ದೃಶ್ಯದಿಂದ ದೃಶ್ಯಕ್ಕೆ ವಿಷಯ ಬದಲಾದರೂ ಪ್ರೇಕ್ಷಕನಿಗೆ ಗೊಂದಲವಾಗದ ನಿರೂಪಣೆಯಿದೆ. ದೃಶ್ಯಗಳನ್ನು ಸಾಧ್ಯವಾದಷ್ಟೂ ಸರಳವಾಗಿಸಿದ್ದಾರೆ. ಫಿಲಾಸಫಿ ಇದ್ದರೂ ಎಲ್ಲಿಯೂ ಅದು ವಾಚ್ಯವಾಗದೆ ರಂಜನೆಯ ವ್ಯಾಪ್ತಿಯಲ್ಲೇ ಸಿಗುತ್ತದೆ. ಒಟ್ಟಾರೆಯಾಗಿ ಸಿನಿಮಾ ಪ್ರೇಕ್ಷಕನೆದುರು ಹಳ್ಳಿಯ ಇಂದಿನ ವಸ್ತುಸ್ಥಿತಿಯನ್ನು ತೆರೆದಿಡುತ್ತದೆ. ‘ಕಡೈಸಿ ವಿವಸಾಯಿ’ ತಮಿಳು ಸಿನಿಮಾ SonyLIVನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕಡೈಸಿ ವಿವಸಾಯಿ, ಕೊನೆಯ ಕೃಷಿಕ. ಈ ಸಿನಿಮಾದ ಶಿರ್ಷಿಕೆಯೇ ಪ್ರೇಕ್ಷಕನನ್ನು ಆಲೋಚನೆಗೆ ದೂಡಬಹುದು. ನಿಜಕ್ಕೂ ವ್ಯವಸಾಯ ಅಂತಹ ಸ್ಥಿತಿ ತಲುಪಿಬಿಟ್ಟರೇ? ಕಲ್ಪನೆಯಲ್ಲೂ ಅರಗಿಸಿಕೊಳ್ಳಲಾಗದ ದುಸ್ತಿತಿ ಎದುರಾಗಬಹುದು. ಕೆಲವು ಭಾಗಗಳಲ್ಲಿ ಈಗಾಗಲೇ ಪರಿಸ್ಥಿತಿ ಹದಗೆಟ್ಟಿರುವುದನ್ನು ನಾವು ನೋಡಬಹುದು. ಈ ಅಪಾಯದ ಮುನ್ಸೂಚನೆಯಂತಿದೆ ಈ ಸಿನಿಮಾದ ವಸ್ತು. ವ್ಯವಸಾಯದಿಂದಾಚೆಗೂ ನಮ್ಮ ವ್ಯವಸ್ಥೆಯಲ್ಲಿನ ಹಲವು ವಿಷಯಗಳ ಕುರಿತು ಮಾತಾಡುತ್ತದೆ.

ಇದು ಸಂಪೂರ್ಣ ಹಳ್ಳಿ ಸೊಗಡಿನ ಚಿತ್ರ. ತಿಳಿಹಾಸ್ಯ, ಕಾನೂನು ವವ್ಯಸ್ಥೆಯ ವಿಡಂಬನೆ, ಜಾತೀಯತೆಯ ಪಿಡುಗು, ಆದ್ಯಾತ್ಮ ಈ ಎಲ್ಲದರ ಎಳೆ ಚಿತ್ರದಲ್ಲಿ ಅಡಕವಾಗಿದೆ. ಅವೆಲ್ಲವೂ ಪ್ರೇಕ್ಷಕನ ಅರಿವಿಗೆ ಬರದಂತೆ ಅವನೊಳಗೆ ಪ್ರಶ್ನೆ ಹುಟ್ಟುಹಾಕುತ್ತವೆ. ಈ ಸಿನಿಮಾವನ್ನು ಪ್ರೇಕ್ಷಕ ಸಾಮಾನ್ಯ ಚಿತ್ರಗಳಂತೆ ಹೀಗೆ ನೋಡಿ ಹಾಗೆ ಮರೆಯುವುದಿಲ್ಲ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್‌ನಂತೆ ಈ ‘ಕಾಮನ್ ಮ್ಯಾನ್’. ಹಳ್ಳಿಯ ಕಡೆಯ ಕೃಷಿಕ ಮಾಯಾಂಡಿ ಎನ್ನುವ ಮುಖ್ಯಪಾತ್ರ ಮನಸಿನಲ್ಲಿ ಉಳಿದುಬಿಡುತ್ತದೆ.

