ನಿರ್ಮಾಪಕ ಸೌಂದರ್ಯ ಜಗದೀಶ್ ಮತ್ತು ಅವರ ಪುತ್ರ ಮತ್ತು ನಟ ಸ್ನೇಹಿತ್ ಡೊಮೆಸ್ಟಿಕ್ ವಿಷಯವೊಂದಕ್ಕಾಗಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಪರಿಸ್ಥಿತಿ ಬಂದಿದೆ. ಪಕ್ಕದ ಮನೆಯವರೊಂದಿಗೆ ಕಿರಿಕ್ ಮಾಡಿಕೊಂಡು ಈಗ ಸೌಂದರ್ಯ ಜಗದೀಶ್ ಅವರ ಪುತ್ರ ಸ್ನೇಹಿತ್ ಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸೌಂದರ್ಯ ಜಗದೀಶ್ ಅವರ ಪುತ್ರ ಸ್ನೇಹಿತ್ ಹಲವು ವರ್ಷಗಳ ಹಿಂದೆ ‘ಅಪ್ಪು ಪಪ್ಪು’ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಸ್ನೇಹಿತ್ ಬೆಳೆದು ದೊಡ್ಡವನಾಗಿದ್ದಾನೆ. ಆದರೆ ಹೆಸರಿಗೆ ತಕ್ಕಂತೆ ಎಲ್ಲರೊಂದಿಗೆ ಸ್ನೇಹಿತನಂತೆ ಅವರು ವರ್ತಿಸುತ್ತಿಲ್ಲ ಎಂದು ಈ ಪ್ರಕರಣ ವಿಷಯದಲ್ಲಿ ಅವರ ಮನೆಯ ರಸ್ತೆಯಲ್ಲಿರುವ ಅನೇಕರು ದೂರಿದ್ದಾರೆ. ಆ ಹುಡುಗ ಮನೆಯಿಂದ ಹೊರಬಂದರೆ ಅವನ ಹಿಂದೆ ಮುಂದೆ ಎರಡು ಕಾರುಗಳು ಬರುತ್ತವೆ. ಅವರು ಬಂದ ಕೂಡಲೇ ರಸ್ತೆ ಕ್ಲಿಯರ್ ಮಾಡಿ ಅವರಿಗೆ ದಾರಿ ಮಾಡಿಕೊಡಬೇಕು. ಇಲ್ಲದಿದ್ದರೆ, ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನಗಳ ಸವಾರರನ್ನು ಅವರ ಬಾಡಿಗಾರ್ಡ್‌ಗಳು ಬಾಯಿಗೆ ಬಂದಂತೆ ನಿಂದಿಸುತ್ತಾರೆ ಎಂಬುದು ಅವರ ನೆರೆಹೊರೆಯವರ ಆರೋಪ.

