ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ Bigg Bossಗೆ ನಿನ್ನೆ ಸಂಜೆ ಚಾಲನೆ ಸಿಕ್ಕಿದೆ. ಅದ್ಧೂರಿಯಾಗಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಸಿನಿಮಾ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರಗಳ 17 ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದಾರೆ. ಈ ಪಟ್ಟಿಯಲ್ಲಿನ ಆರು ಸ್ಪರ್ಧಿಗಳಿಗೆ ವೀಕ್ಷಕರಿಂದ 80%ಕ್ಕಿಂತ ಕಡಿಮೆ ಮತ ಬಿದ್ದಿವೆ. ಮನೆಯಲ್ಲಿ ಸ್ಪರ್ಧಿಗಳಾಗಿ ಉಳಿಯಬೇಕೆಂದರೆ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾದ ಸವಾಲು ಎದುರಾಗಿದೆ.
ಸಿರಿ | ದಶಕಗಳ ಕಾಲ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ‘ನಾನು ನಾನಾಗಿರಬೇಕು’ ಎಂಬ ಆಸೆಯೊಂದಿಗೆ ಅವರು ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ. ಸಿರಿಯನ್ನು ತೆರೆಯ ಮೇಲಿನ ಪಾತ್ರವಾಗಿಯಷ್ಟೇ ನೋಡಿದ್ದ ಜನರಿಗೆ ತಮ್ಮ ನಿಜವಾದ ವ್ಯಕ್ತಿತ್ವವನ್ನು ತೋರಿಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಸೂಕ್ಷ್ಮ ವ್ಯಕ್ತಿತ್ವದ, ತುಸು ಕೋಪಿಷ್ಠರಾದ ಸಿರಿ ಅವರಿಗೆ ಜನರು 83% ವೋಟ್ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ತಂದೆಯನ್ನು ನೆನಪಿಸಿಕೊಂಡು ಬಲಗಾಲಿಟ್ಟು ಸಿರಿ ಮನೆಯೊಳಗೆ ಹೋಗಿದ್ದಾರೆ.
ನೀತು ವನಜಾಕ್ಷಿ | ಟ್ರಾನ್ಸ್‌ಜೆಂಡರ್ ಬಗ್ಗೆ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸುವ ಉದ್ದೇಶದಿಂದ ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ ನೀತು ವನಜಾಕ್ಷಿ. ತಾನೊಬ್ಬಳು ಟ್ರಾನ್ಸ್‌ಜೆಂಡರ್ ಎಂದು ಗುರ್ತಿಸಿಕೊಂಡ ಅವರಿಗೆ ತಾಯಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾದರು. ತಮ್ಮ ಹೆಸರಿನ ಜೊತೆಗೇ ಇರುವ ನೀತು ಅವರ ತಾಯಿ ವನಜಾಕ್ಷಿ ಅವರ ಬದುಕಿನ ಜೊತೆಗೂ ಇದ್ದಾರೆ. ಚಿತ್ರಕಲೆ ಅವರ ಆಸಕ್ತಿ. ತನ್ನ ಐಡೆಂಟಿಟಿ ಬೆಳೆಸಿಕೊಳ್ಳಬೇಕು ಎಂದು ಟ್ಯಾಟು ಆರ್ಟಿಸ್ಟ್ ಆಗಿ ಬದುಕಿನ ಸುಂದರ ಚಿತ್ರವನ್ನು ತಾವೇ ಬಿಡಿಸಿಕೊಳ್ಳಲು ಆರಂಭಿಸಿರುವ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಮಾಡೆಲಿಂಗ್‌ನಿಂದ ನಟನೆಯ ಕ್ಷೇತ್ರಕ್ಕೂ ಕಾಲಿಟ್ಟಿರುವ ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೂಕಟ್ಟುವ ಕುಟುಂಬದಿಂದ ಬಂದಿರುವ ನೀತು ಅವರಿಗೆ ಮನೆಯೇ ಮೊದಲ ಪಾಠಶಾಲೆ. ತನ್ನ ಸಮುದಾಯವನ್ನು ಸುಧಾರಿಸಬೇಕು ಎಂಬ ಸದುದ್ದೇಶವನ್ನೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ನೀತು ಅವರಿಗೆ ವೀಕ್ಷಕರು 86% ವೋಟ್ ನೀಡಿ ಮನೆಯೊಳಗೆ ಕಳಿಸಿದ್ದಾರೆ.
ನಮ್ರತಾ ಗೌಡ | ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದ ನಮ್ರತಾ ಗೌಡ ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಮನೆಮಾತಾದರು. ‘ನಾಗಿಣಿ 2’ ಯಶಸ್ವೀ ಸೀರಿಯಲ್ ಮೂಲಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯ್ತು. ನಮ್ರತಾ ಉತ್ತಮ ಡ್ಯಾನ್ಸರ್ ಕೂಡ ಹೌದು. ತಕಧಿಮಿತ ಡ್ಯಾನ್ಸ್ ಶೋನ ಟಾಪ್ ಐದು ಸ್ಪರ್ಧಿಗಳಲ್ಲೊಬ್ಬರಾಗಿದ್ದರು. 2011ರಲ್ಲಿ ಕಿರುತೆರೆ ಕಾಲಿಟ್ಟ ನಮ್ರತಾ ಇಂದಿಗೂ ಜನಪ್ರಿಯತೆ ಕಾಯ್ದುಕೊಂಡಿದ್ದಾರೆ.
