ಓಂ ರಾವುತ್‌ ನಿರ್ದೇಶನದ ‘ಆದಿಪುರುಷ್‌’ ಐತಿಹಾಸಿಕ ಸಿನಿಮಾ ಕಳಪೆ VFX, ಪಾತ್ರ ವಿನ್ಯಾಸ, ಸಂಭಾಷಣೆ ಶೈಲಿಯಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ನಟರಾದ ಅರುಣ್‌ ಗೋವಿಲ್‌, ಮುಖೇಶ್‌ ಖನ್ನಾ ಸೇರಿದಂತೆ ರಾಜಕೀಯ, ಧಾರ್ಮಿಕ ಕ್ಷೇತ್ರದ ಹಲವರು ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೇಪಾಳದ ಹಲವೆಡೆ ಚಿತ್ರವನ್ನು ನಿಷೇಧಿಸಲಾಗಿದೆ.

ಕಳೆದ ಶುಕ್ರವಾರ ತೆರೆಕಂಡ ಓಂ ರಾವುತ್‌ ನಿರ್ದೇಶನದ ‘ಆದಿಪುರುಷ್‌’ ಹಿಂದಿ ಸಿನಿಮಾ ವಿವಾದದ ಸುಳಿಗೆ ಸಿಲುಕಿದೆ. ಹಾಗೆ ನೋಡಿದರೆ ತಿಂಗಳುಗಳ ಹಿಂದೆ ಚಿತ್ರದ ಮೊದಲ ಟ್ರೈಲರ್‌ ಹೊರಬಿದ್ದಾಗಲೇ ಟೀಕೆಗಳು ವ್ಯಕ್ತವಾಗಿದ್ದವು. ಪ್ರಮುಖವಾಗಿ ಆಗ ಪಾತ್ರವಿನ್ಯಾಸ ಮತ್ತು ಕಳಪೆ VFX ಬಗ್ಗೆ ಸಿನಿಪ್ರೇಮಿಗಳು ಹಾಗೂ ಸಿನಿಮಾ ವಿಶ್ಲೇಷಕರು ಮಾತನಾಡಿದ್ದರು. ಇದರಿಂದ ಎಚ್ಚೆತ್ತ ಚಿತ್ರತಂಡ ಸಾಕಷ್ಟು ಸಮಯ ತೆಗೆದುಕೊಂಡು VFX ಬಗ್ಗೆ ಇನ್ನಷ್ಟು ಕುಸರಿ ಕೆಲಸ ಮಾಡಿ ಮತ್ತೊಂದು ಟ್ರೈಲರ್‌ ಬಿಟ್ಟಿದ್ದರು. ಈ ಟ್ರೈಲರ್‌ ಕೊಂಚ ಮಟ್ಟಿಗೆ ಮೊದಲಿನ ಟೀಕೆಗಳಿಗೆ ಉತ್ತರವಾಗಿ ಕಾಣಿಸಿತ್ತು. ಆದರೆ ಸಿನಿಮಾ ತೆರೆಕಂಡ ನಂತರ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

ಸಿನಿಮಾ ನೋಡಿದವರು ಪಾತ್ರವಿನ್ಯಾಸ, ಸಂಭಾಷಣೆ ಮತ್ತು VFX ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮನ ಪಾತ್ರಕ್ಕೆ ಪ್ರಭಾಸ್‌ ಹೊಂದಿಕೆಯಾಗಿಲ್ಲ ಎನ್ನುವುದರಿಂದ ಹಿಡಿದು ರಾವಣ, ಸೀತೆ, ಹನುಮಂತನ ಪಾತ್ರವಿನ್ಯಾಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಲಕ್ಷ್ಮಣನ ಪಾತ್ರದ ವ್ಯಕ್ತಿತ್ವವನ್ನೇ ಕಡೆಗಣಿಸಲಾಗಿದ್ದು, ಬಹಳಷ್ಟು ಪ್ರಮುಖ ಪಾತ್ರಗಳು ಪ್ರಸ್ತಾಪವಾಗಿಯೇ ಇಲ್ಲ ಎನ್ನುವವರೆಗೂ ದೂರುಗಳು ಕೇಳಿಬರುತ್ತಿವೆ. ಚಿತ್ರದ ಸಂಭಾಷಣೆಗಳು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿವೆ. ತಾವು ಆರಾಧಿಸುವ ಪೌರಾಣಿಕ ಪಾತ್ರಗಳು ಹೇಳುವ ಸಂಭಾಷಣೆಗಳು ಘನತೆಯಿಂದ ಕೂಡಿಲ್ಲ ಎನ್ನುವುದು ದೂರು. ಇದಕ್ಕೆ ಸಂಬಂಧಿಸಿದಂತೆ ಸಂಭಾಷಣೆ ಬರೆದ ಮನೋಜ್‌ ಮುಂತಾಶಿರ್‌ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಇದರಿಂದ ಎಚ್ಚೆತ್ತ ಚಿತ್ರತಂಡ ಕೆಲವು ಸಂಭಾಷಣೆಗಳನ್ನು ತೆಗೆಯುವುದಾಗಿ ಹಾಗೂ ಬದಲಾವಣೆ ಮಾಡುವುದಾಗಿ ಹೇಳಿಕೆ ಕೊಟ್ಟಿದೆ.

