ಕಿರುತೆರೆ ಮತ್ತು ಸಿನಿಮಾರಂಗದ ಹಿರಿಯ ನಟ, ನಿರ್ದೇಶಕ ರವಿಕಿರಣ್‌ ಪುತ್ರ ಪ್ರೇಮ್‌ ಕಿರಣ್‌ ಅಭಿನಯದ ‘ಟಾರ್ಗೆಟ್‌’ ಸಿನಿಮಾ ಸೆಟ್ಟೇರಿದೆ. ಡ್ರಗ್‌ ಮಾಫಿಯಾ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಸುತ್ತ ಹೆಣೆದ ಕಥಾವಸ್ತು. ರವಿವರ್ಮ ಚೊಚ್ಚಲ ನಿರ್ದೇಶನದ ಚಿತ್ರವಿದು.

ರಾಮ್‌ ಗೋಪಾಲ್‌ ವರ್ಮಾ, ಪೂರಿ ಜಗನ್ನಾಥ್‌ ಅವರಂತಹ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ರವಿವರ್ಮ ಅವರ ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ ‘ಟಾರ್ಗೆಟ್‌’. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಸಿನಿಮಾ ಸೆಟ್ಟೇರಿದೆ. ಕನ್ನಡ ಕಿರುತೆರೆ, ಸಿನಿಮಾದ ಹಿರಿಯ ನಟ ಮತ್ತು ನಿರ್ದೇಶಕ ರವಿಕಿರಣ್ ಪುತ್ರ ಪ್ರೇಮ್‌ಕಿರಣ್, ವಿಜಯ ಕಾರ್ತೀಕ್ ಹಾಗೂ ಸಚಿನ್ ಪುರೋಹಿತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಕ್ಷಿ ರಾಜ್, ಮೇಘಶ್ರೀ ಹಾಗೂ ಸಹರ್ ಕೃಷ್ಣನ್ ಚಿತ್ರದ ನಾಯಕಿಯರು. ಡ್ರಗ್ ಮಾಫಿಯಾ, ಯುವತಿಯರ ಮೇಲೆ ನಿರಂತರ ನಡೆಯುತ್ತಿರುವ ಶೋಷಣೆಯಂಥ ಪ್ರಮುಖ ವಿಷಯಗಳನ್ನಿಟ್ಟುಕೊಂಡು ಸಿನಿಮಾದ ಚಿತ್ರಕಥೆ ಹೆಣೆಯಲಾಗಿದೆ.

ನಿರ್ದೇಶಕ ರವಿವರ್ಮ ಮಾತನಾಡಿ, ” ಹಿಂದೆ ನಾನು ಕೆಲವು ವೆಬ್‌ ಸೀರೀಸ್‌ಗಳನ್ನು ಡೈರೆಕ್ಟ್‌ ಮಾಡಿದ್ದೇನೆ. ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗುತ್ತಿದ್ದೇನೆ. ಈ ಥರದ ಕಾನ್ಸೆಪ್ಟ್ ಇದುವರೆಗೆ ಬಂದಿಲ್ಲವೆಂದೇ ಹೇಳಬಹುದು. ಈಗಿನ ಜನರೇಷನ್ ಯಾವ ರೀತಿ ಸಾಗುತ್ತಿದೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಹೆಣ್ಣಿನ ಮೇಲೆ ಚಿಕ್ಕ ವಯಸ್ಸಿನಲ್ಲಿ ನಡೆದ ಶೋಷಣೆ ಮುಂದೆ ಯಾವ ರೀತಿ ಪ್ರಭಾವ ಬೀರುತ್ತದೆ? ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಲವ್‌ ಸ್ಟೋರಿ, ಮರ್ಡರ್ ಮಿಸ್ಟರಿ ಕೂಡ ಚಿತ್ರದಲ್ಲಿದೆ” ಎಂದರು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವುದು ಚಿತ್ರತಂಡದ ಯೋಜನೆ.