ಇದೆಲ್ಲವೂ ಹೊರಗೆ ಬಂದಿರೋದು ಮೊನ್ನೆ ಸ್ನೇಹಿತ್ ತಮ್ಮ ಬಾಡಿಗಾರ್ಡ್‌ ಗಳೊಂದಿಗೆ ಪಕ್ಕದ ಮನೆಗೆ ನುಗ್ಗಿ ಅವರ ಮನೆಯ ಕೆಲಸದನವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಿಂದ. ಈ ಪ್ರಕರಣ ಪೊಲೀಸ್ ಮೆಟ್ಟಿಲೇರಿದ್ದು ಅಲ್ಲಿ ಸಂಧಾನದ ಪ್ರಯತ್ನ ನಡೆದಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಮಿಷನರ್ ಕಮಲ್ ಪಂತ್, ಪೊಲೀಸ್ ಸ್ಟೇಷನ್‌ಗಳು ಸಂಧಾನ ಕಾರ್ಯಕ್ರಮ ನಡೆಯುವ ಸ್ಥಳಗಳಾಗಬಾರದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಹೊತ್ತಿನಲ್ಲಿ ತಮ್ಮದಾಗಲೀ, ತಮ್ಮ ಮಗನದಾಗಲಿ ಏನೂ ತಪ್ಪಿಲ್ಲ, ಎಂದು ಹೇಳುತ್ತ ನಿರ್ಮಾಪಕ ಸೌಂದರ್ಯ ಜಗದೀಶ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಸೌಂದರ್ಯ ಜಗದೀಶ್ ಅವರು, “ನಾವು ಮತ್ತು ಮಂಜುಳಾ ಪುರುಷೋತ್ತಮ್ ಅವರ ಕುಟುಂಬದವರು ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅನೇಕ ವರ್ಷದಿಂದ ಸಹೋದರ – ಸಹೋದರಿ ಬಾಂಧವ್ಯದಿಂದ ವಾಸ ಮಾಡುತ್ತಿದ್ದೇವೆ. ಮನೆಯಲ್ಲಿ ಕೆಲಸ ಮಾಡುವವರ ಅಚಾತುರ್ಯದಿಂದ ಇತ್ತೀಚಿನ ಘಟನೆ ನಡೆದಿದೆ. ಇಬ್ಬರು ಮನೆಯ ಕೆಲಸದವರ ನಡುವೆ ಗಲಾಟೆ ನಡೆಯುತ್ತಿದ್ದಾಗ, ನನ್ನ ಪತ್ನಿ ರೇಖಾ ಹಾಗೂ ಪುತ್ರ ಸ್ನೇಹಿತ್ ಅವರ ಜಗಳ ಬಿಡಿಸಲು ಹೋಗಿದ್ದರೇ ಹೊರತು, ಅವರು ಯಾರ ಮೇಲೆ ಹಲ್ಲೆ ಮಾಡಲು ಹೋಗಿಲ್ಲ ಎನ್ನುವುದನ್ನು ನಾನು ತಿಳಿಸಲು ಬಯಸುತ್ತೇನೆ. ಕೆಲಸದವರ ಈ ಘಟನೆಯಿಂದ ನಮ್ಮಿಬ್ಬರ ಕುಟುಂಬದವರಿಗೂ ಬಹಳ ಬೇಸರವಾಗಿದೆ. ಇನ್ನೂ ಮುಂದೆ ಈ ರೀತಿ ಘಟನೆಗಳು ಆಗದಂತೆ ನಮ್ಮ ಬಳಿ ಕೆಲಸ ಮಾಡುವವರಿಗೆ ಹೇಳುತ್ತೇನೆ. ಅವರ ಮನೆ ಕೆಲಸದವರಿಗೂ ಅವರು ಹೇಳುತ್ತಾರೆ ಎಂಬ ವಿಶ್ವಾಸವಿದೆ. ಹಾಗೆ ಈ ಘಟನೆ ವೇಳೆ ಮನೆ ಕೆಲಸದ ಹೆಣ್ಣುಮಗಳೊಬ್ಬಳಿಗೆ ಹಾಗೂ ಅವರ ತಾಯಿಗೆ ನೋವಾಗಿರುವ ವಿಷಯ ತಿಳಿದು ನನಗೆ ತುಂಬಾ ಬೇಸರವಾಗಿದೆ. ಇದು ಕೆಲಸದವರ ನಡುವೆ ನಡೆದಿರುವ ಜಗಳವೇ ಹೊರತು, ಈ ಘಟನೆ ನಮ್ಮ ನಡುವೆ ನಡೆದಿರುವುದಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡುತ್ತೇನೆ. ಮಂಜುಳಾ ಪುರುಷೋತ್ತಮ್ ಅವರ ಕುಟುಂಬದವರಿಗೆ ಆಗಿರುವ ನೋವಿಗೆ ನಾನು ಕ್ಷಮೆ ಕೇಳುತ್ತೇನೆ. ಮುಂದೆ ನಾವು ಒಂದೇ ಕುಟುಂಬದವರ ಹಾಗೆ ಅನ್ಯೋನ್ಯವಾಗಿ ಇರುತ್ತೇವೆ ಎಂದು ಈ ಮೂಲಕ ಹೇಳ ಬಯಸುತ್ತೇನೆ” ಎಂದು ಹೇಳಿ ಈ ಪ್ರಕರಣಕ್ಕೆ ಸುಖಾಂತ್ಯ ಹಾಡಲು ಪ್ರಯತ್ನಿಸಿದ್ದಾರೆ.

LEAVE A REPLY

Connect with

Please enter your comment!
Please enter your name here