ಈ ಹಿಂದೆ ಸಖತ್‌ ವೈರಲ್‌ ಆಗಿದ್ದ ‘ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯ’ ಅನ್ನೋ ಡೈಲಾಗ್‌ ಈಗ ಸಿನಿಮಾ ಆಗ್ತಿದೆ. ಹೌದು, ಈ ಮಾತನ್ನೇ ಸ್ಫೂರ್ತಿಯಾಗಿಟ್ಟುಕೊಂಡೇ ಬರೆದಿರುವ ಕಥೆಗೆ ‘ಬಡವರ ಮಕ್ಳೂ ಬೆಳಿಬೇಕು ಕಣ್ರಯ್ಯ’ ಅನ್ನೋ ಟೈಟಲ್‌ ಅನ್ನೇ ಇಡಲಾಗಿದೆ.

‘ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯ’ ಅನ್ನೋ ಮಾತು ಎಲ್ಲೋ ಕೇಳಿದ ಹಾಗೆ ಇಲ್ವಾ. ಕೆಲ ಸಮಯದ ಹಿಂದೆ ನಟ ಧನಂಜಯ ಸಮಾರಂಭವೊಂದರಲ್ಲಿ ಈ ಮಾತನ್ನು ಹೇಳಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್‌ ಆಗಿದ್ದ ಆ ಮಾತೇ ಈಗ ಚಲನಚಿತ್ರದ ಶೀರ್ಷಿಕೆಯಾಗಿದೆ. ಶ್ರೀರಾಮ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿ ಎಸ್ ವೆಂಕಟೇಶ್ ನಿರ್ಮಿಸುತ್ತಿರುವ ಈ ಸಿನಿಮಾವನ್ನ ಮಂಜುಕವಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ‘ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯ’ ಚಿತ್ರದ ಮುಹೂರ್ತ ಸಮಾರಂಭ ರೇಣುಕಾಂಬ ಥಿಯೇಟರ್‌ನಲ್ಲಿ ನೆರವೇರಿತು. ಬೆಂಗಳೂರು ಪೂರ್ವ ವಲಯದ ಡಿಸಿಪಿ ದೇವರಾಜ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಾ ಮ ಹರೀಶ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಸಿ ಎಸ್ ವೆಂಕಟೇಶ್, ‘ನಾನು ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ಚಿತ್ರರಂಗದ ಸಾಕಷ್ಟು ಗಣ್ಯರು ನನಗೆ ಪರಿಚಯ. ಎಷ್ಟೋ ಸ್ನೇಹಿತರು ಚಿತ್ರ ನಿರ್ಮಾಣ ಮಾಡುವಂತೆ ಹೇಳುತ್ತಿದ್ದರು. ಈಗ ಕಾಲ ಕೂಡಿ ಬಂದಿದೆ. ಧನಂಜಯ್‌ ಅವರು ಹೇಳಿದ ಮಾತೇ ಈ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ. ಮಂಜುಕವಿ ಅವರು ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ನಾನು ಕೂಡ ಬಡತನದಿಂದಲೇ ಬಂದಿರುವವನು. ಹಾಗಾಗಿ ಈ ಕಥೆ ತುಂಬಾ ಇಷ್ಟವಾಯಿತು’ ಎಂದರು. ನಿರ್ದೇಶಕ ಮಂಜುಕವಿ ಮಾತನಾಡಿ, ‘ನಟ ಧನಂಜಯ್‌ ಹೇಳಿದ ಮಾತನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ. ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳಿಗೆ ಎಷ್ಟೇ ಪ್ರತಿಭೆ ಇದ್ದರೂ, ಚೆನ್ನಾಗಿ ಓದುವ ಹಂಬಲವಿದ್ದರೂ ಅವರನ್ನು ಬೆಳೆಸಲು ಯಾರೂ ಮುಂದೆ ಬರುವುದಿಲ್ಲ. ಅವರಲ್ಲಿರುವ ಪ್ರತಿಭೆ ಹಾಗೇ ನಶಿಸಿ ಹೋಗುತ್ತದೆ. ಹಾಗಾಗಬಾರದು. ಪ್ರತಿಭೆವುಳ್ಳ ಬಡ ಮಕ್ಕಳ ಕೀರ್ತಿ ಬೆಳಗಬೇಕು. ಇದೇ ಚಿತ್ರದ ಕಥಾಹಂದರ’ ಎಂದು ಚಿತ್ರದ ಕಥೆ ಬಗ್ಗೆ ಸುಳಿವು ಕೊಟ್ಟರು.

‘ಬಡವ್ರ ಮಕ್ಳೂ ಬೆಳೀಬೇಕು ಕಣ್ರಯ್ಯ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯಲಿದೆ. ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ಲಾವಣ್ಯ ವೈಭವಿ ಅಭಿನಯಿಸುತ್ತಿದ್ದಾರೆ. ಫ್ರೆಂಡ್ಸ್ ವಾಸು, ಮೂಗೂರು ಸುರೇಶ್, ಚಂದ್ರಪ್ರಭ, ಚೈತ್ರಾ ಕೊಟ್ಟೂರು, ಮಂಜು ಪಾವಗಡ, ಚಿದಾನಂದ್, ಜಗದೀಶ್ ಕೊಪ್ಪ ಶಿವಾರೆಡ್ಡಿ ಸನತ್ .ವಿನೋದ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಅದಕ್ಕೆ ನಿರ್ದೇಶಕ ಮಂಜುಕವಿ ಅವರೇ ಸಂಗೀತ ನೀಡುತ್ತಿದ್ದಾರೆ‌.‌ ತಂದೆ‌ – ಮಗಳ ಬಾಂಧವ್ಯದ ಹಾಡೊಂದನ್ನು ಅನುರಾಧ ಭಟ್ ಹಾಡಿದ್ದಾರೆ. ಹಿನ್ನೆಲೆ ಸಂಗೀತ ನೀಡುವುದರೊಂದಿಗೆ ವಿನುಮನಸು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here