ತಂಡದ ಪ್ರಾಮಾಣಿಕ ಪರಿಶ್ರಮ ಎಲ್ಲ ವಿಭಾಗಗಳಲ್ಲಿಯೂ ಎದ್ದು ಕಾಣುತ್ತದೆ. ನ್ಯಾಯಾಲಯದ ಸನ್ನಿವೇಶಗಳು ವಾಸ್ತವ ಮತ್ತು ಕಲ್ಪನೆ ಎರಡರ ನಡುವಿನ ಸೇತುವೆಯಂತೆ ಕೆಲಸ ಮಾಡಿದ್ದು ವೀಕ್ಷಕರಿಗೆ ಹೊಸ ರೀತಿಯ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ. ಸರಣಿಯ ಲವಲವಿಕೆ ಹೆಚ್ಚಿಸುವಲ್ಲಿ ಸಂಭಾಷಣೆ ಬರೆದಿರುವವರ ಪಾತ್ರ ಮಹತ್ವದ್ದು. ‘ಮಾಮ್ಲಾ ಲೀಗಲ್ ಹೈ’ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ಮಾಮ್ಲಾ ಲೀಗಲ್ ಹೈ’ ಪತ್ಪರ್ ಗಂಜ್ ಜಿಲ್ಲಾ ನ್ಯಾಯಾಲಯದಲ್ಲಿ ಚಿತ್ರಿತವಾದ ಒಂದು ವೃತ್ತಿಪರ ಸ್ಥಳದಲ್ಲಿ ನಡೆಯುವ ಹಾಸ್ಯ ಕಥಾನಕ. ಚಿತ್ರವಿಚಿತ್ರ ಕೇಸುಗಳ ಜಾಡು ಹಿಡಿದು ಸಾಗುವ ವಿಡಂಬನಾತ್ಮಕ ವಕೀಲರುಗಳ ಸುತ್ತ ಹೆಣೆದ ತಮಾಷೆಯಾದ ಕಾನೂನು ಆಧಾರಿತ ಸರಣಿ. ಇದುವರೆಗೂ ಬಂದಿರುವ ಎಷ್ಟೋ ಸರಣಿಗಳ ನಡುವೆ ವಿಭಿನ್ನವಾಗಿ ನಿಲ್ಲುವ ‘ಮಾಮ್ಲಾ ಲೀಗಲ್ ಹೈ’ ಸರಣಿಯ ಎದ್ದು ಕಾಣುವ ಅಂಶ ಎಂದರೆ ತಮಾಷೆ ಮತ್ತು ವಿಡಂಬನೆ. ಇತ್ತೀಚಿನ ದಿನಗಳಲ್ಲಿ ಬಂದ ಸರಣಿಗಳಿಗಿಂತ ವಿಭಿನ್ನ ಕಥಾಹಂದರ ಮತ್ತು ನಿರೂಪಣೆ ಇದರ ಹೈಲೈಟ್. ಪತ್ಪರ್ ಗಂಜ್ ಜಿಲ್ಲಾ ನ್ಯಾಯಾಲಯದ ವಿಚಿತ್ರ, ವಿಡಂಬನಾ ಪ್ರಪಂಚಕ್ಕೆ ಮೊದಲ ಸಂಚಿಕೆಯಿಂದಲೇ ವೀಕ್ಷಕರನ್ನು ಎಳೆದು ಒಯ್ಯುವ ಸರಣಿ ‘ಮಾಮ್ಲಾ ಲೀಗಲ್ ಹೈ’.

