ಕನ್ನಡ ಕಿರುತೆರೆ ಬಿಗ್‌ ರಿಯಾಲಿಟಿ ಶೋ Bigg Bossಗೆ ಚಾಲನೆ ಸಿಕ್ಕಿದೆ. ಈ ಬಾರಿ ಹದಿನೇಳು ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ. ಕಳೆದ ಬಾರಿ ಸಮರ್ಥರು, ಅಸಮರ್ಥರು ಎಂದು ಸ್ಪರ್ಧಿಗಳನ್ನು ವಿಂಗಡಣೆ ಮಾಡಲಾಗಿತ್ತು. ಈ ಬಾರಿ ಅದು ಸ್ವರ್ಗ ಮತ್ತು ನರಕ ಎಂದಾಗಿದೆ.

Bigg Boss 11ನೇ ಸೀಸನ್‌ಗೆ ಸೆಪ್ಟೆಂಬರ್‌ 29ರ ಭಾನುವಾರ ಚಾಲನೆ ಸಿಕ್ಕಿದೆ. ನಿರೂಪಕ ಸುದೀಪ್‌ ಅವರು ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಮಾತನಾಡಿಸಿ ಮನೆಯೊಳಗೆ ಕಳುಹಿಸಿದ್ದಾರೆ. ಇನ್ನು ಮುಂದೆ ಶುರುವಾಗಲಿದೆ ಅಸಲಿ ಆಟ! ಈ ಬಾರಿಯ ಬಿಗ್‌ಬಾಸ್‌ ಸ್ಪರ್ಧಿಗಳಿವರು…

ಗೌತಮಿ ಜಾಧವ್‌ | ‘ನಾಗಪಂಚಮಿ’ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತರಾದ ಗೌತಮಿ ಅವರಿಗೆ ‘ಸತ್ಯ’ ಧಾರಾವಾಹಿ ಜನಪ್ರಿಯತೆ ತಂದುಕೊಟ್ಟಿತು. ಲೂಟಿ, ಆದ್ಯಾ, ಕಿನಾರೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಸಿನಿಮಾಟೋಗ್ರಾಫರ್‌ ಅಭಿಷೇಕ್‌ ಕಾಸರಗೋಡು, ಗೌತಮಿ ಅವರ ಪತಿ.

ಲಾಯರ್‌ ಜಗದೀಶ್‌ | ಕರ್ನಾಟಕದ ರಾಜಕೀಯ ವಲಯದಲ್ಲಿ ವಿಶೇಷ ಸುದ್ದಿಗಳ ಮೂಲಕ ದೊಡ್ಡ ಸದ್ದು ಮಾಡುತ್ತಿರುವ ವಕೀಲ. ಕೆಲವು high profile ರಾಜಕಾರಣಿಗಳ ಕೇಸ್‌ಗಳನ್ನು ಬಯಲಿಗೆಳೆದು ಇತರೆ ರಾಜಕೀಯ ಮುಖಂಡರ ನಿದ್ದೆಗೆಡಿಸಿದ್ದಾರೆ. ಇತ್ತೀಚಿನ ನಟ ದರ್ಶನ್‌ ಕೇಸ್‌ಗೆ ಸಂಬಂಧಿಸಿದ ವೀಡಿಯೋ ಸೇರಿದಂತೆ ಅವರ ಹಲವು ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಚೈತ್ರಾ ಕುಂದಾಪುರ | ಕರಾವಳಿ ಮೂಲದ ಚೈತ್ರಾ ಕುಂದಾಪುರ ಲವ್‌ ಜಿಹಾದ್‌, ಗೋ ಹತ್ಯೆ ವಿರುದ್ಧ ಮಾತನಾಡಿ ಸುದ್ದಿಯಾಗಿದ್ದವರು. ಪದವಿ ನಂತರ ಪತ್ರಕರ್ತೆ, ನ್ಯೂಸ್‌ ಆಂಕರ್‌ ಆಗಿದ್ದ ಅವರು ABVP ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದಾರೆ. ಹಣಕಾಸಿನ ವಿಷಯದಲ್ಲಿ ಮೋಸ ಮಾಡಿದ್ದಾರೆ ಎನ್ನುವ ಬಿಸ್ನೆಸ್‌ಮ್ಯಾನ್‌ ಗೋವಿಂದ್‌ ಬಾಬು ಪೂಜಾರಿ ಅವರ ದೂರಿನ ಆಧಾರದ ಮೇಲೆ ಚೈತ್ರಾ ಬಂಧನಕ್ಕೊಳಗಾಗಿದ್ದರು.

ಗೋಲ್ಡ್‌ ಸುರೇಶ್‌ | ಕುತ್ತಿಗೆಯಲ್ಲಿ ದಪ್ಪದ ಚಿನ್ನದ ಸರಗಳು, ಬ್ರೇಸ್‌ಲೆಟ್‌, ಉಂಗುರಗಳನ್ನು ಧರಿಸುವ ಇವರು ‘ಗೋಲ್ಡ್‌ ಸುರೇಶ್‌’ ಎಂದೇ ಕರೆಸಿಕೊಳ್ಳುತ್ತಾರೆ. ಮೈಮೇಲೆ ಸುಮಾರು 2 ಕೋಟಿ ರೂ ಮೌಲ್ಯದ ಬಂಗಾರ ಧರಿಸುತ್ತಾರೆ ಎನ್ನಲಾಗಿದೆ. ಕಳೆದ ಬಾರಿಯ ಬಿಗ್‌ಬಾಸ್‌ ಶೋನಲ್ಲಿ ಗಮನ ಸೆಳೆದ ವರ್ತೂರು ಸಂತೋಷ್‌ ಅವರನ್ನು ನೆನಪಿಸುತ್ತಾರೆ ಗೋಲ್ಡ್‌ ಸುರೇಶ್‌.

ಭವ್ಯ ಗೌಡ | ಟಿಕ್‌ಟಾಕ್‌ ಮೂಲಕ ನೆಟ್ಟಿಗರಿಗೆ ಚಿರಪರಿಚಿತರಾಗಿದ್ದ ಭವ್ಯ ಗೌಡ ‘ಗೀತಾ’ ಸರಣಿಯೊಂದಿಗೆ ಕಿರುತೆರೆ ವೀಕ್ಷಕರ ಮೆಚ್ಚುಗೆ ಗಳಿಸಿದರು. ಕಿರುತೆರೆ, ಸಿನಿಮಾ ನಟಿಯರ Queens Premier League ಕ್ರಿಕೆಟ್‌ ಪಂದ್ಯಾವಳಿ ಉಸ್ತುವಾರಿ ಹೊತ್ತಿದ್ದ ಭವ್ಯ ‘ಡಿಯರ್‌ ಕಣ್ಮಣಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ.

ಯಮುನಾ ಶ್ರೀನಿಧಿ | ಮೂಲತಃ ಭರತನಾಟ್ಯ ಕಲಾವಿದೆಯಾದ ಯಮುನಾ ಶ್ರೀನಿಧಿ ದೇಶ – ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಕನ್ನಡ ಕಿರುತೆರೆ ಮತ್ತು ಸಿನಿಮಾ ನಟಿಯಾಗಿ ಸಕ್ರಿಯರಾಗಿದ್ದಾರೆ. ಭಿನ್ನ ಪಾತ್ರಗಳನ್ನು ಪೋಷಿಸಿರುವ ಯಮುನಾ ಖಳ ಛಾಯೆಯ ಪಾತ್ರಗಳಲ್ಲೂ ಮಿಂಚಿದ್ದಾರೆ. ಪ್ರಸ್ತುತ ಬಿಗ್‌ಬಾಸ್‌ ಮನೆಯ ಹಿರಿಯ ಸ್ಪರ್ಧಿಗಳಲ್ಲೊಬ್ಬರು.

ಧನರಾಜ್‌ ಆಚಾರ್‌ | ಕರಾವಳಿ ಮೂಲದ ಬಹುಮುಖ ಪ್ರತಿಭೆ. ಬಂಟ್ವಾಳ ಮೂಲದ ಧನರಾಜ್‌ ಆಚಾರ್‌ ಟಿಕ್‌ಟಾಕ್‌ ಮೂಲಕ ಬೆಳಕಿಗೆ ಬಂದವರು. ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿ ಪಡೆದಿದ್ದಾರೆ. ‘ಅಬ್ಬಬ್ಬಾ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರು ಜನಪ್ರಿಯ ಯೂಟ್ಯೂಬರ್‌. ಹಾಸ್ಯದ ಜೊತೆ ಸಾಮಾಜಿಕ ಕಳಕಳಿಯ ವೀಡಿಯೋಗಳನ್ನು ಮಾಡುತ್ತಿರುತ್ತಾರೆ.

