ತೀರಾ ತಲೆಕೆಡಿಸಿಕೊಳ್ಳದೆ ನಕ್ಕು ಹಗುರಾಗಬೇಕು ಅನಿಸಿದರೆ ಮೋಸವಿಲ್ಲದ ಮೋಹನ್ ಲಾಲ್ ಚಿತ್ರ ‘ಬ್ರೋ ಡ್ಯಾಡಿ’. ನೇರವಾಗಿ ಡಿಸ್ನಿಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತೆರೆಕಂಡ ಈ ಸಿನಿಮಾ ವಾರಾಂತ್ಯಕ್ಕೆ ಉತ್ತಮ ಮನರಂಜನೆ.
ಮೋಹಕ ನಟ ಮೋಹನ್ ಲಾಲ್ ಸಂಕ್ರಾಂತಿಯ ಸಕ್ಕರೆ ಪಾಕದಂತೆ, ಯಾವುದೇ ಅಚ್ಚಿಗೆ ಹಾಕಿದರೂ ಅದೇ ಸಿಹಿ, ಅದೇ ಸ್ವಾದ. ಪೃಥ್ವಿರಾಜ್ ನಟಿಸಿ, ನಿರ್ದೇಶಿಸಿರುವ ‘ಬ್ರೋ ಡ್ಯಾಡಿ’ ಇಬ್ಬರು ದೊಡ್ಡ ನಟರ ಕಮರ್ಷಿಯಲ್ ಪ್ಯಾಕೇಜ್. ಕಾಮಿಡಿ ಚಿತ್ರಗಳಲ್ಲಿ ದಶಕಗಳಿಂದ ಪ್ರಯೋಗಿಸಿಕೊಂಡು ಬಂದ ಫಾರ್ಮುಲಾವನ್ನೇ ಬಳಸಲಾಗಿದ್ದರೂ ಇಲ್ಲಿ ಮೂಲ ಉದ್ದೇಶ ಈಡೇರಿದೆ. ಎರಡು ಗಂಟೆ ನಲುವತ್ತು ನಿಮಿಷಗಳಲ್ಲಿ ಒಂದೂ ಮುಕ್ಕಾಲು ಗಂಟೆ ಚಿಂತೆಯಿಲ್ಲದೆ ನಗಬಹುದು.
ಜಾನ್ ಕಟ್ಟಾಡಿ (ಮೋಹನ್ ಲಾಲ್) ಮತ್ತು ಅನ್ನಮ್ಮಾ (ಮೀನಾ) ಯೌವ್ವನದ ಆರಂಭದ ದಿನಗಳಲ್ಲೇ ಮದುವೆಯಾದ ಸುಖೀ ದಂಪತಿ. ಏಕಮೇವ ಪುತ್ರ ಈಶೋ (ಪೃಥ್ವಿರಾಜ್) ಮದುವೆ ಪ್ರಸ್ತಾಪ ಬಂದಾಗಲೆಲ್ಲ ಜಾರಿಕೊಂಡು ವೃತ್ತಿ ಬದುಕಿನ ಸಾಧನೆಯಲ್ಲಿ ತಲ್ಲೀನನಾದವ. ಜಾಹೀರಾತು ಉದ್ಯಮದಲ್ಲಿ ಕೆಲಸ ಮಾಡುವ ಈಶೋ ಜಾಹೀರು ಮಾಡದೇ ಗೌಪ್ಯವಾಗಿಟ್ಟಿರುವ ಗುಟ್ಟು ಬೆಂಗಳೂರಿನಲ್ಲಿ ಸಾಗುತ್ತಿರುವ ಲಿವ್ ಇನ್ ರಿಲೇಷನ್‍ಶಿಪ್. ಅವಳ ತಂದೆ ಕುರಿಯನ್ (ಲಾಲು ಅಲೆಕ್ಸ್) ಕಟ್ಟಾಡಿಯ ಆಪ್ತ ಗೆಳೆಯ. ಹಾಗಾಗಿ ಊರಿಗೆ ಬಂದಾಗ ಇಬ್ಬರೂ ಪರಸ್ಪರರ ಬಗ್ಗೆ ಗೊತ್ತೇ ಇರದಂತೆ ನಾಟಕವಾಡುತ್ತ ಮೂರ್ನಾಲ್ಕು ವರ್ಷದಿಂದ ಸಂಭಾಳಿಸುತ್ತಾ ಬಂದಿದ್ದಾರೆ. ಕಮಿಟ್ಮೆಂಟುಗಳಿಲ್ಲದ ಸಂಬಂಧದಲ್ಲಿ ಇಬ್ಬರಿಗೂ ಕಮಿಟ್ ಆಗಲೇಬೇಕಾದ ಅನಿವಾರ್ಯ ಬರುವುದು ಅನಿರೀಕ್ಷಿತವಾಗಿ ಅನ್ನಾ (ಕಲ್ಯಾಣಿ ಪ್ರಿಯದರ್ಶನ್) ಬಸಿರಾದಾಗ.
