ನಟಿ ರಮ್ಯಾ ಈಗ ಚಿತ್ರರಂಗದಿಂದ ದೂರ ಇದ್ದಾರೆ. ರಾಜಕೀಯದ ಹಿಂದೆ ಬಿದ್ದು ಚಿತ್ರರಂಗದಿಂದ ದೂರವಾದ ರಮ್ಯಾ ಈಗ ರಾಜಕೀಯದಲ್ಲೂ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಆಗೊಂದು ಈಗೊಂದು ಟ್ವೀಟ್ ಮಾಡುವ ಮೂಲಕ ತಾನಿನ್ನೂ ಎರಡೂ ಕಡೆ ಇದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದಾರೆ ರಮ್ಯಾ.

ರಾಜಕೀಯದ ವಿಷಯದಲ್ಲಿ ಆಗಾಗ ನಡೆಯುವ ಬೆಳವಣಿಗೆಗಳ ಬಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ ರಮ್ಯಾ. ಹಾಗೆಯೇ, ಸಿನಿಮಾದ ರಂಗಿನ ಗುಂಗು ಕೂಡ ಅಷ್ಟು ಸುಲಭಕ್ಕೆ ಹೋಗುವಂಥದ್ದಲ್ಲ. ಹಾಗಾಗಿ ಚಿತ್ರರಂಗದ ಬೆಳವಣಿಗೆಗಳ ಬಗ್ಗೆಯೂ ರಮ್ಯಾ ಅಪರೂಪಕ್ಕೆ ಮಾತನಾಡುತ್ತಿರುತ್ತಾರೆ. ಈಗ ಸದ್ಯಕ್ಕೆ ರಮ್ಯಾ ಮಾತನಾಡಿರುವುದು ನಟ ಕಿಚ್ಚ ಸುದೀಪ್ ಅವರ ಬಗ್ಗೆ. ‘ಕೋಟಿಗೊಬ್ಬ 3’ ಚಿತ್ರ ಈ ತಿಂಗಳ 14ರಂದು ಬಿಡುಗಡೆ ಆಗುತ್ತಿರೋದು ಎಲ್ಲರಿಗೂ ಗೊತ್ತು. ಪ್ರಚಾರದ ಭಾಗವಾಗಿ ಬಿಡುಗಡೆಯಾಗಿರುವ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ದೇಶದ ಇತರೆ ಭಾಗಗಳಲ್ಲೂ ಸದ್ದು ಮಾಡುತ್ತಿದೆ. ಹಾಗಾಗಿ ಈ ಟ್ರೈಲರ್ ರಮ್ಯಾ ಅವರ ಕಣ್ಣಿಗೆ ಬೀಳದೇ ಇರಲು ಸಾಧ್ಯವೇ? ಟ್ರೈಲರ್ ಚೆನ್ನಾಗಿದೆ ಎಂದು ಹೇಳುವುದರ ಜೊತೆಗೆ ಕಿಚ್ಚ ಸುದೀಪ್ ಅವರ ಬಗ್ಗೆ ವೈಯಕ್ತಿಕವಾದ ಕಾಮೆಂಟ್‌ವೊಂದನ್ನು ಮಾಡಿದ್ದಾರೆ ರಮ್ಯಾ. ಅದು ಸುದೀಪ್ ಅವರ ವಯಸ್ಸಿಗೆ ಸಂಬಂಧಪಟ್ಟಿದ್ದು.

‘ರಂಗ ಎಸ್ಸೆಸೆಲ್ಸಿ’, ‘ಮುಸ್ಸಂಜೆ ಮಾತು’, ‘ಜಸ್ಟ್ ಮಾತ್ ಮಾತಲ್ಲಿ’, ‘ಕಿಚ್ಚ ಹುಚ್ಚ’ ಮುಂತಾದ ಚಿತ್ರಗಳಲ್ಲಿ ಸುದೀಪ್ ಅವರ ಜೊತೆ ನಟಿಸಿರುವ ರಮ್ಯಾ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಅವರ ಗೆಟಪ್ ನೋಡಿ, ನಿಮಗೇನು ವಯಸ್ಸೇ ಆಗುವುದಿಲ್ಲವೇ? ಎಂದು ಕೇಳಿದ್ದಾರೆ. ಅಲ್ಲದೆ, ‘ನಮ್ಮ ಹೊಸ ಬೆಂಜಮಿನ್ ಬಟನ್’ ಎಂದು ಸುದೀಪ್ ಅವರಿಗೆ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಹಾಲಿವುಡ್‌ನಲ್ಲಿ ಬೆಂಜಮಿನ್ ಬಟನ್ ಅನ್ನೋ ಪಾತ್ರ ಮುದುಕನ ವಯಸ್ಸಿನಿಂದ ಶುರುವಾಗಿ ಹುಡುಗನಾಗಿ ಬದಲಾಗುವ ಮೂಲಕ ಹೆಸರು ಮಾಡಿತ್ತು. ಈಗ ಸುದೀಪ್ ಅವರಿಗೂ ದಿನೇ ದಿನೇ ವಯಸ್ಸು ಕಡಿಮೆ ಆಗ್ತಾ ಇದೆ ಅನ್ನೋ ರೀತಿಯಲ್ಲಿ ರಮ್ಯಾ ಸುದೀಪ್ ಅವರನ್ನು ಹೊಗಳಿರೋದು ವಿಶೇಷ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಯಂಗ್ ಅಂಬಿ ಆಗಿ ಕಾಣಿಸಿಕೊಂಡಿದ್ದ ಸುದೀಪ್ ಅವರಿಗೆ, ‘ಕಿಚ್ಚಾ, ನಿಂಗ್ ವಯಸ್ಸೇ ಆಗಲ್ವೋ’ ಅನ್ನೋ ರಮ್ಯಾ ಅವರ ಕಾಮೆಂಟ್ ಮಾತ್ರ ಎಲ್ಲರ ಗಮನಸೆಳೆಯುತ್ತಿದೆ.

‘ಕಿಚ್ಚ ಹುಚ್ಚ’ ಚಿತ್ರದಲ್ಲಿ ರಮ್ಯಾ, ಸುದೀಪ್‌

LEAVE A REPLY

Connect with

Please enter your comment!
Please enter your name here