ಇಲ್ಲಿ ಮೂವತ್ತು ನಿಮಿಷಗಳ ಎಂಟು ಸಂಚಿಕೆಗಳಿವೆ. ನಿಜ ಜೀವನದ ಕೆಲವು ಘಟನೆಗಳನ್ನು ಆಧರಿಸಿ ಹಾಸ್ಯದ ಲೇಪನ ಹಚ್ಚಿ ಕೆಲವು ಚಿತ್ರವಿಚಿತ್ರ ಕೇಸುಗಳನ್ನು ಇಲ್ಲಿ ತೆರೆದಿಡಲಾಗಿದೆ. ಮನರಂಜನೆಯ ಜೊತೆಗೆ ನೈಜತೆಯ ಚಿತ್ರಣವೂ ಇರುವುದು ವಿಶಿಷ್ಟ. ಒಂದು ಸಂಚಿಕೆಯಲ್ಲಂತೂ ಅಶ್ಲೀಲ ಭಾಷೆಯ ಬಳಕೆಗೆ ಒಂದು ಗಿಣಿಯನ್ನು ನ್ಯಾಯಾಲಯದಲ್ಲಿ ವಿಚಾರಣೆ ಮಾಡುವ ಸನ್ನಿವೇಶ ತೋರಿಸಲಾಗಿದೆ. ಬಹಳ ತಮಾಷೆಯಾಗಿಯೂ, ಆಸಕ್ತಿಕರವಾಗಿಯೂ ಇಂತಹ ಕೆಲವು ‘ಡಾರ್ಕ್ ಹ್ಯೂಮರ್’ ಅನ್ನಿಸುವಂತಹ ಪ್ರಯತ್ನಗಳನ್ನು ಇಲ್ಲಿ ಮಾಡಲಾಗಿದ್ದು ವೀಕ್ಷಕರಿಗೆ ಬಹಳ ಮಜವಾದ ಅನುಭವವನ್ನು ನೀಡುವಲ್ಲಿ ಸರಣಿ ಯಶಸ್ವಿಯಾಗಿದೆ.

ವಿ ಡಿ ತ್ಯಾಗಿ ವಕೀಲನ ಪಾತ್ರದೊಂದಿಗೆ ಸರಣಿ ತೆರೆದುಕೊಳ್ಳುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನೇ ಮುಂದಿಟ್ಟುಕೊಂಡು ವ್ಯಾಜ್ಯಗಳನ್ನು ಗೆಲ್ಲಲು ನೋಡುವ ಚಾಲಾಕಿ ವಕೀಲನ ಪಾತ್ರದಲ್ಲಿ ರವಿಕಿಶನ್ ಗಮನ ಸೆಳೆಯುತ್ತಾರೆ. ಬಾರ್ ಅಸೋಸಿಯೆಷನ್ ಅಧ್ಯಕ್ಷನಾಗುವ ಕನಸು ಹೊತ್ತ ತ್ಯಾಗಿ, ಪತ್ಪರ್ ಗಂಜ್ ಅಸೋಸಿಯೇಷನ್‌ನ ಅಘೋಷಿತ ಅಧ್ಯಕ್ಷನ ಸ್ಥಾನವನ್ನು ವಹಿಸಿಕೊಂಡು ಬಿಟ್ಟಿರುತ್ತಾನೆ. ಆತನ ಜೊತೆಗೆ ಬರುವವಳೇ ಅನನ್ಯ ಶ್ರಾಫ್. ಈಕೆ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ವಕೀಲಿ ಪದವಿ ಮುಗಿಸಿ ಶೋಷಿತರಿಗೆ ಸೇವೆ ಮಾಡಬೇಕು, ನ್ಯಾಯ ಒದಗಿಸಬೇಕು ಎಂಬ ಬೃಹತ್ ಕನಸಿನೊಂದಿಗೆ ಭಾರತಕ್ಕೆ ಬರುತ್ತಾಳೆ. ಆದರೆ ಪತ್ಪರ್ ಗಂಜ್ ತನ್ನ ಕಹಿ ವಾಸ್ತವದ ಚಿತ್ರಣವನ್ನು ಅವಳಿಗೆ ನೀಡಿ ಅವಳ ಭ್ರಮೆಗಳನ್ನು ದೂರ ಮಾಡಿಬಿಡುತ್ತದೆ. ನೈಲಾ ಗ್ರೇವಾಲ್, ಅನನ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಸ್ವಂತದ ವ್ಯಾಜ್ಯ ಇನ್ನೂ ನಿಭಾಯಿಸದಿದ್ದರೂ ತನ್ನದೇ ಆದ ಸ್ವಂತ ಕಾನೂನು ಕಚೇರಿಯನ್ನು ಶುರು ಮಾಡುವ ಕನಸು ಹೊತ್ತ, ದೀದಿ ಎಂದು ಕರೆಯಲ್ಪಡುವ ಸುಜಾತಾ ಪಾತ್ರದಲ್ಲಿ ನಿಧಿ ಬಿಷ್ಟ್ ಕಾಣಿಸಿಕೊಂಡಿದ್ದಾರೆ. ನ್ಯಾಯಾಲಯದ ಮ್ಯಾನೇಜರ್ ಆದ ವಿಶ್ವಾಸ್ ಪಾಂಡೆ ಪಾತ್ರದಲ್ಲಿ ಅನಂತ್ ಜೋಶಿ ಕಾಣಿಸಿಕೊಂಡಿದ್ದಾರೆ.