ಸ್ನೇಕ್ ಶ್ಯಾಮ್ | ಹಾವುಗಳ ಜೊತೆ ಸರಸವಾಡುವುದನ್ನೇ ವೃತ್ತಿ-ಪ್ರವೃತ್ತಿಯನ್ನಗಿಸಿಕೊಂಡಿರುವ ಸ್ನೇಕ್ ಶ್ಯಾಮ್ ತಮ್ಮ ವಿಶಿಷ್ಟ ಕಾಸ್ಟ್ಯೂಮ್‌ನಿಂದಲೇ ಜನರ ಗಮನ ಸೆಳೆಯುತ್ತಾರೆ. ‘ಡಿಫರೆಂಟ್ ಆಗಿದ್ದರೆ ಮಾತ್ರ ಜನ ಗುರ್ತಿಸುವುದು’ ಎನ್ನುವ ಶ್ಯಾಮ್ ತಮ್ಮ ಪ್ರಸಿದ್ಧಿಗೆ ಆ ಶಿವಪ್ಪನ ಕತ್ತಲ್ಲಿರುವ ಹಾವೇ ಕಾರಣ ಎನ್ನುತ್ತಾರೆ. ವಿಷದ ಹಾವು ಹಿಡಿಯುತ್ತಲೇ ಜನರಲ್ಲಿ ಸಂತೋಷದ ನಗು ಉಕ್ಕಿಸುವ ಹವ್ಯಾಸವಾಗಿಸಿಕೊಂಡಿರುವ ಶ್ಯಾಮ್‌ಗೆ ಸೆಲೆಬ್ರಿಟಿ ಆಗುವುದಕ್ಕಿಂತ ಜನರ ಸ್ನೇಹಿತರಾಗಿ ಇರುವುದೇ ಇಷ್ಟ. ಆಟೋ ಓಡಿಸುವವನ ಮಗನಾಗಿ ಬೆಳೆದ ಶ್ಯಾಮ್ ಹಸುಗಳನ್ನು ಅಕ್ಕರೆಯಿಂದ ಸಾಕುವವರು. ‘ನಗಿಸುವುದು ನನ್ನ ಧರ್ಮ; ನಗುವುದು ಬಿಡುವುದು ಅವರ ಕರ್ಮ’ ಎನ್ನುತ್ತಾರೆ.
ಚಿಕ್ಕಂದಿನಲ್ಲಿ ‘ನಾಯಿ ಶ್ಯಾಮ’ನಾಗಿದ್ದ ಅವರು ಸ್ನೇಕ್ ಶ್ಯಾಮ್ ಆಗಿದ್ದೇ ಒಂದು ಸ್ಫೂರ್ತಿದಾಯಕ ಕಥನ. ‘ನಿಜವಾದ ದೇವರು ಇರುವುದು ಗುಡಿಯಲ್ಲಲ್ಲ, ನಮ್ಮ ಸಮಾಜವನ್ನು ಸ್ವಚ್ಛಮಾಡುವ ಪೌರಕಾರ್ಮಿಕರು ದೇವರು’ ಎನ್ನುವ ಸ್ನೇಕ್ ಶ್ಯಾಮ್, ಆಕಸ್ಮಿಕವಾಗಿ ಕಂಡ ಹಾವನ್ನು ರಕ್ಷಿಸಿ ಬಿಟ್ಟವರು. ನಂತರ ಅದೇ ಹವ್ಯಾಸವಾಗಿತ್ತು. 1998ರಿಂದ ಇಲ್ಲಿಯವರೆಗೆ ಸುಮಾರು 58000 ಹಾವುಗಳನ್ನು ಹಿಡಿದಿರುವ ಸ್ನೇಕ್ ಶ್ಯಾಮ್ ಅವರಿಗೆ ಜನರು 86% ವೋಟ್ ಹಾಕಿ ಮನೆಯೊಳಗೆ ಕಳಿಸಿದ್ದಾರೆ.
ಭಾಗ್ಯಶ್ರೀ | ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿರುವ ಭಾಗ್ಯಶ್ರೀ, ‘ಬದುಕು’, ‘ಲಕ್ಷಣ’ದಂಥ ಧಾರಾವಾಹಿಗಳ ಮೂಲಕ ಪ್ರಸಿದ್ಧರಾದವರು. ‘ಬದುಕೇ ನನಗೆ ತುಂಬ ಕಲಿಸಿದೆ. ಪ್ರಿಪೇರ್ ಆಗಿ ಬದುಕುವುದು ನನಗೆ ಗೊತ್ತಿಲ್ಲ. ಪರಿಸ್ಥಿತಿ ಹೇಗೆಬರುತ್ತದೆಯೋ ಹಾಗೆ ಇರುತ್ತೇನೆ’ ಎನ್ನುವ ಭಾಗ್ಯಶ್ರೀ, ಅವರ ವೋಟಿಂಗ್ ಮನವಿಗೆ ಜನರು ಸ್ಪಂದಿಸಿದ್ದು 81% ವೋಟ್‌ಗಳ ಮೂಲಕ. ಹಾಗಾಗಿ ಭಾಗ್ಯಶ್ರೀ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಪಡೆದುಕೊಂಡಿದ್ದಾರೆ.