ಸೀತೆ ಕುರಿತಾದ ವಿವಾದ : ‘ಆದಿಪುರುಷ್‌’ ಬಿಡುಗಡೆಯಾದ ದಿನವೇ ನೇಪಾಳ ದೇಶದಿಂದ ಚಿತ್ರವನ್ನು ನಿಷೇಧಿಸುವ ಬೆದರಿಕೆ ಕೇಳಿಬಂದಿತು. ಚಿತ್ರದಲ್ಲಿನ ‘ಸೀತೆ ಭಾರತದ ಮಗಳು’ ಎನ್ನುವ ಸಂಭಾಷಣೆ ತೆಗೆಯುವಂತೆ ನೇಪಾಳ ರಾಜಧಾನಿ ಕಟ್ಮಂಡು ಮೇಯರ್‌ ಬಲೀಂದ್ರ ಷಾ ಒತ್ತಾಯ ಮಾಡಿದ್ದರು. ಇಲ್ಲಿಯವರೆಗೆ ತಮ್ಮ ಮನವಿಗೆ ಬೆಲೆ ಸಿಕ್ಕಿಲ್ಲ ಎಂದು ಅವರು ಕಟ್ಮಂಡು ಥಿಯೇಟರ್‌ಗಳಲ್ಲಿ ಚಿತ್ರವನ್ನು ನಿಷೇಧಿಸುವಂತೆ ಆದೇಶಿಸಿದ್ದಾರೆ. ನೇಪಾಳದ ಪೋಖರಾ ಸೇರಿದಂತೆ ಇತರೆ ನಗರಗಳಿಗೂ ಈ ಬ್ಯಾನ್‌ ಬಿಸಿ ತಟ್ಟಿದೆ. ಕೇವಲ ‘ಆದಿಪುರುಷ್‌’ ಚಿತ್ರವನ್ನಷ್ಟೇ ಅಲ್ಲದೆ ಎಲ್ಲಾ ಹಿಂದಿ ಸಿನಿಮಾಗಳನ್ನು ನಿಷೇಧಿಸಿರುವುದು ಬಾಲಿವುಡ್‌ಗೂ ತಲೆಬಿಸಿಯಾಗಿದೆ. ‘ಸೀತೆ ನೇಪಾಳದ ಮಗಳು. ನಾವು ನಂಬಿರುವ, ನಮ್ಮ ದೇಶದ ಸಾಂಸ್ಕೃತಿ ಇತಿಹಾಸಕ್ಕೆ ಧಕ್ಕೆ ತರುವ ಚಿತ್ರದಲ್ಲಿನ ಸಂಭಾಷಣೆ ತೆಗೆಯುವಂತೆ ನಾವು ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ನಿಷೇಧಕ್ಕೆ ಮುಂದಾಗಿದ್ದೇವೆ’ ಎಂದಿದ್ದಾರೆ ಮೇಯರ್‌ ಬಲೀಂದ್ರ ಷಾ.

