ಧರ್ಮಶಾಲಾ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನ (DIFF) OTT ಕುರಿತ ಸಂವಾದದಲ್ಲಿ ಬಾಲಿವುಡ್‌ ಚಿತ್ರನಿರ್ದೇಶಕ ಹನ್ಸಲ್‌ ಮೆಹ್ತಾ ಮತ್ತು ಚಿತ್ರಸಾಹಿತಿ ಜ್ಯೂಹಿ ಚತುರ್ವೇದಿ ಭಾಗವಹಿಸಲಿದ್ದಾರೆ. ಇದೇ ನವೆಂಬರ್‌ 4ರಿಂದ 10ರವರೆಗೆ DIFF ಆನ್‌ಲೈನ್ ಚಿತ್ರೋತ್ಸವ ನಡೆಯಲಿದೆ.

ಪ್ರತಿಷ್ಠಿತ ಧರ್ಮಶಾಲಾ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ಗೆ ಇದೇ ನವೆಂಬರ್ 4ರಿಂದ ಚಾಲನೆ ಸಿಗುತ್ತಿದೆ. ಕೋವಿಡ್‌ನಿಂದಾಗಿ ವರ್ಚ್ಯುಯಲ್‌ನಲ್ಲಿ ನಡೆಯುತ್ತಿರುವ ಚಿತ್ರೋತ್ಸವ ಹಲವು ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಸಿನಿಮೋತ್ಸವದಲ್ಲಿ ನಡೆಯಲಿರುವ ಪ್ರಮುಖ ಸಂವಾದವೊಂದರಲ್ಲಿ ಚಿತ್ರನಿರ್ದೇಶಕ, ನಿರ್ಮಾಪಕ ಹನ್ಸಲ್ ಮೆಹ್ತಾ ಮತ್ತು ಚಿತ್ರಸಾಹಿತಿ ಜ್ಯೂಹಿ ಚತುರ್ವೇದಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ‘OTT ಪ್ಲಾಟ್‌ಫಾರ್ಮ್‌ನಿಂದಾಗಿ ಬದಲಾಗುತ್ತಿರುವ ಸಿನಿಮಾ ಮೇಕಿಂಗ್‌’ ಕುರಿತ ಸಂವಾದದಲ್ಲಿ ಅವರು ಭಾಗವಹಿಸಲಿದ್ದಾರೆ. ಸಿನಿಮಾ ವಿಶ್ಲೇಷಕ ಮತ್ತು ಚಿತ್ರಸಾಹಿತಿ ರಾಜಾ ಸೇನ್‌ ಈ ಕಾರ್ಯಕ್ರಮದ ಮಾಡರೇಟರ್.

ಹತ್ತನೇ DIFFನಲ್ಲಿ ಚಿತ್ರೋತ್ಸವದ ಭಾಗವಾಗಿ ಲೈವ್ ಟಾಕ್ಸ್‌, ಸಿನಿಮಾ ಪ್ರೀಪ್ರೊಡಕ್ಷನ್‌, ಪ್ರೊಪ್ರೊಡಕ್ಷನ್‌ಗೆ ಸಂಬಂಧಿಸಿದ ಚರ್ಚೆ, ಇಂಡಿಪೆಂಡೆಂಟ್‌ ಫಿಲ್ಮ್‌ ಮೇಕರ್ಸ್‌ ಜೊತೆಗಿನ ಸಂವಾದ, OTT ಕುರಿತ ಮಾತುಕತೆ ನಡೆಯಲಿವೆ. “ಚಿತ್ರೋತ್ಸವದಲ್ಲಿನ ಚರ್ಚೆ – ಸಂವಾದಗಳು ಯುವ ಸಿನಿಮಾ ನಿರ್ದೇಶಕರು ಹಾಗೂ ತಂತ್ರಜ್ಞರಿಗೆ ಸಿನಿಮಾಗೆ ಸಂಬಂಧಿಸಿದ ಕಲಿಕೆಗೆ ನೆರವಾಗಲಿವೆ. ಇವು ಈ ಮಾಧ್ಯಮದ ಕುರಿತಂತೆ ಉತ್ತಮ ಒಳನಾಟ ನೀಡಲಿವೆ. ಭಾರತೀಯ ಚಿತ್ರೋದ್ಯಮದಲ್ಲಿನ ಬೆಳವಣಿಗೆ, ನೂತನ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಟ್ರೆಂಡ್ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಮಾಹಿತಿ ಸಿಗಲಿದೆ” ಎಂದಿದ್ದಾರೆ ಸಿನಿಮೋತ್ಸವದ ನಿರ್ದೇಶಕ ರಿತು ಸರಿನ್‌. ಚಿತ್ರೋತ್ಸವದಲ್ಲಿ ಭಾರತದ ವಿವಿಧ ಪ್ರಾದೇಶಿಕ ಭಾಷಾ ಸಿನಿಮಾಗಳ ಜೊತೆ ವಿದೇಶಗಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನವೆಂಬರ್‌ 4ರಿಂದ 10ರವರೆಗೆ ಸಿನಿಮೋತ್ಸವ ನಡೆಯಲಿದೆ.

LEAVE A REPLY

Connect with

Please enter your comment!
Please enter your name here