‘ಮಹಾಕವಿ’, ಸಾಹಿತಿ – ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ 25ನೇ ಸಿನಿಮಾ. ಇದು ಆದಿಕವಿ ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಕಾವ್ಯಗಳನ್ನು ಆಧರಿಸಿದ ಚಿತ್ರ.

ಸಾಹಿತಿ, ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಅವರ ನಿರ್ದೇಶನದ 25ನೇ ಸಿನಿಮಾ ಎನ್ನುವುದು ವಿಶೇಷ. ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದ ಚಿತ್ರವಿದು. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಪಂಪ ಮಹಾಕವಿಯ ಕೆಲವು ಪದ್ಯಗಳನ್ನು ಚಿತ್ರದಲ್ಲಿ ಬಳಸಿದ್ದು, ಒಂದು ಗೀತೆಯನ್ನು ಬರಗೂರರು ರಚಿಸಿದ್ದಾರೆ. ಜೊತೆಗೆ ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಸಿನಿಮಾ ಕುರಿತು ಮಾತನಾಡುವ ಬರಗೂರರು, ‘ಪಂಪ ಮಹಾಕವಿಯು ರಾಜನ ಆಸ್ಥಾನದಲ್ಲಿದ್ದೂ ಸೃಜನಶೀಲ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡು ಬರೆದ ಕವಿ. ಪ್ರಭುತ್ವ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಕುರಿತ ಪಂಪನ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ. ಅಂತೆಯೇ ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊಟ್ಟಮೊದಲ ಕವಿ ಪಂಪ. ‘ಆದಿಪುರಾಣ’ದಲ್ಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪ್ರತಿಪಾದಿಸಿದ ಪಂಪ, ‘ವಿಕ್ರಮಾರ್ಜುನ ವಿಜಯ’ದಲ್ಲಿ ಕರ್ಣನ ಪಾತ್ರದ ಮೂಲಕ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾನೆ. ‘ಆದಿಪುರಾಣ’ದಲ್ಲಿ ಅಧಿಕಾರದ ಅಹಂಕಾರಕ್ಕೆ ವಿರೋಧ ಒಡ್ಡಿ ಯುದ್ಧದ ಬದಲು ಶಾಂತಿ ಸಂದೇಶ ನೀಡಿದ್ದಾನೆ. ಭೋಗದ ನಶ್ವರತೆಯನ್ನು ಪ್ರತಿಪಾದಿಸಿದ್ದಾನೆ. ಈ ಎಲ್ಲಾ ಪರಿಕಲ್ಪನೆಗಳಿಗೆ ಪ್ರತೀಕವಾಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆ’ ಎನ್ನುತ್ತಾರೆ.

ಪಂಪನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ. ‘ಬಿಗ್‍ಬಾಸ್’ ಖ್ಯಾತಿಯ ಅನುಷಾ ರೈ ನಾಯಕಿಯ ಪಾತ್ರದಲ್ಲಿದ್ದಾರೆ. ಬಾಲಕ ಪಂಪನ ಪಾತ್ರವನ್ನು ಆಕಾಂಕ್ಷ್ ಬರಗೂರು ವಹಿಸಿದ್ದು, ಹಿರಿಯ ನಟರಾದ ಸುಂದರರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೋವಿಂದ್ ಅವರಲ್ಲದೆ ಸುಂದರರಾಜ ಅರಸು, ವತ್ಸಲಾ ಮೋಹನ್, ರಾಘವ್, ಹನುಮಂತೇಗೌಡ, ಶಾಂತರಾಜು, ಬಾಲಕೃಷ್ಣ ಬರಗೂರು ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಜ್ ಶಿವು ಮತ್ತು ಪ್ರವೀಣ್ ಅವರ ಸಹನಿರ್ದೇಶನ, ತ್ರಿಭುವನ್ ನೃತ್ಯ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವು ಚಿತ್ರಕ್ಕಿದೆ. ಪ್ರಭು ಯತ್ನಟ್ಟಿ ಚಿತ್ರ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here