ಸಂಗೀತ ಸಂಯೋಜಕ ರಿಕ್ಕಿ ಕೇಜ್‌ಗೆ ಎರಡನೇ ಬಾರಿ ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟ ‘ಡಿವೈನ್‌ ಟೈಡ್ಸ್‌’ ಲಹರಿ ಸಂಸ್ಥೆಯಿಂದ ತಯಾರಾಗಿರುವ ಆಲ್ಬಂ. ಈ ಹೊತ್ತಿಗೆ ಲಹರಿ ಮ್ಯೂಸಿಕ್‌ ಸಂಸ್ಥೆಗೆ 48 ವಸಂತಗಳು ತುಂಬಿದೆ. 48ನೇ ಬರ್ತ್‌ಡೇ ಮತ್ತು ರಿಕ್ಕಿ ಕೇಜ್‌ಗೆ ಅಭಿನಂದಿಸುವ ಸಲುವಾಗಿ ಲಹರಿ ಸಮಾರಂಭ ಆಯೋಜಿಸಿತ್ತು.

ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ 48 ವರ್ಷಗಳು ಕಳೆದಿದೆ. ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ ‘ಡಿವೈನ್ ಟೈಡ್ಸ್’ ಆಲ್ಬಂ ಮೂಡಿಬಂದಿದೆ. ಈ ಆಲ್ಬಂಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ. ಅವರಿಗೆ ಗ್ರ್ಯಾಮಿ ಬಂದಿರುವುದು ಇದು ಎರಡನೇ ಬಾರಿ. ಈ ಸಂತಸ ಹಂಚಿಕೊಳ್ಳಲು ಲಹರಿ ಸಂಸ್ಥೆ ಆತ್ಮೀಯ ಸಮಾರಂಭ ಏರ್ಪಡಿಸಿತ್ತು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್, ನಟರಾದ ರವಿಚಂದ್ರನ್, ಶಿವರಾಜಕುಮಾರ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ವಸಿಷ್ಠ ಸಿಂಹ, ಗುರುಕಿರಣ್, ಉದಯ್ ಕೆ ಮೆಹ್ತಾ, ಕೆ.ಪಿ.ಶ್ರೀಕಾಂತ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

“ನಾನು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ವೇಲು ಅವರನ್ನು ಮೊದಲಿನಿಂದಲೂ ಬಲ್ಲೆ. ನಮ್ಮ ಪಕ್ಕದ ಮನೆಯವರು ಅವರು. ಲಹರಿ ಸಂಸ್ಥೆ ಈ ಎತ್ತರಕ್ಕೆ ಬೆಳೆದಿರುವುದು ಖುಷಿ ತಂದಿದೆ. ಆಲ್ಬಂನ ಹಾಡು ನೋಡಿ ತುಂಬಾ ಸಂತೋಷವಾಯಿತು. ಗ್ರ್ಯಾಮಿ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಅದರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ರಿಕ್ಕಿಕೇಜ್ ಎರಡು ಸಲ ಈ ಪ್ರಶಸ್ತಿ ಪಡೆದಿರುವುದು ಅವರ ಸಾಧನೆ ಅಭಿನಂದನಾರ್ಹ. ಇಡೀ ಕನ್ನಡಿಗರು ಹೆಮ್ಮೆ ಪಡುವಂಥ ಸಂಗತಿ. ಅವರಿಂದ ಇನ್ನಷ್ಟು ಈ ರೀತಿಯ ಸಾಧನೆಯಾಗಲಿ. ಅದು ಎಲ್ಲರಿಗೂ ಸ್ಪೂರ್ತಿಯಾಗಲಿ” ಎಂದು ಮುಖ್ಯಮಂತ್ರಿ ಹಾರೈಸಿದರು.

ನಟ ರವಿಚಂದ್ರನ್‌ ಮಾತನಾಡಿ, “ನನಗೆ ಇದು ಕುಟುಂಬದ ಸಮಾರಂಭ ಇದ್ದ ಹಾಗೆ. ಕಳೆದವರ್ಷ ಕೊರೋನದಿಂದ ಅನೇಕ ಜನ ಹತ್ತಿರದವರನ್ನು ಕಳೆದುಕೊಂಡಿದ್ದೀವಿ. ಕೆಟ್ಟಸಮಯ ಹೋದ ಮೇಲೆ ಒಳ್ಳೆಯ ಸಮಯ ಬರುತ್ತದೆ ಎನ್ನುತ್ತಾರೆ. ಈಗ ಒಳ್ಳೆಯ ಸಮಯ ಬಂದಿದೆ. ‘KGF2’ ಚಿತ್ರ ಪ್ರಚಂಡ ಜಯಭೇರಿ ಬಾರಿಸುತ್ತಿದೆ. ರಿಕ್ಕಿಕೇಜ್‌ಗೆ ಗ್ರ್ಯಾಮಿ ಬಂದಿದೆ. ಇನ್ನೂ ಲಹರಿ ಸಂಸ್ಥೆ ಜೊತೆ ನನ್ನ ಸ್ನೇಹ ಬಹಳ ವರ್ಷಗಳದು. ನನ್ನ ಪ್ರೇಮಲೋಕ ಸೇರಿದಂತೆ ಅನೇಕ ಚಿತ್ರಗಳ ಹಾಡುಗಳು ಈ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ” ಎಂದರು.

“ನಿಜಕ್ಕೂ ಇದೊಂದು ಆತ್ಮೀಯ ಸಮಾರಂಭ. ‘ಮನ ಮೆಚ್ಚಿದ ಹುಡುಗಿ’ ಸೇರಿದಂತೆ ನಮ್ಮ ಸಂಸ್ಥೆಯ ಅನೇಕ ಚಿತ್ರಗಳು ಲಹರಿ ಮೂಲಕ ಬಿಡುಗಡೆಯಾಗಿವೆ. ಈಗ ಅವರ ಸಂಸ್ಥೆಯ ನಿರ್ಮಾಣದ ಆಲ್ಬಂ ಸಾಂಗ್‌ಗಾಗಿ ರಿಕ್ಕಿಕೇಜ್ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇಬ್ಬರಿಗೂ ಶುಭಾಶಯ” ಎಂದರು ಶಿವರಾಜಕುಮಾರ್. ಲಹರಿ ವೇಲು ಅವರು ಮಾತನಾಡಿ, “ಕೇವಲ ಐನೂರು ರೂಪಾಯಿಯಿಂದ ಆರಂಭವಾದ ಸಂಸ್ಥೆ ಈ ಮಟ್ಟಕ್ಕೆ ಬರಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಇದರಲ್ಲಿ ಅಣ್ಣ ಮನೋಹರ್ ನಾಯ್ಡು ಅವರ ಪರಿಶ್ರಮ ಸಾಕಷ್ಟಿದೆ. ಲಹರಿ ನಿರ್ಮಾಣದ ಆಲ್ಬಂಗಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿರುವುದು ಸಂತೋಷ. ಅದಕ್ಕಾಗಿ ರಿಕ್ಕಿಕೇಜ್ ಅವರಿಗೆ ಧನ್ಯವಾದ” ಎಂದರು. ಲಹರಿ ಜೊತೆಗಿನ ಸಂಬಂಧ ಹಾಗೂ ಈ ಆಲ್ಬಂ ಸಾಂಗ್ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟ ರಿಕ್ಕಿಕೇಜ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

LEAVE A REPLY

Connect with

Please enter your comment!
Please enter your name here