ಇದೊಂದು ಡಾರ್ಕ್ ಕಾಮಿಡಿ. ಆದರೆ ಸಿಕ್ಕಾಪಟ್ಟೆ ಬೋರ್ ಹೊಡೆಸುತ್ತದೆ. ನಿಧಾನವಾಗಿ ಸಾಗುವ ಚಿತ್ರಕಥೆ ಮತ್ತು ಸಿನಿಮಾ ನೋಡುತ್ತಿದ್ದರೆ ಏನೇನೋ ಆಗುತ್ತಿರುವಂತೆ ಸಾಗುವ ದೃಶ್ಯಗಳು ಗೊಂದಲ ಮೂಡಿಸುತ್ತವೆ. ವಿಕ್ರಾಂತ್ ಮಾಸ್ಸೆ ಒಳ್ಳೆ ನಟ ಹೌದು, ಆದರೆ ಇಲ್ಲಿ ಚಿತ್ರವನ್ನು ಇಂಟರೆಸ್ಟಿಂಗ್ ಆಗಿ ತೋರಿಸಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ‘ಬ್ಲ್ಯಾಕ್‌ಔಟ್‌’ ಹಿಂದಿ ಸಿನಿಮಾ JioCinema ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಬ್ಲ್ಯಾಕ್‌ಔಟ್‌ನಿಂದಾಗಿ ಪುಣೆ ನಗರದ ಬೀದಿಗಳಲ್ಲಿ ಬರೀ ಕತ್ತಲೆ. ಕತೆ ಶುರುವಾಗುವುದೇ ಬರೀ ಕತ್ತಲೆ.. ಕತ್ತಲೆ ಕತ್ತಲೆಯಿಂದ. ‘ಈಗ ಬರುತ್ತೇನೆ’ ಎಂದು ಆ ಇರುಳು ಮನೆಯಿಂದ ಹೊರ ಹೋಗುವ ಕ್ರೈಂ ವರದಿಗಾರ ಲೆನ್ನಿ ಡಿಸೋಜಾ (ವಿಕ್ರಾಂತ್ ಮಾಸ್ಸೆ). ಈತನ ಕಾರು ನಗದು, ಚಿನ್ನ ಮತ್ತು ಶವವಿರುವ ವ್ಯಾನ್‌ಗೆ ಢಿಕ್ಕಿ ಹೊಡೆದಿದೆ. ಆ ಹೊತ್ತಿಗೆ ಅವನಿಗೆ ಸಿಗುವವನೇ ಬೇವ್ಡಿಯಾ (ಸುನೀಲ್ ಗ್ರೋವರ್). ಆಮೇಲೆ ಸಿಗುವವರು ಇಬ್ಬರು ಕಳ್ಳರು ಹೆಸರು ಟೀಕ್ ಮತ್ತು ಟಾಕ್ (ಕರಣ್ ಸೋನಾವೇರ್, ಸೌರಭ್ ಘಾಡ್ಗೆ) .ಇವರಿಗೆ ಐಕ್ಯೂ ಕಮ್ಮಿ. ಆದರೆ Instagramನಲ್ಲಿ ಫಾಲೋಯರ್ಸ್ ಜಾಸ್ತಿ ಇದ್ದಾರೆ. ಇದೆಲ್ಲದರ ಜತೆಗೆ ಎದುರಾಗುವ ಯುವತಿ ಶ್ರುತಿ ಮೆಹ್ರಾ (ಮೌನಿ ರಾಯ್). ಈಕೆಯೂ ಸಂಕಷ್ಟದಲ್ಲಿದ್ದಾಳೆ. ಹೀಗೆ ಒಬ್ಬೊಬ್ಬರೇ ಲೆನ್ನಿಯ ರಾತ್ರಿಯ ಪಯಣದಲ್ಲಿ ಬಳ್ಳಿಯಂತೆ ಕಾಲಿಗೆ ಎಡರುತ್ತಾರೆ. ಆ ಬಳ್ಳಿ ಕೆಲವೊಮ್ಮೆ ಕುತ್ತಿಗೆಗೆ ಸುತ್ತಿ ಹಾಕಿಕೊಳ್ಳುವುದೂ ಉಂಟು. ಒಂದು ಸಮಸ್ಯೆಯಿಂದ ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿರುವಾಗ ಮತ್ತೊಂದು ಸಮಸ್ಯೆ ತಲೆ ಮೇಲೆ ಬಂದಿರುತ್ತದೆ. ಇಷ್ಟೆಲ್ಲಾ ಸಂಕಷ್ಟಗಳನ್ನು ಲೆನ್ನಿ ಹೇಗೆ ನಿಭಾಯಿಸುತ್ತಾನೆ ಎನ್ನುವ ಕತೆ ‘ಬ್ಲ್ಯಾಕ್‌ಔಟ್‌’.

ಇದೊಂದು ಡಾರ್ಕ್ ಕಾಮಿಡಿ. ಆದರೆ ಸಿಕ್ಕಾಪಟ್ಟೆ ಬೋರ್ ಹೊಡೆಸುತ್ತದೆ. ನಿಧಾನವಾಗಿ ಸಾಗುವ ಚಿತ್ರಕಥೆ ಮತ್ತು ಸಿನಿಮಾ ನೋಡುತ್ತಿದ್ದರೆ ಏನೇನೋ ಆಗುತ್ತಿರುವಂತೆ ಸಾಗುವ ದೃಶ್ಯಗಳು ಗೊಂದಲ ಮೂಡಿಸುತ್ತವೆ. ಚಿತ್ರದ ನಾಯಕ ಕ್ರೈಂ ರಿಪೋರ್ಟರ್. ಆತನ ಸುತ್ತವೇ ಕತೆ ಗಿರಕಿ ಹೊಡೆಯುತ್ತದೆ. ಅಲ್ಲೊಬ್ಬ ಸತ್ತ ಹುಡುಗ, ನಿಷ್ಠಾವಂತ ಸ್ನೇಹಿತ, ಅವಮಾನಕ್ಕೊಳಗಾದ ರಾಜಕಾರಣಿ, ಭ್ರಷ್ಟ ಪೋಲೀಸ್, ಸೇಡು ತೀರಿಸಿಕೊಳ್ಳುವ ಎಂಎಲ್‌ಎ, ಮೋಸ ಮಾಡುವ ಹೆಂಡತಿ, ಪಿಕ್‌ಪಾಕೆಟ್‌ ಮಾಡುವ ಇಬ್ಬರು ಪೆದ್ದು ಯುವಕರು, ಡಿಟೆಕ್ಟೀವ್, ನಿಗೂಢ ಮಹಿಳೆ ಮತ್ತು ಶಾಯರಿ ಹೇಳುವ ಕುಡುಕ. ಇದಿಷ್ಟು ಈತನ ಹಿಂದೆ ಮುಂದೆ ಸುತ್ತುವ ಪೋಷಕ ಪಾತ್ರಗಳು. ವಿಕ್ರಾಂತ್ ಮಾಸ್ಸೆ ಒಳ್ಳೆ ನಟ ಹೌದು, ಆದರೆ ಇಲ್ಲಿ ಆತ ಶಕ್ತಿ ಮೀರಿ ಪ್ರಯತ್ನಿಸಿದರೂ ಸಿನಿಮಾವನ್ನು ಇಂಟರೆಸ್ಟಿಂಗ್ ಆಗಿ ತೋರಿಸಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.

