ಜಯತೀರ್ಥ ನಿರ್ದೇಶನದ ‘ಕೈವ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಟ ದರ್ಶನ್ ಟ್ರೇಲರ್ ಅನಾವರಣಗೊಳಿಸಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೈಜ ಘಟನೆ ಆಧರಿಸಿದ ಚಿತ್ರದ ಮುಖ್ಯಭೂಮಿಕೆಯಲ್ಲಿ ಧನ್ವೀರ್, ಮೇಘ ಶೆಟ್ಟಿ ನಟಿಸಿದ್ದಾರೆ.
ಧನ್ವೀರ್ ನಾಯಕರಾಗಿ ನಟಿಸಿರುವ ‘ಕೈವ’ ಚಿತ್ರದ ಟ್ರೇಲರ್ ಅನ್ನು ರಾಜಾಜಿನಗರದ KLE ಆಟದ ಮೈದಾನದಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ನಟ ದರ್ಶನ್ ಬಿಡುಗಡೆ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ನಟಿ ಆಶಾ ಭಟ್ ಸೇರಿದಂತೆ ಅನೇಕ ಗಣ್ಯರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ದರ್ಶನ್, ‘ಕೈವ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ನಾನು ಚಿತ್ರದ ಟ್ರೇಲರ್ ಜೊತೆಗೆ ಶೋ ರೀಲ್ ಕೂಡ ನೋಡಿದ್ದೇನೆ. ನಿರ್ದೇಶಕ ಜಯತೀರ್ಥ ಅವರು ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಧನ್ವೀರ್ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಒಂದೊಳ್ಳೆಯ ಚಿತ್ರಕ್ಕೆ ಸಿನಿಪ್ರೇಮಿಗಳ ಆಶೀರ್ವಾದ ಇರಲಿ’ ಎಂದರು.
ನಿರ್ದೇಶಕ ಜಯತೀರ್ಥ ಅವರಿಗೆ ಇದು ಭಿನ್ನ ಜಾನರ್ ಸಿನಿಮಾ. ನೈಜ ಘಟನೆಯೊಂದರ ಪ್ರೇರಣೆಯಿಂದ ಅವರು ಚಿತ್ರಕಥೆ ಹೆಣೆದಿದ್ದಾರೆ. ‘ಬೆಲ್ ಬಾಟಮ್ ಚಿತ್ರದ ವೇಳೆ ಮಾರ್ಚುರಿಗೆ ಹೋದಾಗ ಸಿಕ್ಕ ಕಥೆಯಿದು. 1983ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರ. ಕನ್ನಡ ಚಿತ್ರರಂಗದ ಐವರು ಚಿತ್ರನಿರ್ದೇಶಕರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ನನ್ನ ಹಿಂದಿನ ಚಿತ್ರಗಳಿಗೂ ಅವರು ಬಂದು ಹಾರೈಸಿದ್ದರು’ ಎಂದು ದರ್ಶನ್‌ರಿಗೆ ಧನ್ಯವಾದ ಹೇಳಿದರು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದರ್ಶನ್ ಅವರಿಗೆ ನಾಯಕ ಧನ್ವೀರ್ ಹಾಗೂ ನಾಯಕಿ ಮೇಘ ಶೆಟ್ಟಿ ವಿಶೇಷ ಧನ್ಯವಾದ ತಿಳಿಸಿದರು. ರಾಘು ಶಿವಮೊಗ್ಗ, ಬಿ.ಎಂ. ಗಿರಿರಾಜ್, ಅಶ್ವಿನ್ ಹಾಸನ್, ಛಾಯಾಗ್ರಾಹಕಿ ಶ್ವೇತಪ್ರಿಯ, ನಿರ್ಮಾಪಕ ರವೀಂದ್ರಕುಮಾರ್, ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ಸಿನಿಮಾ ಕುರಿತು ಮಾತನಾಡಿದರು.