ನಾಯಿಯ ಜತೆಗೆ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ‘ಚಾರ್ಲಿ’ಯ ಟ್ರೈಲರ್ ಕುತೂಹಲ‌ ಮೂಡಿಸಿದೆ. ಎಷ್ಟೇ ತರಬೇತಿ ಪಡೆದ ನಾಯಿಯನ್ನೇ ಆದರೂ ಕ್ಯಾಮರಾ ಮುಂದಿರಿಸಿ ಚಿತ್ರೀಕರಿಸುವುದು ಸುಲಭವಲ್ಲವಾದ ಕಾರಣ ಶ್ವಾನದ ಸಿನಿಮಾಗಳು ಆಗಾಗ್ಗೆ‌ ಬರುವುದಿಲ್ಲ. ಹಾಗಾಗಿ ‘ಚಾರ್ಲಿ’ಯ ಮೊದಲು ಒಂದು ಸಾಧಾರಣ ಮಟ್ಟಿನ ಶ್ವಾನ ಸಿನಿಮಾ ನೋಡಬೇಕೆನಿಸಿದರೆ Amazon Prime Videoದಲ್ಲಿ ಸ್ಟ್ರೀಂ ಆಗುತ್ತಿರುವ ‘ಓ ಮೈ‌ ಡಾಗ್’ನೋಡಬಹುದು.

ಹಿಟ್ಲರ್ ಎಂಬ ನಾಯಿಗೆ ಆ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಫರ್ನಾಂಡೋ ಅದರ ಮಾಲೀಕ ಎಂಬಲ್ಲಿಗೆ ಮೊದಲ ದೃಶ್ಯದಲ್ಲೇ ಈ ಸಿನಿಮಾದ ವಿಲನ್ ಯಾರು ಎಂಬುದು ಸ್ಪಷ್ಟ. ನಂತರ ಆತ ನಾಯಿಗಳ ಬಗ್ಗೆ ತುಚ್ಛವಾಗಿಯೂ, ತನ್ನ ಬಗ್ಗೆ ಅಹಂಕಾರದಿಂದಲೂ ಮಾತನಾಡುವಾಗ ಅಲ್ಲೊಬ್ಬ ಹಾಲಿವುಡ್ ಶೈಲಿಯ ಖಳನಾಯಕನ ಅನಾವರಣ. ನಾಯಿಗಳ ಜತೆಗೆ ಆತನ ಅಮಾನುಷ ವರ್ತನೆ, ಒಂದು ಮರಿಗೆ ಕಣ್ಣು ಕಾಣುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಕೊಂದು ತೋಟದಲ್ಲಿ ಹೂತು ಹಾಕಿ ಎಂದು ತನ್ನ ಹುಡುಗರಿಗೆ ಆತ ಹೇಳುವಾಗ ಖಳನಾಯಕನ ಪಾತ್ರ ಪಕ್ಕಾ ಸ್ಥಾಪನೆಯಾಗುತ್ತದೆ. ಚಿತ್ರದ ಮುಂದಿನ ಹಂತದಲ್ಲಿ ಖಳನಿಗೆ ಸೀಮಿತ ಅವಕಾಶವಾದ ಕಾರಣ ಚೊಚ್ಚಲ ನಿರ್ದೇಶಕ‌ ಸರೋವ್ ಷಣ್ಮುಗಂ ಆರಂಭದಲ್ಲೇ ಖಳನಾಯಕನಿಗೆ ಭೂಮಿಕೆ ಸಿದ್ಧಪಡಿಸುತ್ತಾರೆ.

