CCL 10ನೇ ಸೀಸನ್ ಕೊನೆಗೊಂಡಿದೆ. ಕರ್ನಾಟಕ ಬುಲ್ಡೋಜರ್ಸ್ ಮತ್ತು ಬೆಂಗಾಲ್ ಟೈಗರ್ಸ್ ಮಧ್ಯೆ ಮೊನ್ನೆ ಫೈನಲ್ ಪಂದ್ಯ ಏರ್ಪಟ್ಟಿತ್ತು. 13 ರನ್‌ಗಳ ಅಂತರದಿಂದ ಗೆದ್ದ ಬೆಂಗಾಲ್ ಟೈಗರ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು. ಕರ್ನಾಟಕ ಬುಲ್ಡೋಜರ್ಸ್‌ನ ಚಂದನ್ ಫೈನಲ್ ಪಂದ್ಯದ ‘ಅತ್ಯುತ್ತಮ ಬೌಲರ್’ ಪ್ರಶಸ್ತಿ ಪಡೆದರು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 10ನೇ ಸೀಸನ್‌ನ ಫೈನಲ್ ಪಂದ್ಯ ಮೊನ್ನೆ ಮಾರ್ಚ್ 17ರಂದು ನಡೆಯಿತು. ತೀವ್ರ ಪೈಪೋಟಿ ಇದ್ದ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ 13 ರನ್‌ಗಳ ಅಂತರದಿಂದ ಕರ್ನಾಟಕ ಬುಲ್ಡೋಜರ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಸಲ್ಮಾನ್ ಖಾನ್ ಅವರ ತಾಯಿಯೊಂದಿಗೆ ಹೃದಯಸ್ಪರ್ಶಿ ಸಂವಾದದಿಂದ ಹಿಡಿದು ಸ್ಟೇಡಿಯಂನಲ್ಲಿ ಜೆನಿಲಿಯಾ ಡಿಸೋಜಾ ಅವರ ವೈರಲ್ ವೀಡಿಯೋದವರೆಗೆ, ಈ ಸೀಸನ್ ನಿಜವಾಗಿಯೂ ಭಾವನೆಗಳ ರೋಲರ್ ಕೋಸ್ಟರ್ ಆಗಿದ್ದು ವಿಶೇಷ. ಇಪ್ಪತ್ತು ರೋಮಾಂಚಕ ಪಂದ್ಯಗಳಿಗೆ ಈ ಬಾರಿಯ CCL ಸಾಕ್ಷಿಯಾಯ್ತು.
ಫೈನಲ್ ಪಂದ್ಯದ ನಂತರ ಮಾತನಾಡಿದ ಕರ್ನಾಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಕಿಚ್ಚ ಸುದೀಪ್, ‘ಇದು ಅದ್ಭುತವಾದ ಫೈನಲ್ ಪಂದ್ಯ. ಫಿನಾಲೆ ಎಂದರೆ ಹೀಗೇ ಇರಬೇಕು. ಸೋತ ನಂತರ ನಾನು ಬೇಸರ ಮಾಡಿಕೊಳ್ಳದೇ ಇರುವುದು ಇದೇ ಮೊದಲು. ನನ್ನ ತಂಡದ ಎಲ್ಲಾ ಆಟಗಾರರೂ 2ನೇ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಆಡಿದರು. ನಮಗೆ ತೀವ್ರ ಪೈಪೋಟಿ ನೀಡಿ ಗೆದ್ದ ಬೆಂಗಾಲ್ ಟೈಗರ್ಸ್ ತಂಡಕ್ಕೆ ಅಭಿನಂದನೆಗಳು’ ಎಂದ ಕಿಚ್ಚ ಸುದೀಪ್ RCB ಮಹಿಳಾ ತಂಡದ ಗೆಲುವಿಗೆ ಶುಭ ಹಾರೈಸಿದ್ದಾರೆ. ‘ಆರ್‌ಸಿಬಿ ಮಹಿಳಾ ತಂಡ ಗೆದ್ದಿದೆ! ಈ ಸಲ ಕಪ್ ನಮ್ದೆ ಮತ್ತು ಹುಡುಗರು ಈಗ ಒತ್ತಡದಲ್ಲಿದ್ದಾರೆ! ಕಪ್ ತಂದ ಯುವತಿಯರಿಗೆ ಅಭಿನಂದನೆ’ ಎಂದಿದ್ದಾರೆ ಸುದೀಪ್.
ವಿಜೇತ ನಾಯಕ ಜಿಸ್ಶು ಸೇನ್‌ಗುಪ್ತಾ, ‘ಇಡೀ ತಂಡಕ್ಕೆ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಾನು ಪ್ರತಿ ಕ್ಷಣಕ್ಕೂ ಋಣಿಯಾಗಿದ್ದೇನೆ. ನಾವು ಕಷ್ಟಪಟ್ಟು ಆಡಿ ಚಾಂಪಿಯನ್ ಆಗಿದ್ದೇವೆ. ನನಗೆ ಹೇಳಲು ಪದಗಳಿಲ್ಲ, ನಾನು ತುಂಬಾ ಭಾವುಕನಾಗಿದ್ದೇನೆ’ ಎಂದರು. ಪಂದ್ಯದ ನಂತರ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಾಲಿವುಡ್ ಚಿತ್ರನಿರ್ಮಾಪಕ ಬೋನಿ ಕಪೂರ್, ‘ಹುಲಿಗಳು ತಮ್ಮ ಪಂಜರದಿಂದ ಹೊರಬಂದಿವೆ ಮತ್ತು ಆದ್ದರಿಂದ ನೀವು ಗೆದ್ದಿದ್ದೀರಿ!’ ಎಂದು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ. JioCinemaದಲ್ಲಿ ಸ್ಟ್ರೀಮ್ ಆದ CCL ಪಂದ್ಯಗಳನ್ನು ದೊಡ್ಡ ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದಾರೆ.
ಅಂತಿಮ ಪಂದ್ಯದ ಉನ್ನತ ಗೌರವ | ಅತ್ಯುತ್ತಮ ಬ್ಯಾಟ್ಸ್‌ಮನ್ – ರಾಹುಲ್ ಮಜುಂದಾರ್ (ಬೆಂಗಾಲ್ ಟೈಗರ್ಸ್) | ಅತ್ಯುತ್ತಮ ಬೌಲರ್ – ಚಂದನ್ (ಕರ್ನಾಟಕ ಬುಲ್ಡೋಜರ್ಸ್) | ಪಂದ್ಯ ಶ್ರೇಷ್ಠ – ಜಮ್ಮಿ ಬ್ಯಾನರ್ಜಿ (ಬೆಂಗಾಲ್ ಟೈಗರ್ಸ್)
ಸರಣಿಯ ಉನ್ನತ ಗೌರವಗಳು | ಅತ್ಯುತ್ತಮ ಬ್ಯಾಟ್ಸ್‌ಮನ್ – ಜೆಜಮ್ಮಿ ಬ್ಯಾನರ್ಜಿ (ಬೆಂಗಾಲ್ ಟೈಗರ್ಸ್) ಅತ್ಯುತ್ತಮ ಬೌಲರ್ – ರಾಜ ಭರ್ವಾನಿ (ಮುಂಬೈ ಹೀರೋಸ್) | ಸರಣಿ ಶ್ರೇಷ್ಠ – ರಾಹುಲ್ ಮಜುಂದಾರ್ (ಬೆಂಗಾಲ್ ಟೈಗರ್ಸ್)