ. ಸರಣಿಯ ಮೊದಲೆರೆಡು ಚಿತ್ರಗಳನ್ನು ನಿರ್ದೇಶಿಸಿದ್ದ ಸುಭಾಷ್ ಕಪೂರ್ ಅವರೇ ‘ಜಾಲಿ LLB 3’ ಮಾಡುತ್ತಿದ್ದಾರೆ. ಏಪ್ರಿಲ್ 10ರಂದು ಸಿನಿಮಾ ಥಿಯೇಟರ್‌ಗೆ ಬರಲಿದೆ.
ಸಿಕಂದರ್ | ‘ಜವಾನ್’, ‘ಅನಿಮಲ್’ ಸಿನಿಮಾಗಳ ನಂತರ ಬಾಲಿವುಡ್ ಸೂಪರ್‌ಸ್ಟಾರ್ ದಕ್ಷಿಣದ ಸ್ಟಾರ್ ನಿರ್ದೇಶಕನೊಂದಿಗೆ ಜೊತೆಯಾಗುತ್ತಿರುವ ಚಿತ್ರವಿದು. ‘ಘಜಿನಿ’ ಖ್ಯಾತಿಯ ಎ ಆರ್ ಮುರುಗದಾಸ್ ಅವರು ‘ಸಿಕಂದರ್’ನಲ್ಲಿ ಸಲ್ಮಾನ್ ಖಾನ್‌ರನ್ನು ನಿರ್ದೇಶಿಸುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಸಲ್ಮಾನ್‌ರ ಈದ್ ಹಬ್ಬದ ಉಡುಗೊರೆಯಾಗಿ ಬರುತ್ತಿದೆ. ಕನ್ನಡ ಮೂಲದ ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ ಎನ್ನುವುದು ವಿಶೇಷ.
ಆಲ್ಫಾ | ‘War 2’ ಸಿನಿಮಾದ ನಂತರ ಆದಿತ್ಯ ಚೋಪ್ರಾ ನಿರ್ಮಾಣದಲ್ಲಿ ತೆರೆಗೆ ಬರುತ್ತಿರುವ ಚಿತ್ರವಿದು. YRF Spy Universe ನಿರ್ಮಾಣದ ಸಿನಿಮಾ 2025ರ ಕ್ರಿಸ್ಮಸ್‌ಗೆ ಬರಲಿದೆ. ಈ ಆಕ್ಷನ್ – ಥ್ರಿಲ್ಲರ್‌ನಲ್ಲಿ ಅಲಿಯಾ ಭಟ್, ಶಾರ್ವರಿ ವಾಗ್ ನಟಿಸುತ್ತಿದ್ದಾರೆ. ಯಶ್ ರಾಜ್ ಫಿಲಂಸ್ ನಿರ್ಮಾಣದ ‘ದಿ ರೈಲ್ವೇ ಮೆನ್’ ನೆಟ್‌ಫ್ಲಿಕ್ಸ್ ಸರಣಿ ನಿರ್ದೇಶಿಸಿದ್ದ Shiv Rawail ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಥಮಾ | ಸ್ತ್ರೀ, ಮುಂಜ್ಯಾ, ಸ್ತ್ರೀ 2 ಸಿನಿಮಾಗಳ ನಂತರ Maddock Supernatural Universe ನಿಂದ ತಯಾರಾಗುತ್ತಿರುವ ಸಿನಿಮಾ ‘ಥಮಾ’. ಆದಿತ್ಯ ಸರ್‌ಪೋದಾರ್ ನಿರ್ದೇಶನದ ಈ ಹಾರರ್ – ಕಾಮಿಡಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ಪರೇಶ್ ರಾವಲ್, ನವಾಜುದ್ದೀನ್ ಸಿದ್ದಿಕಿ ನಟಿಸುತ್ತಿದ್ದಾರೆ. ಸಿನಿಮಾ 2025ರ ದೀಪಾವಳಿಗೆ ಬಿಡಗಡೆಯಾಗಲಿದೆ.
ಧುರಂಧರ್ | ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಮ್‌ಪಾಲ್ ನಟನೆಯ ಬಹುತಾರಾಗಣದ ಚಿತ್ರವಿದು. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ 2025ರ ಸರ್ಪ್ರೈಸ್ ಪ್ಯಾಕೇಜ್ ಆಗುವ ನಿರೀಕ್ಷೆಯಿದೆ. ಇಂಟಲಿಜೆನ್ಸ್ ಏಜನ್ಸೀಗಳ ಸುತ್ತ ಹೆಣೆದ ಕತೆ. 2019ರ ಬ್ಲಾಕ್ ಬಸ್ಟರ್ ‘Uri: The Surgical Strike’ ಸಿನಿಮಾ ನಂತರ ಆದಿತ್ಯ ಧರ್ ನಿರ್ದೇಶಿಸುತ್ತಿರುವ ಚಿತ್ರವಿದು. ಶಾಹೀದ್ ಕಪೂರ್ ಮತ್ತು ಪೂಜಾ ಹೆಗ್ಡೆ ನಟನೆಯ ‘ದೇವಾ’, ಸನ್ನಿ ಡಿಯೋಲ್ ಅವರ ‘ಲಾಹೋರ್ 1947’, ಅನುರಾಗ್ ಬಸು ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಮೆಟ್ರೋ ಇನ್ ದಿನೊ’ ಹಿಂದಿ ಸಿನಿಮಾಗಳು ಕೂಡ ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿವೆ.