ಈಡಿಪಸ್ ಮಾದರಿಯ ಕತೆಯೊಂದನ್ನು, ಟೈಮ್ ಟ್ರಾವೆಲ್ ಸಿನಿಮಾದೊಳಗೆ ಸೇರಿಸುವ ಪರಿಕಲ್ಪನೆಯೇ ವಿಶೇಷವಾಗಿದೆ. ಸಾಹಿತ್ಯ, ಕಲೆ, ರಂಗಭೂಮಿ ಇವೆಲ್ಲದರ ನಂಟಿರುವವರಿಗೆ ಮಾತ್ರ ಬರೆಯಲು ಸಾಧ್ಯವಿರುವ ಚಿತ್ರಕಥೆ ಇದು ಎಂಬುದಕ್ಕೆ ಸಿನಿಮಾದ ಉದ್ದಕ್ಕೂ ಸಾಕ್ಷ್ಯ ದೊರೆಯುತ್ತದೆ. ಯುವ ನಿರ್ದೇಶಕರೊಬ್ಬರ ಓದಿನ ವ್ಯಾಪ್ತಿ ಮತ್ತು ಅದನ್ನು ಅವರು ತಮ್ಮ ಕತೆಯೊಳಗೆ ಅಲ್ಲಲ್ಲಿ ಪ್ರದರ್ಶಿಸಿರುವ ರೀತಿ ಗಮನ ಸೆಳೆಯುತ್ತದೆ. ಕನ್ನಡ ಸಿನಿಪ್ರಿಯರು ನೋಡಬೇಕಾದ ಸಿನಿಮಾ ‘ಬ್ಲಿಂಕ್‌’.

ಕನ್ನಡದಲ್ಲಿ ಸೈ-ಫೈ ಚಿತ್ರಗಳು, ಅದರಲ್ಲೂ ಟೈಮ್ ಟ್ರಾವೆಲ್ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಇಂತಹ ಚಿತ್ರಗಳ ನಿರ್ಮಾಣದಲ್ಲಿ ಎದುರಾಗುವ ಹಲವು ಸವಾಲುಗಳೇ ಇದಕ್ಕೆ ಕಾರಣವಿರಬಹುದು. ಇದಕ್ಕೆ ಬೇಕಾದ ಬಜೆಟ್, ಸಂಕೀರ್ಣವೆನಿಸಬಹುದಾದ ಚಿತ್ರಕಥೆ, ಸಣ್ಣ ಪ್ರೇಕ್ಷಕ ವರ್ಗವನ್ನು ಮಾತ್ರ ಸೆಳೆದೀತೆಂಬ ಅನುಮಾನ… ಹೀಗೆ. ಇವೆಲ್ಲವನ್ನೂ ಎದುರಿಸಿ ಯಶಸ್ವಿಯಾಗಿರುವ, ನೆನಪಿನಲ್ಲಿ ಉಳಿಯುವಂತಹ ಟೈಮ್ ಟ್ರಾವೆಲ್ ಚಿತ್ರ ಕನ್ನಡದಲ್ಲಿ ಯಾವುದಾದರೋ ಇದೆಯೇ ಎಂದರೆ ಉತ್ತರ ಸಿಗಲಾರದು. ಈ ನಿಟ್ಟಿನಲ್ಲಿ ಕಳೆದ ವಾರ ಬಿಡುಗಡೆಯಾದ ‘ಬ್ಲಿಂಕ್’ ಕನ್ನಡದ ಮಟ್ಟಿಗೆ ಒಂದು ಬೋಲ್ಡ್ ಮತ್ತು ಯಶಸ್ವೀ ಪ್ರಯತ್ನ. ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಯುವ ನಿರ್ದೇಶಕರೊಬ್ಬರ ಚೊಚ್ಚಲ ಸಿನಿಮಾ ಎಂಬುದು ದೊಡ್ಡ ಹೆಗ್ಗಳಿಕೆ. ಶ್ರೀನಿಧಿ ಬೆಂಗಳೂರು ಬರೆದು ನಿರ್ದೇಶಿಸಿರುವ ‘ಬ್ಲಿಂಕ್’ ಚಿತ್ರದ ತಾಂತ್ರಿಕ ವರ್ಗದಲ್ಲೂ ಬಹುತೇಕ ಎಲ್ಲಾ ಹೊಸಬರೇ ಇದ್ದಾರೆ.

