ಎ ಪಿ ಅರ್ಜುನ್‌ ನಿರ್ದೇಶನದ ಬಹುನಿರೀಕ್ಷಿತ ‘ಮಾರ್ಟಿನ್‌’ ಸಿನಿಮಾದ ಟ್ರೇಲರ್‌ ನಿನ್ನೆ ಮುಂಬೈನಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ರಿಲೀಸ್‌ ಆಗಿದೆ. ಚಿತ್ರತಂಡ ಬಹುಭಾಷೆಗಳಲ್ಲಿ ಟ್ರೇಲರ್‌ ರಿಲೀಸ್‌ ಮಾಡಿರುವುದು ವಿಶೇಷ. ಟ್ರೇಲರ್‌ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಮಾರ್ಟಿನ್‌’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಮೊನ್ನೆ ಭಾನುವಾರ ಅಭಿಮಾನಿಗಳಿಗಾಗಿ ಚಿತ್ರತಂಡ ಚಿತ್ರಮಂದಿರದಲ್ಲಿ ‘ಮಾರ್ಟಿನ್‌’ ಟ್ರೇಲರ್‌ ತೋರಿಸಿತ್ತು. ಇದಾದ ನಂತರ ನಿನ್ನೆ (ಆಗಸ್ಟ್‌ 5) ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆದಿತ್ತು. ಈ ಪ್ರೆಸ್‌ಮೀಟ್‌ನಲ್ಲಿ ವಿವಿಧ ದೇಶಗಳಿಂದಲೂ ಪತ್ರಕರ್ತರು ಪಾಲ್ಗೊಂಡಿದ್ದರು ಎನ್ನುವುದು ವಿಶೇಷ. ವಿವಿಧ ಕಾರಣಗಳಿಗೆ ಸುದ್ದಿಯಲ್ಲಿದ್ದ ಎ ಪಿ ಅರ್ಜುನ್‌ ಸಿನಿಮಾ ಇದೀಗ ಟ್ರೇಲರ್‌ ಕಾರಣಕ್ಕೆ ಸುದ್ದಿಯಾಗಿದೆ. ಟ್ರೇಲರ್‌ಗೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಿರೀಕ್ಷೆಗೆ ತಕ್ಕಂತೆ ಟ್ರೇಲರ್‌ ಇಲ್ಲ ಎನ್ನುವುದು ಕೆಲವರ ಅಭಿಪ್ರಾಯವಾದರೆ ಇನ್ನೂ ಕೆಲವರು ಟ್ರೇಲರ್‌ ಅನ್ನು ಸೆಲೆಬ್ರೇಟ್‌ ಮಾಡುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್‌ಗೆ ನೂತನ ಟ್ರೇಲರ್‌ ಅನ್ನು ಹೋಲಿಸಿಯೂ ಮಾತನಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಮತ್ತೊಂದು ಟ್ರೇಲರ್‌ ಬಿಡುಗಡೆಗೊಳಿಸುವುದು ಚಿತ್ರತಂಡದ ಯೋಜನೆ.

ದುಬಾರಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಇದೇ ವರ್ಷ ಅಕ್ಟೋಬರ್‌ 11ಕ್ಕೆ ತೆರೆಕಾಣಲಿದೆ. ಅಧಿಕೃತವಾಗಿ ಧ್ರುವ ಸರ್ಜಾ ಅವರ ಮೊದಲ PAN ಇಂಡಿಯಾ ಚಿತ್ರವಿದು. ಬಹುಭಾಷಾ ನಟ, ಧ್ರುವ ಸರ್ಜಾ ಅವರ ಮಾವ ಅರ್ಜುನ್‌ ಸರ್ಜಾ ಚಿತ್ರಕ್ಕೆ ಕತೆ ರಚಿಸಿದ್ದಾರೆ ಎನ್ನುವುದು ಹೈಲೈಟ್‌. ಚಿತ್ರದ ನಾಯಕಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ‘ರಾಜ್‌ ವಿಷ್ಣು’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದ ಅವರು ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಮೂವರು ನಾಯಕಿಯರಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದರು. ‘ಏಕ್ ಅಲ್ಬೇಲಾ’ ಮರಾಠಿ ಚಿತ್ರದೊಂದಿಗೆ ವೈಭವಿ ಶಾಂಡಿಲ್ಯ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿರುವ ಅವರು ‘ನಿಶಾ’, ‘ಛತ್ರಸಾಲ್‌’ ವೆಬ್‌ ಸರಣಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ ‘ಮಾರ್ಟಿನ್‌’ಗೆ ಮಣಿಶರ್ಮ ಗೀತ ಸಂಗೀತ ಮತ್ತು ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ.

LEAVE A REPLY

Connect with

Please enter your comment!
Please enter your name here