ಅಷ್ಟಕ್ಕೂ ‘ಓ ಮೈ ಡಾಗ್’ನ ಒಟ್ಟು ಕತೆಯನ್ನೇ ನೀವು ಮೊದಲ ಹತ್ತು ನಿಮಿಷಗಳಲ್ಲೇ ಊಹಿಸಬಹುದು. ಮಕ್ಕಳಿಗೆ ಮಾಡಬೇಕಾದ ಕತೆಯಾದ್ದರಿಂದ ಒಂದಷ್ಟು ಕ್ಲೀಶೆಗಳನ್ನು ಉದ್ದೇಶಪೂರ್ವಕವಾಗಿ ನಿರ್ದೇಶಕರು ಬಳಸಿಕೊಂಡಂತಿದೆ. ಮಕ್ಕಳಿಗಾಗಿ ಚಿತ್ರಕಥೆಯನ್ನು ಸರಳೀಕರಿಸಿದ್ದಾರೆ. ತಾವು ಮಗುವಾಗಿದ್ದಾಗ ಸಿನಿಮಾಗಳನ್ನು ಹೇಗೆ ನೋಡುತ್ತಿದ್ದರೋ ಹಾಗೆಯೇ‌ ಈಗಿನ ಮಕ್ಕಳೂ ಸಿನಿಮಾ ನೋಡುತ್ತಾರೆ ಅಂದುಕೊಂಡದ್ದು ಅವರ ಬಹುದೊಡ್ಡ ಸೋಲು. ಜೋಕರ್‌ನ ಪ್ಯಾಂಟು ಹಾಕಿದ ಇಬ್ಬರು ಅಂಡೆಪಿರ್ಕಿಗಳು ಮಾಡುವ ಹುಚ್ಚಾಟವನ್ನು ಮೊದಲಾರ್ಧದಲ್ಲಿ ದಂಡಿಯಾಗಿ ಬಳಸಲಾಗಿದೆ. ಪೊಲೀಸ್ ಪಾತ್ರದಲ್ಲಿ ಸಣಕಲ ಇನ್‌ಸ್ಪೆಕ್ಟರ್‌ ಹಾಗೂ ಬುದ್ಧಿಹೀನ ಪಿಟಿ ಮಾಸ್ಟರನ್ನು ಇಟ್ಟದ್ದೂ ನಿರ್ದೇಶಕರ ಬಾಲ್ಯದ ಕಾಲದ ಸಿನಿಮಾಗಳನ್ನು ನೆನಪಿಸುತ್ತದೆ.

ಹೀಗಿದ್ದೂ ಸಿನಿಮಾ, ಮಕ್ಕಳ ಜತೆಗೆ ಕೂತು ನೋಡಲು ಅಡ್ಡಿಯಿಲ್ಲ. ಅರ್ಜುನ್ ಪಾತ್ರದಲ್ಲಿನ ಆರ್ನವ್ ವಿಜಯ್ ಮತ್ತು ಸಿಂಬಾ(ನಾಯಿ) ನಡುವಿನ ಕೆಮೆಸ್ಟ್ರಿ ಕೆಲಸ ಮಾಡಿದೆ. ಆದರೆ ಚಿತ್ರಕಥೆ ಬರೆಯುವಾಗ ಇನ್ನೂ ಸಣ್ಣ ಮಗುವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಂತಿದೆ. ಬಾಲನಟರನ್ನು ಒಳಗೊಂಡ ಹೆಚ್ಚಿನ ಸಿನಿಮಾ ವಯಸ್ಸಿಗೆ ಮೀರಿದ ಸಂಭಾಷಣೆಯ ಟೀಕೆಗೆ ಒಳಗಾದರೆ ಇಲ್ಲಿ ಅರ್ಜುನ್ ಆಡುವ ಮಾತುಗಳು ಅವನಗಿಂತ ಎರಡು ವರ್ಷ ಸಣ್ಣವರದ್ದು.

ಕಣ್ಣು ಕಾಣದ ನಾಯಿಮರಿಯನ್ನು ಅರ್ಜುನ್ ಮನೆಗೆ ತಂದಿಟ್ಟುಕೊಳ್ಳುತ್ತಾನೆ. ಒಂದು ವಾರ ಮನೆಯವರಿಗೂ ಗೊತ್ತಾಗದಂತೆ ನಿಭಾಯಿಸುತ್ತಾನೆ. ಶಾಲೆಗೆ ಹೋಗುವಾಗ ಮರಿಯನ್ನು ತನ್ನ ಸ್ಕೂಲ್ ಬ್ಯಾಗಲ್ಲೇ‌ ಹಾಕಿ ಒಯ್ಯುವುದು, ಅಲ್ಲಿ ಅದು ಇತರೆ ಮಕ್ಕಳಿಗೆ ಗೊತ್ತಾಗಿ ಅವರೆಲ್ಲ ಟೀಚರ್ ಕಣ್ತಪ್ಪಿಸಿ ಅದರ ಜತೆ ಆಡುವ ದೃಶ್ಯಗಳು ಒಂದಷ್ಟು ಹಿಡಿಸುತ್ತದೆ. ಈ ಮಧ್ಯೆ ತಾವು ಕೊಲ್ಲಲು ತಂದು ಕಳೆದುಕೊಂಡ ನಾಯಿಯನ್ನು ಹುಡುಕುವ ಬಫೂನುಗಳು ಆರು ವರ್ಷದವರೆಗಿನ ಮಕ್ಕಳಿಗೆ ಇಷ್ಟವಾದಾರು. ನಮ್ಮ ಸಹನೆ ಮೀರುವ ಹೊತ್ತಿಗೆ ಅವರು ಆ ದೃಶ್ಯದಿಂದ ಮರೆಯಾಗುವುದು ಸಮಾಧಾನಕರ ವಿಚಾರ.

