ಲೇಖಕ ಕಾ.ತ.ಚಿಕ್ಕಣ್ಣ ಅವರ ‘ಹುಚ್ಚೀರಿ ಕೋಳಿ ಎಸ್ರು ಪ್ರಸಂಗ’ ಕತೆ ಆಧರಿಸಿ ಚಂಪಾ ಶೆಟ್ಟಿ ನಿರ್ದೇಶಿಸುತ್ತಿರುವ ‘ಕೋಳಿ ಎಸ್ರು’ ಸಿನಿಮಾ ಸೆಟ್ಟೇರಿದೆ. ಮಗಳು ಜನಿಸಿದ ನಂತರ ನಟಿ ಅಕ್ಷತಾ ಪಾಂಡವಪುರ ಅವರ ಕಮ್‌ಬ್ಯಾಕ್ ಸಿನಿಮಾ ಇದು. ಈ ಚಿತ್ರದೊಂದಿಗೆ ಹಲವು ರಂಗಭೂಮಿ ಕಲಾವಿದರು ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ಮೂಲಕ ನಿರ್ದೇಶಕಿಯಾದ ಚಂಪಾ ಶೆಟ್ಟಿ ‘ಕೋಳಿ ಎಸ್ರು’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನಟಿಯಾಗಿ ಕನ್ನಡಿಗರಿಗೆ ಪರಿಚಯವಿದ್ದ ಅವರು ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ್ದರು. ಈಗ ಎರಡನೇ ಸಿನಿಮಾದ ನಿರ್ದೇಶನದಲ್ಲೂ ಪ್ರಕಟಿತ ಸಾಹಿತ್ಯಿಕ ಕೃತಿಯೊಂದನ್ನು ತೆರೆಗೆ ಅಳವಡಿಸುತ್ತಿದ್ದಾರೆ. ಲೇಖಕ ಕಾ.ತ.ಚಿಕ್ಕಣ್ಣ ಅವರ ‘ಹುಚ್ಚೀರಿ ಕೋಳಿ ಎಸ್ರು ಪ್ರಸಂಗ’ ಕತೆ ಆಧರಿಸಿ ‘ಕೋಳಿ ಎಸ್ರು’ ತಯಾರಾಗುತ್ತಿದೆ. ಆಡು ಭಾಷೆಯ ‘ಎಸ್ರು’ ಅಂದರೆ ‘ಸಾರು’ ಎಂದರ್ಥ. ಬಡ ಕುಟುಂಬದ ಹುಚ್ಚೀರಿ ಮತ್ತು ಆಕೆಯ ಹತ್ತು ವರ್ಷದ ಮಗಳ ಕೋಳಿ ಸಾರಿನ ವಿಷಯವೇ ಸಿನಿಮಾದ ವಸ್ತು.
ಟಿ.ನರಸೀಪುರ ಸಮೀಪದ ಗ್ರಾಮಗಳಲ್ಲಿ ಚಿತ್ರೀಕರಣ ನಡೆದಿದೆ. ಮೂಲತಃ ಹವ್ಯಾಸಿ ರಂಗಭೂಮಿಯವರಾದ ಚಂಪಾ ಶೆಟ್ಟಿ ತಮ್ಮ ಈ ಸಿನಿಮಾ ಮೂಲಕ ಹಲವು ರಂಗ ಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರ ‘ಹುಚ್ಚೀರಿ’ಯಾಗಿ ನಟಿ ಅಕ್ಷತಾ ಪಾಂಡವಪುರ ಮತ್ತು ಮಗಳ ಪಾತ್ರದಲ್ಲಿ ಅಪೇಕ್ಷಾ ಇದ್ದಾರೆ. “ಮೊದಲ ಬಾರಿ ಲೇಡಿ ಡೈರೆಕ್ಟರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹೊಸತಾದ, ಸವಾಲಿನ ಪಾತ್ರ – ಕತೆಗಳ ಹುಡುಕಾಟದಲ್ಲಿರುವ ನನಗೆ ಚಂಪಾ ಶೆಟ್ಟಿ ಅವರ ಈ ಕತೆ ತುಂಬಾ ಇಷ್ಟವಾಯ್ತು. ಕಲಿಕೆಗೆ ಉತ್ತಮ ಅವಕಾಶ. ‘ಕೋಳಿ ಸಾರು’ ಇಲ್ಲೊಂದು ರೂಪಕವಷ್ಟೆ. ಇದರ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೌಟುಂಬಿಕ, ಆರ್ಥಿಕ, ಸಾಮಾಜಿಕ ವಿಷಯಗಳು ಚರ್ಚೆಗೆ ಬರಲಿವೆ” ಎಂದು ತಮ್ಮ ಹೊಸ ಸಿನಿಮಾ ಕುರಿತು ಮಾತನಾಡುತ್ತಾರೆ ನಟಿ ಅಕ್ಷತಾ.