ಮಾನವ ಕಳ್ಳಸಾಗಾಣಿಕೆ ಮತ್ತು ಬಾಲ ಕಾರ್ಮಿಕ ಸಮಸ್ಯೆಗಳ ಸುತ್ತ ಹೆಣೆದ ಕ್ರೈಂ – ಥ್ರಿಲ್ಲರ್‌ ಜಾನರ್‌ನ ಕತೆ. ಇಲ್ಲಿ ಸಂತ್ರಸ್ತರನ್ನು ಹಿಂಸಿಸುವ ದೃಶ್ಯಗಳನ್ನು ಚಿತ್ರಿಸುವ ಹಲವು ಅವಕಾಶಗಳಿದ್ದವು. ಈ ಚಿತ್ರದಲ್ಲಿ ಅಂತಹ ದೃಶ್ಯಗಳಿಲ್ಲ. ಆದಾಗ್ಯೂ ಸಿನಿಮಾ ನೋಡಿದ ನಂತರ ವ್ಯವಸ್ಥೆಯನ್ನು ಪ್ರಶ್ನಿಸುವ, ಮಕ್ಕಳ ಬಗ್ಗೆ ಕಾಳಜಿ ಮಾಡುವ ಭಾವ ಪ್ರೇಕ್ಷಕರಲ್ಲಿ ಮೂಡುತ್ತದೆ. ಅದು ಸಿನಿಮಾವೊಂದರ ನಿಜವಾದ ಯಶಸ್ಸು.

“ಈ ಚಿತ್ರವನ್ನು ಸಾಧ್ಯವಾದಷ್ಟೂ ನೈಜ ರೀತಿಯಲ್ಲಿ ಚಿತ್ರೀಕರಿಸಲು ಪ್ರಯತ್ನಿಸಿದ್ದೇವೆ. ಚಿತ್ರದಲ್ಲಿ ನಡೆಯುವ ಸನ್ನಿವೇಷಗಳು ನಿಜ ಜಗತ್ತಿನ ಜನರಿಗೆ ಹತ್ತಿರವಾಗುವಂತೆ ಇರುವುದರಿಂದ ಅವುಗಳ ಪ್ರಭಾವ ಕಡಿಮೆಯಾಗಬಾರದು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ಚಿತ್ರವನ್ನು ವೈಭವೀಕರಿಸದೆ ಹಾಗೂ ಕಮರ್ಷಿಯಲ್ಲಾಗಿ ಕಾಣದ ಹಾಗೆ ಜಾಗೃತಿ ವಹಿಸಿದ್ದೇವೆ. ಚಿತ್ರವು ನೈಜತೆಯಿಂದ ದೂರು ಉಳಿಯುವ ಎಸ್ಕೇಪ್‌ ಫ್ಯಾಂಟಸಿಯಾಗಲು ನಾವು ಬಯಸುವುದಿಲ್ಲ” ಎಂದು ಚಿತ್ರದ ತಂತ್ರಜ್ಞರು ಹೇಳಿಕೊಂಡಿದ್ದರು. ಚಿತ್ರದಲ್ಲಿ ಅವರ ಆಶಯ ಈಡೇರಿದ್ದು, ಕಲಾವಿದರು ಕೂಡ ಅವರ ಇರಾದೆಯನ್ನು ಗೌರವಿಸುವಂತೆ ಅಭಿನಯಿಸಿದ್ದಾರೆ. ಆ ಮಟ್ಟಿಗೆ ಈ ಸಿನಿಮಾ ಗೆದ್ದಿದೆ ಎಂದು ಹೇಳಬಹುದು.

