ಮಕ್ಕಳ ಬದುಕಿನಲ್ಲಿ ತಾನಿಲ್ಲ ಎನ್ನುವ ಕಹಿ ಸತ್ಯವನ್ನು ಒಪ್ಪಿ ತಾನಾಗಿಯೇ ಅವಧಿಗೆ ಮುನ್ನವೇ ಜೈಲಿಗೆ ಹಿಂದಿರುವ ಆಕೆಗೆ ಅಲ್ಲೊಂದು ಸುದ್ದಿ ಕಾದಿರುತ್ತದೆ : ಅವಳಿಗೆ ಕ್ಷಮಾದಾನ ಸಿಕ್ಕಿದ್ದು ಸದ್ಯದಲ್ಲೇ ಅವಳ ಬಿಡುಗಡೆ ಆಗುತ್ತಿರುತ್ತದೆ. ಈಗ ಅವಳು ಹತಾಶೆಯಲ್ಲಿ ಕುಸಿದು ಕೂರುತ್ತಾಳೆ. ನಿನ್ನೆ (27 ಮಾರ್ಚ್‌) ನೋಡಿದ ಎರಡೂ ಸಿನಿಮಾಗಳು dysfunctional families ಕುರಿತಾದ್ದು.

ಕೆಲವು ಸಲ ಅದು ಹೇಗೋ ನಮಗೇ ಗೊತ್ತಿಲ್ಲದಂತೆ ಒಂದೇ ಥೀಮ್ ಇರುವ ಸಿನಿಮಾ ನೋಡಿರುತ್ತೇವೆ. ಅದೇನೂ ನಾವು ಯೋಚಿಸಿ, ಯೋಜಿಸಿ ಆಯ್ದುಕೊಂಡಿರುವುದಿಲ್ಲ, ಅದು ಹಾಗಾಗುತ್ತದೆ ಅಷ್ಟೆ. ಹಾಗೆ ಇಂದು ನೋಡಿದ ಎರಡೂ ಚಿತ್ರಗಳೂ (ಇನ್ನೊಂದು 15 ನಿಮಿಷಗಳಾದರೂ ಹಿಡಿದಿಡಲೇ ಇಲ್ಲ, ಹಾಗಾಗಿ ಸದ್ದಿಲ್ಲದಂತೆ ಹಿಂದಿನ ಬಾಗಿಲಿಂದ ಜಾರಿಕೊಂಡೆವು!) dysfunctional families ಕುರಿತಾದ್ದು. ‘ಅನ್ನಾ ಕರೇನಿನಾ’ ಪುಸ್ತಕದ ಮೊದಲ ಸಾಲಿನಲ್ಲಿ ಟಾಲ್‌ಸ್ಟಾಯ್‌ ಹೀಗೆ ಬರೆಯುತ್ತಾರೆ, ‘Happy families are all alike; every unhappy family is unhappy in its own way’. ಇಂದು ನೋಡಿದ ಎರಡೂ ಸಿನಿಮಾಗಳಲ್ಲಿನ ಕುಟುಂಬಗಳೂ ಸಹ ಹಾಗೆಯೇ ತನ್ನದೇ ಆದ ಕಾರಣಕ್ಕೆ ಚೂರಾಗಿತ್ತು. ಹಾಗೆ ಕುಟುಂಬವೊಂದು dysfunctional ಆದರೆ ಪ್ರತಿಯೊಬ್ಬರೂ ಒಂದೇ ಕಾರಣಕ್ಕೆ ಬೇರೆ ಬೇರೆ ರೀತಿಯಲ್ಲಿ ಚೂರಾಗುತ್ತಾರೆ. ದುರಂತ ಇರುವುದು ಇಲ್ಲಿ.

