ನಿರ್ದೇಶಕ ಪ್ರೇಮ್ ಪೈರಸಿ ಬಗ್ಗೆ ಮತ್ತೆ ಗುಡುಗಿದ್ದಾರೆ. ನಮ್ಮವರೇ ನಮ್ಮ ಕಾಲೆಳೆಯುತ್ತಿದ್ದಾರೆ ಎನ್ನುವ ಅವರು ಪೈರಸಿ ತಡೆಗೆ ವಾಣಿಜ್ಯ ಮಂಡಳಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ನಿರ್ದೇಶಕ ಪ್ರೇಮ್ ತಮ್ಮ ‘ಏಕ್‌ಲವ್‌ಯಾ’ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಫೆಬ್ರವರಿ 24ರಂದು ತೆರೆಕಂಡ ಸಿನಿಮಾಗೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಬಗ್ಗೆ ಅವರು ಹೇಳಿಕೊಂಡರು. ಅವರ ತಾರಾಪತ್ನಿ ರಕ್ಷಿತಾ ಈ ಚಿತ್ರದ ನಿರ್ಮಾಪಕಿ. ಇನ್ನು ಈ ಬಾರಿ ಅವರೇ ರಾಜ್ಯಾದ್ಯಂತ ಡಿಸ್ಟ್ರಿಬ್ಯೂಷನ್ ಕೂಡ ನಿರ್ವಹಿಸಿದ್ದಾರೆ. ಇದರಿಂದ ಅವರಿಗೆ ಚಿತ್ರನಿರ್ಮಾಣ, ಮಾರುಕಟ್ಟೆ, ವಿತರಣೆ, ಪ್ರದರ್ಶನದ ಬಗ್ಗೆ ಒಂದು ಅಂದಾಜು ಸಿಕ್ಕಿದೆ. ಮೊದಲ ಬಾರಿ ಚಿತ್ರನಿರ್ಮಾಣಕ್ಕೆ ಕೈಹಾಕಿರುವ ಅವರಿಗೆ ಪೈರಸಿ ಪಿಡುಗಿನ ನೈಜ ಅನುಭವವಾಗಿದೆ. ಚಿತ್ರಬಿಡುಗಡೆಗೆ ಮುನ್ನವೇ ಈ ಬಗ್ಗೆ ದನಿ ಎತ್ತಿದ್ದ ಪ್ರೇಮ್ ಈಗ ಮತ್ತೆ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಏಕ್‌ಲವ್‌ಯಾ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದು ಇಲ್ಲಿದೆ..
ಎರಡು ವಾರದ ಸಿನಿಮಾ!
“ಈಗ್ಗೆ ಹತ್ತು ವರ್ಷಗಳ ಹಿಂದೆ 25, 50, 100 ದಿನಗಳ ಕಾಲ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಅದು ಒಂದು ರೀತಿ ನಮಗೆಲ್ಲಾ ಹಬ್ಬವಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಸಿನಿಮಾ ಒಂದು ವಾರ, ಎರಡು ವಾರಗಳಷ್ಟು ಥಿಯೇಟರ್‌ನಲ್ಲಿದ್ದರೆ ಹೆಚ್ಚು ಎನ್ನುವಂತಾಗಿದೆ. ಇದು ಕನ್ನಡಕ್ಕಷ್ಟೇ ಅಲ್ಲ, ಜಗತ್ತಿನ ಯಾವುದೇ ಹೀರೋಗಳ ಸಿನಿಮಾ ಆದರೂ ಅಷ್ಟೇ. ಇದನ್ನು ನೇರವಾಗಿ ಹೇಳಲು ನನಗೇನೂ ಅಂಜಿಕೆಯಿಲ್ಲ. 20, 30 ಕೋಟಿ ರೂಪಾಯಿ ಬಜೆಟ್ ಹಾಕಿದ ನಿರ್ಮಾಪಕ ಮೊದಲ ವಾರ, ಎರಡನೇ ವಾರದಲ್ಲೇ ಈ ಹಣವನ್ನು ಮರಳಿ ಪಡೆಯಬೇಕು. ಇದರ ಮಧ್ಯೆ ಪೈರಸಿ ಕಾಟದ್ದೇ ದೊಡ್ಡ ಪಿಡುಗು. ಬಿಡುಗಡೆಯಾದ ಮೊದಲ ಶೋನಲ್ಲೇ ಪೈರಸಿ ಕಳ್ಳರು ಹುಟ್ಟಿಕೊಂಡಿರುತ್ತಾರೆ. ಇದಕ್ಕೆ ವಾಣಿಜ್ಯ ಮಂಡಳಿ ಗಟ್ಟಿಯಾದ ನಿರ್ಧಾರ ಮಾಡದಿದ್ದರೆ ಉಳಿಗಾಲವಿಲ್ಲ”