ನಾಯಿ ಬೆಳೆಯುತ್ತಾ ಹೋದಂತೆ ಅದರ ದೃಷ್ಟಿ ಹೀನತೆಗೆ ಚಿಕಿತ್ಸೆ‌ ಕೊಡಿಸುವ ಸಾಹಸಕ್ಕೆ ಅರ್ಜುನ್ ಮತ್ತು ಅವನ ಸಂಗಡಿಗರು ಕೈ ಹಾಕುತ್ತಾರೆ. ಅರ್ಜುನ್‌ನ ತಂದೆ ಅದಾಗಲೇ ಸಾಲದಲ್ಲಿರುವ ಕಾರಣ ಆಪರೇಶನ್‌ಗೆ ಬೇಕಾದ ಎರಡು ಲಕ್ಷ‌ ರೂಪಾಯಿ‌ ಕೂಡಿಡಲು ಮಕ್ಕಳೇ ಹುಂಡಿ ಯೋಜನೆ ಹಾಕಿಕೊಳ್ಳುತ್ತಾರಾದರೂ ಅಗತ್ಯದಷ್ಟು ಚಂದಾ ವಸೂಲಾಗುವುದಿಲ್ಲ. ಹೀಗಿರುವಾಗ ಊಟಿಯಲ್ಲಿ ಹಾದು ಹೋಗುವ ರಷ್ಯಾದ ವೆಟರ್ನರಿ ತಜ್ಞ ನಿಮ್ಮ ಕಣ್ಮುಂದೆ ಬರುವಾಗಲೇ ಆತ ಉಚಿತ‌ ಚಿಕಿತ್ಸೆ ನೀಡಲು ಸಿದ್ಧನಾಗಿರುತ್ತಾನೆ ಎಂದು ನೀವು ಊಹಿಸಿರುತ್ತೀರಿ. ನಿಮ್ಮ ಊಹೆ ಸರಿಯಾಗುತ್ತದೆ.

