ರಾಜಶೇಖರ್ ನಿರ್ಮಿಸಿ, ನಿರ್ದೇಶಿಸಿರುವ ‘ಬ್ಯಾಕ್ ಬೆಂಚರ್ಸ್’ ಸೆನ್ಸಾರ್ ಹಂತದಲ್ಲಿದೆ. ಈ ಸಿನಿಮಾತಂಡದ ಬಳಗದಲ್ಲಿ ಸಂಪೂರ್ಣ ಹೊಸಬರೇ ಇದ್ದಾರೆ ಎನ್ನುವುದು ವಿಶೇಷ. ಯೂಥ್‌ಫುಲ್ ಕಂಟೆಂಟ್‌ನ ಸಿನಿಮಾ ಇದೇ ಜುಲೈ 19ರಂದು ಥಿಯೇಟರ್‌ಗೆ ಬರುತ್ತಿದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕಾಲೇಜು ಹುಡುಗರ ಸಿನಿಮಾ ನಂತರ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ಮತ್ತೊಂದು ಸಿನಿಮಾ ‘ಬ್ಯಾಕ್ ಬೆಂಚರ್ಸ್’. ರಾಜಶೇಖರ್ ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ ಆರಂಭದಿಂದಲೂ ಸುದ್ದಿಯಲ್ಲಿದೆ. ಈಗ ವಿಶಿಷ್ಟ ಪ್ರೊಮೋಷನ್‌ನಿಂದಲೂ ತಂಡ ಗಮನ ಸೆಳೆಯುತ್ತಿದೆ. ಕಾಲೇಜು ಕೇಂದ್ರಿತ ಕಥೆ ಮತ್ತು ಹೊಸತನದ ನಿರೂಪಣೆಯ ಸುಳಿವು ಸಿಗುತ್ತದೆ. ಇದೀಗ ಸಿನಿಮಾ ಸೆನ್ಸಾರ್ ಅಂಗಳದಲ್ಲಿದ್ದು, ಇದೇ ಜುಲೈ 19ರಂದು ತೆರೆಗೆ ಬರಲಿದೆ. ಸಾಮಾನ್ಯವಾಗಿ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಲು ಬಹುತೇಕರು ಹಿಂದೇಟು ಹಾಕುತ್ತಾರೆ. ಇಲ್ಲಿ ರಾಜಶೇಖರ್ ಸಂಪೂರ್ಣವಾಗಿ ಹೊಸಬರ ತಂಡದೊಂದಿಗೆ ಈ ಚಿತ್ರವನ್ನು ಮಾಡಿದ್ದಾರೆ. ‘ಹೊಸಬರೇ ಸೇರಿರುವುದರಿಂದ ಇಲ್ಲಿ ಹೊಸತನದ ಛಾಯೆಯಿದೆ’ ಎನ್ನುತ್ತಾರವರು.
ನಿರ್ದೇಶಕ ರಾಜಶೇಖರ್ ಚಿತ್ರಕಥೆ ತಯಾರಿಯಲ್ಲೂ ಯುವ ಪೀಳಿಗೆಯವರ ನೆರವು ಪಡೆದಿದ್ದಾರೆ. ಅದರ ಫಲವಾಗಿಯೇ ಈ ಕಾಲೇಜು ಸ್ಟೋರಿ ತಾಜಾ ಅನುಭೂತಿ ಸಿಕ್ಕಿದೆ ಎನ್ನುವುದು ಅವರ ಅಭಿಪ್ರಾಯ. ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ರಾಜಶೇಖರ್ ಅವರೇ ಚಿತ್ರ ನಿರ್ಮಾಣ ಮಾಡಿದ್ದಾರೆ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಚಿತ್ರಕ್ಕಿದೆ.