ತುಕಾಲಿ ಸಂತೋಷ್ | ಡಿಫರೆಂಟ್ ಆಗಿರಬೇಕು ಎಂಬ ಹಂಬಲದಲ್ಲಿ ‘ತುಕಾಲಿ’ ಎಂಬುದನ್ನು ತಮ್ಮ ಹೆಸರಿಗೇ ಅಂಟಿಸಿಕೊಂಡಿರುವ ಸಂತೋಷ್ ಅವರು ಬಿಗ್‌ಬಾಸ್ ಮನೆಯೊಳಗೆ ಸಂತೋಷದ ನಗುವನ್ನು ಹರಡುವ ಆಸೆಯಿಂದ ಬಂದಿದ್ದಾರೆ. ಜನರಿಂದ ಅತಿ ಹೆಚ್ಚು ಅಂದರೆ, 93% ಪಡೆದು, ಹೆಂಡತಿಯಿಂದ ಬೀಳ್ಕೊಟ್ಟು ಮನೆಯೊಳಗೆ ಅಡಿಯಿಟ್ಟಿದ್ದಾರೆ. ಮನೆಯೊಳಗೆ ನಗೆಹೊನಲನ್ನು ಹರಿಸಲು ಸಂತೋಷ್ ರೆಡಿಯಾಗಿದ್ದಾರೆ.
ವಿನಯ್ ಗೌಡ | ‘ಹರಹರ ಮಹಾದೇವ’ ಶಿವನ ಪಾತ್ರವನ್ನು ಮಾಡಿ ಮನೆಮನಗಳೀಗೆ ಮುಟ್ಟಿದವರು ವಿನಯ್ ಗೌಡ. ‘ಬಿಗ್‌ಬಾಸ್‌ವರೆಗೂ ಒಂದು ಜರ್ನಿ ಬಿಗ್ ಬಾಸ್ ನಂತರವೇ ಇನ್ನೊಂದು ಜರ್ನಿ’ ಅನ್ನೋದು ಅವರ ಮಾತು. ದೇಹದಂಡನೆಯನ್ನು ಪ್ರೀತಿಸುವ ವಿನಯ್, ಜಿಮ್‌ನಲ್ಲಿ ಮಾತ್ರವೇ ನನ್ನದು ‘ಮೀ ಟೈಮ್’ ಅನ್ನುತ್ತಾರೆ. ಕುಟುಂಬದೊಳಗಿನ ನೋವಿನಿಂದ ಬೇಸತ್ತು ಮನೆಬಿಟ್ಟು ಹೊರಟು ಬದುಕಿಗಾಗಿ ಹೋರಾಡಿ ಈ ಹಂತಕ್ಕೆ ಬಂದಿರುವ ವಿನಯ್ ಅವರಿಗೆ ಪತ್ನಿಯೇ ಸರ್ವಸ್ವ. ಹದಿನಾಲ್ಕು ವರ್ಷದ ಮುದ್ದು ರಿಷಭ್ ಎಂದರೆ ಪಂಚಪ್ರಾಣ.
ಗೌರೀಶ ಅಕ್ಕಿ | ‘ಪಬ್ಲಿಕ್ ಲೈಫ್ ಮತ್ತು ಪರ್ಸನಲ್ ಲೈಫ್‌ಗಳ ನಡುವಿನ ಗೆರೆ ಬ್ಲರ್ ಆಗುವುದು ಬಿಗ್‌ಬಾಸ್ ಮನೆಯಲ್ಲಿ. ನನ್ನೊಳಗೆ ನಿಜವಾಗಲೂ ಹೇಗಿದ್ದೇನೋ ಅದು ಬಿಗ್‌ಬಾಸ್ ಮನೆಯಲ್ಲಿ ಹೊರಗೆ ಬರುತ್ತದೆ. ನನ್ನನ್ನು ನಾನು ಅರ್ಥಮಾಡಿಕೊಳ್ಳಲಿಕ್ಕೆ ಮತ್ತು ಜನರನ್ನು ಅರ್ಥಮಾಡಿಕೊಳ್ಳಲಿಕ್ಕೆ ಬಿಗ್‌ಬಾಸ್ ಮನೆಗಿಂತ ಒಳ್ಳೆಯ ವೇದಿಕೆ ಯಾವುದಿದೆ?’ ಎಂದು ಪ್ರಶ್ನಿಸುವ ಗೌರೀಶ ಅಕ್ಕಿ, ಮನೆಯೊಳಗಿನ ವಿಮರ್ಶೆಗಳಿಗೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ‘ಒಂದು ತಿಂಗಳು ಮನೆಯೊಳಗಿದ್ದು ಬಿಗ್‌ಬಾಸ್ ಶೋ ದ ಎಸೆನ್ಸ್ ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಆಸೆಯನ್ನು ಹೊತ್ತುಬಂದಿರುವ ಗೌರಿಶ ಅಕ್ಕಿ ಅವರಿಗೆ ಜನರು 82%ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ.
