ಪ್ರೊಫೆಸರ್ ರಾಜಶೇಖರ ಮಠಪತಿ ಅವರ ಕಾದಂಬರಿ ಆಧರಿಸಿ ವಿಶಾಲ್ ರಾಜ್ ನಿರ್ದೇಶಿಸಿರುವ ಸಿನಿಮಾ ‘ದಂಡಿ’. ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ನಡೆದ ಹೋರಾಟ ಚಿತ್ರದ ಕಥಾವಸ್ತು. ಯುವಾನ್ ದೇವ್ ಮತ್ತು ಶಾಲಿನಿ ಭಟ್ ನಟನೆಯ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ.
ಮೊನ್ನೆಯಷ್ಟೇ ಆಯೋಜನೆಗೊಂಡಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗೆ ಭಾಜನವಾಗಿತ್ತು ‘ದಂಡಿ’ ಸಿನಿಮಾ. ಇದೀಗ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಶಾಲ್ ರಾಜ್, “ಪ್ರೊಫೆಸರ್ ರಾಜಶೇಖರ ಮಠಪತಿ ಅವರ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. 1904 ರಿಂದ 1942ರವರೆಗೆ ದೇಶದಲ್ಲಿ ನಡೆದ ಚಳುವಳಿಗಳು ನಮ್ಮ ಚಿತ್ರಕ್ಕೆ ಸ್ಪೂರ್ತಿ. ಆದರೆ ‘ದಂಡಿ’ ಚಳುವಳಿಯನ್ನು ಕೇಂದ್ರಿಕರಿಸಲಾಗಿದೆ. ಗಾಂಧಿಯವರ ಸಾರಥ್ಯದಲ್ಲಿ ‘ದಂಡಿ’ ಸತ್ಯಾಗ್ರಹ ನಡೆಯುತ್ತಿದ್ದಾಗ ನಮ್ಮ ಉತ್ತರ ಕನ್ನಡದಲ್ಲೂ ಹೋರಾಟ ಆರಂಭವಾಯಿತು. ಅದನ್ನು ಚಿತ್ರದಲ್ಲಿ ತೋರಿಸಲಾಗಿದೆ” ಎಂದರು.
“ನಾನು ವಿಶಾಲ್ ರಾಜ್ ಅವರ ಹಿಂದಿನ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಾರಾ ಅವರೊಡನೆ ಅಭಿನಯಿಸಿದ್ದು ಸಂತೋಷ. ಈ ರೀತಿಯ ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ವಿಶಾಲ್ ರಾಜ್ ಹೆಚ್ಚು ನಿರ್ದೇಶಿಸಲಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಹಾರೈಸಿದರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಸುಚೇಂದ್ರ ಪ್ರಸಾದ್. ನಟಿ ತಾರಾ ಮಾತನಾಡಿ, “ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಸಂತಸವಾಗಿದೆ. ನಮ್ಮ ಚಿತ್ರಕ್ಕೆ ಈ ಬಾರಿ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಕೂಡ ಬಂದಿದೆ. ಇಂತಹ ಚಿತ್ರವನ್ನು ನಿರ್ದೇಶಿಸಿರುವುದಕ್ಕೆ ವಿಶಾಲ್ ರಾಜ್ ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ” ಎಂದರು. ಕಲ್ಯಾಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಷಾರಾಣಿ ಎಸ್.ಸಿ. ನಿರ್ಮಿಸಿರುವ ಚಿತ್ರಕ್ಕೆ ರಾಮ್ ಕ್ರಿಶ್ ಸಂಗೀತ, ರಮೇಶ್ ಬಾಬು ಛಾಯಾಗ್ರಹಣವಿದೆ. ಯುವಾನ್ ದೇವ್ ಮತ್ತು ಶಾಲಿನಿ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮೇಜರ್ ಸಿ.ಆರ್.ರಮೇಶ್, ಎನ್.ಮುನಿರಾಜುಗೌಡ ಅತಿಥಿಗಳಾಗಿ ಹಾಜರಿದ್ದು ಚಿತ್ರಕ್ಕೆ ಶುಭ ಹಾರೈಸಿದರು.