ನಮ್ಮವರೇ ನಮ್ಮ ಕಾಲೆಳೆಯುತ್ತಾರೆ
“ನಮ್ಮ ಸಿನಿಮಾಗೆ ತೊಂದರೆ ಕೊಡಲು ಹೊರಗಿನವರೇ ಆಗಬೇಕಿಲ್ಲ. ನಮ್ಮವರೇ ನಮ್ಮ ಕಾಲೆಳೆಯುವ ಕೆಲಸ ಮಾಡುತ್ತಾರೆ. ಕನ್ನಡ ಸಿನಿಮಾ ನೋಡುವ ಬೇರೆ ಬೇರೆ ಹೀರೋಗಳ ಅಭಿಮಾನಿಗಳು ಫೇಕ್ ಐಡಿ ಕ್ರಿಯೇಟ್ ಮಾಡಿಕೊಂಡು ಪೈರಸಿ ಮಾಡುತ್ತಾರೆ. ಹೀಗೆ ಪರಸ್ಪರ ಹೀರೋಗಳ ಮಧ್ಯೆ ಅವರೇ ತಂದಿಡುವ ಕೆಲಸವನ್ನೂ ಮಾಡುತ್ತಾರೆ. ನಮ್ಮ ಸಿನಿಮಾ ಸಂದರ್ಭದಲ್ಲಿ ನಮಗೆ ಇದರ ನೈಜ ಅನುಭವವಾಗಿದೆ. ಪೈರಸಿ ಲಿಂಕ್‌ಗಳನ್ನು ಹುಡುಕಿ ಡಿಲೀಟ್ ಮಾಡುವ ಕಾಂಟ್ರಾಕ್ಟ್ ಅನ್ನು ಒಂದು ಕಂಪನಿಗೆ ಕೊಟ್ಟಿದ್ದೆವು. ನಮ್ಮ ಸಿನಿಮಾದ ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನು ಅವರು ಡಿಲೀಟ್ ಮಾಡಿದ್ದಾರೆ. ಚಿಕ್ಕ ಮಾರುಕಟ್ಟೆ ಇರುವ ನಮಗೆ ಹೀಗೆ ಮೋಸವಾದರೆ ಉಳಿಗಾಲ ಹೇಗೆ? ವಾಣಿಜ್ಯ ಮಂಡಳಿಯವರು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು”
ಓಟಿಟಿಯೇ ಲೇಸು
“ಈ ಪೈರಸಿ ಎಷ್ಟರಮಟ್ಟಿಗೆ ಪಿಡುಗಾಗಿದೆ ಎಂದರೆ ಹತ್ತಾರು ಕೋಟಿ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡುವುದಕ್ಕೆ ಯೋಚಿಸುವಂತಾಗಿದೆ. ನಾವು ದೊಡ್ಡ ಬಜೆಟ್ ಹಾಕಿ ಎರಡು, ಮೂರು ವರ್ಷಗಳ ಕಾಲ ಸಿನಿಮಾ ಮಾಡುತ್ತೇವೆ. ದುಷ್ಟರು ಮನೆಯಲ್ಲಿ ಕುಳಿತು ಪೈರಸಿ ಮಾಡಿ ಸಿನಿಮಾ ಮಾರುಕಟ್ಟೆ ಹಾಳುಮಾಡುತ್ತಾರೆ. ಕಿರುತೆರೆಯಿಂದಾಗಿ ಸಿನಿಮಾ ಮಾರುಕಟ್ಟೆ ನಷ್ಟಕ್ಕೀಡಾಗಿತ್ತು. ಈಗ ಓಟಿಟಿ ಬಂದ ಮೇಲೆ ಜನರು ಥಿಯೇಟರ್‌ಗೆ ಬರೋದನ್ನು ಕಡಿಮೆ ಮಾಡುತ್ತಿದ್ದಾರೆ. ಇದನ್ನು ನೋಡಿದಾಗ ದುಬಾರಿ ಸಿನಿಮಾ ಮಾಡುವುದನ್ನು ಬಿಟ್ಟು ಎರಡು, ಮೂರು ಕೋಟಿಯಲ್ಲಿ ಓಟಿಟಿಗೇ ಸಿನಿಮಾ ಮಾಡೋದು ಸೇಫ್ ಎನಿಸುತ್ತಿದೆ”
ಕೊನೆಗೂ ಗೆದ್ದೆ!