ನಟರ ನಟನಾ ಸಾಮರ್ಥ್ಯದ ಹೊರತಾಗಿಯೂ ಸಿನಿಮಾ ಗೋಜಲು ಗೋಜಲಾಗಿದೆ. ಹೋಗ್ಲಿ ಬಿಡಿ ಒಂದಷ್ಟು ಹಾಸ್ಯ ಇರುತ್ತದೆ… ಅದನ್ನಾದರೂ ನೋಡಬಹುದು ಎಂದೆನಿಸಿದರೆ ಇಲ್ಲಿನ ಕಾಮಿಡಿಗಳು ಪ್ರೇಕ್ಷಕರಲ್ಲಿ ನಗು ಬರಿಸುವುದೇ ಇಲ್ಲ. ಮೊದಲೇ ಹೇಳಿದಂತೆ ಕ್ರೈಮ್ ರಿಪೋರ್ಟರ್‌ನ ಆ ಕತ್ತಲೆಯಲ್ಲಿನ ಪಯಣ ಒಂದು ಕ್ರೈಂನಿಂದಲೇ ಆರಂಭವಾಗುತ್ತದೆ. ಚಿತ್ರದ ಮೊದಲಾರ್ಧದಲ್ಲಿ ಕೆಲವು ಆಸಕ್ತಿದಾಯಕ ತಿರುವುಗಳಿದ್ದು ಈ ತಿರುವುಗಳು ಸ್ವಲ್ಪ ಮಟ್ಟಿಗೆ ಕುತೂಹಲವನ್ನುಂಟು ಮಾಡುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಪ್ರೇಕ್ಷಕ ನಿದ್ದೆಗೆ ಜಾರುವಂತಾಗುತ್ತದೆ.

ಅಬ್ಬಾಸ್ ದಲಾಲ್ ಮತ್ತು ಹುಸೇನ್ ದಲಾಲ್ ಅವರೊಂದಿಗೆ ದೇವಾಂಗ್ ಭಾವಸರ್ ಬರೆದಿರುವ ಕಥೆ ಜಾಳು ಜಾಳಗಿದೆ. ಏನನ್ನೋ ಹೇಳಬೇಕು ಎಂದು ಬಯಸಿದರೂ ಅದನ್ನು ಪ್ರೇಕ್ಷಕರಿಗೆ ಸರಿಯಾಗಿ ದಾಟಿಸಲು ಸಿನಿಮಾ ವಿಫಲವಾಗಿದೆ. ಚಿತ್ರದಲ್ಲಿ ಒಂದು ಗುಂಡಿನ ಸದ್ದು ಕೇಳಿಸುತ್ತದೆ, ಅದರೆ ಅದು ಏನು, ಎತ್ತ ಎಂಬ ಯಾವುದೇ ಐಡಿಯಾ ಪ್ರೇಕ್ಷಕರಿಗೆ ಇಲ್ಲ. ಕೆಲವು ದೃಶ್ಯಗಳು ಪುನರಾವರ್ತಿತವಾಗಿವೆ. ಅನಂತ್ ವಿಜಯ್ ಜೋಷಿ, ಛಾಯಾ ಕದಮ್, ಜಿಸ್ಶು ಸೇನ್‌ಗುಪ್ತಾ, ಸೂರಜ್ ಪಾಪ್ಸ್, ಪ್ರಸಾದ್ ಓಕ್ ಮತ್ತು ರುಹಾನಿ ಸಿಂಗ್ ಹೀಗೆ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಇಷ್ಟೊಂದು ಪಾತ್ರವರ್ಗವಿದ್ದರೂ ಕತೆ ಬಿಗಿಯಲ್ಲದ ಕಾರಣ ನೋಡುವ ಆಸಕ್ತಿಯನ್ನು ಪ್ರೇಕ್ಷಕ ಕಳೆದುಕೊಳ್ಳುತ್ತಾ ಹೋಗುತ್ತಾನೆ. ಇದನ್ನಾದರೂ ನೋಡಬಹುದು ಎಂದೆನಿಸಿದ ದೃಶ್ಯವೆಂದರೆ ಬೇವ್ಡಿಯಾನ ಫ್ಲ್ಯಾಶ್ ಬ್ಯಾಕ್. ಆದರೆ ಅದೂ ನೀರಸ.

