ಹೇಮಂತ್ ಎಂ ರಾವ್ ನಿರ್ದೇಶನದ ‘ಭೈರವನ ಕೊನೆ ಪಾಠ’ ನೂತನ ಸಿನಿಮಾದಲ್ಲಿನ ಶಿವ ರಾಜಕುಮಾರ್‌ ಫಸ್ಟ್‌ಲುಕ್‌ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ವೈಶಾಖ್ ಜೆ ಗೌಡ ನಿರ್ಮಾಣದ ಸಿನಿಮಾದ ಶೀರ್ಷಿಕೆ ಮೊನ್ನೆಯಷ್ಟೇ ಹೊರಬಿದ್ದಿತ್ತು. ಇದೀಗ ವಿಶಿಷ್ಟ ಪಾತ್ರದಲ್ಲಿನ ಶಿವ ರಾಜಕುಮಾರ್‌ ಗೆಟಪ್‌ಗಳು ಸಿನಿಮಾ ಕುರಿತಾದ ನಿರೀಕ್ಷೆ ಹೆಚ್ಚಿಸಿವೆ.

ಶಿವ ರಾಜಕುಮಾರ್‌ ಅಭಿನಯದ ‘ಭೈರವನ ಕೊನೆ ಪಾಠ’ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಇಲ್ಲಿಯವರೆಗಿನ ತಮ್ಮ ಸಿನಿಮಾಗಳಲ್ಲಿ ಶಿವ ರಾಜಕುಮಾರ್‌ ಇಂತಹ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಿಲ್ಲ. ಅವರ ವಯಸ್ಸಿಗೆ ಸರಿಹೊಂದುವಂತಹ, ಅನ್ವೇಷಕನ ಅವತಾರದಲ್ಲಿನ ಈ ಪೋಸ್ಟರ್‌ಗಳು ಆಕರ್ಷಕ ವಿನ್ಯಾಸದಿಂದಲೂ ಗಮನ ಸೆಳೆಯುತ್ತವೆ. ತಮ್ಮ ನೆಚ್ಚಿನ ನಟನ ಹೊಸ ರೀತಿಯ ಗೆಟಪ್‌ಗಳನ್ನು ನೋಡಿ ಶಿವ ರಾಜಕುಮಾರ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಪೋಸ್ಟರ್‌ಗಳು ಸಾವಿರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿವೆ. VJF ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಡಾ ವೈಶಾಕ್‌ ಗೌಡ ಚಿತ್ರ ನಿರ್ಮಿಸುತ್ತಿದ್ದಾರೆ. ಜುಲೈ 12ರಂದು ಶಿವರಾಜಕುಮಾರ್‌ ಬರ್ತ್‌ಡೇಗೆ ಫಸ್ಟ್‌ಲುಕ್‌ ಪೋಸ್ಟರ್‌ಗಳು ಬಿಡುಗಡೆಯಾಗಲಿವೆ ಎನ್ನಲಾಗಿತ್ತು. ಆದರೆ ಚಿತ್ರತಂಡ ನಿನ್ನೆಯೇ (ಜುಲೈ 8) ಪೋಸ್ಟರ್‌ಗಳನ್ನು ರಿಲೀಸ್‌ ಮಾಡಿದೆ.

ಮೊನ್ನೆ ಶೀರ್ಷಿಕೆ ಹೊರಬಿದ್ದಾಗಲೇ ಸಿನಿಮಾ ಕುರಿತಾಗಿ ಚರ್ಚೆಗಳು ನಡೆದಿದ್ದವು. ನಿರ್ದೇಶಕ ಹೇಮಂತರಾವ್‌ ಶೀರ್ಷಿಕೆ ಕುರಿತು, ‘ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರವಾಗಿದ್ದು, ನಮ್ಮ ಶೀರ್ಷಿಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಅವನು ಮಾಡುವ ಪಾಠ ಯಾವುದು? ಅದನ್ನು ಕೊನೆ ಪಾಠ ಅಂದಿರೋದು ಯಾಕೆ ಅನ್ನುವುದೇ ಇದರ ಮುಖ್ಯ ತಿರುಳು. ನಮ್ಮ ಶೀರ್ಷಿಕೆ ವೀಕ್ಷಕರಲ್ಲಿ ಈ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಅನ್ನುವುದು ನಮ್ಮ ನಂಬಿಕೆ’ ಎಂದಿದ್ದರು. ನಿರ್ಮಾಪಕ ವೈಶಾಖ್ ಜೆ ಗೌಡ, ‘ಶೀರ್ಷಿಕೆಯನ್ನು ಮೊದಲ ಬಾರಿ ಕೇಳಿದಾಗ ನಾನೆಷ್ಟು ಉತ್ಸಾಹಗೊಂಡಿದ್ದೆನೋ ಅದೇ ಉತ್ಸಾಹ ಜನರಲ್ಲೂ ಕಂಡುಬರುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಚಿತ್ರವಾಗಿ ಮೂಡಿಬರಲಿದ್ದು, ಮುಂದಿನ ತಲೆಮಾರುಗಳವರೆಗೆ ತನ್ನ ಜನಪ್ರಿಯತೆ ಉಳಿಸಿಕೊಳ್ಳಲಿದೆ’ ಎಂದಿದ್ದರು.

LEAVE A REPLY

Connect with

Please enter your comment!
Please enter your name here