Hollywood ki cartoon film! : ರಮಾನಂದ ಸಾಗರ್‌ ಅವರ ಜನಪ್ರಿಯ ಟೀವಿ ಸರಣಿ ‘ರಾಮಾಯಣ’ದಲ್ಲಿ ರಾಮನ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ರಾಮ ಎಂದರೆ ಜನರ ಕಲ್ಪನೆಯಲ್ಲಿ ಮೂಡಿರುವುದು ಈ ಪಾತ್ರದಲ್ಲಿ ನಟಿಸಿದ್ದ ಅರುಣ್‌ ಗೋವಿಲ್‌ ಅವರೇ. ‘ಆದಿಪುರುಷ್‌’ ಪಾತ್ರವಿನ್ಯಾಸದ ಬಗ್ಗೆ ಅರುಣ್‌ ಗೋವಿಲ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ‘ಇದು Hollywood ki cartoon film!’ ಎಂದು ಟೀಕಿಸಿದ್ದಾರೆ. ‘ಸಿನಿಮಾ ಮಾಡಿರುವವರಿಗೆ ರಾಮ, ಸೀತೆ ಮತ್ತು ರಾಮಾಯಣದ ಬಗ್ಗೆ ಗೌರವ ಇದ್ದಂತಿಲ್ಲ. ಪೌರಾಣಿಕ ಪಾತ್ರಗಳನ್ನು ಮಾಡ್ರನೈಜ್‌ ಮಾಡಲು ಹೋಗಿ ರಾಮಾಯಣ ಮಹಾಕಾವ್ಯದ ಆಶಯಕ್ಕೆ ಧಕ್ಕೆ ತಂದಿದ್ದಾರೆ. ನಾವು ನಮ್ಮ ಇತಿಹಾಸವನ್ನು ಸುಂದರವಾಗಿ ತೋರಿಸಬೇಕು. ತಪ್ಪಾಗಿ ತೋರಿಸಿ ಅಗೌರವ ತರುವುದು ಒಳ್ಳೆಯದಲ್ಲ’ ಎಂದಿದ್ದಾರೆ.

ಮುಖೇಶ್‌ ಖನ್ನಾ ಕಿಡಿ : ‘ಶಕ್ತಿಮಾನ್‌’ ಟೀವಿ ಸರಣಿ ಖ್ಯಾತಿಯ ನಟ ಮುಖೇಶ್‌ ಖನ್ನಾ ‘ಆದಿಪುರುಷ್‌’ ಚಿತ್ರದ ನಿರ್ದೇಶಕ ಓಂ ರಾವುತ್‌, ಸಂಭಾಷಣೆ ಬರೆದ ಮನೋಜ್‌ ಮುಂತಾಶಿರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿಕ್ಕಮಕ್ಕಳಿಗೂ ಗೊತ್ತಿರುವ ರಾಮಾಯಣ ಈ ಸಿನಿಮಾ ಮಾಡಿರುವವರಿಗೆ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ. ‘ನಿರ್ದೇಶಕ ಓಂ ರಾವುತ್‌ ಹಾಲಿವುಡ್‌ ಚಿತ್ರಗಳಿಂದ ಇನ್‌ಸ್ಪೈರ್‌ ಅಗಿದ್ದಾರೆ. ಇದೇ ಆರು ನೂರು ಕೋಟಿ ರೂಪಾಯಿ ವ್ಯಯಿಸಿ ಅವರು ಕಾಲ್ಪಿನಕ ಪಾತ್ರಗಳನ್ನು ಸೃಷ್ಟಿಸಿ ಸಿನಿಮಾ ಮಾಡಬಹುದಿತ್ತು. ನಾವು ಅಪಾರವಾಗಿ ಗೌರವಿಸುವ ರಾಮಾಯಣ ಕತೆ, ಪಾತ್ರಗಳ ಅಂದಗೆಡಿಸಿದ್ದಾರೆ. ರಾಮಾಯಣಕ್ಕೆ ಹೋಲಿಸಿದರೆ ಆದಿಪುರುಷ್‌ ಸಿನಿಮಾ ಭಯಾನಕ್‌ ಮಜಾಕ್‌! ‘ ಎಂದಿರುವ ಮುಖೇಶ್‌ ಖನ್ನಾ ಚಿತ್ರಕ್ಕೆ ಸಂಭಾಷಣೆ ರಚಿಸಿರುವ ಮನೋಜ್‌ ಮುಂತಾಶಿರ್‌ ಅವರ ಭಾಷಾಪ್ರಯೋಗದ ಬಗ್ಗೆ ಕಿಡಿಕಾರಿದ್ದಾರೆ. ಚಿತ್ರದಲ್ಲಿನ ಕೆಲವು ಸಂಭಾಷಣೆಗಳನ್ನು ಉದಾಹರಿಸಿ ಮನೋರ್‌ ಅವರನ್ನು ಪ್ರಶ್ನೆ ಮಾಡಿದ್ದಾರೆ.