ಇಂದು ನೋಡಿದ ಮೊದಲ ಚಿತ್ರ ‘Lady of the city’, ಇರಾನಿನ ಚಿತ್ರ. ಗಂಡ ಮಾಡಿದ ಅಪರಾಧಕ್ಕಾಗಿ ಹೆಂಡತಿಗೆ ಜೀವಾವಧಿ ಶಿಕ್ಷೆ ಆಗಿದೆ, ಈಗಾಗಲೇ 12 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾಳೆ. ಮಗನ ಮದುವೆಗೆ ಪೆರೋಲ್ ಸಿಗುತ್ತದೆ. ಇನ್ನಿಲ್ಲದ ಸಂಭ್ರಮದಿಂದ ಊರಿಗೆ ಬರುತ್ತಾಳೆ. ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡುಮಗನ ತಾಯಿ ಆಕೆ. ಒಬ್ಬ ಮಗಳಿಗೆ ಪುಟಾಣಿ ಮಗಳಿದ್ದಾಳೆ. ಮಗಳು ತನ್ನ ಮಗಳಿಗೆ ತಾಯಿಯನ್ನು ಆಂಟಿ ಎಂದು ಪರಿಚಯಿಸುತ್ತಾಳೆ. ಇನ್ನೊಬ್ಬ ಮಗಳು ನೋಡಲೂ ಬರುವುದಿಲ್ಲ. ಮಗ ಬಂದವನೇ ಅಮ್ಮನನ್ನು ತಬ್ಬಿಕೊಂಡು ಅಳುತ್ತಾನೆ. ಆದರೆ ತನ್ನ ವಧುವಿಗೆ ಆಕೆಯನ್ನು ತಾಯಿಯನ್ನಾಗಿ ಪರಿಚಯಿಸಲು ಆಗದು ಎನ್ನುತ್ತಾನೆ.

ಹನ್ನೆರಡು ವರ್ಷಗಳು ಇವಳನ್ನು ಮಕ್ಕಳ ಬದುಕಿನಿಂದ ಸಂಪೂರ್ಣವಾಗಿ ದೂರ ಮಾಡಿರುತ್ತವೆ. ಅವಳು ಜೈಲಿಗೆ ಹೋಗಿದ್ದು ಗಂಡನ ಹೇಡಿತನದಿಂದ ಎನ್ನುವುದನ್ನು ನಂಬುವುದು ಆಕೆಯ ಗೆಳತಿ ಮಾತ್ರ. ನಿಧಾನವಾಗಿ ಇಲ್ಲಿನ ಸಮಸ್ಯೆಗಳು ಅವಳಿಗೆ ಗೊತ್ತಾಗುತ್ತಾ ಹೋಗುತ್ತವೆ. ಮಕ್ಕಳ ಸಣ್ಣತನ, ಅವರು ಹಾಗಾಗಲು ಇರಬಹುದಾದ ಕಾರಣ, ಆದರೂ ಮಕ್ಕಳ ಜೀವನ ಹೇಗಾದರೂ ಸರಿ ಹೋಗಬೇಕು ಎಂದು ಒದ್ದಾಡುವ ಅವಳ ಹಠ ಎಲ್ಲವನ್ನೂ ಚಿತ್ರದ ಮುಖ್ಯಪಾತ್ರ ಕಟ್ಟಿಕೊಡುವ ರೀತಿ ಅತ್ಯಂತ ಪರಿಣಾಮಕಾರಿಯಾಗಿ ಬಂದಿದೆ. ಮಕ್ಕಳದೂ ಸಹ ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಬೆಳೆಯುವ ವಯಸ್ಸಿನಲ್ಲಿ ಅಪ್ಪ- ಅಮ್ಮ ಇಲ್ಲದೆ, ಅವರೆಲ್ಲರೂ ಬದುಕನ್ನು ಅವರಿಗೆ ತೋಚಿದಂತ ಕಟ್ಟಿಕೊಂಡಿದ್ದಾರೆ ಅಥವಾ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಬದುಕಿನಲ್ಲಿ ತಾನಿಲ್ಲ ಎನ್ನುವ ಕಹಿ ಸತ್ಯವನ್ನು ಒಪ್ಪಿ ತಾನಾಗಿಯೇ ಅವಧಿಗೆ ಮುನ್ನವೇ ಜೈಲಿಗೆ ಹಿಂದಿರುವ ಆಕೆಗೆ ಅಲ್ಲೊಂದು ಸುದ್ದಿ ಕಾದಿರುತ್ತದೆ : ಅವಳಿಗೆ ಕ್ಷಮಾದಾನ ಸಿಕ್ಕಿದ್ದು ಸದ್ಯದಲ್ಲೇ ಅವಳ ಬಿಡುಗಡೆ ಆಗುತ್ತಿರುತ್ತದೆ. ಈಗ ಅವಳು ಹತಾಶೆಯಲ್ಲಿ ಕುಸಿದು ಕೂರುತ್ತಾಳೆ.

