ಮಲಯಾಳಂ ನಟ ದಿಲೀಪ್‌ ಮತ್ತು ಬಹುಭಾಷಾ ನಟಿ ಭಾವನಾ ಅವರ ಐದು ವರ್ಷಗಳ ಹಿಂದಿನ ಪ್ರಕರಣ ಮತ್ತೆ ಸುದ್ದಿಯಾಗಿದೆ. ವಿಚಾರಣಾ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದಿಲೀಪ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅಂದಿನ ಪ್ರಕರಣದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೊಸ್ಟ್‌ ಹಾಕಿರುವ ಭಾವನಾಗೆ ಬೆಂಬಲ ವ್ಯಕ್ತವಾಗಿದೆ.

ಅದು ಐದು ವರ್ಷಗಳ ಹಿಂದಿನ ಪ್ರಕರಣ. ಕೊಚ್ಚಿಯಲ್ಲಿ 2017ರ ಫೆಬ್ರವರಿ 17ರಂದು ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ನಟಿ ಭಾವನಾ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಒಂದು ಗುಂಪು ಅವರ ಕಾರು ತಡೆದು ಲೈಂಗಿಕ ದೌರ್ಜನ್ಯ ಎಸಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಮಲಯಾಳಂ ನಟ ದಿಲೀಪ್‌ ಎಂದು ಭಾವನಾ ದೂರು ದಾಖಲಿಸಿದ್ದರು. ಭಾರತೀಯ ಕಾನೂನಿನ ನಿಯಮಗಳ ಪ್ರಕಾರ ನಟಿಯ ಗುರುತನ್ನು ಗೋಪ್ಯವಾಗಿಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಪರ – ವಿರೋಧದ ಹೇಳಿಕೆಗಳು ಕೇಳಿಬಂದಿದ್ದವು.

ಆಗ ನಟಿ ದಾಖಲಿಸಿದ ದೂರಿನ ಆಧಾರದ ಮೇಲೆ ದಿಲೀಪ್‌ ಎರಡು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಐದು ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ಮತ್ತೆ ಸುದ್ದಿಯಾಗಲು ಕಾರಣ ಇದೇ ನಟ ದಿಲೀಪ್‌! ಕೇರಳದ ಟೀವಿ ಚಾನೆಲ್‌ವೊಂದು ದಿಲೀಪ್‌ ಅವರ ಆಡಿಯೋ ಕ್ಲಿಪ್‌ವೊಂದನ್ನು ಬಿಡುಗಡೆಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧಿಕಾರಿಗೆ ದಿಲೀಪ್‌ ಬೆದರಿಕೆ ಹಾಕಿರುವ ಆಡಿಯೋ ಕ್ಲಿಕ್‌ ಇದು. ಈ ಹಿನ್ನೆಲೆಯಲ್ಲಿ ವಿಚಾರಣಾಧಿಕಾರಿ ದೂರಿನ ಆಧಾರದ ಮೇಲೆ ದಿಲೀಪ್‌ ವಿರುದ್ಧ ಹೊಸ FIR ದಾಖಲಾಗಿದೆ. ಬಂಧನದ ಭೀತಿಯಿಂದ ನಟ ದಿಲೀಪ್‌ ಕೇರಳ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಹಾಕಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಪ್ರಕರಣ ನಡೆದಾಗ ಕಾನೂನು ರೀತ್ಯಾ ಭಾವನಾ ಗುರುತನ್ನು ಗೋಪ್ಯವಾಗಿಡಲಾಗಿತ್ತು. ಚಿತ್ರರಂಗದ ವಲಯದಲ್ಲಿ ಈ ಬಗ್ಗೆ ಎಲ್ಲರಿಗೂ ಮಾಹಿತಿ ಇತ್ತಾದರೂ ಸಾರ್ವಜನಿಕವಾಗಿ ಭಾವನಾ ಹೆಸರು ಪ್ರಸ್ತಾಪವಾಗಿರಲಿಲ್ಲ. ನಟಿ ಭಾವನಾ ಇಲ್ಲಿಯವರೆಗಿನ ಮೌನವನ್ನು ಮುರಿದು ನಿನ್ನೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. “ಈ ಐದು ವರ್ಷಗಳ ನನ್ನ ಪಯಣ ತುಂಬಾ ಕಷ್ಟಕರವಾಗಿತ್ತು. ನನ್ನ ಹೋರಾಟವನ್ನು ಹತ್ತಿಕ್ಕಲು, ನನ್ನನ್ನು ಸುಮ್ಮನಾಗಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆಗೆಲ್ಲಾ ಹಲವರು ನನ್ನ ನೆರವಿಗೆ ನಿಂತು ನೈತಿಕ ಬೆಂಬಲ ನೀಡಿದರು. ನ್ಯಾಯಕ್ಕಾಗಿ ಹೋರಾಟ ನಡೆಸುವ ಹಾದಿಯಲ್ಲಿ ನಾನು ಏಕಾಂಗಿಯಲ್ಲ ಎನ್ನುವ ಭಾವನೆ ನನ್ನಲ್ಲಿ ಆತ್ಮವಿಶ್ವಾಸ ತಂದಿದೆ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು” ಎನ್ನುವ ಒಕ್ಕಣಿಯ ಪತ್ರವನ್ನು ಭಾವನಾ ಪೋಸ್ಟ್‌ ಮಾಡಿದ್ದಾರೆ.

ಭಾವನಾ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರ ಹಾಕುತ್ತಿದ್ದಂತೆ ಮಲಯಾಳಂ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ತಾರೆಯರಿಂದ ನಟಿಗೆ ಬೆಂಬಲ ವ್ಯಕ್ತವಾಗಿದೆ. ಮಲಯಾಳಂ ಚಿತ್ರರಂಗದ ಮೇರು ನಟರಾದ ಮುಮ್ಮೂಟಿ ಮತ್ತು ಮೋಹನ್‌ ಲಾಲ್‌, “ನಿಮ್ಮೊಂದಿಗೆ ನಾನಿದ್ದೇನೆ” ಎನ್ನುವ ಸಂದೇಶ ರವಾನಿಸಿದ್ದಾರೆ. ಮಲಯಾಳಂ ಸಿನಿ ತಾರೆಯರಾದ ಪೃಥ್ವಿರಾಜ್‌, ನಿಮಿಷಾ ಸಜಯನ್‌, ಗೀತು ಮೋಹನ್‌ ದಾಸ್‌, ಪಾರ್ವತಿ ತಿರುವೊಟ್ಟು, ಗಾಯಕಿ ಚಿನ್ಮಯಿ ಶ್ರೀಪಾದ್‌, ಬಾಲಿವುಡ್‌ ಚಿತ್ರನಿದೇಶಕಿ ಜೋಯಾ ಅಖ್ತರ್‌, ನಟಿಯರಾದ ರಿಚಾ ಛಡ್ಡಾ, ಸ್ವರ ಭಾಸ್ಕರ್‌ ಸೇರಿದಂತೆ ಹಲವರು ಭಾವನಾಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here