ಮೈಖಲ್ ಅಜಯ್ | ಕೂಲ್ ಹೇರ್‌ಸ್ಟೈಲ್‌ನಿಂದಲೇ ಗಮನಸೆಳೆದ ಮೈಖಲ್ ಅಜಯ್‌ಗೆ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುವ ಆಸೆ. ನಾಲ್ಕು ವರ್ಷಗಳಿಂದ ಹೇರ್ ಸ್ಟೈಲ್ ಬೆಳೆಸುತ್ತಿರುವ ಅಜಯ್ ಸ್ನಾನಕ್ಕೆ ನಿಂತರೆ ತಲೆಕೂದಲು ನೆನೆಯಲಿಕ್ಕೆ ಅರ್ಧಗಂಟೆ ಬೇಕಂತೆ! ‘ನೋಡೊದಕ್ಕೆ ವಿಲನ್ ಥರ ಇದ್ದೀನಿ. ಆದ್ರೆ ನಾನು ಒಳ್ಳೆ ಹುಡುಗ’ ಎಂದು ನಗುವ ಅಜಯ್, ‘ಬರೀ ಪಾಸಿಟಿವ್ ಆಗಿದ್ರೆ ಚೆನ್ನಾಗಿರಲ್ಲ, ಸ್ವಲ್ಪ ನೆಗೆಟಿವ್ ಕೂಡ ಇರಬೇಕು’ ಎನ್ನುತ್ತಾರೆ. ಬಾಸ್ಕೆಟ್‌ಬಾಲ್‌ನಿಂದ ಫಿಟ್‌ನೆಸ್ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್ ಅವರು ಈಗ ಬರ್ಗರ್ ಶಾಪ್ ನಡೆಸುತ್ತಿದ್ದಾರೆ. ‘ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವಿಲನ್ ರೋಲ್ ಸಿಕ್ತು ಅಂದ್ರೆ ಚೆನ್ನಾಗಿರತ್ತೆ’ ಎನ್ನುವ ಅಜಯ್ ಬದುಕನ್ನು ಎಂದಿಗೂ ದೂಷಿಸುವುದಿಲ್ಲ ಎನ್ನುತ್ತಾರೆ. ‘ಹೀರೋ ನೋಡಿದ್ರೆ ಅನ್‌ರಿಯಲಿಸ್ಟಿಕ್ ಫೀಲ್ ಬರುತ್ತದೆ. ವಿಲನ್ ರೋಲ್ ರಿಯಲಿಸ್ಟಿಕ್ ಆಗಿರುತ್ತದೆ’ ಎಂಬುದು ಅಜಯ್ ಅಂಬೋಣ. ‘ನನ್ನನ್ನು ಮನೆಯೊಳಗೆ ಕಳಿಸಿದರೆ ಜನರಿಗೆ ನನ್ನಿಂದ ಒಂದು ಯೂನಿಕ್ ಕನ್ನಡ ಸಿಗುತ್ತದೆ’ ಎಂಬ ಅಜಯ್ ಮನವಿಗೆ ಜನರು 81% ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ.
ಕಾರ್ತಿಕ್ ಮಹೇಶ್ | ಹುಟ್ಟಿದ್ದು ಚಾಮರಾಜನಗರದಲ್ಲಿ. ಪ್ರೈಮರಿ ಸ್ಕೂಲಿನಲ್ಲಿದ್ದಾಗಲೇ ರಂಗಭೂಮಿ ಸಹವಾಸ ಬೆಳೆಸಿಕೊಂಡ ಕಾರ್ತೀಕ್, ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ‘ಡೊಳ್ಳು’ ಸಿನಿಮಾಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಕೋವಿಡ್ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ಕಾರ್ತೀಕ್ ಬದುಕಿನ ನೋವಿನ ನೆನಪು. ತನ್ನ ಕಟೌಟ್ ಮುಂದೆ ಅಭಿಮಾನಿಗಳು ‘ಕಾರ್ತೀಕ್..’ ಎಂದು ಅಭಿಮಾನದಿಂದ ಕೂಗುವುದನ್ನು ನೋಡಬೇಕು ಎನ್ನುವುದು ಅವರ ಕನಸು. ‘ಬಿಗ್‌ಬಾಸ್ ಮನೆಯಿಂದ ಒಳ್ಳೆಯ ಸೊಸೆ ಕರೆದುಕೊಂಡು ಬರುತ್ತೇನೆ’ ಎಂದು ತಮಾಷೆಯ ಧ್ವನಿಯಲ್ಲಿಯೇ ಅಮ್ಮನಿಗೆ ಭರವಸೆ ನೀಡಿದ ಕಾರ್ತೀಕ್ ಅವರಿಗೆ ಜನರು 76% ವೋಟ್ ಹಾಕಿ ಹೋಲ್ಡ್‌ನಲ್ಲಿಟ್ಟಿದ್ದಾರೆ.