ಟ್ರೈಮ್ ಟ್ರಾವೆಲ್ ಚಿತ್ರಗಳ ದೊಡ್ಡ ಸವಾಲು ಚಿತ್ರಕಥೆ. ಹಲವು ಟೈಮ್‌ಲೈನ್‌ಗಳಲ್ಲಿ ನಡೆಯುವ ಕತೆಯನ್ನು ಪ್ರೇಕ್ಷಕರಿಗೆ ಅರ್ಥವಾಗುವಂತೆ ಹೇಳಬೇಕು. ಆದರೆ, ಅದನ್ನು ತೀರಾ ಸರಳವಾಗಿಸಿ ಅದರ ರೋಚಕತೆಯನ್ನು ಹಾಳು ಮಾಡುವಂತೆಯೂ ಇಲ್ಲ. ಕತೆಯಲ್ಲಿ ಸಣ್ಣ ಎಳೆ ತಪ್ಪಿದರೂ, ಇಡೀ ಚಿತ್ರದ ಫ್ರೇಮ್‌ವರ್ಕ್ ಕುಸಿಯುವ ಆತಂಕ ಇರುವುದರಿಂದ ತೀರಾ ಎಚ್ಚರಿಕೆಯಿಂದ ಹೆಣೆಯಬೇಕಾಗುತ್ತದೆ. ಗ್ರಹಿಕೆಗೆ ಮೀರಿದ ಸಂಗತಿಗಳನ್ನು ಹೇಳುತ್ತಿರುವ ಕಾರಣ ಅದು ಅತಾರ್ಕಿಕವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ‘ಬ್ಲಿಂಕ್’ ಇದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದೆ. ಅಷ್ಟೇ ಅಲ್ಲದೆ, ಇಂತಹ ಕತೆಗೊಂದು ಗಟ್ಟಿಯಾದ ಭಾವನಾತ್ಮಕ ಆಯಾಮವನ್ನು ಸೇರಿಸುವ ಮೂಲಕ ಬೆರಗುಗೊಳಿಸುತ್ತದೆ. ಹೀಗಾಗಿ, ಈ ಸಶಕ್ತ ಚಿತ್ರಕಥೆ ಸಿದ್ದವಾದಾಗಲೇ ಸಿನಿಮಾ ಅರ್ಧ ಯಶಸ್ಸು ಸಾಧಿಸಿತ್ತು ಎಂದೇ ಹೇಳಬಹುದು.