ಸೌರಭ್ ಖನ್ನಾ ಮತ್ತು ಕುನಾಲ್ ಬರೆದಿರುವ ಈ ಸರಣಿಯನ್ನು ರಾಹುಲ್ ಪಾಂಡೆ ನಿರ್ದೇಶನ ಮಾಡಿದ್ದು ಸರಣಿ ತನ್ನ ಹಾಸ್ಯಭರಿತ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಈ ಸರಣಿಯ ಕೇಂದ್ರ ವಿಷಯ ಬಹಳ ವಿವರಗಳಿಂದ ಕೂಡಿದ್ದು ನೈಜ ಘಟನೆಗಳನ್ನು ಉದಾಹರಣೆಯಾಗಿ ಇಟ್ಟುಕೊಂಡು ಸಂಚಿಕೆಗಳನ್ನು ಹೆಣೆದಿರುವುದರಿಂದ ಬಹಳ ಕುತೂಹಲವನ್ನು ಹುಟ್ಟಿಸುತ್ತಾ ಆಸಕ್ತಿಕರವಾಗಿ ಸಾಗುತ್ತದೆ. ಆದರೆ ತ್ಯಾಗಿಯ ವೈಯಕ್ತಿಕ ಬದುಕಿನ ಚಿತ್ರಣದಲ್ಲಿ ಕಥೆ ಸ್ವಲ್ಪ ಎಳೆದಂತೆ ಭಾಸವಾಗಿ ನೋಡುಗರಲ್ಲಿ ತುಸು ಬೇಸರ ಹುಟ್ಟಿಸುತ್ತದೆ. ಅತಿಯಾದ ನಾಟಕೀಯತೆ ಅಲ್ಲಲ್ಲಿ ಸರಣಿಯ ಓಘಕ್ಕೆ ಸ್ವಲ್ಪ ಪೆಟ್ಟುಕೊಟ್ಟಿರುವುದೂ ಹೌದು.