ಸಂಗೀತಾ ಶೃಂಗೇರಿ | ಹಿಂದೊಮ್ಮೆ ‘ಕೋಟಿ ಕೊಟ್ರೂ ಬಿಗ್‌ಬಾಸ್‌ಗೆ ಹೋಗಲ್ಲ’ ಎಂದಿದ್ದ ಸಂಗೀತಾ, ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ. ತಮ್ಮ ಲಕ್ಕಿ ನಂಬರ್ ಆದ ’10’ ಬಿಗ್‌ಬಾಸ್ ಸೀಸನ್ ನಂಬರ್ ಕೂಡ ಆಗಿರುವುದು ಅವರು ಬಿಗ್‌ಬಾಸ್‌ಗೆ ಬರಲು ಒಂದು ಕಾರಣ. ‘ಹುಡುಗಿಯರು ನನ್ನ ಸ್ಪರ್ಧಿಗಳಲ್ಲ; ಹುಡುಗರು ನನ್ನ ಸ್ಪರ್ಧಿಗಳು’ ಎನ್ನುವ ಸಂಗೀತ ಸಿನಿಮಾ ಕ್ಷೇತ್ರಕ್ಕೆ ಬರದಿದ್ದರೆ ಹಾರುಹಕ್ಕಿಯಾಗಿ ಏರ್‌ಫೋರ್ಸ್‌ನಲ್ಲಿರುತ್ತಿದ್ದರು. ಅದು ಅವರ ಕನಸಾಗಿತ್ತು. ‘ಸಿಂಬಾ’ ಅವರ ನೆಚ್ಚಿನ ಸ್ನೇಹಿತ. ಚಿಕ್ಕುವನ್ನು ಮಿಸ್ ಮಾಡುಕೊಳ್ಳುವ ಬೇಸರವನ್ನು ‘ಚಾರ್ಲಿ’ ಮರೆಸುತ್ತದೆ ಎಂಬ ಸಮಾಧಾನವೂ ಅವರಿಗಿತ್ತು. ‘777 ಚಾರ್ಲಿ’ ಮೂಲಕ ನಟನಾಪಯಣ ಆರಂಭಿಸಿದ ಸಂಗೀತಾ, ಹೊಸ ಚಾಲೆಂಜ್ ಅನ್ನು ಫೇಸ್ ಮಾಡುವುದಕ್ಕಾಗಿ ಬಿಗ್‌ಬಾಸ್ ಮನೆಗೆ ಬರುತ್ತಿದ್ದಾರೆ. ‘ಫ್ಯಾಮಿಲಿ ನನಗೆ ಎಲ್ಲವೂ ಹೌದು’ ಎನ್ನುವ ಸಂಗೀತಾ ಅವರನ್ನು ಮನಸಲ್ಲಿ ಇಟ್ಟುಕೊಂಡೇ ಮನೆಯೊಳಗೆ ಹೋಗಲು ಬಂದಿದ್ದರು. ಇದುವರೆಗೆ ಜನರು ನನ್ನ ಕ್ಯೂಟ್ ಆದ ಪಾತ್ರಗಳ ಮೂಲಕವೇ ಗುರ್ತಿಸಿದ್ದಾರೆ. ಆದರೆ ನಾನು ನಿಜವಾಗಿ ಎಷ್ಟು ಬೋಲ್ಡ್ ಆಗಿದ್ದೀನಿ ಎಂಬುದನ್ನು ಜನರಿಗೆ ತೋರಿಸಬೇಕು ಎಂದುಕೊಂಡಿರುವ ಸಂಗೀತಾ ಅವರಿಗೆ ಜನರು 76% ನೀಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.
ರಕ್ಷಕ್ | ‘ನನ್ನ ಮೇಲೆ ನೆಗೆಟೀವ್ ಇಮೇಜ್ ಕಟ್ಟಿದರು ಕೆಲವರು. ನನ್ನ ನಿಜವಾದ ಫೇಸ್ ತೋರಿಸಬೇಕು. ಅದನ್ನು ಮನೆಯೊಳಗೆ ಖಂಡಿತ ತೋರಿಸ್ತೀನಿ. ಬದುಕಿನಲ್ಲಿ ಪಾಸಿಟೀವ್ ನೆಗೆಟೀವ್ ಎರಡೂ ಇರಬೇಕು’ ಎಂದು ವಯಸ್ಸಿಗೂ ಮೀರಿ ಪ್ರಬುದ್ಧವಾಗಿ ಮಾತಾಡುವ ಹುಡುಗ ರಕ್ಷಕ್, ಹಿರಿಯ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಪುತ್ರ. ‘ಜನರ ಬಾಯಿ ಮುಚ್ಚಿಸಲಾಗದು. ಟ್ರೋಲ್, ರೋಸ್ಟ್ ಮಾಡಿದರು ಜನರು. ಅದಕ್ಕೆಲ್ಲ ಕೇರ್ ಮಾಡಲ್ಲ. ನನ್ನ ಸ್ವಂತ ಐಡೆಂಟಿಟಿಯೊಂದಿಗೆ ಬಿಗ್‌ಬಾಸ್ ಮನೆಯೊಳಗೆ ಹೋಗ್ತೀನಿ’ ಎಂದು ನೇರವಾಗಿ ಮಾತಾಡುವ ರಕ್ಷಕ್, ಕೌಟುಂಬಿಕ ಪ್ರೇಕ್ಷಕರ ಮನಸಲ್ಲಿ ಜಾಗ ಕಂಡುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಬಿಗ್‌ಬಾಸ್ ವೇದಿಕೆಗೆ ಬಂದಿದ್ದರು. ‘ರಾಜಕೀಯ, ಸಿನಿಮಾ ಎರಡರಲ್ಲಿಯೂ ನೆಗೆಟಿವ್ ಪಾಸಿಟಿವ್ ಎರಡೂ ಇರತ್ತೆ. ಹೋಗುತ್ತಾ ಹೋಗುತ್ತಾ ಈ ನೆಗೆಟೀವೇ ಪಾಸಿಟೀವ್ ಆಗುತ್ತದೆ’ ಎನ್ನುವ ನಂಬಿಕೆ ಅವರದು. ‘ನನ್ನ ರಿಯಲ್ ಫೇಸ್ ನೋಡಲಿಕ್ಕಾಗಿ ನನಗೆ ವೋಟ್ ಮಾಡಿ’ ಎಂಬ ರಕ್ಷಕ್ ಮನವಿಗೆ ಜನರು 53% ವೋಟ್ ಮಾಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.