ನಿಸರ್ಗದ ಮಡಿಲ ಕುರುಚಲು ಗುಡ್ಡಗಾಡಿನ ವಾತಾವರಣದ ಹಳ್ಳಿ, ಅಲ್ಲಿಯ ಜನರ ನಂಬಿಕೆಗಳು, ಅವರವರ ಕುಲಕಸುಬು, ಸಾಮಾನ್ಯರ ಆಸೆ, ಕನಸು, ವ್ಯಾಮೋಹ, ಅವೆಲ್ಲವನ್ನೂ ಹೆಣೆದು ಕಥೆಯಂತೆ ಹೇಳದೆ ಪ್ರಸ್ತುತ ಬದುಕಿನ ನೈಜತೆಯನ್ನು ತೆರೆದಿಟ್ಟಿರುವ ಸಿನಿಮಾ. ಮನರಂಜನಾತ್ಮಕ ಚಿತ್ರಗಳಲ್ಲಿ ಬಹುಮುಖ್ಯವಾಗಿ ಕಾಣುವ ಸಾಹಸ ದೃಶ್ಯ, ಅನವಶ್ಯಕ ಹಾಡು ಕುಣಿತವಿಲ್ಲ. ಆದರೂ ಚಿತ್ರ ರಂಜಿಸುತ್ತದೆ. ಚಿತ್ರದ ಪಾತ್ರಗಳಾವುವೂ ಯಾವುದೋ ಒಂದು ಕಾಲ್ಪನಿಕ ಪಾತ್ರ ಅನಿಸುವುದಿಲ್ಲ. ಕಲಾವಿದರ ಅಭಿವ್ಯಕ್ತಿ ನಟನೆ ಅನಿಸುವುದಿಲ್ಲ. ಕತೆಯಲ್ಲಿರುವ ಹಳ್ಳಿಗೂ, ಪ್ರೇಕ್ಷಕ ಕಂಡಿರುವ ಅಥವಾ ಅನುಭವಕ್ಕೆ ದಕ್ಕಿರುವ ಹಳ್ಳಿಯ ಆಚರಣೆ, ಸಂಸ್ಕೃತಿಯಲ್ಲಿ ಏರುಪೇರಿರಬಹುದಾದರೂ, ವಿಷಯ ಮತ್ತು ಪಾತ್ರಗಳು ನಮ್ಮದೇ ಹಳ್ಳಿಯ ಕತೆ, ನಮ್ಮ ಸುತ್ತಲೂ ಕಂಡಂತಿರುವ ವ್ಯಕ್ತಿ ಎಂದೆನಿಸಿ ಆಪ್ತವಾಗುತ್ತದೆ.