“ಈ ಸಿನಿಮಾ ಮಾಡುವಾಗ ನನಗೆ ತುಂಬಾ ಭಯವಿತ್ತು. ಒಂದೆಡೆ ನಮ್ಮದೇ ನಿರ್ಮಾಣ ಎನ್ನುವುದು, ಮತ್ತೊಂದೆಡೆ ರಕ್ಷಿತಾ ಸಹೋದರನನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿರುವುದು. ಒಂದೊಮ್ಮೆ ಸಿನಿಮಾ ಹೆಚ್ಚೂ ಕಡಿಮೆ ಆದರೆ ರಾಣಾ ಭವಿಷ್ಯವೇನು ಎನ್ನುವ ಪ್ರಶ್ನೆ ಕಾಡಿತ್ತು. ಹಾಗಾಗಲಿಲ್ಲ, ಜನರು ಕೈಹಿಡಿದರು. ನಮ್ಮ ಚಿತ್ರದ ಹೀರೋ, ಹಿರೋಯಿನ್ – ರಾಣಾ, ರೀಷ್ಮಾ ಅವರಿಗೆ ಗೆಲುಗು ಸಿಕ್ಕಿದೆ. ಬಿಡುಗಡೆ ಹಿಂದಿನ ದಿನ ಸಿನಿಮಾ ವೀಕ್ಷಿಸಿದ ನಂತರ ರಕ್ಷಿತಾ ನನ್ನ ಬೆನ್ನು ತಟ್ಟಿದಾಗ ಸಮಾಧಾನವಾಯ್ತು. ಮುಂದೆ ನಮ್ಮ ಬ್ಯಾನರ್‌ನಲ್ಲೇ ರಾಣಾಗೆ ಮತ್ತೊಂದು ಸಿನಿಮಾ ಮಾಡೋಣ ಎಂದು ರಕ್ಷಿತಾಗೆ ಹೇಳುತ್ತಿದ್ದೇನೆ. ಆದರೆ ಎರಡನೇ ಬಾರಿ ರಾಣಾನನ್ನು ನಾನು ಡೈರೆಕ್ಟ್ ಮಾಡೋಲ್ಲ. ಇತರೆ ನಿರ್ದೇಶಕರು ಒಳ್ಳೆಯ ಕತೆಯೊಂದಿಗೆ ಬಂದರೆ ನಿರ್ಮಾಣ ಮಾಡುತ್ತೇವೆ”
ರಾಜ್ಯ ಸುತ್ತಿ ಬಂದೆವು
“ಚಿತ್ರನಿರ್ಮಾಣದ ಜೊತೆ ವಿತರಣೆ ಹೊಣೆಯನ್ನೂ ನಾವು ಈ ಬಾರಿ ವಹಿಸಿಕೊಂಡೆವು. ಇದು ನಮಗೇನೂ ರಿಸ್ಕ್ ಎನಿಸಿಲ್ಲ. ಬದಲಿಗೆ ಸಿನಿಮಾ ಮಾರುಕಟ್ಟೆ ಕುರಿತಂತೆ ಬಹಳಷ್ಟು ವಿಷಯಗಳ ಪ್ರಾಕ್ಟಿಕಲ್ ಅನುಭವ ಸಿಕ್ಕಿದೆ. ಯಾವ ಭಾಗದಲ್ಲಿ ಯಾವ ರೀತಿಯ ಸಿನಿಮಾಗೆ ಬೇಡಿಕೆ ಇದೆ? ಥಿಯೇಟರ್ ಲೆಕ್ಕಾಚಾರ ಹೇಗಿರುತ್ತದೆ? ಜಿಎಸ್‌ಟಿ ಕುರಿತಾದ ಅಂದಾಜು ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ನಾನು ಸಾಮಾನ್ಯವಾಗಿ ನನ್ನ ಬಿಡುಗಡೆಯಾದ ನನ್ನ ಸಿನಿಮಾ ಪ್ರಚಾರಕ್ಕೆಂದು ರಾಜ್ಯ ಸುತ್ತಿರಲಿಲ್ಲ. ಈ ಬಾರಿ ಮೈಸೂರು, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ವಿವಿಧೆಡೆ ಚಿತ್ರತಂಡದ ಜೊತೆ ಸುತ್ತಿ ಬಂದಿದ್ದೇನೆ. ಜನರು ನಮ್ಮ ಸಿನಿಮಾ, ಪಾತ್ರಗಳ ಬಗ್ಗೆ ಮೆಚ್ಚುಗೆಯಿಂದ ಮಾತನಾಡುತ್ತಿದ್ದಾರೆ. ಇದು ಸಿನಿಮಾದ ಗೆಲುವಿಗೆ ಸಾಕ್ಷಿ.”