ತನಿಷಾ ಕುಪ್ಪಂಡ | ‘ನನ್ನ ದಾರಿ ನಾನೇ ಕ್ರಿಯೇಟ್ ಮಾಡಿಕೊಂಡಿದ್ದೇನೆ. ನನ್ನ ದಾರಿಯಲ್ಲಿ ಬಂದ ಯಾವ ಅವಕಾಶವನ್ನೂ ನಾನು ಬಿಡಲ್ಲ’ ಎನ್ನುವ ತನಿಷಾ ಅವರ ಆಪ್ತ ಸ್ನೇಹಿತ/ತೆ ಕನ್ನಡಿ! ತಾಯಿ ಮತ್ತು ನೆಚ್ಚಿನ ನಾಯಿ ಇಬ್ಬರನ್ನೂ ಅತ್ಯಾಪ್ತವಾಗಿ ಪ್ರೀತಿಸುವ ತನಿಷಾ, ಊಟದ ವಿಷಯಕ್ಕೆ ಬಂದರೆ ಯಾವುದಕ್ಕೂ ರೆಡಿ! ನೆಗೆಟೀವ್ ಶೇಡ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ತನಿಶಾ, ಬಿಗ್‌ಬಾಸ್ ಮನೆಯೊಳಗೆ ತೆರೆಮೇಲಿನ ಮತ್ತು ಬದುಕಿನಲ್ಲಿನ ತನ್ನ ಇಮೇಜ್ ಬದಲಿಸಿಕೊಳ್ಳಲು ಹೋಗುವ ಆಸೆಯಲ್ಲಿದ್ದಾರೆ. ’10’ ಸಂಖ್ಯೆಯ ಸ್ಪೆಷಲ್ ನಂಬಿಕೆಯೊಂದಿಗೆ ಬರುತ್ತಿರುವ ಅವರಿಗೆ ಗೆದ್ದೇ ಗೆಲ್ಲುವೆ ಎಂಬ ನಂಬಿಕೆಯೊಂದಿಗೆ ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ. ‘ರಿಪ್ಲೇಸ್ಡ್ ಆಕ್ಟರ್’ ಎಂಬ ನೋವಿನಿಂದ ಕಳಚಿಕೊಳ್ಳುವ ಉದ್ದೇಶದಿಂದ, ‘ಸೆಕೆಂಡ್’ ಪ್ಲೇಸ್‌ನಿಂದ ಮೊದಲ ಸ್ಥಾನಕ್ಕೆ ಜಿಗಿಯುವ ಛಲದಿಂದ ಬಂದಿದ್ದ ತನಿಷಾಗೆ ಜನರು 68 % ವೋಟ್ ಮಾಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.
ಡ್ರೋನ್ ಪ್ರತಾಪ್ | ತುಂಬ ವರ್ಷಗಳ ಜನರ ನಿರೀಕ್ಷೆ ಈಗ ನಿಜವಾಗುತ್ತಿದೆ. ಡ್ರೋನ್ ಆಕಾಶದಲ್ಲಿ ಏರುವಷ್ಟೇ ವೇಗವಾಗಿ ಪ್ರಸಿದ್ಧರಾದ ಪ್ರತಾಪ್, ಈಗ ಬಿಗ್‌ಬಾಸ್ ಮನೆಯಲ್ಲಿ ಅಸಲಿ ಆಟ ಆಡಲು ರೆಡಿಯಾಗಿದ್ದಾರೆ. ತಮ್ಮ ಬದುಕಿನ ಇನ್ನೊಂದು ಮುಖವನ್ನು ಜನರಿಗೆ ತೋರಿಸಲು ಮನೆಯೊಳಗೆ ಹೋಗಲು ನಿರ್ಧರಿಸಿದ್ದ, ಡ್ರೋನ್ ಪ್ರತಾಪ್ ಅವರಿಗೆ ಜನರು 41% ವೋಟ್ ನೀಡಿದ್ದಾರೆ. ಹಾಗಾಗಿ ಪ್ರತಾಪ್ ಹೋಲ್ಡ್‌ನಲ್ಲಿದ್ದಾರೆ. ತನ್ನದೇ ಆದ ಸ್ಟಾರ್ಟ್ ಅಪ್ ಶುರುಮಾಡಿ ಅದನ್ನು ಗ್ಲೋಬಲ್ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕನಸು ಹೊತ್ತಿದ್ದಾರೆ ಪ್ರತಾಪ್.
ಇಶಾನಿ | ಮೈಸೂರು ಮೂಲದ ಇಶಾನಿ ಬೆಳೆದದ್ದು ವಿದೇಶದಲ್ಲಿ. ಚಿಕ್ಕಂದಿನಿಂದಲೇ ಹಾಡತೊಡಗಿದ ಅವರು ಪಾಪ್ ಸಿಂಗಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಇಲ್ಲಿಯವರೆಗೆ 17 ಇಂಗ್ಲಿಷ್ ಮತ್ತು 3 ಕನ್ನಡ ಆಲ್ಬಂಗಳನ್ನು ಹಾಡಿದ್ದಾರೆ.
