ಮೂರನೇ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಅವಾರ್ಡ್ಸ್‌ ಸಮಾರಂಭ ಶನಿವಾರ ಸಂಜೆ ಯಶಸ್ವಿಯಾಗಿ ನಡೆಯಿತು. ‘ಗರುಡ ಗಮನ ವೃಷಭ ವಾಹನ’, ‘ರಾಬರ್ಟ್‌’ ನಾಲ್ಕು ಪ್ರಶಸ್ತಿಗಳನ್ನು ಪಡೆದರೆ, ‘ಅಕ್ಷಿ’ ಚಿತ್ರದ ನಟನೆಗಾಗಿ ಮಾಸ್ಟರ್‌ ಮಿಥುನ್‌ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರು.

ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಅವಾರ್ಡ್ಸ್‌ 2022ರಲ್ಲಿ ‘ಗರುಡ ಗಮನ ವೃಷಭ ವಾಹನ’ ನಾಲ್ಕು ಪ್ರಶಸ್ತಿ ಪಡೆದಿದೆ. ರಾಜ್‌ ಬಿ. ಶೆಟ್ಟಿ ಅವರು ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಮೂರು ವೈಯಕ್ತಿಕ ಪ್ರಶಸ್ತಿಗಳನ್ನು ಗಳಿಸಿದರೆ, ಚಿತ್ರದ ಸಂಕಲನಕ್ಕಾಗಿ ಪ್ರವೀಣ್‌ ಶ್ರಿಯಾನ್‌ ಪ್ರಶಸ್ತಿ ಪಡೆದರು. ಸಂಚಾರಿ ವಿಜಯ್‌ ಅಭಿನಯದ ‘ಪುಕ್ಸಟ್ಟೆ ಲೈಫು’ ಅತ್ಯುತ್ತಮ ಸಿನಿಮಾ ಗೌರವ ಪಡೆಯಿತು. ಈ ಚಿತ್ರದ ನಿರ್ಮಾಪಕ ನಾಗರಾಜ ಸೋಮಯಾಜಿ ಮತ್ತು ನಿರ್ದೇಶಕ ಅರವಿಂದ ಕುಪ್ಳೀಕರ್‌ ಪ್ರಶಸ್ತಿ ಸ್ವೀಕರಿಸಿದರು.

‘ಹೀರೋ’ ಚಿತ್ರದ ಅಭಿನಯಕ್ಕಾಗಿ ನಟಿ ಗಾನವಿ ಲಕ್ಷ್ಮಣ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. (ಅತ್ಯುತ್ತಮ ಸಂಗೀತ ಸಂಯೋಜಕ – ಅರ್ಜುನ್ ಜನ್ಯ, ಅತ್ಯುತ್ತಮ ಗೀತರಚನೆಕಾರ – ಕಣ್ಣು ಹೊಡೆಯಾಕೆ ಹಾಡಿಗೆ ಯೋಗರಾಜ್ ಭಟ್, ಸುಧಾಕರ್ ಎಸ್. ರಾಜ್ ಅತ್ಯುತ್ತಮ ಛಾಯಾಗ್ರಹಣ ಮತ್ತು ಭೂಷಣ್ ಅತ್ಯುತ್ತಮ ನೃತ್ಯ ಸಂಯೋಜನೆ) ಈ ನಾಲ್ಕು ಪ್ರಶಸ್ತಿಗಳಿಗೆ ‘ರಾಬರ್ಟ್’ ಸಿನಿಮಾ ಭಾಜನವಾಯಿತು.

ಎ.ಹರ್ಷ ನಿರ್ದೇಶನದ ‘ಭಜರಂಗಿ 2’ ಮತ್ತು ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ‘ಸಲಗ’ ಮತ್ತು ಧನಂಜಯ್ ನಟನೆಯ ‘ಬಡವ ರಾಸ್ಕಲ್’ ತಲಾ ಮೂರು ಪ್ರಶಸ್ತಿ ಗಳಿಸಿವೆ. ‘ಭಜರಂಗಿ 2’ ಸಿನಿಮಾ ತಾಂತ್ರಿಕ ವಿಭಾಗಗಳಲ್ಲಿ ಅತ್ಯುತ್ತಮ VFX (ಶಿಬೀಶ್ ಮತ್ತು ಇಳಂಗೋವ್), ಅತ್ಯುತ್ತಮ ಸಾಹಸ ನಿರ್ದೇಶಕ (ರವಿ ವರ್ಮ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ರವಿ ಸಂತೆಹೈಕ್ಲು) ಪ್ರಶಸ್ತಿ ಪಡೆದಿದೆ. ‘ಬಡವ ರಾಸ್ಕಲ್’ ಚಿತ್ರವು ಅತ್ಯುತ್ತಮ ಪೋಷಕ ನಟಿ ಸ್ಪರ್ಶ ರೇಖಾ ಮತ್ತು ಅತ್ಯುತ್ತಮ ಪೋಷಕ ನಟ ರಂಗಾಯಣ ರಘು ಹಾಗೂ ಇದೇ ಚಿತ್ರಕ್ಕಾಗಿ ವಾಸುಕಿ ವೈಭವ್ ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದರು.