ಅಪೂರ್ವ (ದೀಕ್ಷಿತ್ ಶೆಟ್ಟಿ) ಇನ್ನೂ ಪದವಿ ಪೂರ್ಣಗೊಳಿಸಿಲ್ಲದ, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಯುವಕ. ಆತನ ಪ್ರೇಯಸಿ ಸಪ್ನಾ (ಮಂದಾರ) ಈಗಾಗಲೇ ಒಳ್ಳೆಯ ಉದ್ಯೋಗದಲ್ಲಿದ್ದಾಳೆ. ಇಬ್ಬರಿಗೂ ರಂಗಭೂಮಿಯ ನಂಟು. ತಮ್ಮ ತಂಡದ ಜೊತೆ ಗ್ರೀಕ್ ನಾಟಕ ದೊರೆ ಈಡಿಪಸ್ ತಾಲೀಮಿನಲ್ಲಿ ತೊಡಗಿರುತ್ತಾರೆ. ಅಪೂರ್ವನದ್ದು ತೆರೆಯ ಹಿಂದಿನ ಕೆಲಸವಾದರೆ, ಸಪ್ನಾಳಿಗೆ ಯೊಕಾಸ್ತಳ ಪಾತ್ರ. ಭವಿಷ್ಯದ ಕನಸಿನೊಂದಿಗೆ, ವರ್ತಮಾನವನ್ನು ಆದಷ್ಟು ಸುಂದರವಾಗಿ ಕಳೆಯುವ ಯತ್ನದಲ್ಲಿರುವ ಅಪೂರ್ವನ ಬದುಕಲ್ಲಿ ಆಗಂತುಕನೊಬ್ಬ ಕಾಣಿಸಿಕೊಳ್ಳುತ್ತಾನೆ ಮತ್ತು ಅದರೊಂದಿಗೆ ಆತ ಕಾಲಚಕ್ರದ ವಿಚಿತ್ರ ಲಯದಲ್ಲಿ ಸಿಕ್ಕಿಕೊಳ್ಳುತ್ತಾನೆ. ಮತ್ತು ಈ ತಪ್ಪಿದ ಲಯದಿಂದ ಆತನ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಅಡಿಪಾಯ ಕಳೆದುಕೊಂಡಂತೆ ಕುಸಿಯುತ್ತದೆ. ಕಾಲದ ಈ ಕುಣಿಕೆಯಲ್ಲಿ ಸಿಲುಕಿರುವ ಅಪೂರ್ವನಿಗೆ ಕಾಡುವ ಪ್ರಶ್ನೆಗಳು ಮತ್ತು ಗೊಂದಲಗಳಿಗೆ ಪ್ರೇಕ್ಷಕರಾಗಿ ನಾವು ಕೂಡ ಅವನ ಜೊತೆ ಉತ್ತರ ಹುಡುಕುತ್ತಾ ಹೋಗುತ್ತೇವೆ.

ಚಿತ್ರದ ಆರಂಭ ಸಾಧಾರಣವಾಗಿದೆ. ಮಿಸ್ಟರಿ ಅಂಶಗಳು ಮೊದಲಿಗೇ ಕಾಣಿಸಿಕೊಂಡರೂ, ಕತೆ ರೋಚಕತೆ ಪಡೆದುಕೊಳ್ಳುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ನಾಲ್ಕು ಕಾಲಘಟ್ಟಗಳಲ್ಲಿ ಕತೆ ನಡೆಯುತ್ತದೆ. 1996, 2001, 2021, 2035. ಪಾತ್ರಗಳು ಈ ನಾಲ್ಕು ಕಾಲಘಟ್ಟಗಳ ನಡುವೆ ಸಂಚರಿಸುತ್ತಲೇ ಇರುತ್ತವಾದ್ದರಿಂದ ಎಲ್ಲಾ ಟೈಮ್‌ಲೈನ್‌ಗಳು ಪ್ರೇಕ್ಷಕರಿಗೆ ಸರಿಯಾಗಿ ಗುರುತಿಸಲು ಸಾಧ್ಯವಾಗಬೇಕಾಗುತ್ತದೆ. ಚಿತ್ರದ ಈ ಸವಾಲನ್ನು ಎದುರಿಸಲು, ನಿರ್ದೇಶಕರು ಸರಳ ಮಾರ್ಗ ಹಿಡಿದು, ಇಸವಿಗಳನ್ನು ತೆರೆಯ ಮೇಲೆ ತೋರಿಸುವುದರಿಂದ ಪ್ರೇಕ್ಷಕರಿಗೆ ಕತೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಜೊತೆಗೆ, ಹೆಚ್ಚಿನ ವೈಜ್ಞಾನಿಕ ಅಂಶಗಳನ್ನು ಸೇರಿಸಿಲ್ಲ. ಚಿತ್ರದಲ್ಲಿರುವ ಟೈಮ್‌ ಮಿಷಿನ್ ಕೆಲಸ ಮಾಡುವ ರೀತಿಯನ್ನು ಹೇಳುತ್ತಾರೆಯೇ ಹೊರತು, ಅದರ ಬಗ್ಗೆ ಆಳವಾದ ಮಾಹಿತಿ ನೀಡುವ ತಂಟೆಗೆ ಹೋಗಿಲ್ಲ. ಅತೀ ದೊಡ್ಡ ಮಟ್ಟದಲ್ಲಿ ಸ್ಪೆಷನ್ ಎಫೆಕ್ಟ್ ಅಥವಾ ಸಿಜಿ ಬಳಸದೆ ಎಲ್ಲವನ್ನೂ ಸರಳವಾಗಿ ಇಟ್ಟಿದ್ದಾರೆ. ಹೀಗಾಗಿ, ಹಾಲಿವುಡ್ ಮಟ್ಟಿನ ಸೈಫೈ ಅಥವಾ ಟೈಮ್ ಟ್ರಾವೆಲ್ ಅಂಶಗಳು ಕಾಣದೇ ಇದ್ದರೂ, ಎಲ್ಲವೂ ತೆರೆಯ ಮೇಲೆ ಅಚ್ಚುಕಟ್ಟಾಗಿ ಮೂಡಿಬಂದಿದೆ ಮತ್ತು ಯಾವುದನ್ನೂ ಬೇಕಂತಲೇ ಸಂಕೀರ್ಣವಾಗಿಸುವ ಗಿಮಿಕ್ ಮಾಡಿಲ್ಲ.

