ಹೊಸ ತಲೆಮಾರಿನ ಕಥಾವಸ್ತು ಹೇಳುತ್ತಿರುವ ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆ ‘ಗ್ರೇ ಗೇಮ್ಸ್’. ಈ ಚಿತ್ರದೊಂದಿಗೆ ವಿಜಯ ರಾಘವೇಂದ್ರರ ಸೋದರಳಿಯ ಜೈ ಅವರು ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ.
ಇತ್ತೀಚೆಗೆ ಯುವ ಕತೆಗಾರರು ಹೊಸ ತಲೆಮಾರಿನ ಪ್ರೇಕ್ಷಕರು ಅಪೇಕ್ಷಿಸುವಂತಹ ಭಿನ್ನ ಕತೆಗಳೊಂದಿಗೆ ಸಿನಿಮಾ ಪ್ರವೇಶಿಸುತ್ತಿದ್ದಾರೆ. ಆನಂದ್ ಮಗದ್ ಈ ಪಟ್ಟಿಗೆ ಹೊಸ ಸೇರ್ಪಡೆ. ಕತೆ ಬರೆಯುವುದಷ್ಟೇ ಅಲ್ಲ, ಅವರು ಈ ಚಿತ್ರದ ನಿರ್ಮಾಪಕರೊಲ್ಲಬ್ಬರು ಕೂಡ. ಅವರ ಕತೆಯನ್ನು ಗಂಗಾಧರ್ ಸಾಲಿಮಠ್ ತೆರೆಗೆ ಅಳವಡಿಸುತ್ತಿದ್ದಾರೆ. “ಸೈಬರ್ ಕ್ರೈಮ್ ಸುತ್ತ ನಡೆಯುವ ಕಥೆಯಿದು. ಕತೆಯ ಕುರಿತು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಸೈಕಲಾಜಿಸ್ಟ್ ಪಾತ್ರದಲ್ಲಿ ವಿಜಯ ರಾಘವೇಂದ್ರ ಅಭಿನಯಿಸುತ್ತಿದ್ದಾರೆ” ಎಂದರು ನಿರ್ದೇಶಕ ಗಂಗಾಧರ್ ಸಾಲಿಮಠ್.
ಹೀರೋ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ‘ಗಾಳಿಪಟ’ ಸಿನಿಮಾ ಖ್ಯಾತಿಯ ಭಾವನಾ ರಾವ್ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಟ ವಿಜಯ ರಾಘವೇಂದ್ರ ಅವರ ಸೋದರಳಿಯ ಜೈ ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ. ಸೂಕ್ತ ನಟನಾ ತರಬೇತಿ ಪಡೆದುಕೊಂಡೇ ಅವರು ಕ್ಯಾಮೆರಾ ಎದುರಿಸುತ್ತಿದ್ದಾರೆ. “ನನಗೆ ಈ ಅವಕಾಶ ಸಿಗಲು ಪ್ರಮುಖ ಕಾರಣ ರಾಘು ಮಾವ. ಅವರಿಗೆ ಹಾಗೂ ನಿರ್ದೇಶಕ, ನಿರ್ಮಾಪಕರಿಗೆ ತುಂಬಾ ಧನ್ಯವಾದ. ವರ್ಕ್ ಶಾಪ್ ಮೂಲಕ ನಿರ್ದೇಶಕರು ಅಭಿನಯದ ತರಭೇತಿ ನೀಡಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎನ್ನುವುದು ಜೈ ಮಾತು. ಇಲ್ಲಿ ಅವರ ತಾಯಿ ಪಾತ್ರದಲ್ಲಿ ನಟಿ, ನಿರೂಪಕಿ ಅಪರ್ಣಾ ಕಾಣಿಸಿಕೊಳ್ಳುತ್ತಿದ್ದಾರೆ.
“ಸಾಮಾನ್ಯವಾಗಿ ನಾನು ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ನಿರ್ದೇಶಕರು ಹೇಳಿದ ಕೂಡಲೇ ಒಪ್ಪಿಕೊಳ್ಳೋಣ ಅನಿಸಿತು. ಇತ್ತೀಚೆಗೆ ನಾನು, ಜೈ ಜೊತೆ ವರ್ಕ್ ಶಾಪ್ನಲ್ಲಿ ಪಾಲ್ಗೊಂಡಿದ್ದೆ. ಉತ್ತಮವಾಗಿ ನಟಿಸುತ್ತಾನೆ. ನಾನು ಚಿನ್ನೇಗೌಡರ ಕುಟುಂಬವನ್ನು ಚಿಕ್ಕಂದಿನಿಂದಲೂ ಬಲ್ಲೆ. ಈಗ ಅವರ ಕುಟುಂಬದವರ ಜೊತೆ ನಟಿಸುವ ಅವಕಾಶ ದೊರಕಿದ್ದು ಖುಷಿಯಾಗಿದೆ” ಎಂದರು ಅಪರ್ಣ. ಚಿತ್ರದಲ್ಲಿ ನಟಿ ಭಾವನಾ ಸೈಬರ್ ಕ್ರೈಂ ವಿಶೇಷಾಧಿಕಾರಿ ಪಾತ್ರ ನಿರ್ವಹಿಸಲಿದ್ದಾರೆ. ಎಸ್.ಎ.ಚಿನ್ನೇಗೌಡ, ಬಿ.ಕೆ.ಶಿವರಾಂ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದೇ ಎಂಟರಿಂದ ಬೆಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ವರುಣ್ ಅವರ ಛಾಯಾಗ್ರಹಣವಿದ್ದು, ಶ್ರೀಯನ್ಶ್ ಶ್ರೀರಾಮ್ ಹಾಗೂ ಡೋಲೇಶ್ವರ ರಾಜ್ ಸಂಕು ಸಂಗೀತ ನೀಡುತ್ತಿದ್ದಾರೆ.