ಚಿತ್ರದ ಒಂದು ಮುಖ್ಯ ದೃಶ್ಯದಲ್ಲಿ ತಾಯಿ, ಆ ಪುಟ್ಟ ಹುಡುಗಿಯ ಹೆಗಲಿಗೆ ಶಾಲೆಯ ಬ್ಯಾಗನ್ನು ನೇತು ಹಾಕಿ ಹೊರಡಿಸುವಾಗಿನ ದೃಶ್ಯ ‌ಇಡೀ‌ ಸಿನಿಮಾದ ಆಶಯವನ್ನು‌ ಹೇಳುತ್ತದೆ. ಇಂತಹ ವಿಷಯಗಳು ಎಂದೆಂದಿಗೂ ಬಹುಮುಖ್ಯ ಅನ್ನಿಸಿಕೊಳ್ಳುತ್ತವೆ.

ಈ‌ ಸಿನಿಮಾ ನನಗೆ ನಿಜಕ್ಕೂ ಸರ್ಪ್ರೈಸ್. ಏಕೆಂದರೆ ಕಥೆ ನಡೆಯುವುದೇ ನಮ್ಮ ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು, ನಂಜನಗೂಡು, ಗುಂಡ್ಲುಪೇಟೆ ಭಾಗದ ಪ್ರದೇಶದಲ್ಲಿ. ಅಂದರೆ ನಮ್ಮದೇ ಕಥೆಯನ್ನು ನೋಡುತ್ತ ನಮ್ಮೂರಿಗೆ ಒಮ್ಮೆ ಹೋಗಿ ಬಂದಂತಾಯ್ತು. ಕೆ.ಟಿ.ಚಿಕ್ಕಣ್ಣ ಅವರ ಕಥೆಯನ್ನು ಈ ಹಿಂದೆ ನಾಟಕ ಮಾಡಲಾಗಿತ್ತಂತೆ. ಈಗ ಅದೇ ಕಥೆಯನ್ನು ಸಿನಿಮಾ‌ ಮಾಡಲಾಗಿದೆ. ಮೂವತ್ತು ವರ್ಷಗಳ ಹಿಂದಿನ ಕಥೆಯಾದರೂ ಸಿನಿಮಾ ನೋಡುವಾಗ ಹಾಗೇನೂ ಅನ್ನಿಸುವುದಿಲ್ಲ. ಒಂದು ಕ್ಷಣವೂ ನಮ್ಮ ಗಮನ ಅತ್ತಿತ್ತ ಹೋಗದಂತೆ ಕುತೂಹಲಕಾರಿಯಾಗಿ ಕಥೆ ಕಟ್ಟಿರುವುದು ಈ ಸಿನಿಮಾದ ಸಕಾರಾತ್ಮಕ ಅಂಶ.

ಹಳ್ಳಿ ಭಾಷೆಗಳೆಂದರೆ ನೇರವಾಗಿ ಒಯ್ತೀನಿ, ಬತ್ತೀನಿ ಅಂತಷ್ಟೇ ಮಾಡಿ ಸಿನಿಮಾದ ಫೀಲ್ ಅನ್ನೇ ಹಾಳುಗೆಡವುತ್ತಾರೆ. ಧಾರಾವಾಹಿಗಳಲ್ಲಂತೂ ಕೇಳೋದೇ ಬೇಡ. ಆದರೆ ಇಲ್ಲಿ ಹಾಗಾಗಿಲ್ಲ‌. ಇಲ್ಲಿ ಎರಡೂ ಮುಖ್ಯ. ಸಂಭಾಷಣೆಯಲ್ಲೂ ಆ ಭಾಗದ ಸೊಗಡಿರಬೇಕು. ನಟರೂ ಆ ಸೊಗಡನ್ನು ಗಮನಿಸಿ ಅದರಂತೆಯೇ ಮಾತನಾಡಲು ಪ್ರಯತ್ಸಿಸಬೇಕು. ಈ ವಿಷಯದಲ್ಲಿ ‘ಕೋಳಿ ಎಸ್ರು’ ಸಿನಿಮಾ ತಂಡಕ್ಕೆ ಫುಲ್ ಮಾರ್ಕ್ಸ್. ಈ ಕೆಲಸಕ್ಕಾಗಿ ಈ ಸಿನಿಮಾ ನಿರ್ದೇಶಕರಾದ ಚಂಪಾ ಶೆಟ್ಟಿ ಅವರು ಆ ಭಾಗದ ಅನೇಕ ಜನರೊಟ್ಟಿಗೆ ಕೆಲಸ ಮಾಡಿದ್ದಾರೆ. ಆ ಕೆಲಸದ output ಸಿನಿಮಾದಲ್ಲಿ ಎದ್ದು ಕಾಣುತ್ತದೆ.