ಈಡಿಪಸ್ ಮಾದರಿಯ ಕತೆಯೊಂದನ್ನು, ಟೈಮ್ ಟ್ರಾವೆಲ್ ಸಿನಿಮಾದೊಳಗೆ ಸೇರಿಸುವ ಪರಿಕಲ್ಪನೆಯೇ ವಿಶೇಷವಾಗಿದೆ. ಸಾಹಿತ್ಯ, ಕಲೆ, ರಂಗಭೂಮಿ ಇವೆಲ್ಲದರ ನಂಟಿರುವವರಿಗೆ ಮಾತ್ರ ಬರೆಯಲು ಸಾಧ್ಯವಿರುವ ಚಿತ್ರಕಥೆ ಇದು ಎಂಬುದಕ್ಕೆ ಸಿನಿಮಾದ ಉದ್ದಕ್ಕೂ ಸಾಕ್ಷ್ಯ ದೊರೆಯುತ್ತದೆ. ಯುವ ನಿರ್ದೇಶಕರೊಬ್ಬರ ಓದಿನ ವ್ಯಾಪ್ತಿ ಮತ್ತು ಅದನ್ನು ಅವರು ತಮ್ಮ ಕತೆಯೊಳಗೆ ಅಲ್ಲಲ್ಲಿ ಪ್ರದರ್ಶಿಸಿರುವ ರೀತಿ ಗಮನ ಸೆಳೆಯುತ್ತದೆ. ಚಿತ್ರದ ಆರಂಭದಲ್ಲೇ, ಸಂದರ್ಶನವೊಂದರಲ್ಲಿ ಬರವಣಿಗೆಯ ಬಗ್ಗೆ ಪಿ ಲಂಕೇಶ್ ಹೇಳಿರುವ ಮಾತಿನೊಂದಿಗೆ ಚಿತ್ರ ಆರಂಭವಾಗುತ್ತದೆ. ಚಿತ್ರ ಮುಂದುವರಿದಂತೆ, ಲಂಕೇಶ್ ಕನ್ನಡಕ್ಕೆ ತಂದಿರುವ ಈಡಿಪಸ್ ರೆಕ್ಸ್ ಕತೆ ಸಿನಿಮಾದ ಅತ್ಯಂತ ಪ್ರಮುಖ ಭಾಗವಾಗುತ್ತದೆ. ದೊರೆ ಈಡಿಪಸ್ ನಾಟಕದ ಪಾತ್ರಗಳು ಆಡುವ ಸಂಭಾಷಣೆಗಳು ಚಿತ್ರದ ಕೊನೆಯಾಗುತ್ತಾ ಬಂದಂತೆ ಹೆಚ್ಚು ಅರ್ಥಪೂರ್ಣವಾಗುತ್ತಾ ಹೋಗುತ್ತವೆ.