ರಂಜಿತ್‌ ಕುಮಾರ್‌ | ‘ಶನಿ’ ಧಾರಾವಾಹಿಯ ಸೂರ್ಯದೇವನ ಪಾತ್ರದಲ್ಲಿ ವೀಕ್ಷಕರ ಅಭಿಮಾನಕ್ಕೆ ಪಾತ್ರವಾಗಿದ್ದ ನಟ. ಈ ಯಶಸ್ವೀ ಸರಣಿಯ ನಂತರ ಅವರು ಸಿನಿಮಾಗಳತ್ತ ಹೊರಳಿದ್ದರು. ಸೀತಾ ರಾಮ ಕಲ್ಯಾಣ, ಭರಾಟೆ, ಶಿವಾರ್ಜುನ, ಜೇಮ್ಸ್‌ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಜೊತೆ ಕ್ರಿಕೆಟ್‌ನಲ್ಲೂ ಆಸಕ್ತರಾಗಿರುವ ರಂಜಿತ್‌ ಸೆಲೆಬ್ರಿಟಿ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದ್ದಾರೆ.

ಶಿಶಿರ್‌ ಶಾಸ್ತ್ರಿ | ಕಳೆದ ಹದಿಮೂರು ವರ್ಷ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ ಶಿಶಿರ್‌. ‘ಕುಲವಧು’, ‘ಸೊಸೆ ತಂದ ಸೌಭಾಗ್ಯ’, ‘ಪುಟ್ಟಗೌರಿ ಮದುವೆ’ ಅವರ ಜನಪ್ರಿಯ ಸರಣಿಗಳು. ಭರತನಾಟ್ಯ ಕಲಿತಿದ್ದಾರೆ. ‘ಬಿಗ್‌ಬಾಸ್‌ ಮನೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುವ ಉತ್ಸಾಹದಲ್ಲಿದ್ದೇನೆ’ ಎನ್ನುತ್ತಾರೆ ಶಿಶಿರ್‌.

ಅನುಷಾ ರೈ | ತುಮಕೂರು ಮೂಲದ ಅನುಷಾ ರೈ ಇಂಜಿನಿಯರಿಂಗ್‌ ಪದವೀಧರೆ. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಅಣ್ಣಯ್ಯ, ನಾಗಕನ್ನಿಕೆ, ರಾಧಾ ಕಲ್ಯಾಣ.. ಅವರ ಪ್ರಮುಖ ಧಾರಾವಾಹಿಗಳು. ಪೆಂಟಗನ್‌, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ, ತೂಫಾನ್‌, ಖಡಕ್‌… ಅವರು ನಟಿಸಿರುವ ಪ್ರಮುಖ ಚಿತ್ರಗಳು.

ಧರ್ಮ ಕೀರ್ತಿರಾಜ್‌ | ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿರಾಜ್‌ ಅವರ ಪುತ್ರ. ದರ್ಶನ್‌ ನಟನೆಯ ‘ನವಗ್ರಹ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. ‘ಒಲವೇ ವಿಸ್ಮಯ’ ಚಿತ್ರದೊಂದಿಗೆ ಪೂರ್ಣಪ್ರಮಾಣದ ಹೀರೋ ಆದ ಧರ್ಮ ಹಣೆಬರಹ, ಮುಮ್ತಾಜ್‌, ಬಿಂದಾಸ್‌ ಗೂಗ್ಲಿ, ಓ ಮನಸೇ, ಖಡಕ್‌, ರಾನ್ನಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಹಂಸ ಪ್ರತಾಪ್‌ | ಕನ್ನಡ ಕಿರುತೆರೆಯಲ್ಲಿ ಎರಡು ದಶಕಗಳಿಂದ ಸಕ್ರಿಯವಾಗಿರುವ ನಟಿ. ಅಂಗುಲಿಮಾಲಾ, ಡ್ರಾಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ನೆಗೆಟೀವ್‌ ಶೇಡ್‌ ಪಾತ್ರಗಳಲ್ಲಿ ಕನ್ನಡ ಕಿರುತೆರೆ ವೀಕ್ಷಕರಿಗೆ ಹೆಚ್ಚು ನೆನಪಾಗುವ ಹಂಸ ಸದ್ಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಉಗ್ರಂ ಮಂಜು | ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಮಂಜು ಅವರಿಗೆ ‌ಪ್ರಶಾಂತ್‌ ನೀಲ್‌ ನಿರ್ದೇಶನದ ‘ಉಗ್ರಂ’ ಸಿನಿಮಾ ಪಾತ್ರ ಹೆಸರು ತಂದುಕೊಟ್ಟಿತು. ಈ ಚಿತ್ರದ ನಂತರ ಅವರು ‘ಉಗ್ರಂ ಮಂಜು’ ಆದರು. ಕಿಡಿ, ಮಂಜರಿ, ರುಸ್ತುಂ, ಭರಾಟೆ, ಹೀರೋ, ಎಲ್ಲೋ ಬೋರ್ಡ್, ತೂತು ಮಡಿಕೆ, ಬೈಪಾಸ್ ರೋಡ್, ಕಬ್ಜ, ಅಗ್ರಸೇನಾ, ಮಾರಕಾಸ್ತ್ರ, ಕೈವ, ಮೂರನೇ ಕೃಷ್ಣಪ್ಪ… ಸಿನಿಮಾಗಳಲ್ಲಿ ಅವರಿಗೆ ಗಮನಾರ್ಹ ಪಾತ್ರಗಳಿವೆ.

