ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾ ‘ಕಸ್ತೂರಿ ಮಹಲ್‌’. ಬಹುಭಾಷಾ ನಟಿ ಶಾನ್ವಿ ಶ್ರೀವಾತ್ಸವ್‌ ನಾಯಕಿಯಾಗಿ ನಟಿಸಿರುವ ಸಿನಿಮಾ ಮೇ 13ರಂದು ತೆರೆಕಾಣುತ್ತಿದೆ.

“ಕನ್ನಡದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ ಇದು ಭಿನ್ನ ಪ್ರಯೋಗ. ಚಿತ್ರೀಕರಣವಾದ ಕೊಟ್ಟಿಗೆಹಾರದ ಪರಿಸರ ನಮ್ಮ ಚಿತ್ರಕ್ಕೆ ಬೇರೆಯದ್ದೇ ಆದ ಒಂದು ಆಯಾಮ ಕೊಟ್ಟಿದೆ. ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ನಿರ್ದೇಶನದ ಬಗ್ಗೆ ಹೇಳಲು ನಾನಿನ್ನೂ ಚಿಕ್ಕವಳು. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ. ನೋಡಿ ಹರಸಿ” ಎಂದರು ನಟಿ ಶಾನ್ವಿ ಶ್ರೀವಾತ್ಸವ್. ಅವರ ಮಹತ್ವಾಕಾಂಕ್ಷೆಯ ‘ಕಸ್ತೂರಿ ಮಹಲ್‌’ ಸಿನಿಮಾ ಮೇ 13ರಂದು ತೆರೆಕಾಣಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಿರುತೆರೆ ಸರಣಿ ‘ರಾಧಾರಮಣ’ ಖ್ಯಾತಿಯ ನಟ ಸ್ಕಂದ ಅವರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. “ಒಂದೊಳ್ಳೆಯ ಪ್ರಾಜೆಕ್ಟ್‌ನ ಭಾಗವಾಗಿರುವುದು ಖುಷಿ ತಂದಿದ್ದು, ನನ್ನ ಪಾತ್ರದ ಬಗ್ಗೆ ಖುಷಿಯಿದೆ. ಕೊಟ್ಟಿಗೆಹಾರದಲ್ಲಿನ ಸುಮಾರು 200 ವರ್ಷಗಳಷ್ಟು ಹಳೆಯದಾದ ನಮ್ಮ ಪೂರ್ವಜರ ಮನೆಯಲ್ಲಿ ಚಿತ್ರೀಕರಣ ನಡೆದದ್ದು ಸಂತೋಷ ತಂದಿತು” ಎಂದ ಸ್ಕಂದ, ಅವಕಾಶ ನೀಡಿದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಅಭಿನಂದನೆ ಹೇಳಿದರು. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಂಗಾಯಣ ರಘು ಅವರು ಮಾತನಾಡಿ, “ನಿರ್ದೇಶನದಲ್ಲಿ ಐವತ್ತು ಚಿತ್ರಗಳನ್ನು ಪೂರೈಸಿರುವ ದಿನೇಶ್ ಬಾಬು ಅವರನ್ನು ಅಭಿನಂದಿಸುತ್ತೇನೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾರರ್ ಚಿತ್ರಗಳು ಬಂದಿದ್ದು, ಪ್ರೇಕ್ಷಕರ ಮನ ಗೆದ್ದಿದೆ. ಇದು ಭಿನ್ನವಾಗಿದ್ದು, ನನ್ನ ಪಾತ್ರ ಚೆನ್ನಾಗಿದೆ” ಎಂದರು. ರವೀಶ್‌ ನಿರ್ಮಾಣದ ಚಿತ್ರಕ್ಕೆ ರಮೇಶ್‌ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಶೃತಿ ಪ್ರಕಾಶ್, ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here