ಈ ಹಿಂದೆ ವಾಹಿನಿಯೊಂದರ ನಿರೂಪಕಿಯಾಗಿದ್ದ ಸಾಕ್ಷಿ ರಾಜ್ ಮಾತನಾಡಿ, “ಹುಡುಗಿಯರ ಮೇಲೆ ಚಿಕ್ಕ ವಯಸ್ಸಿಂದಲೂ ಒಂದಲ್ಲ ಒಂದು ರೀತಿ ಒತ್ತಡವಿದೆ. ಆಕೆ ಸದಾ ಶೋಷಣೆ ಎದುರಿಸುತ್ತಲೇ ಬಂದಿದ್ದಾಳೆ. ಇದರಿಂದ ಆಕೆಯ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ವಿವರಿಸಲಾಗುತ್ತಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ನಿರ್ದೇಶಕರ ಉದ್ದೇಶ” ಎಂದರು. ಹಿರಿಯ ನಟ, ನಿರ್ದೇಶಕ ರವಿಕಿರಣ್‌ ಪುತ್ರ ಪ್ರೇಮ್‌ ಕಿರಣ್‌ ಈಗಾಗಲೇ ‘ಪರಿವರ್ತನ’, ‘ಪ್ರೀತ್ಸೋಣ ಮತ್ತೊಮ್ಮೆ’ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಟಾರ್ಗೆಟ್‌’ ಅವರ ಮೂರನೇ ಸಿನಿಮಾ. “ಇಲ್ಲಿ ಕಥೆಯೇ ಹೀರೋ, ಚಿಕ್ಕ ವಯಸಿನಲ್ಲಿ ನಾವು ಹೇಗೆ ಬೆಳೆಯುತ್ತೇವೋ ಅದೇರೀತಿ ಮುಂದೆ ನಮ್ಮ ಮೈಂಡ್‌ಸೆಟ್ ಕೂಡ ಇರುತ್ತದೆ ಎಂದು ನಿರ್ದೇಶಕರು ಚಿತ್ರದಲ್ಲಿ ಹೇಳುತ್ತಿದ್ದಾರೆ. ಯುವ ಪೀಳಿಗೆಗೆ ಒಂದೊಳ್ಳೆ ಮೆಸೇಜ್‌ ಇದೆ” ಎಂದರು ಪ್ರೇಮ್‌ಕಿರಣ್‌.

ವಿಜಯ್ ಕಾರ್ತೀಕ್‌ ಅವರು ಚಿತ್ರದಲ್ಲಿ ನೆಗೆಟಿವ್‌ ಶೇಡ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರಿಗಿದು ಐದನೇ ಸಿನಿಮಾ. ಆಂಧ್ರಪ್ರದೇಶ ಮೂಲದ ಸಹರ್‌ ಕೃಷ್ಣನ್‌ ಮೂಲತಃ ಮಾಡೆಲಿಂಗ್‌ ಕ್ಷೇತ್ರದವರು. ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಿಂಗಳ ಹಿಂದೆ ತೆರೆಕಂಡ ‘ಮುಗಿಲ್‌ ಪೇಟೆ’ ಚಿತ್ರದಲ್ಲಿ ನಟಿಸಿದ್ದ ಮೇಘಶ್ರೀ ಅವರು ಚಿತ್ರದ ಮೂವರು ನಾಯಕಿಯರಲ್ಲೊಬ್ಬರು. ವಿ.ನಾಗೇಂದ್ರಪ್ರಸಾದ್ ಚಿತ್ರಕ್ಕೆ ಗೀತೆಗಳನ್ನು ರಚಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿನೋದ್‌ ಬಾಲ ಛಾಯಾಗ್ರಹಣ ಮಾಡುತ್ತಿದ್ದಾರೆ. ತೆಲುಗು ಮೂಲದ ಮೋಹನ್‌ ರೆಡ್ಡಿ ಹಾಗೂ ಸುಬ್ಬಾರೆಡ್ಡಿ ಚಿತ್ರದ ನಿರ್ಮಾಪಕರು.

Previous article‘U’ ಫಸ್ಟ್‌ಲುಕ್‌; ನಿರ್ದೇಶನಕ್ಕೆ ಮರಳಿದ ಉಪೇಂದ್ರ
Next articleವಿಶ್ಯೂಯಲಿ ಸೂಪರು! ಸ್ಕ್ರೀನ್‌ಪ್ಲೇ ಸುಮಾರು!

LEAVE A REPLY

Connect with

Please enter your comment!
Please enter your name here