ಕೆಲವೊಮ್ಮೆ ನಿಜಜೀವನದಲ್ಲಿ ಕೆಲ ಘಟನೆಗಳು ನಡೆದಾಗ ಅಥವಾ ಯಾರಾದರೂ ನಮಗೆ ಹೇಳಬೇಕೆಂದಿರುವ ವಿಷಯ ಮಾತಾಡದಿದ್ದರೂ ಅವರ ಮುಖಭಾವ ಮತ್ತು ಅಲ್ಲಿನ ವಾತವರಣದಿಂದ ನಮಗೆ ಅರ್ಥವಾಗಿಬಿಡುತ್ತದೆ. ಅಂತಹ ಸೂಕ್ಷ್ಮತೆಯ ಥಿಯರಿಯೊಂದು ಈ ಚಿತ್ರದಲ್ಲಿ ಮಾಯಾಂಡಿ ಪಾತ್ರದಲ್ಲಿ ಕಾಣುತ್ತದೆ. ತೀಕ್ಷ್ಣ ನೋಟ, ಮಂದ ನಡಿಗೆಯ ವಯೋವೃದ್ದ ಮಾಯಾಂಡಿ ಚಿತ್ರದ ಮುಖ್ಯಪಾತ್ರಧಾರಿ. ಮುಖ್ಯಪಾತ್ರವಾದರೂ ಮಾತು ಕಡಿಮೆ. ಹೇಳಿರುವ ಮಾತುಗಳಲ್ಲಿ ಬಹಳಷ್ಟು ‘ಏನ್‌ ಹೇಳ್ದೆ? ಕೇಳಿಸುತ್ತಿಲ್ಲ?’ ಅನ್ನೋದೇ ಇದೆ. ಆದರೆ ಪ್ರೇಕ್ಷಕನಿಗೆ ಆತನ ಆಲೋಚನಾತ್ಮಕ ಭಾವದಿಂದ ಉತ್ತರ ತಲುಪಿಸಿಬಿಡುತ್ತಾನೆ. ಅವನ ಬದುಕು, ಬವಣೆ, ಆತನ ಸಿದ್ದಾಂತ ಮತ್ತು ಪ್ರಕೃತಿಯನ್ನುದಿಟ್ಟಿಸಿ ಬೀರುವ ದೀರ್ಘನೋಟ ಪ್ರೇಕ್ಷಕನನ್ನು ಕಾಡುತ್ತದೆ.

ಕೊನೆಯ ಹಂತದ ದೃಶ್ಯವೊಂದನ್ನು ಕಂಡ ಪ್ರೇಕ್ಷಕ ಅಯ್ಯೋ ಹೀಗಾಗಬಾರದಿತ್ತು ಎಂದುಕೊಳ್ಳುತ್ತಿದ್ದಂತೆ ಧನಾತ್ಮಕ ತಿರುವೊಂದು ಎದುರಾಗಿ ಪ್ರೇಕ್ಷಕನನ್ನು ಸಮಾಧಾನಿಸುತ್ತದೆ. ವಿಜಯ ಸೇತುಪತಿ ನಿರ್ವಹಿಸಿರುವ ರಾಮಯ್ಯನ ಪಾತ್ರ ಮತ್ತು ಆ ಪಾತ್ರದ ಹಿನ್ನೆಲೆ ಯುವ ಸಮೂಹವನ್ನು ಮಾಯಾಂಡಿಗಿಂತ ತುಸು ಹೆಚ್ಚೇ ಕಾಡುತ್ತದೆ. ಪ್ರೇಕ್ಷಕರಿಗೆ ಸಿನಿಮಾದ ವಿಷಯ ಇಷ್ಟವಾಗುವುದು, ಪಾತ್ರಗಳು ಇಷ್ಟವಾಗುವುದು, ಅಭಿನಯ ಇಷ್ಟವಾಗುವುದು ಸಾಮಾನ್ಯ. ಆದರೆ ಈ ಸಿನಿಮಾ ಪ್ರತಿ ದೃಶ್ಯವೂ ಒಂದಲ್ಲ ಒಂದು ರೀತಿಯಿಂದ ಇಷ್ಟವಾಗುವುದಲ್ಲದೆ ನಿಸರ್ಗದ ನಡುವಲ್ಲಿಯೇಇದ್ದು ಆಹ್ಲಾದಿಸಿ ಕೊನೆಗೊಂದು ನಿಟ್ಟುಸಿರುಬಿಟ್ಟು ಹಬ್ಬದಂತ ವಾತಾವರಣವನ್ನು ತನ್ನೊಳಗೂ ಸಂಭ್ರಮಿಸಬಹುದು.