ತ್ಯಾಗಿ ಪಾತ್ರದಲ್ಲಿ ರವಿ ಕಿಶನ್ ಅಭಿನಯ ಅಮೋಘವಾಗಿದೆ. ಅವರ ಪಾತ್ರದಲ್ಲಿನ ಉದ್ದೇಶ, ನ್ಯಾಯ ವ್ಯವಸ್ಥೆಯ ಲೋಪದೋಷಗಳನ್ನು ಅರಿತು ವ್ಯಾಜ್ಯಗಳನ್ನು ತನಗೆ ಬೇಕಾದ ರೀತಿಯಲ್ಲಿ ತಿರುಗಿಸಿಕೊಳ್ಳಬಲ್ಲ ಚಾತುರ್ಯ, ಯಾವುದೇ ರೀತಿಯ ಸನ್ನಿವೇಶವನ್ನು ನಿಭಾಯಿಸಬಲ್ಲ ಚಾಕಾಚಕ್ಯತೆ ಎಲ್ಲವೂ ವೀಕ್ಷಕರಿಗೆ ಬಹಳ ಮನೋರಂಜನೆ ನೀಡುವಲ್ಲಿ ಸಫಲವಾಗಿವೆ. ಮಿಕ್ಕ ಪಾತ್ರಗಳಲ್ಲಿ ಯಶಪಾಲ್, ನೈನಾ, ಅನಂತ್ ಮತ್ತು ನಿಧಿ ಕೂಡ ಬಹಳ ಪೂರಕವಾದ ಅಭಿನಯ ನೀಡಿ ಮನಸ್ಸು ಗೆಲ್ಲುತ್ತಾರೆ. ಸರಣಿಯ ಉದ್ದಕ್ಕೂ ಕೇಳಿಬರುವ ಒನ್ ಲೈನರ್ಸ್ ಮತ್ತು ಹಾಸ್ಯಭರಿತ ಸಂಭಾಷಣೆ ಸರಣಿಯ ಲವಲವಿಕೆಯನ್ನು ಕಾದುಕೊಳ್ಳುವಲ್ಲಿ ಸಹಾಯ ಮಾಡಿವೆ. ಎಲ್ಲಿಯೂ ಒಂದು ಕ್ಷಣಕ್ಕೂ ಬೋರ್ ಆಗದ ಹಾಗೆ ಸರಣಿ ನೋಡಿಸಿಕೊಳ್ಳುತ್ತಾ ಹೋಗುತ್ತದೆ.

ಒಟ್ಟಾರೆಯಾಗಿ ತಮಾಷೆ, ವಿಡಂಬನೆ ಮತ್ತು ವಿಭಿನ್ನ ಕಥಾಹಂದರ ಹೊಂದಿರುವ ಈ ಸರಣಿ ನೋಡುಗರಿಗೆ ತಾಜಾ ಅನುಭವ ನೀಡುವಲ್ಲಿ ಯಾವ ಅನುಮಾನವೂ ಇಲ್ಲ. ಇಡೀ ತಂಡದ ಪ್ರಾಮಾಣಿಕ ಪರಿಶ್ರಮ ಎಲ್ಲ ವಿಭಾಗಗಳಲ್ಲಿಯೂ ಎದ್ದು ಕಾಣುತ್ತದೆ. ನ್ಯಾಯಾಲಯದ ಸನ್ನಿವೇಶಗಳು ವಾಸ್ತವ ಮತ್ತು ಕಲ್ಪನೆ ಎರಡರ ನಡುವಿನ ಸೇತುವೆಯಂತೆ ಕೆಲಸ ಮಾಡಿದ್ದು ವೀಕ್ಷಕರಿಗೆ ಹೊಸ ರೀತಿಯ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ.
ಸರಣಿಯ ಹಿನ್ನೆಲೆ ಸಂಗೀತ ಕೂಡ ಪೂರಕವಾಗಿ ಬಂದಿದೆ. ಸಂಭಾಷಣೆ ಇದರ ಮುಖ್ಯ ಅಂಶ. ಇಡೀ ಸರಣಿಯ ಲವಲವಿಕೆಯನ್ನು ಹೆಚ್ಚಿಸುವಲ್ಲಿ ಸಂಭಾಷಣೆ ಬರೆದಿರುವವರ ಪಾತ್ರ ಮಹತ್ವವಾಗಿದೆ. ನಿರ್ದೇಶನ ಕೂಡ ಚುರುಕಾಗಿದ್ದು ನಿರ್ಮಾಣ ತಂಡ ನೋಡುಗರಲ್ಲಿ ಭರವಸೆಯನ್ನು ಹೆಚ್ಚಿಸಿದೆ. ಈ ತಂಡದ ಮುಂಬರುವ ಸರಣಿಗಳಿಗೆ ಕಾತುರದಿಂದ ಎದುರು ನೋಡುವಂತೆ ಮಾಡಿದೆ. ‘ಮಾಮ್ಲಾ ಲೀಗಲ್ ಹೈ’ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here