ಇದಕ್ಕಿಂತಾ ಹೆಚ್ಚಿನ ಪದರಗಳನ್ನು, ಸೂಕ್ಶ್ಮತೆಗಳನ್ನೂ ಹೊಂದಿದ ಚಿತ್ರ ‘L’lmmensita’. ಇಟಾಲಿಯನ್ ಚಿತ್ರ. ಇಲ್ಲೂ ಒಂದು dysfunctional family ಇದೆ. ಆದರೆ ಇಲ್ಲಿನ ಕಾರಣಗಳೂ ಬೇರೆ, ಪರಿಣಾಮಗಳೂ ಬೇರೆ. ಸ್ಪೇನ್‌ನಿಂದ ಬಂದ ನಾಯಕಿಗೆ ಇಟಲಿಯಲ್ಲಿ ಅಪರಿಚಿತತೆ ಕಾಡುತಿರುತ್ತದೆ. ಒಂದು ಕ್ಷಣ ಉತ್ಸಾಹದ ಬುಗ್ಗೆಯಂತೆ ಚಿಮ್ಮಿ ಚಿಮ್ಮಿ ನಡೆದರೆ, ಮರುಕ್ಷಣ ಜಗತ್ತಿನೆಲ್ಲಾ ನೋವನ್ನೂ ಹೆಗಲುಗಳ ಮೇಲೆ ಹೊತ್ತಂತ ವಿಷಾದ, ಸುಸ್ತು. ಅವಳ ಗಂಡ ಒಬ್ಬ ಸ್ತ್ರೀಲೋಲ, ಅವನ ಹಲವಾರು ಅಫೇರ್‌ಗಳು ನಡೆಯುತ್ತಲೇ ಇರುತ್ತವೆ. ಅವರಿಬ್ಬರ ನಡುವಿನ ಒತ್ತಡದ ಪರಿಣಾಮ ಮೂರೂ ಮಕ್ಕಳ ಮೇಲೆ ಆಗುತ್ತಿರುತ್ತದೆ.

ಹಿರಿಯ ಮಗು ಹೆಣ್ಣಾಗಿ ಹುಟ್ಟಿದ್ದು, ತನ್ನನ್ನು ಗಂಡು ಎಂದು ಗುರುತಿಸಿಕೊಂಡಿರುತ್ತದೆ ಮತ್ತು ಹಾಗೆಯೇ ನಡೆದುಕೊಳ್ಳುತ್ತಿರುತ್ತದೆ. ಎರಡನೆಯ ಮಗುವಿಗೆ ಒತ್ತಡ ಆದಾಗೆಲ್ಲಾ ಅತಿಯಾಗಿ ತಿನ್ನುವ, ಬಾಗಿಲ ಹಿಂದೆ, ಕಬೋರ್ಡ್ ಒಳಗೆ ವಿಸರ್ಜನೆ ಮಾಡುವ ಅಭ್ಯಾಸ. ಮೂರನೆಯ ಮಗಳು ಪುಟ್ಟ ದೇವತೆಯಂಥವಳು. ತನ್ನ ತಟ್ಟೆಯಲ್ಲಿರುವ ಆಹಾರ ಒಮ್ಮೆ ದೋಣಿಯಾಗಿ ಕಂಡರೆ ಮತ್ತೊಮ್ಮೆ ಹೂವಾಗಿ, ಮೋಡವಾಗಿ ಕಾಣುವ ಕಲ್ಪನಾ ಚತುರೆ. ಅವಳ ಅಪ್ಪ ಅವಳ ತಟ್ಟೆಯ ಆಹಾರವನ್ನು ನಿರ್ಮಮಕಾರದಿಂದ ತುಂಡುಮಾಡಿ ಮಗಳ ಬಾಯಿಗೆ ತುರುಕುವವನು. ಇವುಗಳ ನಡುವೆ ತಾಯಿಯನ್ನು ಕಂಡರೆ ವಿಚಿತ್ರ ಪೊಸೆಸಿವ್‌ನೆಸ್ ಇರುವ ದೊಡ್ಡ ಮಗಳು, ಮನೆಯಾಚೆಗಿನ ತೋಪಿನಾಚೆಗಿನ ಜಿಪ್ಸಿಗಳ ಹುಡುಗಿಯೊಂದಿಗೆ ಅವಳ ಸಂಬಂಧ… ಹೀಗೆ ಹಲವಾರು ಪದರಗಳಲ್ಲಿ ಚಿತ್ರ ಸಾಗುತ್ತದೆ.

‘Happy families are all alike; every unhappy family is unhappy in its own way’ Indeed.

LEAVE A REPLY

Connect with

Please enter your comment!
Please enter your name here