‘ಭಜರಂಗಿ 2’ ಪ್ರೀರಿಲೀಸ್ ಇವೆಂಟ್‌ನಲ್ಲಿ ಚಿತ್ರದ ನಿರ್ಮಾಪಕರಾದ ಜಯಣ್ಣ – ಭೋಗೇಂದ್ರ ಅವರಿಗೆ ‘ವಾರ್ನಿಂಗ್ ಬ್ರದರ್ಸ್‌’ ಎನ್ನುವ ವಿಶೇಷಣ ಸಿಕ್ಕಿತು! ನಿರ್ದೇಶಕ ಸಂತೋಷ್ ಆನಂದರಾಮ್, ರಿಷಬ್ ಶೆಟ್ಟಿ, ಹರ್ಷ, ನಟ ಯಶ್ ಇದನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದರು.

‘ವಾರ್ನರ್ ಬದರ್ಸ್‌’ ಹಾಲಿವುಡ್‌ನ ಖ್ಯಾತ ಚಿತ್ರನಿರ್ಮಾಪಕರು. ಅದೇ ರೀತಿ ಸ್ಯಾಂಡಲ್‌ವುಡ್‌ನಲ್ಲಿ ಜಯಣ್ಣ – ಭೋಗೇಂದ್ರ ‘ವಾರ್ನಿಂಗ್ ಬ್ರದರ್ಸ್‌’ ಎಂದರು ಚಿತ್ರನಿರ್ದೇಶಕ ಸಂತೋಷ್ ಆನಂದರಾಮ್‌. ಇದು ನಡೆದದ್ದು ನಿನ್ನೆ ‘ಭಜರಂಗಿ 2’ ಪ್ರೀರಿಲೀಸ್ ಇವೆಂಟ್‌ನಲ್ಲಿ. ಈ ಹಿಂದೆ ಜಯಣ್ಣ – ಭೋಗೇಂದ್ರ ನಿರ್ಮಾಣದ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದವರು. “ಚಿತ್ರನಿರ್ಮಾಣದ ವಿಷಯದಲ್ಲಿ ಜಯಣ್ಣ – ಭೋಗೇಂದ್ರ ಅವರು ತುಂಬಾ ಬಿಗಿ. ಸದಾ ನಿರ್ದೇಶಕರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಹಾಗಾಗಿ ಅವರು ವಾರ್ನಿಂಗ್ ಬ್ರದರ್ಸ್‌!” ಎನ್ನುವುದು ಅವರ ವ್ಯಾಖ್ಯಾನವಾಗಿತ್ತು. ಆಗ ಮೈಕು ಕೈಗೆತ್ತಿಕೊಂಡ ಜಯಣ್ಣ, “ನಾವು ವಾರ್ನಿಂಗ್ ಬ್ರದರ್ಸ್‌ ಹೌದೋ, ಅಲ್ವೋ ಎನ್ನುವುದನ್ನು ಭಜರಂಗಿ 2 ಚಿತ್ರದ ನಿರ್ದೇಶಕ ಹರ್ಷ ಅವರನ್ನು ಕೇಳಿ” ಎಂದರು. ಸಂತೋಷ್ ಆನಂದರಾಮ್‌ ಅವರ ಜೊತೆ ವೇದಿಕೆಯಲ್ಲಿದ್ದ ನಿರ್ದೇಶಕ ರಿಷಬ್ ಶೆಟ್ಟಿ, “ಹೌದು, ಅವರು ವಾರ್ನಿಂಗ್ ಬ್ರದರ್ಸೇ. ಈಗ ನಾನು ಅವರ ನಿರ್ಮಾಣದಲ್ಲಿ ಶಿವರಾಜಕುಮಾರ್ ಅವರಿಗೆ ಸಿನಿಮಾ ಮಾಡುತ್ತಿದ್ದೇನೆ. ಆರಂಭದಲ್ಲೇ ಅವರು ‘ಸ್ವಲ್ಪ ನೋಡಿಕೊಂಡು ಮಾಡಪ್ಪ’ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ” ಎಂದು ಸಂತೋಷ್ ಆನಂದರಾಮ್‌ ಹೇಳಿಕೆಗೆ ಇಂಬು ನೀಡಿದರು.

ನಿರ್ದೇಶಕರಾದ ರಿಷಬ್ ಶೆಟ್ಟಿ, ಸಂತೋಷ್ ಆನಂದರಾಮ್‌, ದಿನಕರ್ ತೂಗುದೀಪ

ನಂತರ ಮಾತನಾಡಲು ವೇದಿಕೆ ಹತ್ತಿದ ‘ಭಜರಂಗಿ 2’ ನಿರ್ದೇಶಕ ಹರ್ಷ, “ಜಯಣ್ಣ – ಭೋಗೇಂದ್ರ ಈ ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದಾರೆ. ಆಕಸ್ಮಿಕವೊಂದರಲ್ಲಿ ಸೆಟ್ ಹಾನಿಗೊಳಗಾದಾಗ ಎದೆಗುಂದದೆ ಮತ್ತೆ ಸೆಟ್ ನಿರ್ಮಿಸಿದರು. ಯಾವ ಹಂತದಲ್ಲೂ ಹಣ ವ್ಯಯಿಸಲು ಚೌಕಾಸಿ ಮಾಡಲಿಲ್ಲ. ಅವರ ಧಾರಾಳತನದಿಂದಲೇ ಇಂಥದ್ದೊಂದು ದೊಡ್ಡ ಸಿನಿಮಾ ಮಾಡಲು ಸಾಧ್ಯವಾಯ್ತು” ಎಂದರು. ಆನಂತರ ನಟ ಮಾತನಾಡಿದ ಯಶ್‌  ನಿರ್ದೇಶಕ ಸಂತೋಷ್‌ ಆನಂದರಾಮ್ ಅವರನ್ನು ತರಾಟೆಗೆ ತೆಗೆದುಕೊಂಡು, “ಜಯಣ್ಣ – ಭೋಗೇಂದ್ರ ಅವರು ನಮಗೆ ವಾರ್ನಿಂಗ್ ಕೊಡುವುದೇನೋ ಹೌದು. ಆದರೆ ಅದು ಬೇರೆಯ ರೀತಿಯ ವಾರ್ನಿಂಗ್‌. ನಾವು ಸರಿಯಾದ ದಾರಿಯಲ್ಲಿ ಹೋಗಲು ಅವರ ವಾರ್ನಿಂಗ್ ನೆರವಾಗುತ್ತದೆ” ಎಂದು ‘ವಾರ್ನಿಂಗ್ ಬ್ರದರ್ಸ್‌’ರನ್ನು ವ್ಯಾಖ್ಯಾನಿಸಿದರು. ಒಟ್ಟಾರೆ ಈ ಪ್ರಸಂಗ ಜಯಣ್ಣ – ಭೋಗೇಂದ್ರರ ಚಿತ್ರನಿರ್ಮಾಣ ವೈಖರಿಯನ್ನು ಪರಿಚಯಿಸಿದಂತಿತ್ತು.

LEAVE A REPLY

Connect with

Please enter your comment!
Please enter your name here