‘ಶಿರಡಿ ಶ್ರೀ ಸಾಯಿಬಾಬಾ’ ಕನ್ನಡ ಫೀಚರ್ ಅನಿಮೇಷನ್ ಸಿನಿಮಾದ ನಿರ್ದೇಶಕ ಡಾ.ಬಾಲಕೃಷ್ಣ ಮದ್ದೂರು ಅವರಿಗೆ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಸಂದಿದೆ. ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ 12ನೇ ಚಿತ್ರೋತ್ಸವದಲ್ಲಿ ಬಾಲಕೃಷ್ಣ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಅನಿಮೇಷನ್ ತಂತ್ರಜ್ಞಾನದಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಅನಿಮೇಷನ್ ಚಲನಚಿತ್ರಗಳೂ ಸಾಕಷ್ಟು ಸದ್ದು ಮಾಡುತ್ತಿವೆ. ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಶಿರಡಿ ಶ್ರೀ ಸಾಯಿಬಾಬಾ’ ಕನ್ನಡ ಫೀಚರ್ ಅನಿಮೇಷನ್ ಸಿನಿಮಾ ಸಾಕಷ್ಟು ಹೆಸರು ಮಾಡಿತ್ತು. ಇದು ಆಗ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ವೀಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಬೆಂಗಳೂರಿನ ಮೀಡಿಯಾಟೆಕ್ ಐ’ ಸಲ್ಯೂಷನ್ಸ್ ಪ್ರೈ. ಲಿ. ನಿರ್ಮಾಣದ ಚಿತ್ರವನ್ನು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ. ಬಾಲಕೃಷ್ಣ ಮದ್ದೂರು ನಿರ್ದೇಶಿಸಿದ್ದಾರೆ. ಈಗ ಈ ಚಿತ್ರ ಮತ್ತು ನಿರ್ದೇಶಕರು ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದ ನಿರ್ದೇಶನಕ್ಕಾಗಿ ಡಾ. ಬಾಲಕೃಷ್ಣ ಮದ್ದೂರು ಅವರಿಗೆ ನವದೆಹಲಿಯಲ್ಲಿ ನಡೆದ 12ನೇ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವದ ಫೀಚರ್ ಅನಿಮೇಷನ್ ವಿಭಾಗದಲ್ಲಿ ‘ಅತ್ಯುತ್ತಮ ಪದಾರ್ಪಣೆ ನಿರ್ದೇಶಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಭಾರತ ಚಲನಚಿತ್ರರಂಗದ ಪಿತಾಮಹ ಎಂದೇ ಕರೆಯಲ್ಪಡುವ ದುಂಡಿರಾಜ್ ಗೋವಿಂದ್ ಫಾಲ್ಕೆ ಜನ್ಮದಿನದ ಸ್ಮರಣೆಗಾಗಿ ಪ್ರತಿವರ್ಷ ನಡೆಯುವ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ದೇಶ, ಚಲನಚಿತ್ರ ರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತರನ್ನು ಗೌರವಿಸುವುದಾಗಿದೆ. ಈ ಬಾರಿ ಭಾರತವೇ ಅಲ್ಲದೆ ಇತರ ನೂರಕ್ಕೂ ಹೆಚ್ಚು ರಾಷ್ಟ್ರಗಳು ಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು. ಮೀಡಿಯಾಟೆಕ್ ಐ ಸಲ್ಯೂಷನ್ಸ್ ಪ್ರೈ. ಲಿ., ಮಾಧ್ಯಮ-ಮನರಂಜನೆ, ಮತ್ತು ಅನಿಮೇಷನ್ ಚಲನಚಿತ್ರಗಳ ನಿರ್ಮಾಣ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಈ ಪ್ರಶಸ್ತಿಯಿಂದಾಗಿ ಸಂಸ್ಥೆಯ ಮುಡಿಗೆ ಮತ್ತೊಂದು ಗರಿ ತೊಡಿಸಿದಂತಾಗಿದೆ.

“ಮಕ್ಕಳಿಗೆ ಅನಿಮೇಷನ್ ಎಂದರೆ ಬಹಳ ಇಷ್ಟ. ಹಾಗಾಗಿ ಈ ಪ್ರಭಾವಿ ಮಾಧ್ಯಮದ ಮೂಲಕ ಮಕ್ಕಳಿಗೆ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯ ಪ್ರಯತ್ನ. ಮಕ್ಕಳನ್ನು ಆಕರ್ಷಿಸುವುದರ ಜೊತೆಗೆ ನಿರ್ದೇಶಕರು ದೊಡ್ಡವರಿಗೂ ಬಾಬಾ ಅವರ ಜೀವನ ಸಂದೇಶವನ್ನು ತಲುಪಿಸಿದ್ದಾರೆ. ಕನ್ನಡ ಜನತೆಗೂ, ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಕರಿಗೆ ಧನ್ಯವಾದ” ಎನ್ನುತ್ತಾರೆ ಮೀಡಿಯಾಟೆಕ್ ಐ’ ಸಲ್ಯೂಷನ್ಸ್ ಪ್ರೈ. ಲಿ. ನ ನಿರ್ದೇಶಕ ಬಾಲಕೃಷ್ಣ ಮದ್ದೂರು. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಇನ್ನಷ್ಟು ಮೌಲ್ಯಾಧಾರಿತ ಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಿದ್ದಾರವರು.

LEAVE A REPLY

Connect with

Please enter your comment!
Please enter your name here