ಸುಮಂತ್ ಶೈಲೇಂದ್ರ ಮತ್ತು ಕವಿತಾ ಗೌಡ ಅಭಿನಯದ ‘ಗೋವಿಂದ ಗೋವಿಂದ’ ಸಿನಿಮಾ ಮುಂದಿನ ವಾರ ನವೆಂಬರ್‌ 26ರಂದು ತೆರೆಕಾಣಲಿದೆ. ಥ್ರಿಲ್ಲರ್‌ ಜಾನರ್‌ನ ಈ ಸಿನಿಮಾದಲ್ಲಿ ಭರಪೂರ ಕಾಮಿಡಿಯೂ ಇರಲಿದೆ ಎನ್ನುತ್ತಾರೆ ನಿರ್ದೇಶಕ ತಿಲಕ್‌.

ನಿರ್ಮಾಪಕ ಶೈಲೇಂದ್ರ ಅವರ ಪುತ್ರ ಸಮಂತ್ ತೆರೆಗೆ ಮರಳುತ್ತಿದ್ದಾರೆ. ಈ ಬಾರಿ ಅವರು ಕಾಮಿಡಿ – ಥ್ರಿಲ್ಲರ್ ಕತೆಯ ‘ಗೋವಿಂದ ಗೋವಿಂದ’ ಚಿತ್ರದ ಹೀರೋ. ಕಿರುತೆರೆ ನಟಿ ಕವಿತಾ ಗೌಡ ಅವರಿಗೆ ಜೋಡಿಯಾಗಿದ್ದಾರೆ. ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ.ಕ್ರಿಯೇಷನ್ಸ್ ಅವರು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ  ನಿರ್ಮಿಸಿರುವ ಚಿತ್ರ ಇದೇ ನವೆಂಬರ್ 26ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ನಿರ್ದೇಶಕ ತಿಲಕ್ ಮೂಲತಃ ರಂಗಭೂಮಿಯವರು. “ರಂಗಭೂಮಿ ಅನುಭವವಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ರವಿ ಆರ್. ಗರಣಿ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ, ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದಾರೆ. ಅವರಿಗೆ ಹಾಗೂ ಇತರೆ ನಿರ್ಮಾಪಕರಿಗೆ ಧನ್ಯವಾದ. ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರದ ನಮ್ಮ ಚಿತ್ರದಲ್ಲಿ ಬಹುದೊಡ್ಡ ತಾರಾಗಣ ಹಾಗೂ ನುರಿತ ತಂತ್ರಜ್ಞರಿದ್ದಾರೆ” ಎಂದರು ನಿರ್ದೇಶಕ ತಿಲಕ್. ನಿರ್ಮಾಪಕರಲ್ಲೊಬ್ಬರಾದ ರವಿ ಆರ್. ಗರಣಿ, “ನಾನು, ಕಿಶೋರ್ ಹಾಗೂ ಶೈಲೇಂದ್ರ ಬಾಬು ಮೂವರೂ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ಹೀರೋ ಸುಮಂತ್ ಮಾತನಾಡಿ, “ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಕಾಮಿಡಿ ತುಂಬಾ ಇದೆ. ಇಡೀ ಸಿನಿಮಾ ನನ್ನೊಬ್ಬ‌ನಿಂದಲೇ ನಗಿಸುವುದು ಕಷ್ಟ. ನನ್ನ ಸ್ನೇಹಿತರ ಪಾತ್ರಗಳಲ್ಲಿ ಪವನ್ ಕುಮಾರ್ ಮತ್ತು ವಿಜಯ್ ಚೆಂಡೂರ್ ನಟಿಸಿದ್ದು, ಮೂವರು ಸೇರಿ ಉತ್ತಮ ಮನರಂಜನೆ ನೀಡುತ್ತೇವೆ” ಎಂದರು. ಚಿತ್ರದಲ್ಲಿ ಅಭಿನಯಿಸಿರುವ ರೂಪೇಶ್ ಶೆಟ್ಟಿ, ಕವಿತಾ ಗೌಡ, ಪವನ್ ಕುಮಾರ್, ವಿಜಯ್ ಚಂಡೂರ್, ಸಂಗೀತ ನಿರ್ದೇಶಕ ಹಿತನ್ ಹಾಸನ್ ಮಾತನಾಡಿದರು. ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇ ಗೌಡ, ಯಮುನ ಶ್ರೀನಿಧಿ ಮತ್ತಿತರರು ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here