ರಾಮನ ಪಾತ್ರ ಪೋಷಿಸಿರುವ ಪ್ರಭಾಸ್‌ ಅವರಿಗೂ ಮುಖೇಷ್‌ ಕಿವಿಮಾತು ಹೇಳುತ್ತಾರೆ. ‘ಪ್ರಭಾಸ್‌ ಅವರು ಒಳ್ಳೆಯ ವ್ಯಕ್ತಿ ಮತ್ತು ಉತ್ತಮ ನಟ ಹೌದು. ಆದರೆ ಈ ಸಿನಿಮಾ ಮತ್ತು ಪಾತ್ರ ವಿಶೇಷವಾದದ್ದು. ಹುರಿಗಟ್ಟಿದ ದೇಹ ತೋರಿಸಿದಾಕ್ಷಣ ರಾಮನಾಗಲು ಸಾಧ್ಯವಿಲ್ಲ. ರಾಮನ ಪಾತ್ರವನ್ನು ಮನಸ್ಸು, ಹೃದಯದಲ್ಲಿ ತುಂಬಿಕೊಳ್ಳಬೇಕು. ರಾಮನ ಪಾತ್ರಕ್ಕೆ ಸ್ಫೂರ್ತಿ ಬೇಕೆಂದರೆ ಅರುಣ್‌ ಗೋವಿಲ್‌ ಅವರ ಪಾತ್ರ, ಅಭಿನಯವನ್ನು ನೋಡಬೇಕು. ನಮ್ಮ ಕಲ್ಪನೆಯ ರಾಮನ ಪಾತ್ರದ ಅಂದಗೆಡಿಸಲು ನಿಮಗೆ ಯಾವ ಹಕ್ಕೂ ಇಲ್ಲ’ ಎಂದಿದ್ದಾರೆ ಮುಖೇಶ್‌ ಖನ್ನಾ. ಮತ್ತೊಂದೆಡೆ ನಿರ್ದೇಶಕ ಓಂ ರಾವುತ್‌ ಅವರು ರಾಮನ ಪಾತ್ರಕ್ಕೆ ಪ್ರಭಾಸ್‌ ಅವರನ್ನು ಆಯ್ಕೆ ಮಾಡಿದ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

300 ಕೋಟಿ ರೂ ಗಳಿಕೆ! : ನೆಗೆಟೀವ್‌ ರಿವ್ಯೂಗಳು ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಾಗೆ ನೋಡಿದರೆ ವಿವಾದಗಳು ಗಳಿಕೆಗೆ ವರವಾಗಿವೆ. ಭಾರತ ಮತ್ತು ವಿದೇಶಗಳಲ್ಲಿನ ಸ್ಕ್ರೀನಿಂಗ್‌ನ ಮೊದಲ ಮೂರು ದಿನದ ಗಳಿಕೆ 300 ಕೋಟಿ ರೂಪಾಯಿ ದಾಟಿದೆ ಎಂದು ಚಿತ್ರತಂಡ ಮಾಹಿತಿ ನೀಡುತ್ತದೆ. ಚಿತ್ರವನ್ನು ನಿರ್ಮಿಸಿರುವ T Series, ‘ಜನರ ಅಭಿಪ್ರಾಯಗಳನ್ನು ಗೌರವಿಸಿ ನಾವು ಚಿತ್ರದ ಕೆಲವು ಸಂಭಾಷಣೆಗಳನ್ನು ತೆಗೆಯುತ್ತಿದ್ದೇವೆ. CBFC ಸಲಹೆಯಂತೆ ಕೆಲವು ಸಂಭಾಷಣೆಗಳನ್ನು ಸೇರ್ಪಡೆಗೊಳಿಸುತ್ತೇವೆ’ ಎಂದಿದೆ. ಪರ – ವಿರೋಧದ ಚರ್ಚೆ, ವಿವಾದಗಳ ಮಧ್ಯೆ ಸಿನಿಪ್ರಿಯರು ಮಾತ್ರ ಸಿನಿಮಾ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಚಿತ್ರದ ಬಗೆಗಿನ ಋಣಾತ್ಮಕ ಮಾತುಗಳು ಈ ವಾರ ಚಿತ್ರದ ಗಳಿಕೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿವೆ ಎಂದು ನೋಡಬೇಕು.

Previous articleಸದ್ಯದಲ್ಲೇ ‘HIDE N SEEK’ ಟ್ರೈಲರ್‌ | ನಟಿ ಶಿಲ್ಪ ಮಂಜುನಾಥ್‌ ದ್ವಿಭಾಷಾ ಸಿನಿಮಾ
Next article‘ದೇವರ ಆಟ ಬಲ್ಲವರಾರು?’ | ದಾಖಲೆಯ ‘ತಿಂಗಳ ಸಿನಿಮಾ’ ಯೋಜನೆ

LEAVE A REPLY

Connect with

Please enter your comment!
Please enter your name here