ಆಕಸ್ಮಿಕ ಗರ್ಭವೂ ಗರ್ಭಪಾತಕ್ಕೆ ಬಲಿಯಾಗಬಾರದು ಎಂಬ ಸದುದ್ದೇಶದ ಸಂದೇಶವನ್ನು ಮೂಲ ನೆಲೆಯಲ್ಲಿಟ್ಟು ಚಿತ್ರಕತೆ ಬರೆದಿದ್ದಾರೆ ಶ್ರೀಜಿತ್ ಹಾಗೂ ಬಿಬಿನ್ ಮಲೈಕಳ್. ಒಂದೆಡೆ ಮದುವೆಯಾಗುವ ಮೊದಲಿನ ಬಸಿರಿನ ಸುತ್ತ ಪ್ರಶ್ನೆಗಳಿದ್ದರೆ ಇನ್ನೊಂದೆಡೆ ಮದುವೆಯಾಗಿ ಇಪ್ಪತ್ತೈದು ವರ್ಷಗಳ ನಂತರ ಬಸಿರಾದಾಗ ಸಮಾಜ ಅದನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಸವಾಲು. ಈಶೋಗೆ ತನ್ನ ಪ್ರೇಯಸಿ ಗರ್ಭಿಣಿ ಎಂಬುದನ್ನು ಅಣ್ಣನಂತಿರುವ ಅಪ್ಪನಿಗೆ ತಿಳಿಸಲು ತೊಳಲಾಟ. ಆದರೆ ತಮ್ಮನಂತೆ ಬೆಳೆಸಿರುವ ಮಗನಿಗೆ ‘ನಿನ್ನಮ್ಮ ಗರ್ಭಿಣಿ’ ಎಂದು ತಿಳಿಸಲು ಕಟ್ಟಾಡಿಗೆ ಸಂಕೋಚವಾದರೂ ಕಷ್ಟವಾಗದು. ವಿಷಯ ತಿಳಿಸುವ ಮೋಹನ್ ಲಾಲ್, ವಿಚಾರ ಹೇಳಲು ಬಂದು ಕೇಳುವ ಸಂಕಷ್ಟದಲ್ಲಿ ಬಿದ್ದ ಪೃಥ್ವಿರಾಜ್, ಇಬ್ಬರದೂ ಅತಿರೇಕವಿಲ್ಲದ ಲಘು ಹಾಸ್ಯದ ಅಭಿನಯ.
ಇಷ್ಟರ ಸುತ್ತವೇ ನಡೆಯುವ ಕತೆ-ಚಿತ್ರಕತೆಯಲ್ಲಿ ಯಾವುದೇ ಅನಿರೀಕ್ಷಿತ ತಿರುವುಗಳಿಲ್ಲ. ಅದು ಬೇಕಾಗಿಯೂ ಇಲ್ಲ, ಕಾಮಿಡಿ ಚಿತ್ರಕತೆಯಲ್ಲಿ ಪಾತ್ರಗಳ ಪಾಲಿಗಷ್ಟೇ ತಿರುವುಗಳಿದ್ದಾಗ ನೋಡುಗನಿಗೆ ಮನರಂಜನೆ. ಈ ಸಿದ್ಧ ಸೂತ್ರವನ್ನು ಕೊನೆಯವರೆಗೂ ಪಾಲಿಸಿದ್ದಿದ್ದರೆ ಚಿತ್ರದಲ್ಲಿ ಇನ್ನಷ್ಟು ಬಿಗಿ ಇರುತ್ತಿತ್ತು. ಆದರೆ ತನ್ನ ಅಮ್ಮ ಗರ್ಭಿಣಿ ಎಂಬ ವಾಸ್ತವವನ್ನು ಒಪ್ಪಿಕೊಂಡಾಗ, ತನ್ನ ಮಗನ ಗರ್ಭಸಾಧನೆಯನ್ನು ತಂದೆಯೂ ಒಪ್ಪಿ ಮುನ್ನಡೆವಾಗ ಪಾತ್ರಗಳ ನಡುವೆ ಸಂಘರ್ಷಗಳೇ ಇಲ್ಲ. ಹಾಗಾಗಿ ಪ್ರೇಯಸಿಯ ತಂದೆ ಕುರಿಯನ್ ಪಾತ್ರಕ್ಕೆ ಮದುವೆಗೆ ಅಡ್ಡ ನಿಲ್ಲಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಇದೂ ಚಿತ್ರಕತೆಗೆ ಹೊಂದಿಕೊಂಡೇ ಹೋಗುತ್ತಿತ್ತು, ಆದರೆ ಬಹುತೇಕ ಅದೇ ಹೊತ್ತಿಗೆ ಬರುವ ಹ್ಯಾಪಿ ಪಿಂಟೋ ಪಾತ್ರವೂ ಸೇರಿದಾಗ ಕೊನೆಕೊನೆಗೆ ಸಿನಿಮಾ ಕೊಂಚ ಹಿಡಿತ ತಪ್ಪುತ್ತದೆ. ಚಿತ್ರಕತೆಗೆ ಹೊಂದಿಕೆಯಾಗದ ಟ್ರ್ಯಾಕ್ ಬಂದಾಗ ಶೌಬಿನ್‌ನಂಥ ಅತ್ಯುತ್ತಮ ನಟರೂ ಕಿರಿಕಿರಿ ಉಂಟು ಮಾಡುತ್ತಾರೆ ಎಂಬುದಕ್ಕೆ ‘ಬ್ರೋ ಡ್ಯಾಡಿ’ ಅತ್ಯುತ್ತಮ ಉದಾಹರಣೆ.
ನಾಯಕನನ್ನು ಮೊದಲ ಬಾರಿ ತೆರೆಯ ಮೇಲೆ ತೋರಿಸುವಾಗ ಅದಕ್ಕೊಂದು ಕೃತಕ ಸನ್ನಿವೇಶ, ಕ್ಯಾಮರಾ ಫ್ರೇಮು ನಿಧಾನವಾಗಿ ಕಾಲಿನಿಂದ ಆರಂಭಿಸಿ ಮುಖಕ್ಕೆ ಬಂದು ನಿಲ್ಲುವ ಸಿದ್ಧ ಸೂತ್ರದಲ್ಲಿ ಪೃಥ್ವಿರಾಜ್ ಪಾತ್ರ ತೆರೆದುಕೊಳ್ಳುತ್ತದೆ. ಮೋಹನ್ ಲಾಲ್ ಪರಿಚಯಕ್ಕೆ ಅಂಥ ಸ್ಲೋ ಮೋಶನ್ ದೃಶ್ಯವಿಲ್ಲ ಎಂಬುದು ದಿಗ್ಗಜ ನಟರ ಫ್ಯಾನುಗಳ ಕೈಗೆ ಕೋಲು ಕೊಟ್ಟಂತಿದೆ. ನೇರ ಒಟಿಟಿಯಲ್ಲೇ ಬಿಡುಗಡೆಯಾದ ಚಿತ್ರಕ್ಕೂ ಇಂಥದ್ದು ಬೇಕಿತ್ತಾ ಎಂಬ ಪ್ರಶ್ನೆ ಅಪ್ರಸ್ತುತ. ಏಕೆಂದರೆ ದಶಕಗಳಿಂದ ಉಜ್ಜಾಡಿ ಬಿಟ್ಟಿರುವ ಸೂತ್ರಗಳನ್ನೇ ಹಲವಾರು ಕಡೆ ಬಳಸಲಾಗಿದೆ. ವಿಮರ್ಶೆ ಮಾಡುವಾಗ ಇವು ಕೊರತೆಯಂತೆ ಕಂಡರೂ ಸಿನಿಮಾ ನೋಡುವ ಆ ಹೊತ್ತಿನಲ್ಲಿ ನಗಿಸಲು ಯಶಸ್ವಿಯಾಗಿದೆ.
