ಪ್ರಶಾಂತ್‌ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ‘KGF 2’ ಪ್ಯಾನ್‌ ಇಂಡಿಯಾ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಬೆಂಗಳೂರಿನಲ್ಲಿ ಇಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಟ್ರೈಲರ್‌ ಬಿಡುಗಡೆಯಾಗಿದ್ದು, ಏಪ್ರಿಲ್‌ 14ಕ್ಕೆ ಸಿನಿಮಾ ತೆರೆಕಾಣಲಿದೆ.

ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಕನ್ನಡ ಚಿತ್ರರಂಗಕ್ಕೆ ಹೆಗ್ಗಳಿಕೆ ತಂದುಕೊಟ್ಟಂತಹ ಸಿನಿಮಾ ‘KGF’. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ನಂತರ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಹಿಂದಿ ಭಾಷಿಕರನ್ನೂ ದೊಡ್ಡ ಪ್ರಮಾಣದಲ್ಲಿ ಸೆಳೆದ ಸಿನಿಮಾ ‘KGF’. ಇದರ ಸರಣಿಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದರು. ಇಂದು ನಟ ಶಿವರಾಜಕುಮಾರ್‌ ‘KGF2’ ಟ್ರೈಲರ್‌ ಬಿಡುಗಡೆ ಮಾಡಿದರೆ, ಸಚಿವ ಅ‍ಶ್ವತ್ಥನಾರಾಯಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಚಿತ್ರತಂಡದ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡರು. ಚಿತ್ರದಲ್ಲಿ ಖಳನಾಗಿ ನಟಿಸಿರುವ ಖ್ಯಾತ ಬಾಲಿವುಡ್‌ ನಟ ಸಂಜಯ್‌ ದತ್‌, ನಟಿ ರವೀನಾ ಟಂಡನ್‌ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಬಾಲಿವುಡ್‌ನ ಖ್ಯಾತ ಚಿತ್ರನಿರ್ದೇಶಕ ಕರಣ್‌ ಜೋಹರ್‌ ಕಾರ್ಯಕ್ರಮವನ್ನು ನಿರೂಪಿಸಿದ್ದು ವಿಶೇಷ. ನಿರೂಪಣೆಯಲ್ಲಿ ಅನುಶ್ರೀ ಅವರಿಗೆ ಜೊತೆಯಾಗಿದ್ದರು.

ಅಗಲಿದ ನಟ ಪುನೀತ್‌ ರಾಜಕುಮಾರ್‌ ಅವರಿಗೆ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯ್ತು. ‘KGF’ ಸಿನಿಮಾ ನಿರ್ಮಿಸಿದ ಹೊಂಬಾಳೆ ಬ್ಯಾನರ್‌ನ ಸಿನಿಮಾ ಜರ್ನೀ ಆರಂಭವಾಗಿದ್ದು ಪುನೀತ್‌ ಅಭಿನಯದ ‘ನಿನ್ನಿಂದಲೇ’ ಚಿತ್ರದ ಮೂಲಕ. ಮುಂದೆ ಪುನೀತ್‌ರಿಗಾಗಿ ಇದೇ ಸಂಸ್ಥೆ ‘ಯುವರತ್ನ’ ಸಿನಿಮಾ ನಿರ್ಮಿಸಿತು. ‘ಆಕ್ಷನ್‌’ ಹೇಳಿ ಟ್ರೈಲರ್‌ ಲಾಂಚ್‌ ಮಾಡಿದ ಶಿವರಾಜಕುಮಾರ್‌ ಚಿತ್ರಕ್ಕೆ ಶುಭಹಾರೈಸಿದರು. ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, “ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದ ಸಿನಿಮಾಗಳಲ್ಲೊಂದು ‘KGF’. ಈ ಲೆಗಸಿಯನ್ನು ಸರಣಿ ಸಿನಿಮಾ ಮುಂದುವರೆಸಲಿ. ನಿರ್ಮಾಪಕ ವಿಜಯ್‌ ಇಂತಹ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸಲಿ. ನಾನಿಲ್ಲಿ ಸಚಿವನಾಗಿ ಆಗಮಿಸಿಲ್ಲ, ಸಿನಿಮಾ ಪ್ರೇಮಿಯಾಗಿ ಬಂದಿದ್ದು ಏಪ್ರಿಲ್‌ 14ರಂದು ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದೇನೆ” ಎಂದರು.

ನಿರ್ದೇಶಕ ಪ್ರಶಾಂತ್‌ ನೀಲ್‌, ಹೀರೋ ಯಶ್‌ ಚಿತ್ರತಂಡದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ್‌ ಕಿರಗಂದೂರು ಚಿತ್ರದ ಬಗ್ಗೆ ಮಾತನಾಡಿದರು. ದಕ್ಷಿಣ ಭಾರತ ಹಾಗೂ ಹಿಂದಿ ಸಿನಿಮಾ ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಸಿನಿಮಾ ಐದು ಭಾಷೆಗಳಲ್ಲಿ ತೆರೆಕಾಣುತ್ತಿದ್ದು, ಖ್ಯಾತ ಮಲಯಾಳಂ ನಟ ಪೃಥ್ವೀರಾಜ್‌ ಸುಕುಮಾರನ್‌ ಅವರ ವಿತರಣೆ ಸಂಸ್ಥೆ ಮೂಲಕ ಕೇರಳದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ತಮಿಳಿನಾಡಿನಲ್ಲಿ ಪ್ರಭು, ಆಂಧ್ರ ಮತ್ತು ತೆಲಂಗಾಣದಲ್ಲಿ ಸಾಯಿ ಕೊರಪಾಟಿ, ಹಿಂದಿ ನಾಡಿನಲ್ಲಿ ಅನಿಲ್‌ ಟಡಾನಿ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಭುವನ್‌ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಸಂಯೋಜನೆ, ಉಜ್ವಲ್‌ ಕುಲಕರ್ಣಿ ಸಂಕಲನ, ಅನ್ಬವೀರ್‌ ಸಾಹಸ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here