ಇನ್ನು ತಾರಾಗಣದ ಬಗ್ಗೆ ಹೇಳಬೇಕೆಂದರೆ ವಿಕ್ರಾಂತ್ ಮಾಸ್ಸೆಯನ್ನು ’12th Fail’ ಸಿನಿಮಾದಲ್ಲಿ ನೋಡಿ ಅವರ ಅಭಿನಯವನ್ನು ಮೆಚ್ಚಿದ್ದೇವೆ. ಆದರೆ ಇಲ್ಲಿ ಆತನನ್ನು ಕ್ರೈಂ ರಿಪೋರ್ಟರ್ ಆಗಿ ನೋಡುವುದು ಬೇರೆಯೇ ಫೀಲ್ ಕೊಡುತ್ತದೆ. ಈ ಕ್ರೈಂ ರಿಪೋರ್ಟರ್ ತಮಾಷೆಯಿಂದ ಕುಟುಕು ಕಾರ್ಯಾಚರಣೆಗಳನ್ನು ಮಾಡುತ್ತಾನೆ. ಹೀಗೆ ವಿಕ್ರಾಂತ್ ಅವರ ಪಾತ್ರ ತಿರುವುಗಳನ್ನು ಪಡೆದುಕೊಂಡು ಗೊಂದಲಕ್ಕೆ ಸಿಲುಕಿಕೊಂಡೇ ಹೋಗುತ್ತಿರುತ್ತದೆ. ಹಾಗಾಗಿ ಇಲ್ಲಿ ವಿಕ್ರಾಂತ್ ಅಭಿನಯವನ್ನು ಮೆಚ್ಚಲೇಬೇಕು.

ಸುನಿಲ್ ಗ್ರೋವರ್, ಬೆವ್ಡ್ಯಾ ಆಗಿ, ಶಾಯರಿಗಳಲ್ಲಿ ಮಾತನಾಡುವ ಅಹಂಕಾರವಿಲ್ಲದ ಪಾತ್ರ. ಪ್ರತಿಭಾವಂತ ನಟ. ಅವನು ಶಾಯರಿ ಹೇಳುವ ರೀತಿ ಮತ್ತು ನಂತರ ಆಕ್ಷನ್ ಮೋಡ್‌ಗೆ ಬದಲಾಯಿಸುವ ರೀತಿ ನೋಡಿದರೆ ಆತ ಅಸಾಧಾರಣ ನಟ ಎಂದು ನಿಸ್ಸಂಶಯವಾಗಿ ಹೇಳಬಹುದು. ಈ ಬೆವ್ಡ್ಯಾ ಶಾರುಖ್ ಖಾನ್‌ರ ‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳನ್ನು ಗಮನದಲ್ಲಿಟ್ಟುಕೊಂಡು ಬರೆಯಲಾಗಿದೆ. ಉದ್ದನೆಯ ಕೂದಲಿನ ಲುಕ್‌ನಿಂದ ಹಿಡಿದು ಕ್ಲೈಮ್ಯಾಕ್ಸ್‌ನಲ್ಲಿನ ಅವರ ಆಕ್ಷನ್ ಸೀಕ್ವೆನ್ಸ್‌ನವರೆಗೆ, ಸುನಿಲ್ ಹೆಚ್ಚಿನ ದೃಶ್ಯಗಳಲ್ಲಿ ಶಾರುಖ್ ಖಾನ್ ಅವರನ್ನು ನೆನಪಿಸುತ್ತಾರೆ. ಇಲ್ಲಿ ‘ಬಾದ್‌ಶಾ’ ಉಲ್ಲೇಖವೂ ಇದೆ. ಇತರೆ ನಟರಾದ ಮೌನಿ ರಾಯ್, ಜಿಸ್ಶು ಸೆಂಗುಪ್ತ, ರುಹಾನಿ ಶರ್ಮಾ, ಪ್ರಸಾದ್ ಓಕ್ ಮತ್ತು ಛಾಯಾ ರಘುನಾಥ್ ಕದಮ್ ಕೂಡ ಉತ್ತಮ ಅಭಿನಯ ನೀಡಿದ್ದಾರೆ. ‘ಬ್ಲ್ಯಾಕ್‌ಔಟ್‌’ ಅವಸರದಲ್ಲಿ ಮೂಡಿರುವಂಥ ಸಿನಿಮಾ. ಹಾಗಾಗಿ ಪ್ರೇಕ್ಷಕರು ಕೂಡಾ ಅಸಲಿ ಕತೆ ಎಲ್ಲಿದೆ ಎಂಬುದನ್ನು ಕತ್ತಲೆಯಲ್ಲೇ ತಡಕಾಡಬೇಕಾಗುತ್ತದೆ. ಸಿನಿಮಾ ಈಗ JioCinema ನಲ್ಲಿ ಸ್ಟ್ರೀಮ್ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here