ಎರಡನೆಯದು ಕಲಾವಿಭಾಗ. ಕೋಳಿಗಳು, ಎತ್ತಿನಬಂಡಿ, ನೆಂಟರು‌ ಬಂದಾಗ ಅವರನ್ನು ನೋಡಿಕೊಳ್ಳುವ ರೀತಿ, ಮನೆಗಳು, ನಾಟಕ, ಫ್ಲೋರ್ ಮಿಲ್ಲು, ಅಸೀಟು, ಇಸ್ಪೀಟು, ತೊಟ್ಟಿಮನೆ, ಮಾದಪ್ಪ-ಮಂಟೇಸ್ವಾಮಿ-ಶಿವಶರಣೆ ಸಂಕಮ್ಮನ ಹಾಡುಗಳು…..ಹೀಗೆ ಅಲ್ಲಿಯ ವಾತಾವರಣವನ್ನು ಯಥಾವತ್ತಾಗಿ ಕಟ್ಟಿಕೊಟ್ಟು ಆ ಊರಿಗೆ ನಮ್ಮನ್ನು ಕರೆದುಕೊಂಡು ಹೋಗಿ ಸುತ್ತಾಡಿಸಿ ಬರುತ್ತಾರೆ. ಅಷ್ಟು ನೈಜವಾಗಿ ಬಂದಿದೆ.

ಕಥೆಯ ಬಗ್ಗೆ ಏನು‌ ಹೇಳುವುದೇ ಬೇಡ. ಕೆ.ಟಿ.ಚಿಕ್ಕಣ್ಣ ಅವರ ಕಥೆಯಲ್ಲೇ ಅನೇಕ‌ ಸೂಕ್ಷ್ಮಗಳು ಇರುವುದು ಗೊತ್ತಾಗುತ್ತದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿ. ಆಗ ಮಾತನಾಡೋಣ. ಶೋಷಣೆ ಅನ್ನುವ ವಿಷಯ ಬಂದಾಗ ಅದಕ್ಕೆ ವಿರುದ್ಧವಾಗಿ ಕೇವಲ‌ ಜಗಳಕ್ಕೆ ನಿಲ್ಲುವುದನ್ನಷ್ಟೇ ಹೋರಾಟಕ್ಕೆ ಸೀಮಿತಗೊಳಿಸಬಾರದು ಅನ್ನುವ ಜ್ಞಾನ ಕಥೆಗಾರರಿಗೆ, ನಿರ್ದೇಶಕರಿಗಿದೆ. ಒಂದು ಮುಖ್ಯ ದೃಶ್ಯದಲ್ಲಿ ಆ ತಾಯಿ ಆ ಪುಟ್ಟ ಹುಡುಗಿಯ ಹೆಗಲಿಗೆ ಶಾಲೆಯ ಬ್ಯಾಗನ್ನು ನೇತು ಹಾಕಿ ಹೊರಡಿಸುವಾಗಿನ ದೃಶ್ಯ ‌ಇಡೀ‌ ಸಿನಿಮಾದ ಆಶಯವನ್ನು‌ ಹೇಳುತ್ತದೆ. ಇಂತಹ ವಿಷಯಗಳು ಎಂದೆಂದಿಗೂ ಬಹುಮುಖ್ಯ ಅನ್ನಿಸಿಕೊಳ್ಳುತ್ತವೆ. ಅಕ್ಷತಾ ಪಾಂಡವಪುರ, ಬಾಲನಟಿ ಅಪೇಕ್ಷಾ ಚೋರನಹಳ್ಳಿ ಸೇರಿದಂತೆ ಎಲ್ಲರೂ ಚೆನ್ನಾಗಿ‌ ನಟಿಸಿದ್ದಾರೆ.

Previous articleBIFFes | ಎಲ್ಲಿಯ ಕೋಲಾರ, ಎಲ್ಲಿಯ ಶ್ರೀಲಂಕಾ? ಮಾರಿಯಮ್ಮ ಎರಡನ್ನೂ ಬೆಸೆದಿದ್ದಳು!
Next articleBIFFes | dysfunctional families… ಒಡೆದ ಮನೆ – ಮನ

LEAVE A REPLY

Connect with

Please enter your comment!
Please enter your name here