ಮೋಕ್ಷಿತಾ ಪೈ | ‘ಪಾರು’ ಸೀರಿಯಲ್‌ನ ಶೀರ್ಷಿಕೆ ಪಾತ್ರದಲ್ಲಿ ಜನಮನ್ನಣೆ ಗಳಿಸಿದ ನಟಿ. ಬಿಕಾಂ ಪದವೀಧರೆಯಾದ ಇವರು ತಮಿಳು, ತೆಲುಗು ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ‘ನಿರ್ಣಯ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಮೋಕ್ಷಿತಾ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

ಐಶ್ವರ್ಯ ಸಿಂಧೋಗಿ | ‘ನಾಗಿಣಿ’ ಸರಣಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಅಪಾರ ಮನ್ನಣೆ ಗಳಿಸಿದ ನಟಿ. ರಾಜ್ಯಮಟ್ಟದ ಹಾಕಿ ತಂಡ ಪ್ರತಿನಿಧಿಸಿದ್ದರು ಎನ್ನುವುದು ವಿಶೇಷ. ಐಶ್ವರ್ಯ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ‘ಸಿಂಹಾದ್ರಿ’, ‘ಸಂಯುಕ್ತ 2’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತ್ರಿವಿಕ್ರಮ್‌ | ಕನ್ನಡ ಕಿರುತೆರೆಯ ಚಿರಪರಿಚಿತ ನಟ. ‘ಪದ್ಮಾವತಿ’ ಸರಣಿ ಅವರಿಗೆ ಹೆಸರು ತಂದುಕೊಟ್ಟಿತು. ಕ್ರಿಕೆಟ್‌ ಬಗ್ಗೆ ಅಪಾರ ಆಸಕ್ತಿಯಿರುವ Fitness icon. ‘ರಂಗನಾಯಕಿ’, ‘ನವರಾತ್ರಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಿಗ್‌ಬಾಸ್‌ ಶೋ ತಮ್ಮ ವೃತ್ತಿ ಬದುಕಿಗೆ ತಿರುವು ನೀಡಲಿದೆ ಎನ್ನುವ ವಿಶ್ವಾಸದಲ್ಲಿದ್ದಾರವರು.

ತುಕಾಲಿ ಮಾನಸ | ಕಳೆದ Bigg Boss 10ನೇ ಸೀಸನ್‌ನಲ್ಲಿ ತುಕಾಲಿ ಸಂತೋಷ್‌ ಅವರು ಸ್ಪರ್ಧಿಯಾಗಿದ್ದರು. ಈ ಬಾರಿ ಅವರ ಪತ್ನಿ ಮಾನಸ ಸ್ಪರ್ಧಿಯಾಗಿದ್ದಾರೆ. ಇತ್ತೀಚೆಗಷ್ಟೇ ಪೂರ್ಣಗೊಂಡ ‘ಗಿಚ್ಚಿ ಗಿಲಿಗಿಲಿ’ 3ನೇ ಸೀಸನ್‌ ರನ್ನರ್‌ ಅಪ್‌ ಆದ ಮಾನಸ ಇದೀಗ Bigg Boss ಮನೆ ಪ್ರವೇಶಿಸಿದ್ದಾರೆ. ಪತಿ – ಪತ್ನಿ ಇಬ್ಬರೂ ಶೋನಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here