ಶೂಟಿಂಗ್ ಆರಂಭಿಸಿದ ಒಂದು ತಿಂಗಳೊಳಗಾಗಿ ಸಿನಿಮಾ ಬಿಡುಗಡೆ ಮಾಡಿ ದಾಖಲೆ ಮಾಡಲು ನಿರ್ಧರಿಸಿದ್ದಾರೆ ನಿರ್ದೇಶಕ ಜನಾರ್ಧನ್. ಈ ಸಿನಿಮಾಗೆ ‘ದೇವರ ಆಟ ಬಲ್ಲವರಾರು?’ ಎನ್ನುವ ಶೀರ್ಷಿಕೆ ನಿಗಧಿಯಾಗಿದೆ. ಅರ್ಜುನ್, ಸಿಂಧು ಲೋಕನಾಥ್, ವರ್ಷ ವಿಶ್ವನಾಥ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈ ಹಿಂದೆ ‘ಫಿರಂಗಿ ಪುರ’ ಸಿನಿಮಾ ಮಾಡಬೇಕೆಂದು ಹೊರಟಿದ್ದ ನಿರ್ದೇಶಕ ಜನಾರ್ಧನ್ ಪಿ ಜಾನಿ ಅವರು ಹೊಸ ಯೋಜನೆಯೊಂದಿಗೆ ಮರಳಿದ್ದಾರೆ. ಅವರು ‘ದೇವರ ಆಟ ಬಲ್ಲವರಾರು’ ಸಿನಿಮಾ ಕೈಗೆತ್ತಿಕೊಂಡಿದ್ದು, ಇಲ್ಲೊಂದು ದಾಖಲೆ ಮಾಡುವ ಯೋಜನೆ ಅವರದು. ‘ಈ ಚಿತ್ರದ ಎಲ್ಲಾ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು ಎನ್ನುವುದು ನಮ್ಮ ಯೋಜನೆ. ನಮ್ಮ ಚಿತ್ರ ಗಿನ್ನಿಸ್ ಪುಸ್ತಕದಲ್ಲಿ ನಮ್ಮ ಶ್ರಮ ದಾಖಲಾಗಬೇಕು ಎನ್ನುವುದು ನಮ್ಮ ಅಸೆ. ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಜನಾರ್ಧನ್.
ಇದು 1975ರ ಕಾಲಘಟ್ಟದ ಕತೆಯಂತೆ. ಆಕ್ಷನ್ – ಥ್ರಿಲ್ಲರ್ ಕಥಾಹಂದರ. ಮಡಿಕೇರಿಯ ಸಮೀಪ ಬೃಹತ್ ಜಾಗದಲ್ಲಿ ಸೆಟ್‌ಗಳನ್ನು ಹಾಕಿ ಚಿತ್ರಸಲಾಗುತ್ತದೆ. ಸುಮಾರು 160ಕ್ಕೂ ಹೆಚ್ಚುಜನ ಕೆಲಸ ಮಾಡಲಿದ್ದಾರೆ. ‘ಆರಂಭಿಸಿದ ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಚಿತ್ರೀಕರಣವಾದ ನಂತರ ಎಲ್ಲಾ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು ಆ ಸ್ಥಳದಲ್ಲೇ ಇರುತ್ತಾರೆ’ ಎಂದು ತಮ್ಮ ಪ್ಲ್ಯಾನಿಂಗ್ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕರು. ಅರ್ಜುನ್ ರಮೇಶ್, ಸಿಂಧೂ ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್, ಅರ್ಜುನ್, ಮೇದಿನಿ ಕೇಳಮನೆ ಚಿತ್ರದ ಪ್ರಮುಖ ಪಾತ್ರಧಾರಿಗಳು.
‘ಶನಿ’ ಧಾರಾವಾಹಿ ಖ್ಯಾತಿಯ ಅರ್ಜುನ್ ರಮೇಶ್ ಅವರಿಗೆ ಇದು ಐದನೇ ಸಿನಿಮಾ. ತಮ್ಮ ಪಾತ್ರಕ್ಕಾಗಿ ಎರಡೇ ತಿಂಗಳಲ್ಲಿ ಹದಿನಾಲ್ಕು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಟಿ ಸಿಂಧೂ ಲೋಕನಾಥ್ ಮೂರು ವರ್ಷದ ನಂತರ ಈ ಸಿನಿಮಾದೊಂದಿಗೆ ಮತ್ತೆ ಕ್ಯಾಮೆರಾ ಎದುರು ನಿಂತಿದ್ದಾರೆ. ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಭಿನ್ನವಾದ ಪಾತ್ರ ಎನ್ನುತ್ತಾರೆ. ಹನುಮಂತರಾಜು, ಲತಾ ರಾಗ ಮತ್ತು ಅನಿಲ್ ಜೈನ್ ನಿರ್ಮಾಣದ ಚಿತ್ರಕ್ಕೆ ಶ್ಯಾನ್ ಎಲ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ‘ದೇವರ ಆಟ ಬಲ್ಲವರಾರು’ ಚಿತ್ರಕ್ಕೆ ‘ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೇ ಇರುತ್ತದೆ’ ಎನ್ನುವ ಅಡಿಬರಹವಿದೆ.