ವರ್ತೂರು ಸಂತೋಷ್ | ವರ್ತೂರಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ಸಂತೋಷ್, ‘ರೈತ ಅಂದರೆ ಸಗಣಿಯನ್ನೇ ಎತ್ತಬೇಕು ಎಂದೇನಿಲ್ಲ; ಶೋಕಿನೂ ಮಾಡಬಹುದು’ ಎಂದು ದಿಟ್ಟತನದಿಂದ ಹೇಳುತ್ತಾರೆ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಸಂತೋಷ್, ‘ತಂದೆಯ ದುಡ್ಡಿನಲ್ಲಿ ಬದುಕುತ್ತಾನೆ’ ಎಂಬ ಮಾತುಗಳನ್ನೂ ಕೇಳಬೇಕಾಯ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ತಂದೆ ಕೊಟ್ಟಿದ್ದನ್ನು ಒಂದಕ್ಕೆ ಹತ್ತು ಪಟ್ಟಾಗಿ ಬೆಳೆಸಿದ್ದಾರೆ. ಹಳ್ಳಿಕಾರ್ ತಳಿಯ ಎತ್ತುಗಳನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದಾರೆ. ಅವುಗಳಿಗೂ ಬೆಳ್ಳಿ ಚೈನು, ಕಾಲು ಕಡಗ ಮಾಡಿಸಿರುವ ಸಂತೋಷ್, ಎತ್ತುಗಳ ಓಟದ ಸ್ಪರ್ಧೆಯಲ್ಲಿಯೂ ಖ್ಯಾತರಾದವರು. ‘ಇರುವವರೆಗೂ ಬದುಕನ್ನು ಆನಂದಿಸಿ. ಯಾರಿಗೂ ಮೋಸ ಮಾಡಬೇಡಿ’ ಎನ್ನುವುದನ್ನು ತಮ್ಮ ಬದುಕಿನ ಸಿದ್ಧಾಂತವಾಗಿಸಿಕೊಂಡಿರುವ ಅವರಿಗೆ ಜನರು 78% ವೋಟ್ ಹಾಕಿ ಹೋಲ್ಡ್‌ನಲ್ಲಿಟ್ಟಿದ್ದಾರೆ.
ಸ್ನೇಹಿತ್ ಗೌಡ | ಕನ್ನಡ ಕಿರುತೆರೆಯ ಸುರದ್ರೂಪಿ ನಟ. ರಂಗಭೂಮಿ ಹಿನ್ನೆಲೆ ಇದೆ. ಚಿರವಾದ ನೆನಪು, ನಮ್ಮನೆ ಯುವರಾಣಿ ಧಾರಾವಾಹಿಗಳಲ್ಲಿ ನಟಿಸಿರುವ ಸ್ನೇಹಿತ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಸ್ನೇಹಿತ್ ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ನಾಟಕ ತಂಡದೊಂದಿಗೆ ದೇಶದ ಹಲವೆಡೆ ಸಂಚರಿಸಿ ನಾಟಕ ಪ್ರದರ್ಶನಗಳನ್ನು ಮಾಡಿರುವ ನಟನಿಗೆ ಉತ್ತಮ ಕಲಾವಿದನಾಗಿ ರೂಪುಗೊಳ್ಳುವ ಗುರಿಯಿದೆ.
ಹೋಲ್ಡ್‌ನಲ್ಲಿದ್ದ ಸ್ಪರ್ಧಿಗಳೆಲ್ಲ ಮನೆಯೊಳಗೆ! | ವೀಕ್ಷಕರು ಹೋಲ್ಡ್‌ನಲ್ಲಿ ಇಟ್ಟಿದ್ದ ಸ್ಪರ್ಧಿಗಳು – ಪ್ರತಾಪ್, ತನಿಶಾ, ಸಂಗೀತಾ, ಸಂತೋಷ್, ರಕ್ಷಕ್, ಕಾರ್ತೀಕ್. ‘ನಿಮ್ಮಲ್ಲಿ ಬಿಗ್‌ಬಾಸ್ ಯಾರು ಒಳಗೆ ಹೋಗಬೇಕು ಎಂದು ನಿರ್ಧರಿಸಬೇಕು’ ಎಂದು ಹೇಳಿ ಕಿಚ್ಚ ಒಂದು ವಾರದ ಮಟ್ಟಿಗೆ ಎಲ್ಲಾ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿಕೊಟ್ಟಿದ್ದಾರೆ. ಒಂದು ವಾರದಲ್ಲಿ ಮನೆಯೊಳಗೆ ತೋರಿಸಲಿರುವ ಪರ್ಫಾರ್ಮೆನ್ಸ್ ಆಧಾರದ ಮೇಲೆ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ದೈನಂದಿನ ಸಂಚಿಕೆಗಳು ಪ್ರತಿದಿನ ರಾತ್ರಿ ಒಂಬತ್ತೂವರೆಗೆ ಪ್ರಸಾರವಾಗುತ್ತವೆ. ಬಿಗ್‌ಬಾಸ್ ಕನ್ನಡದ ಹತ್ತನೇ ವರ್ಷಾಚರಣೆಯ ಈ ಸೀಸನ್ ಅನ್ನು, ವಯಕಾಮ್ 18ನ ಒಟಿಟಿ ಫ್ಲ್ಯಾಟ್‌ಫಾರಂ ಆದ JioCinemaದಲ್ಲಿ, 24 ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗಿದೆ. ನೂರು ದಿನಗಳ ಈ ರಂಜನೀಯ ಹಬ್ಬದ ಪ್ರತಿ ಕ್ಷಣಗಳನ್ನು ಆಸ್ವಾದಿಸಲು JioCinema 24 ಗಂಟೆ ಲೈವ್ ಚಾನಲ್ ಅವಕಾಶ ಮಾಡಿಕೊಡುತ್ತಿದೆ.
ಬಿಗ್ ನ್ಯೂಸ್ | ಬಿಗ್‌ಬಾಸ್ ಮನೆಯೊಳಗೆ ನಡೆದ ಘಟನಾವಳಿಗಳು, ಟಾಸ್ಕ್‌ಗಳ ವಿವರಗಳನ್ನು ‘ಬಿಗ್ ನ್ಯೂಸ್’ ನ್ಯೂಸ್ ಬುಲೆಟಿನ್ ರೂಪದಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತದೆ. ದೊಡ್ಡಮನೆಯೊಳಗಿನ ರೋಚಕ ಘಟನೆಗಳ ವರದಿಯನ್ನು ಇಲ್ಲಿ ಆಸ್ವಾದಿಸಬಹುದು.
