ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿದೆ. ಈ ಬಾರಿ ಸಿನಿಮಾ ಪ್ರದರ್ಶನವನ್ನು ಒರಾಯಿನ್‌ ಮಾಲ್‌ನಿಂದ ಲುಲು ಮಾಲ್‌ಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಸಿನಿಮಾಸಕ್ತರ ವ್ಯಾಪಕ ಆಕ್ರೋಷ ವ್ಯಕ್ತವಾಗುತ್ತಿದೆ. ಸಿನಿಮಾ ವಿಶ್ಲೇಷಕ ಕೆ.ಫಣಿರಾಜ್‌, ಸಿನಿಮಾ ಪ್ರದರ್ಶನ ಸ್ಥಳವನ್ನು ಬದಲಿಸುವುದರಿಂದ ಆಗಬಹುದಾದ ಅನಾನುಕೂಲಗಳನ್ನು ಪಟ್ಟಿ ಮಾಡಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಪ್ರದರ್ಶನ ಸ್ಥಳವನ್ನು ಓರಾಯಿನ್‌ ಮಾಲ್’ನಿಂದ ಲುಲು ಮಾಲ್’ಗೆ ಸ್ಥಳಾಂತರಿಸಿರುವ ವಿಷಯ ಸಿನಿಮಾಸಕ್ತರಲ್ಲಿ ಆತಂಕ ಹುಟ್ಟಿಸಿದೆ. ಸ್ಥಳಾಂತರಿಸಲು ಆಯೋಜಕರಿಗೆ ಏನು ವ್ಯಾವಹಾರಿಕ ಕಾರಣಗಳಿವೆಯೋ ಅದು ಒತ್ತಟ್ಟಿಗಿರಲಿ, ಆದರೆ ಇದು ಸಿನಿಮಾಸಕ್ತ ಪ್ರತಿನಿಧಿಗಳಿಗೆ ತೊಂದರೆಯಾಗುತ್ತದೆ. ಮುಖ್ಯ ಪ್ರದರ್ಶನ ಸ್ಥಳವು ಪ್ರತಿನಿಧಿಗಳ ಅಗತ್ಯಕ್ಕೆ ಅನುಕೂಲಕರವಾಗಿ ಇರಬೇಕು. ಆದರೆ, ಪ್ರಸ್ತುತ ಸ್ಥಳಾಂತರವು ಸಾಮಾನ್ಯ ಪ್ರತಿನಿಧಿಗಳಿಗೆ ಅತ್ಯಂತ ಪ್ರತಿಕೂಲಕರವಾಗಿ ಇದೆ. ಅದಕ್ಕೆ ಸಕಾರಣಗಳು ಹೀಗಿವೆ…

