ಶಾದ್ ಅಲಿ ನಿರ್ದೇಶನದ ‘ಕಾಲ್‌ ಮೈ ಏಜೆಂಟ್‌ ಬಾಲಿವುಡ್‌’ ಓಟಿಟಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಬಾಲಿವುಡ್ ಒಳಹೊರಗುಗಳನ್ನು ಅನಾವರಣಗೊಳಿಸುವ ಸರಣಿಯಲ್ಲಿ ಬಾಲಿವುಡ್‌ನ ಅನೇಕರು ಕಾಣಿಸಿಕೊಳ್ಳುತ್ತಿದ್ದಾರೆ.

ಜನಪ್ರಿಯ ಫ್ರೆಂಚ್‌ ಸಿರೀಸ್‌ ‘ಡಿಕ್ಸ್ ಪೌರ್ ಸೆಂಟ್‌’ ಇಂಡಿಯನ್ ಅಡಾಪ್ಟೇಷನ್‌ ‘ಕಾಲ್‌ ಮೈ ಏಜೆಂಟ್ ಬಾಲಿವುಡ್‌’ ಸರಣಿ. ನೆಟ್‌ಫ್ಲಿಕ್ಸ್‌’ನಲ್ಲಿ ಇದೇ 29ರಿಂದ ಈ ಸರಣಿ ಸ್ಟ್ರೀಮ್ ಆಗಲಿದ್ದು, ಇದೀಗ ಟ್ರೈಲರ್ ಬಿಡುಗಡೆಯಾಗಿದೆ. ರಜತ್ ಕಪೂರ್‌, ಅಹನಾ ಕುಮ್ರಾ, ಆಯುಷ್ ಮೆಹ್ರಾ ಮತ್ತು ಸೋನಿ ರಾಝ್ಡಾನ್‌ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್‌ ಖ್ಯಾತನಾಮರಾದ ಫರ್ಹಾ ಖಾನ್‌, ಅಲಿ ಫಝಲ್‌, ರಿಚಾ ಛಡ್ಡಾ, ಲಾರಾ ದತ್ತಾ, ಜಾಕಿ ಶ್ರಾಫ್, ದಿಯಾ ಮಿರ್ಝಾ ವಿಶೇಷ ಅತಿಥಿಗಳಾಗಿ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇ‍ಷ. ಟ್ರೈಲರ್‌ನಲ್ಲಿ ಈಗಾಗಲೇ ಅವರ ಅಪಿಯರೆನ್ಸ್ ಕಾಣಿಸಿದೆ. ಹೀಗೆ ಹಲವು ಕಾರಣಗಳಿಂದಾಗಿ ಸರಣಿ ಕುತೂಹಲ ಕೆರಳಿಸಿದ್ದು, ಓಟಿಟಿ ವೀಕ್ಷಕರು ಕಾತರದಿಂದ ಎದುರು ನೋಡುತ್ತಿದ್ದಾರೆ.

ನಾಲ್ವರು ಚತುರ ಟ್ಯಾಲೆಂಟ್ ಏಜೆಂಟ್‌ಗಳ ಮೂಲಕ ಬಾಲಿವುಡ್‌ ಉದ್ಯಮದ ಒಳಹೊರಗುಗಳನ್ನು ಹೇಳುವುದು ಸರಣಿಯ ವಸ್ತು. ದೊಡ್ಡ ಏಜನ್ಸಿಯೊಂದರ ಮಾಲೀಕರು ಆಕಸ್ಮಿಕವಾಗಿ ಅಗಲಿದಾಗ ಏಜನ್ಸಿ ತೊಂದರೆಗೆ ಸಿಲುಕುತ್ತಿದೆ. ಆಗ ಈ ನಾಲ್ವರು ಬುದ್ಧಿವಂತಿಕೆಯಿಂದ ಹೇಗೆ ಏಜನ್ಸಿಯನ್ನು ಕಟ್ಟಿಬೆಳೆಸುತ್ತಾರೆ ಎನ್ನುವ ಕಥಾಹಂದರದೊಂದಿಗೆ ಇಲ್ಲಿ ಕೊಂಚ ತಮಾಷೆ ಮತ್ತು ಭಾವುಕ ಸನ್ನಿವೇಶಗಳು ಅನಾವರಣಗೊಳ್ಳಲಿವೆ. ಅಪ್ಲಾಜ್‌ ಎಂಟರ್‌ಟೇನ್‌ಮೆಂಟ್‌ ಮತ್ತು ಬನಿಜಯ್ ಏಷ್ಯಾ ನಿರ್ಮಾಣದ ಸರಣಿಯನ್ನು ಶಾದ್ ಅಲಿ ನಿರ್ದೇಶಿಸಿದ್ದಾರೆ. ಅಕ್ಟೋಬರ್‌ 29ರಿಂದ ಕಾಲ್‌ ಮೈ ಏಜೆಂಟ್‌ ಬಾಲಿವುಡ್‌’ ನೆಟ್‌ಫ್ಲಿಕ್ಸ್’ನಲ್ಲಿ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here