ಚಿತ್ರದಲ್ಲಿ ತೊಡಗಿಸಿಕೊಂಡಿರುವ ತಂತ್ರಜ್ಞರಿಗೆ ಇದು ಮೊದಲ ಫೀಚರ್‌ ಸಿನಿಮಾ. ಮತ್ತು ಇವರೆಲ್ಲರೂ ಸಿನಿಮಾಗೆ ಸಂಬಂಧಿಸಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಕಲಿತವರೇ ಆಗಿದ್ದಾರೆ. ವಿದ್ಯಾಭ್ಯಾಸದ ನಂತರ ಕೆಲ ವರ್ಷಗಳ ಕಾಲ ಡಾಕ್ಯುಮೆಂಟರಿ, ಜಾಹೀರಾತು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿಗಳು. ಸಮಾನ ಮನಸ್ಕ ಬಳಗದವರು ಸೇರಿ ನಿರ್ಧಿಷ್ಟ ಗುರಿ, ಹೋಂವರ್ಕ್‌ನೊಂದಿಗೆ ಮಾಡಿರುವ ಸಿನಿಮಾ ‘ಸೋಲ್ಡ್‌’. ಎಲ್ಲರೂ ತಮ್ಮ ತಮ್ಮ ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಅವರೇ ಹೇಳಿಕೊಂಡಂತೆ ನೈಜತೆಗೆ ಹತ್ತಿರವಿರುವಂತೆ ಚಿತ್ರಿಸಿರುವ ಸಿನಿಮಾ. ಸಂತ್ರಸ್ತರನ್ನು ಮಾತನಾಡಿಸಿರುವ ವೀಡಿಯೋಗಳು ಚಿತ್ರದಲ್ಲಿವೆ. ಆದರೆ ಇವು ಸಿನಿಮಾದ ಓಘಕ್ಕೆ ಎಲ್ಲಿಯೂ ಧಕ್ಕೆ ತಂದಿಲ್ಲ.

ಮಾನವ ಕಳ್ಳಸಾಗಾಣಿಕೆ ಮತ್ತು ಬಾಲ ಕಾರ್ಮಿಕ ಸಮಸ್ಯೆಗಳ ಸುತ್ತ ಹೆಣೆದ, ಕ್ರೈಂ – ಥ್ರಿಲ್ಲರ್‌ ಜಾನರ್‌ನ ಕತೆ. ಮಾನವ ಕಳ್ಳಸಾಗಾಣಿಕೆ ಒಂದು ನಿಗೂಢ ಜಗತ್ತು. ನೇರವಾಗಿ ಕಾಣಿಸದ, ಭೂಗತ ಜಗತ್ತಿನ ವಲಯದಲ್ಲಿ ವ್ಯಾಪಕವಾಗಿ ನಡೆಯುವ ದಂಧೆ. ಸುತ್ತಲಿನ ಜನರಿಗೆ ಇದು ಅಷ್ಟಾಗಿ ಅರಿವಿಗೆ ಬಾರದು. ಇನ್ನೂ ಬಹಳಷ್ಟು ಬಾರಿ ಗೊತ್ತಿದ್ದೂ ಸಮಾಜ ನಿರ್ಲಕ್ಷ್ಯಿಸುತ್ತದೆ. ‘ಸೋಲ್ಡ್‌’ನಲ್ಲಿ ಹತ್ತು ವರ್ಷದ ಬಾಲಕಿ ರಶ್ಮಿ ಪಾತ್ರದ ಮೂಲಕ ಮಾನವ ಕಳ್ಳಸಾಗಾಣಿಕೆಯ ಕರಾಳ ಮುಖವನ್ನು ನಿರ್ದೇಶಕರು ಪರಿಚಯಿಸುತ್ತಾರೆ. ಪತ್ರಕರ್ತೆ ರುಚಿತಾ ಮತ್ತು ಗ್ಯಾಂಗ್‌ಸ್ಟರ್‌ ರಘು ಚಿತ್ರದ ಮತ್ತೆರೆಡು ಪ್ರಮುಖ ಪಾತ್ರಗಳು. ಮೂರು ಭಿನ್ನ ದೃಷ್ಟಿಕೋನದ ಪಾತ್ರಗಳು, ಪರಿಣಾಮ, ಅವರ ವೈಯಕ್ತಿಕ ಜೀವನದ ಬಗೆಗಿನ ಚಿತ್ರಣ ಸಿಗುತ್ತದೆ.