‘ಸಲಗ’ ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ (ಮಾಸ್ತಿ), ಅತ್ಯುತ್ತಮ ಬಿಜಿಎಂ (ಚರಣ್ ರಾಜ್) ಮತ್ತು ಅತ್ಯುತ್ತಮ ಗಾಯಕಿಯಾಗಿ ಗಿರಿಜಾ ಅವರಿಗೆ ಪ್ರಶಸ್ತಿ ಸಂದಿವೆ. ಡಾ.ರಾಘವೇಂದ್ರ ಬಿ.ಎಸ್‌. ಅವರು ‘ಪ್ರೇಮಂ ಪೂಜ್ಯಂ’ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರೆ, ‘ಅರ್ಜುನ್ ಗೌಡ’ ಚಿತ್ರದ ಹಾಡಿಗೆ ರಾಘವೇಂದ್ರ ಕಾಮತ್ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಯೋಗರಾಜ್ ಭಟ್ ಜತೆ ಹಂಚಿಕೊಂಡರು. ‘ಅಕ್ಷಿ’ ಸಿನಿಮಾ ನಟನೆಗಾಗಿ ಮಾಸ್ಟರ್ ಮಿಥುನ್ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರು.

ಶನಿವಾರ ಸಂಜೆ ಬೆಂಗಳೂರು ಚಾಮರಾಜಪೇಟೆಯ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಒಟ್ಟು 23 ಸಿನಿಮಾ ತಾರೆಯರು 21 ವಿಭಾಗಗಳಲ್ಲಿದ್ದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಚಲನಚಿತ್ರ ವಿಮರ್ಶಕರು ಮತ್ತು ಪತ್ರಕರ್ತರು ನಾಮನಿರ್ದೇಶನ ಮೂಲಕ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದರೆ, ಬಿಬಿಎಂಪಿಯ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಪ್ರಶಸ್ತಿ ಸಮಾರಂಭದ ವಿಷಯವಾಗಿ ಅಳವಡಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಟಿಯರಾದ ಶಾನ್ವಿ ಶ್ರೀವಾತ್ಸವ್‌ ಮತ್ತು ಹರ್ಷಿಕಾ ಪೂಣಚ್ಚ ಸೇರಿದಂತೆ ಸಿನಿಮಾ ರಂಗದ ಹಲವು ತಾರೆಯರು, ತಂತ್ರಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

3ನೇ ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ

  1. ಅತ್ಯುತ್ತಮ ಚಿತ್ರ
    ಪುಕ್ಸಟ್ಟೆ ಲೈಫು
  2. ಅತ್ಯುತ್ತಮ ನಿರ್ದೇಶಕ
    ರಾಜ್ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
  3. ಅತ್ಯುತ್ತಮ ನಟ
    ರಾಜ್ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
  4. ಅತ್ಯುತ್ತಮ ನಟಿ
    ಗಾನವಿ ಲಕ್ಷ್ಮಣ್ (ಹೀರೋ)
  5. ಅತ್ಯುತ್ತಮ ಚಿತ್ರಕಥೆ
    ರಾಜ್‌ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
  6. ಅತ್ಯುತ್ತಮ ಪೋಷಕ ನಟ
    ರಂಗಾಯಣ ರಘು (ಬಡವ ರಾಸ್ಕಲ್)
  7. ಅತ್ಯುತ್ತಮ ಪೋಷಕ ನಟಿ
    ಸ್ಪರ್ಷ ರೇಖಾ (ಬಡವ ರಾಸ್ಕಲ್)
  8. ಅತ್ಯುತ್ತಮ ಬಾಲ ಕಲಾವಿದ
    ಮಾಸ್ಟರ್ ಮಿಥುನ್ (ಅಕ್ಷಿ)
  9. ಅತ್ಯುತ್ತಮ ಸಂಗೀತ ನಿರ್ದೇಶಕ
    ಅರ್ಜುನ್ ಜನ್ಯ (ರಾಬರ್ಟ್)
  10. ಅತ್ಯುತ್ತಮ ಹಿನ್ನೆಲೆ ಸಂಗೀತ
    ಚರಣ್ ರಾಜ್ (ಸಲಗ)
  11. ಅತ್ಯುತ್ತಮ ಗೀತ ಸಾಹಿತ್ಯ
    ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್) ಮತ್ತು ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)
  12. ಅತ್ಯುತ್ತಮ ಗಾಯಕ
    ವಾಸುಕಿ ವೈಭವ್ (ಆಗಾಗ ನೆನಪಾಗುತ್ತಾಳೆ, ಬಡವ ರಾಸ್ಕಲ್)
  13. ಅತ್ಯುತ್ತಮ ಗಾಯಕಿ
    ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)
  14. ಅತ್ಯುತ್ತಮ ಛಾಯಾಗ್ರಹಣ
    ಸುಧಾಕರ್ ರಾಜ್ (ರಾಬರ್ಟ್)
  15. ಅತ್ಯುತ್ತಮ ಸಂಭಾಷಣೆ
    ಮಾಸ್ತಿ (ಸಲಗ)
  16. ಅತ್ಯುತ್ತಮ ಸಂಕಲನ
    ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)
  17. ಅತ್ಯುತ್ತಮ ಕಲಾ ನಿರ್ದೇಶನ
    ರವಿ ಸಂತೆಹೈಕ್ಳು (ಭಜರಂಗಿ 2)
  18. ಅತ್ಯುತ್ತಮ ನೃತ್ಯ ನಿರ್ದೇಶಕ
    ಭೂಷಣ್ (ರಾಬರ್ಟ್)
  19. ಅತ್ಯುತ್ತಮ ಸಾಹಸ ನಿರ್ದೇಶಕ
    ರವಿ ವರ್ಮಾ (ಭಜರಂಗಿ 2)
  20. ಅತ್ಯುತ್ತಮ ವಿಎಫ್ಎಕ್ಸ್
    ಶಿಬೀಶ್ ಮತ್ತು ಏಲಂಗೋ (ಭಜರಂಗಿ 2)
  21. ಅತ್ಯುತ್ತಮ ಚೊಚ್ಚಲ ಚಿತ್ರ (ಪ್ರೇಮಂ ಪೂಜ್ಯಂ)

LEAVE A REPLY

Connect with

Please enter your comment!
Please enter your name here