ಪೃಥ್ವಿರಾಜ್ ಒಂದ್ಹತ್ತು ವರ್ಷ ಸಣ್ಣವನಾಗಿ ಕಾಣಲು ಒಂದಷ್ಟು ತೂಕ ಇಳಿಸಿದ್ದೂ ಅಲ್ಲದೆ ಜುಟ್ಟು ಬಿಟ್ಟಿದ್ದಾರೆ. ಅಷ್ಟರ ಮೇಲೂ ಈತ ಮೋಹನ್ ಲಾಲ್ ಮಗನಲ್ಲ ಎಂದು ಪ್ರೇಕ್ಷಕರಿಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ‘ನೀನು ಹುಟ್ಟುವಾಗ ನನಗಿನ್ನೂ 24’ ಎಂಬ ಡೈಲಾಗನ್ನು ಮೋಹನ್ ಲಾಲ್ ಪಾತ್ರ ಒಂದೆರಡು ಸಲ ಹೇಳುತ್ತದೆ. ಅಷ್ಟರ ಮೇಲೆ ಟೈಟಲ್ ಕಾರ್ಡಲ್ಲೂ ಬಾಲಮಂಗಳ ಚಿತ್ರಕಥೆ ರೂಪದಲ್ಲಿ ಬರುವ ಕತೆಯಲ್ಲಿ ಸಣ್ಣ ವಯಸ್ಸಿಗೇ ಮದುವೆ ಮಾಡಿಸಿದ್ದಾರೆ ಎಂಬ ವಿಚಾರವನ್ನು ಪಾತ್ರಗಳು ಮಾತಾಡಿಕೊಳ್ಳುವುದಿದೆ. ಅದೇ ವೇಳೆಗೆ ಬರುವ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಧ್ವನಿಯಲ್ಲಿರುವ ಹಾಡು ಆ ಚಿತ್ರಕತೆಯನ್ನು ನೋಡಿಸುತ್ತದೆ. ನಂತರವೂ ಸಾಧ್ಯವಾದಷ್ಟೂ ಕತೆಯ ಜತೆಗೇ ಸಾಗುವ ಮಧುರ ಹಾಡುಗಳು ಚಿತ್ರಕತೆಯ ಓಘಕ್ಕೆ ಧಕ್ಕೆ ಉಂಟುಮಾಡುವಂತಿಲ್ಲ, ಕೊಂಚ ವಿರಾಮ ಕೊಡುತ್ತದೆ.
ಕೊಂಕಣ ಕಡಲಿನಲ್ಲಿ ಮಂಗಳೂರಿನಿಂದ ಗುರುವಾಯೂರುವರೆಗೆ ಹೋದರೂ ಸಿನಿಮಾ ಮಾಡಲು ಚೆಂದವೆನಿಸುವ ಒಂದೇ ಒಂದು ತಾಣ ಕಾಣ ಸಿಗುವುದಿಲ್ಲ. ಹಾಗಿದ್ದೂ ಮಲಯಾಳ ಸಿನಿಮಾಗಳಲ್ಲಿ ಅದ್ಹೇಗೆ ದೃಶ್ಯಗಳನ್ನು ಸುಂದರವಾಗಿ ತೋರಿಸುತ್ತಾರೆ ಎಂಬ ಅನುಮಾನಕ್ಕೆ ಇಲ್ಲಿ ಬರುವ ಬೆಂಗಳೂರಿನ ದೃಶ್ಯಗಳು ಉತ್ತರ. ‘ಬ್ಯಾಂಗಲೂರ್ ಡೇಸ್’ ಮಟ್ಟಿಗೆ ಇಲ್ಲಿ ಬೆಂಗಳೂರು ಕಾಣದಿದ್ದರೂ ನಮ್ಮ ಸಿನಿಮಾಗಳು ತೋರಿಸುವುದಕ್ಕಿಂತ ಚೆಂದದ ಫ್ರೇಮುಗಳು ಛಾಯಾಗ್ರಾಹಕ ಅಭಿನಂದನ್ ರಾಮಾನುಜಮ್ ಕ್ಯಾಮರಾ ಕಣ್ಣಿಗೆ ಸಿಕ್ಕಿವೆ.
ಇದೇ ಚಿತ್ರವನ್ನು ಕನ್ನಡದ ಜನಪ್ರಿಯ ನಟರು ನೋಡಿದರೆ ಖಂಡಿತ ರೀಮೇಕ್ ಮಾಡುತ್ತಾರೆ. ಯಾವ ಸ್ಟಾರ್‌ಗಳು ಯಾವ ಪಾತ್ರ ನಿರ್ವಹಿಸಬಹುದು ಎಂಬುದು ಮಾತ್ರವಲ್ಲ, ಯಾರು ನಿರ್ದೇಶನಕ್ಕಿಳಿಯಬಹುದು ಎಂಬುದನ್ನೂ ಬುದ್ಧಿವಂತ ಪ್ರೇಕ್ಷಕ ‘ಬ್ರೋ ಡ್ಯಾಡಿ’ಯ ಪೋಸ್ಟರ್ ನೋಡಿಯೇ ತೀರ್ಮಾನಿಸಬಹುದು.