1) ಒರಾಯಿನ್‌ ಮಾಲ್ ಹಾಗೂ ಲುಲು ಮಾಲ್’ಗಳೆರಡರಲ್ಲೂ 11 ಪರದೆಗಳಲ್ಲಿ ಪ್ರದರ್ಶನಾವಕಾಶವಿದ್ದರೂ, ಒರಾಯಿನ್‌ ಮಾಲ್’ನಲ್ಲಿ 600 ಆಸನಗಳು ಲುಲು ಮಾಲ್’ಗಿಂತ ಹೆಚ್ಚಾಗಿವೆ. ಅಂದರೆ, ಲುಲು ಮಾಲ್’ನಲ್ಲಿ ಪ್ರತಿನಿಧಿಗಳು ದಿನವೊಂದಕ್ಕೆ 3000 ಸಾವಿರಸದಷ್ಟು ಸಿನಿಮಾ ವೀಕ್ಷಣಾ ಸಂಖ್ಯೆಯ ಅವಕಾಶಗಳಿಂದ ವಂಚಿತರಾಗುತ್ತಾರೆ.
2) ಒರಾಯಿನ್‌ ಮಾಲ್ ಇರುವ ಸ್ಥಳವು ಎಲ್ಲ ನಮೂನೆಯ ಪ್ರಯಾಣಗಳ ಮೂಲಕ ಸುಲಭದಲ್ಲಿ ತಲುಪಬಹುದಾಗಿದೆ. ಆದರೆ ಲುಲು ಮಾಲ್’ಗೆ ಅಂತಹ ಯಾವ ಸಕ್ಷಮ ಸಾರ್ವತ್ರಿಕ ಪ್ರಯಾಣದ ಅನುಕೂಲವಿಲ್ಲ. ಎರಡು ಮೂರು ಕಿಲೋಮೀಟರ್ ನಡೆದು ಪ್ರದರ್ಶನ ಸ್ಥಳ ತಲುಪಲು ಅವಸ್ಥೆ ಪಡಬೇಕಾಗುತ್ತದೆ! ಇದು ಸಿನಿಮಾಸಕ್ತರ ಭಾಗವಹಿಸುವ ಉತ್ಸಾಹವನ್ನು ತೀವ್ರವಾಗಿ ಕುಗ್ಗಿಸುತ್ತದೆ
3) ಅತ್ಯಂತ ಹೆಚ್ಚಿನ ಆಸಕ್ತಿ ಹಾಗು ಉತ್ಸಾಹಗಳಿಂದ ದಿನವಿಡೀ ಸಿನಿಮೋತ್ಸವದಲ್ಲಿ ಭಾಗವಹಿಸುವವರು ಅಧಿಕ ಸಂಖ್ಯೆಯಲ್ಲಿ ಸಾಮಾನ್ಯ ಪ್ರತಿನಿಧಿಗಳೇ ಆಗಿರುತ್ತಾರೆ. ಅವರು ತಮ್ಮ ಆಯ್ಕೆಯ ಸಿನಿಮಾಗಳ ವೀಕ್ಷಣೆಯ ನಡುವಿನ ಅರ್ಧ ಮುಕ್ಕಾಲು ಗಂಟೆಗಳಲ್ಲಿ ದೈನಂದಿನ ಹಸಿವನ್ನು ನೀಗಿಸಿಕೊಂಡು ಮುಂದಿನ ಪ್ರದರ್ಶನಕ್ಕೆ ದೌಡಾಯಿಸುವ ತುರ್ತಿನಲ್ಲಿ ಇರುತ್ತಾರೆ. ಮಾಲ್ʼಗಳ ಒಳಗೆ ಇರುವ ಊಟೋಪಚಾರ ವ್ಯವಸ್ಥೆಯ ಬೆಲೆಯು ಸಾಮಾನ್ಯ ಪ್ರತಿನಿಧಿಗಳ ಜೇಬಿಗೆ ಅತ್ಯಂತ ಭಾರವಾಗಿರುವ ಕಾರಣ ಅವರು ಮಾಲ್ʼನ ಹೊರಗೆ ಸಮೀಪದಲ್ಲೇ ಲಭ್ಯವಿರುವ ಸಾಮಾನ್ಯವಾದ ಹೋಟೇಲುಗಳನ್ನು ನೆಚ್ಚಿಕೊಂಡಿರುತ್ತಾರೆ. ಒರಾಯಿನ್‌ ಮಾಲ್ ಸಮೀಪದಲ್ಲಿ ಆ ಬಗೆಯ ಹತ್ತಾರು ಹೋಟೆಲುಗಳು ಲಭ್ಯವಿದ್ದು, ವೀಕ್ಷಕರಿಗೆ ಅತ್ಯಂತ ಅನುಕೂಲಕರವಾಗಿ ಇದೆ. ಆದರೆ ಲುಲು ಮಾಲ್ʼನ ಸುತ್ತಳತೆಯಲ್ಲಿ ಅಂತಹ ಯಾವ ವ್ಯವಸ್ಥೆಯೂ ಇಲ್ಲ. ಅಂತಹವನ್ನು ಹುಡುಕಿಕೊಂಡು ಪ್ರತಿನಿಧಿಗಳು ಎರಡು ಮೂರು ಕಿಲೋಮಿಟರ್ ಅಲೆಯಬೇಕಾಗಿದೆ. ಇದು ಹಸಿವು ಹಾಗು ಇಷ್ಟದ ಸಿನಿಮಾಗಳ ನಡುವೆ ಪ್ರತಿನಿಧಿಗಳು ತೊಳಲಾಡುವಂತೆ ಮಾಡುವ ಅತ್ಯಂತ ಹೀನವಾದ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ.
ಇವು ಕರ್ನಾಟಕದ ಪ್ರತಿಷ್ಠಿತ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ದೇಶದ ಹಲವು ಕಡೆಯಿಂದ ಬರುವ ಸಾಮಾನ್ಯ ಪ್ರತಿನಿಧಿಗಳಿಗೆ ಸ್ಥಳಾಂತರವು ತಂದೊಡ್ಡುವ ಸಂಕಷ್ಟವಾಗಿವೆ. ಇದು ಖಂಡಿತಕ್ಕೂ ಸ್ವಾಗತಾರ್ಹವಲ್ಲ. ನೈಜ ಸಿನಿಮಾಸಕ್ತರ ಉತ್ಸಹವನ್ನು ಗಣನೆಗೆ ತೆಗೆದುಕೊಂಡು, ಮುಖ್ಯ ಪ್ರದರ್ಶನ ಸ್ಥಳವನ್ನು ಬದಲಾಯಿಸಬೇಕು ಎನ್ನುವುದು ಸಕಾರಣವಾದ ಮಾನವೀಯ ಅಗ್ರಹ.

LEAVE A REPLY

Connect with

Please enter your comment!
Please enter your name here