ಕತೆ ಬರೆದು ನಿರ್ದೇಶಿಸಿರುವ ಎಂ.ಮಣಿಕಂಠನ್‌ ಅವರ ಪ್ರಬುದ್ಧ ಆಲೋಚನೆಗೆ ಹಲವು ದೃಶ್ಯಗಳು ಸಾಕ್ಷಿಯಾಗುತ್ತವೆ. ಚಿತ್ರದ ಯಾವುದೇ ಪಾತ್ರವಾಗಲಿ, ವಿಷಯವಾಗಲಿ ಕಾಲನಿರ್ವಹಣೆ ಅಥವಾ ಕತೆ ಸಾಗಿಸುವುದಕ್ಕಾಗಿ ನಿರ್ಮಿತವಾಗಿರುವುದು ಎನಿಸುವುದಿಲ್ಲ. ಚಿತ್ರದಲ್ಲಿ ಒಂದು ಲವ್‌ ಪ್ರಪೋಸ್‌ ಸೀನ್‌ ಅದರ ಸರಳತೆಯಿಂದ ಇಷ್ಟವಾಗಬಹುದು. ಗೊಬ್ಬರದ ಅಂಗಡಿಯಲ್ಲಿ ಮಾಯಾಂಡಿ ನಡೆಸುವ ಮಾತುಕತೆಯಲ್ಲಿ ಆ ಪಾತ್ರದ ಆಳ ಅರ್ಥವಾಗುವಂತೆ ಕಟ್ಟಿದ್ದಾರೆ. ಹಾಸ್ಯೋತ್ಪತ್ತಿಗಾಗಿ ಒಂದು ಬೋಳಾಗುತ್ತಿರುವ ತಲೆಯ ಪಾತ್ರವೊಂದನ್ನು ಸೃಷ್ಟಿಸಲಾಗಿದೆ. ಆದರೆ ಆ ಪಾತ್ರವನ್ನು ಹೀಯಾಳಿಸಿ ಅದೇ ಹಾಸ್ಯವೆಂದು ಬಿಂಬಿಸಿಲ್ಲ. ಬದಲಿಗೆ ಆತ ತನ್ನ ಕೂದಲನ್ನು ಬೆಳೆಸುವುದಕ್ಕೆ ಮಾಡುವ ಪ್ರಯೋಗಗಳೇ ಹಾಸ್ಯಮಯವಾಗಿ ಪ್ರೇಕ್ಷಕನಲ್ಲಿ ನಗೆ ತರಿಸುವಂತೆ ದೃಶ್ಯಗಳನ್ನು ಕಟ್ಟಲಾಗಿದೆ. ಕುಬ್ಜ ಹುಡುಗಿಯ ಪಾತ್ರವೂ ಅಷ್ಟೆ. ಆಕೆಯ ಆಸೆ ಕನಸಗಳೊಂದಿಗೆ ನಿರ್ವಹಿಸಿದ್ದಾರೆ. ಕೋರ್ಟ್‌ ಸೀನ್‌ಗಳು ರಿಯಲಿಸ್ಟಿಕ್‌ ಆಗಿವೆ.

ದೃಶ್ಯದಿಂದ ದೃಶ್ಯಕ್ಕೆ ವಿಷಯ ಬದಲಾದರೂ ಪ್ರೇಕ್ಷಕನಿಗೆ ಗೊಂದಲವಾಗದ ನಿರೂಪಣೆಯಿದೆ. ದೃಶ್ಯಗಳನ್ನು ಸಾಧ್ಯವಾದಷ್ಟೂ ಸರಳವಾಗಿಸಿದ್ದಾರೆ. ಫಿಲಾಸಫಿ ಇದ್ದರೂ ಎಲ್ಲಿಯೂ ಅದು ವಾಚ್ಯವಾಗದೆ ರಂಜನೆಯ ವ್ಯಾಪ್ತಿಯಲ್ಲೇ ಸಿಗುತ್ತದೆ. ಒಟ್ಟಾರೆಯಾಗಿ ಸಿನಿಮಾ ಪ್ರೇಕ್ಷಕನೆದುರು ಹಳ್ಳಿಯ ಇಂದಿನ ವಸ್ತುಸ್ಥಿತಿಯನ್ನು ತೆರೆದಿಡುತ್ತದೆ. ಅಲ್ಲಿಯ ನೆಲ, ನವಿಲು ಭಕ್ತಿ, ಬದುಕು ಎಲ್ಲವನ್ನೂ ತೆರೆದಿಡುವ ದೃಶ್ಯ ರೂಪಕ. ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಕಲಾವಿದರ ಅಭಿನಯ ಒಂದಕ್ಕೊಂದು ಪೂರಕವಾಗಿದೆ. ನೋಡಬೇಕಾದ ಸಿನಿಮಾ. ‘ಕಡೈಸಿ ವಿವಸಾಯಿ’ SonyLIV ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here