ಪತ್ರಕರ್ತೆ ರುಚಿತಾ, ಗ್ಯಾಂಗ್‌ಸ್ಟರ್‌ ರಘು ವೈಯಕ್ತಿಕ ಬದುಕಿನಲ್ಲೂ ಏರುಪೇರುಗಳಿವೆ. ಆದರೆ ಇವನ್ನು ಮೂಲಕತೆಗೆ ಪೂರಕವಾಗಿಯೇ ಬೆಸೆದುಕೊಂಡಂತೆ ಚಿತ್ರಿಸಿರುವುದು ನಿರ್ದೇಶಕರ ಜಾಣ್ಮೆ. ಸ್ಯಾಂಡಲ್‌ವುಡ್‌ನ ನಿರ್ದೇಶನ ವಿಭಾಗದಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಕಡಿಮೆ. ಈ ಹಾದಿಯಲ್ಲಿ ‘ಸೋಲ್ಡ್‌’ನ ಪ್ರೇರಣಾ ಅಗರ್‌ವಾಲ್‌ ಸಶಕ್ತ ನಿರ್ದೇಶಕಿಯಾಗಿ ಬೆಳೆಯಬಲ್ಲ ಭರವಸೆ ಮೂಡಿಸುತ್ತಾರೆ. ಚೊಚ್ಚಲ ಪ್ರಯತ್ನದಲ್ಲೇ ಸಾಮಾಜಿಕ ಪಿಡುಗಿನ ಕತೆಯೊಂದನ್ನು ಆಯ್ಕೆ ಮಾಡಿಕೊಂಡಿರುವುದು ಅವರ ಉತ್ತಮ ಅಭಿರುಚಿಗೆ ಸಾಕ್ಷಿ. ನೈಜತೆಗೆ ಧಕ್ಕೆ ಬರದಂತೆ ಅಗತ್ಯವಿರುವಷ್ಟೇ ಸಂಗೀತ (ಜೀತ್‌ ಸಿಂಗ್‌) ಮತ್ತು ಛಾಯಾಗ್ರಹಣದ (ಸಮೀರ್‌ ದೇಶಪಾಂಡೆ) ನೆರವು ನಿರ್ದೇಶಕರಿಗೆ ಸಿಕ್ಕಿದೆ.

ಮುಗ್ಧ ಬಾಲೆಯಾಗಿ ಶಿವಾನಿ (ರಶ್ಮಿ ಪಾತ್ರಧಾರಿ), ಅನಿವಾರ್ಯತೆಗೆ ಸಿಲುಕಿ ಅನ್ಯಮನಸ್ಕನಾಗಿ ಬದುಕುವ ರಘು ಪಾತ್ರದಲ್ಲಿ ದೀಪಂ ಕೊಹ್ಲಿ (ಇವರು ಚಿತ್ರದ ನಿರ್ಮಾಪಕರೂ ಹೌದು), ಇನ್ವೆಸ್ಟಿಗೇಟಿವ್‌ ಜರ್ನಲಿಸ್ಟ್‌ ಆಗಿ ಕಾವ್ಯಾ ಶೆಟ್ಟಿ ಪಾತ್ರಪೋಷಣೆ ಚೆನ್ನಾಗಿದೆ. ಇಲ್ಲಿಯವರೆಗೆ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಡ್ಯಾನಿಷ್‌ ಸೇಠ್‌ ‘ಸೋಲ್ಡ್‌’ನಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಇಷ್ಟವಾಗುತ್ತಾರೆ. ಬಹುಶಃ ಮುಂದಿನ ದಿನಗಳಲ್ಲಿ ಅವರು ಇಂತಹ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು. ಮಾನವ ಕಳ್ಳಸಾಗಾಣಿಕೆ, ಬಾಲಕಾರ್ಮಿಕತೆಯ ಚಿತ್ರಣ ಕಟ್ಟಿಕೊಡುವ ಸಂದರ್ಭದಲ್ಲಿ ಸಂತ್ರಸ್ತರನ್ನು ಹಿಂಸಿಸುವ ದೃಶ್ಯಗಳನ್ನು ಚಿತ್ರಿಸುವ ಹಲವು ಅವಕಾಶಗಳಿದ್ದವು. ಈ ಚಿತ್ರದಲ್ಲಿ ಅಂತಹ ದೃಶ್ಯಗಳಿಲ್ಲ. ಆದಾಗ್ಯೂ ಸಿನಿಮಾ ನೋಡಿದ ನಂತರ ವ್ಯವಸ್ಥೆಯನ್ನು ಪ್ರಶ್ನಿಸುವ, ಮಕ್ಕಳ ಬಗ್ಗೆ ಕಾಳಜಿ ಮಾಡುವ ಭಾವ ಪ್ರೇಕ್ಷಕರಲ್ಲಿ ಮೂಡುತ್ತದೆ. ಅದು ಸಿನಿಮಾವೊಂದರ ನಿಜವಾದ ಯಶಸ್ಸು.

LEAVE A REPLY

Connect with

Please enter your comment!
Please enter your name here