ಕುವೆಂಪು, ತೇಜಸ್ವಿ, ಚಿತ್ತಾಲ, ಲಂಕೇಶ್, ಭೈರಪ್ಪ ಎಲ್ಲರೂ ಒಂದೊಂದು ಬಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವು ಚಿತ್ರಕಥೆಗೆ ಪೂರಕವಾಗಿದ್ದರೆ (ಪಾತ್ರವೊಂದು ‘ಅನ್ವೇಷಣ’ ಕೃತಿ ಓದುವುದು) ಕೆಲವು ನಿರ್ದೇಶಕರ ವೈಯಕ್ತಿಕ ಒಲವಿನ, ಆಸಕ್ತಿಯ ಕಾರಣಕ್ಕೆ ಕಾಣಿಸಿಕೊಂಡಿವೆ. ಅದೇ ರೀತಿ, ಕರ್ನಾಟಕದ ಎಷ್ಟೋ ಜನಪದ ಕಲೆಗಳು, ಹಾಡುಗಳು ಬರುತ್ತವೆ. ಹಲವಾರು ಸಿನಿಮಾ ಪೋಸ್ಟರ್‌ಗಳು ಕಾಣಿಸಿಕೊಳ್ಳುತ್ತವೆ. ‘ರಂಗನಾಯಕಿ’ ಚಿತ್ರದ ಪೋಸ್ಟರ್‌ ಸಿನಿಮಾದ ಕೊನೆಯಲ್ಲಿ ಬಂದು, ಕತೆಯನ್ನು ಮತ್ತಷ್ಟು ಆಳವಾಗಿಸುತ್ತದೆ. ಟೀ ಶರ್ಟ್ quoteನಿಂದ ಹಿಡಿದು, ಹಿಂಭಾಗದ ಗೋಡೆಯ ಮೇಲಿರುವ ಪೋಸ್ಟರ್‌ಗಳನ್ನೂ ಗಮನಿಸಬೇಕಾದ ಪ್ರೇಕ್ಷಕನಿಗೆ ಇದು ಅತಿಯಾದ ಡೀಟೆಲಿಂಗ್ ಅನಿಸಲೂಬಹುದು. ಇಡೀ ಚಿತ್ರವನ್ನು ಇಂತಹ ಅಂಶಗಳಿಂದ ಅಗತ್ಯಕ್ಕಿಂತ ಹೆಚ್ಚೇ ತುಂಬುವ ಮೂಲಕ, ನಿರ್ದೇಶಕರು ಹೇಳಬೇಕಿರುವುದನ್ನೆಲ್ಲಾ ಒಂದೇ ಚಿತ್ರದಲ್ಲಿ ಹೇಳಿಬಿಡುವ ಆತುರ ಪ್ರದರ್ಶಿಸಿದಂತೆಯೂ ಕಾಣಬಹುದು. ಆದರೂ, ಅವುಗಳು ಕಾಣಿಸಿಕೊಂಡಾಗ, ನಾವು ಅವುಗಳನ್ನು ಗುರುತಿಸಿದಾಗ ಒಂದು ಕ್ಷಣ ಮನಸ್ಸು ಖುಷಿ ಪಡುವುದಂತೂ ನಿಜ.