ಅನ್‌ಸೀನ್ ಕಥೆಗಳು | ಬಿಗ್‌ಬಾಸ್ ಮನೆಯೆಂದರೇ ಹಲವು ಕಥೆಗಳ ಗುಚ್ಛ. ಪ್ರತಿದಿನವೂ ಹತ್ತು ಹಲವು ರೋಚಕ ಕಥೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಕೆಲವಷ್ಟನ್ನೇ ದೈನಂದಿನ ಎಪಿಸೋಡ್‌ಗಳಲ್ಲಿ ನೋಡಲು ಸಾಧ್ಯ. ಎಪಿಸೋಡ್‌ಗಳಲ್ಲಿ ಇಲ್ಲದ, ತೆರೆಯ ಹಿಂದಿನ ಕಥೆಗಳನ್ನು JioCinemaದ 24 ಗಂಟೆ ಲೈವ್‌ನಲ್ಲಿಉಚಿತವಾಗಿ ನೋಡಬಹುದು. ಇಂಥ ರೋಚಕ ಕಥೆಗಳನ್ನು ‘ಅನ್‌ಸೀನ್ ಕಥೆಗಳು’ ನಿಮಗೆ ಕಟ್ಟಿಕೊಡುತ್ತದೆ.
ಲೈವ್ ಶಾರ್ಟ್ಸ್ | ಬಿಗ್‌ಬಾಸ್ ಮನೆಯೊಳಗೆ ಅವತ್ತು ನಡೆದ ಮುಖ್ಯ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ರಿಕ್ಯಾಪ್ ಮಾಡಿ ತೋರಿಸುವ ಪ್ರಯತ್ನವೇ ‘ಲೈವ್ ಶಾರ್ಟ್ಸ್’. ಲೈವ್‌ನಲ್ಲಿ ಮಿಸ್ ಮಾಡಿಕೊಂಡ ಮುಖ್ಯ ಘಟನೆಗಳನ್ನು ಲೈವ್ ಶಾರ್ಟ್ಸ್ ಮೂಲಕ ಆಸ್ವಾದಿಸಬಹುದು.
ಹೈಪ್ ಚಾಟ್ | ಇದು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗೆ JioCinemaದಲ್ಲಿ ಪ್ರೇಕ್ಷಕರಿಗೆ ಪ್ರತಿಕ್ರಿಯಿಸಲು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ವೇದಿಕೆ. ಇಲ್ಲಿ ಪ್ರೇಕ್ಷಕರು ಚಾಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು.
ವಿಡಿಯೊ ವಿಚಾರ | ಇದು ಬಿಗ್‌ಬಾಸ್ ಷೋನ ಭಾಗವಾಗಲು ಪ್ರೇಕ್ಷಕರಿಗೆ ಇರುವ ಇನ್ನೊಂದು ವಿನೂತನ ಅವಕಾಶ. JioCinemaದ ‘ವಿಡಿಯೊ ವಿಚಾರ’ದ ಮೂಲಕ ಪ್ರೇಕ್ಷಕರು ಮನೆಯೊಳಗಿನ ಅಭ್ಯರ್ಥಿಗಳ ಬಗ್ಗೆ, ಟಾಸ್ಕ್‌ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವಿಡಿಯೊ ಮಾಡಿ ಹಾಕಬಹುದು.
ಮೀಮ್ ದ ಮೊಮೆಂಟ್ | ಬಿಗ್‌ಬಾಸ್ ಮನೆಯೊಳಗೆ ರಸವತ್ತಾದ ಕ್ಷಣಗಳಿಗೇನೂ ಕೊರತೆಯಿರುವುದಿಲ್ಲ. ಅದಕ್ಕೆ ಮೀಮ್ಸ್ ಕ್ರಿಯೇಟ್ ಮಾಡುವುದರ ಮೂಲಕ ಸ್ಪಂದಿಸಬಹುದು. JioCinemaದಲ್ಲಿನ ‘ಮೀಮ್ ದ ಮೊಮೆಂಟ್’ ಪ್ರೇಕ್ಷಕರಿಗೆ ಮನೆಯೊಳಗಿನ ಸ್ಪರ್ಧಿಗಳ ನಡವಳಿಕೆಯ ಮೇಲೆ ಮೀಮ್ಸ್ ಕ್ರಿಯೇಟ್ ಮಾಡುವ ಅವಕಾಶವನ್ನೂ ಕಲ್ಪಿಸುತ್ತಿದೆ.
ವಾಚ್ ಆಂಡ್ ವಿನ್ | JioCinemaದಲ್ಲಿ ಬಿಗ್‌ಬಾಸ್ ಕನ್ನಡವನ್ನು ಉಚಿತವಾಗಿ ನೋಡುವುದರ ಜೊತೆಗೆ ಬಹುಮಾನವನ್ನೂ ಗೆಲ್ಲುವ ಅವಕಾಶವಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನದ ಎಪಿಸೋಡ್ ನೋಡಿ, ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರವನ್ನು JioCinemaದಲ್ಲಿ ಕೊಡಬೇಕು. ಪ್ರತಿದಿನವೂ ಸರಿಯುತ್ತರ ನೀಡಿದ ಒಬ್ಬರಿಗೆ ಬಹುಮಾನ ಗೆಲ್ಲುವ ಸುವರ್ಣಾವಕಾಶ ಸಿಗುತ್ತದೆ.