ದೃಷ್ಟಿ ಬಂದ ಮೇಲೆ ನಾಯಿಯ ಸ್ಪರ್ಧೆಗೆ ಸಿಂಬಾ ರೆಡಿ. ಮೊದಲ ಸುತ್ತಿನಲ್ಲಿ ಗೆದ್ದು ಅಂತಿಮ ಸ್ಪರ್ಧೆಗೆ ಆಯ್ಕೆ ಆದಾಗ ಮಕ್ಕಳಿಗೆಲ್ಲಾ ಖುಷಿ. ಆದರೆ ಅದಕ್ಕೆ ತರಬೇತಿ ಕೊಡಲು ತಜ್ಞರೇ ಬೇಕು, ಅವರಿಗೆ ಮತ್ತೆ ಕಾಸು ಕೊಡಬೇಕು. ಇಲ್ಲ ಪುನಃ ಹುಂಡಿ ಯೋಜನೆ ಬರುವುದಿಲ್ಲ. ಅಲ್ಲಿ ನಾಯಕ ಅರುಣ್ ವಿಜಯ್‌ ಫ್ಲ್ಯಾಶ್ ಬ್ಯಾಕ್ ಚಿತ್ರಕಥೆಯ ಸಹಾಯಕ್ಕೆ ಬರುತ್ತದೆ. ಮೊದಲು ಆತ ಕುದುರೆ ತರಬೇತುದಾರ. ಐತಿಹಾಸಿಕವಾಗಿ ಮನುಷ್ಯ ಪಳಗಿಸಿದ ಎರಡು ಪ್ರಾಣಿಗಳಲ್ಲಿ ಒಂದು ನಾಯಿಯಾದರೆ ಮತ್ತೊಂದು ಕುದುರೆ. ಹಾಗಾಗಿ ಕುದುರೆ ಪಳಗಿಸಿದವನಿಗೆ ನಾಯಿಗೆ ತರಬೇತಿ ನೀಡುವುದು ಏನು ಮಹಾ? ಒಂದು ಹಾಡಿನಲ್ಲಿ ಕಾಂಪಿಟೀಶನ್ನಿಗೆ ನಾಯಿ ಕಂಪ್ಲೀಟ್ ರೆಡಿ. ಆದರೆ ಸಿನಿಮಾ ಮುಗಿಯಲು ಮತ್ತೂ ಕಾಲು ಗಂಟೆ ಇರುವ ಕಾರಣ ವಿಲನ್ ಮಧ್ಯೆ ಬಂದು ಕೈಯಾಡಿಸುತ್ತಾನೆ. ಕ್ಲೈಮ್ಯಾಕ್ಸ್ ತೀವ್ರಗೊಳಿಸಲು ತೀರ್ಪುಗಾರರು ಸಿಂಬಾವನ್ನು ಸ್ಪರ್ಧೆಯಿಂದ ಹೊರಗಿಡುತ್ತಾರೆ. ಆಗ ನಾಯಕನ ಒಂದು ಸಂಭಾಷಣೆ ಮತ್ತು ಕೈ ಮುಗಿದ ವಿನಂತಿ ತೀರ್ಪುಗಾರರ ಮೇಲೆ ಪ್ರಭಾವ ಬೀರಿ ಸಿಂಬಾಗೆ ಅನುಮತಿ ಸಿಕ್ಕಿ ಅದು ವಿಶ್ವದಾಖಲೆ ನಿರ್ಮಿಸುತ್ತದೆ.

ಜ್ಯೋತಿಕಾ ಮತ್ತು ಸೂರ್ಯ ನಿರ್ಮಾಣದ ಈ ಸಿನಿಮಾದಲ್ಲಿ‌ ಹಸ್ಕಿ ಜಾತಿಯ ನಾಯಿ ಬದಲು ದೇಸಿ ತಳಿಯ ನಾಯಿಯ ಬಳಕೆ ಮಾಡಿದ್ದರೆ ಅನಾಥ ಬೀದಿ ನಾಯಿಯನ್ನು ಮನೆಗೆ ತಂದು ಸಾಕುವ ಉತ್ತಮ ಸಂದೇಶವನ್ನಾದರೂ ಕೊಡುಬಹುದಿತ್ತು. ಆದರೆ ಇಷ್ಟೆಲ್ಲ ಹೇಳಿದ‌ ಮೇಲೂ ‘ಓ ಮೈ ಡಾಗ್’ ಬಗ್ಗೆ ಒಂದು ಮಾತು ಹೇಳಬಹುದು. ನೋಡುವುದಕ್ಕೇ ಸಾಧ್ಯವಿಲ್ಲ ಎಂಬಷ್ಟು ಕೆಟ್ಟದಾಗಿ ಇಲ್ಲ. ನಿಮ್ಮಲ್ಲಿ ಸಣ್ಣ ಮಕ್ಕಳಿದ್ದರೆ ಶಾಲೆ ಶುರುವಾಗುವ ಮೊದಲು ಒಂದು ಶನಿವಾರವೋ ಭಾನುವಾರವೋ ಅವರ ಜತೆಗೆ ಕೂತು ನೋಡಬಹುದು.

Previous articleಇದು ‘ಡೈರೆಕ್ಟರ್‌’ ಸಿನಿಮಾ
Next articleಸಮಂತಾ ‘ಯಶೋದಾ’ ಗ್ಲಿಂಪ್ಸಸ್‌; ಆಗಸ್ಟ್‌ 12ಕ್ಕೆ ಸಿನಿಮಾ ತೆರೆಗೆ

LEAVE A REPLY

Connect with

Please enter your comment!
Please enter your name here