ದೀಕ್ಷಿತ್ ಶೆಟ್ಟಿ ಚೆನ್ನಾಗಿ ನಟಿಸಿದ್ದಾರೆ. ಚೈತ್ರಾ ಆಚಾರ್ ಈ ಚಿತ್ರದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಅವರಿಗೆ ಸಿಗುತ್ತಿರುವ ಅಥವಾ ಅವರು ಆರಿಸಿಕೊಳ್ಳುತ್ತಿರುವ ಪಾತ್ರಗಳು ಅವರ ಅಭಿನಯ ಸಾಮರ್ಥ್ಯವನ್ನು ಮತ್ತೆ ಮತ್ತೆ ನಿರೂಪಿಸುವಂತಿರುವುದು ಖುಷಿಯ ವಿಚಾರ. ಗೋಪಾಲಕೃಷ್ಣ ದೇಶಪಾಂಡೆ ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ವಜ್ರಧೀರ ಜೈನ್ ಮತ್ತು ಮಂದಾರ ಬಟ್ಟಲಹಳ್ಳಿ ಗಮನಸೆಳೆಯುತ್ತಾರೆ. ಚಿತ್ರದ ಸಂಗೀತ ವಿಶೇಷವಾಗಿದೆ. ಜನಪದ ಸಂಗೀತ ಮತ್ತು ಹಾಡುಗಳನ್ನು ಬಳಸಿಕೊಂಡಿರುವ ರೀತಿ, ಜೊತೆಗೆ ಆಧುನಿಕ ಸಂಗೀತವನ್ನು ಅಳವಡಿಸಿಕೊಂಡಿರುವ ರೀತಿ ಚಿತ್ರವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಅವಿನಾಶ್ ಶಾಸ್ತ್ರಿ ಸಿನಿಮಾಟೋಗ್ರಫಿ ಮತ್ತು ಸಂಜೀವ್ ಜಾಗೀರ್‌ದಾರ್ ಎಡಿಟಿಂಗ್ ಚಿತ್ರಕ್ಕೆ ಜೀವ ತುಂಬಿದೆ.

ಚಿತ್ರದಲ್ಲಿ ರೂಮಿಯನ್ನು quote ಮಾಡಿ ಪಾತ್ರವೊಂದು ಹೇಳುವಂತೆ ‘ಬೆಳಕು ನಮ್ಮೊಳಗೆ ಪ್ರವೇಶಿಸುವುದು ಗಾಯದ ಮೂಲಕ’. ಈ ಚಿತ್ರದ ಮೂಲಕ ಇಡೀ ತಂಡ ಬೆಳಕಿನ ನಿರೀಕ್ಷೆಯಲ್ಲಿ ಗಾಯಗೊಳ್ಳುವ ಸಾಹಸಕ್ಕೆ ಕೈಹಾಕಿದೆ. ಏಕೆಂದರೆ, ಟೈಮ್ ಲೂಪ್, ಗ್ರಾಂಡ್‌ಫಾದರ್ ಪ್ಯಾರಡಾಕ್ಸ್ ಇವೆಲ್ಲಾ ಕನ್ನಡ ಸಿನಿಮಾರಂಗಕ್ಕೆ ಹೊಸತು. ಹೀಗಿರುವಾಗ, ಟೈಮ್ ಟ್ರಾವೆಲ್ ಮೂಲಕ, ಈಡಿಪಸ್‌ನಂತಹ ಅಸಾಧಾರಣವಾದ ಕತೆಯ ಎಳೆಯೊಂದನ್ನು ಪುನರ್ ವಿಮರ್ಶಿಸಲು ಸಾಕಷ್ಟು ಧೈರ್ಯ ಅಥವಾ ಭಂಡ ದೈರ್ಯವೇ ಬೇಕು. ಮತ್ತು ಇವೆಲ್ಲವನ್ನೂ ಒಂದು ಭಾವನಾತ್ಮಕ ಚೌಕಟ್ಟಿನೊಳಗೆ ಕೂಡಿಸಲು ಜಾಣ್ಮೆ ಬೇಕು. ಮತ್ತು ಇಷ್ಟನ್ನು ಸಣ್ಣ ಬಜೆಟ್‌ನಲ್ಲಿ ಮಾಡಿ ತೋರಿಸಲು ಬುದ್ದಿವಂತಿಕೆ ಬೇಕು. ಈ ಚಿತ್ರವನ್ನು ಆರಂಭಿಸಿದಾಗ ನಿರ್ದೇಶಕರಿಗೆ ಕೇವಲ 22 ವರ್ಷ ಎಂಬ ಸಂಗತಿ, ಕನ್ನಡಕ್ಕೆ ಒಬ್ಬ ಪ್ರತಿಭಾವಂತ ಯುವ ನಿರ್ದೇಶಕ ಸಿಕ್ಕ ಭರವಸೆಯನ್ನು ಮೂಡಿಸುತ್ತದೆ.

LEAVE A REPLY

Connect with

Please enter your comment!
Please enter your name here