‘ಗಂಗೂಬಾಯಿ ಕೊತ್ವಾಡಿ’ ಸಿನಿಮಾದಲ್ಲಿ ಸಂಜಯ್ ಲೀಲಾ ಬನ್ಸಾಲಿ ಏಕಕಾಲಕ್ಕೆ ವೇಶ್ಯೆಯೊಬ್ಬಳ ಕಥೆ ಹೇಳುತ್ತಾ, ಈ ದೇಶದ ಹೆಣ್ಣು ಮಕ್ಕಳ ಧಾರಣ ಬದುಕಿನ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಆಲಿಯಾ ಭಟ್ ತನ್ನ ಅಭಿನಯ ಮತ್ತು ಡೈಲಾಗ್ ಡೆಲಿವರಿ ಮೂಲಕ ಇಡೀ ಚಿತ್ರವನ್ನು ಆಕ್ರಮಿಸಿಕೊಂಡಿದ್ದಾಳೆ.

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಗಂಗೂಬಾಯಿ ಕಾಠಿಯವಾಡಿ’ ಸಿನಿಮಾವು ಮುಂಬೈ ಕಾಮಾಟಿಪುರದ ವೇಶ್ಯೆಯೊಬ್ಬಳ ನೈಜ ಬದುಕಿನ ಚಿತ್ರಣವಾಗಿದ್ದು ಇದನ್ನು ಪರಿಣಾಮಕಾರಿಯಾಗಿ ತೆರೆಗೆ ತರುವಲ್ಲಿ ಬನ್ಸಾಲಿ ಯಶಸ್ವಿಯಾಗಿದ್ದಾರೆ. 1960-70ರ ದಶಕಗಳ ಅಂದಿನ ಬಾಂಬೆ ನಗರದ ಮಾಫಿಯಾ ಜಗತ್ತು ಆ ಕಾಲದ ಕಾಮಾಟಿಪುರ ಚಿತ್ರಣವನ್ನು ಈ ಇಪ್ಪತ್ತೊಂದನೇ ಶತಮಾನದಲ್ಲಿ ಚಿತ್ರೀಕರಿಸುವುದು ನಿಜಕ್ಕೂ ಸವಾಲಿನ ಕ್ರಿಯೆ. ಈ ಕಾರಣಕ್ಕಾಗಿ ಸಂಜಯಲೀಲಾ ಬನ್ಸಾರಿ ಇಡೀ ಕಾಮಾಟಿಪುರವನ್ನು ಯಥಾವತ್ತಾಗಿ ಪ್ರತ್ಯೇಕ ಸೆಟ್‌ನಲ್ಲಿ ರೂಪಿಸಿ ಚಿತ್ರೀಕರಣ ಮಾಡಿದ್ದಾರೆ. ಚಿತ್ರದ ಬಂಡವಾಳ 160 ಕೋಟಿ ರೂಪಾಯಿಗಳಾಗಿದ್ದು ಬಹುತೇಕ ಹಣ ಇಂತಹ ಸನ್ನೀವೇಶಗಳಿಗೆ ಖರ್ಚಾಗಿರುವುದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ.

ಮೂರು ವರ್ಷಗಳ ಹಿಂದೆ ಸಂಜಯ್ ಬನ್ಸಾಲಿ ಈ ಕಥೆಯನ್ನು ಸಿನಿಮಾ ಮಾಡಲು ಆಯ್ಕೆ ಮಾಡಿಕೊಂಡಾಗ ನನಗೆ ಆಶ್ಚರ್ಯವಾಗಿತ್ತು. ಬರಹಗಾರ ಹಾಗೂ ಕ್ರೈಮ್ ವರದಿಗಾರನಾಗಿದ್ದ ಎಸ್.ಹುಸೇನ್ ಜಿಯಾದಿ ಎಂಬುವರು ಬರೆದಿದ್ದ ‘ಮುಂಬೈ ಮಾಫಿಯಾ ಕ್ವೀನ್’ ಕೃತಿಯನ್ನು ಆಧಾರವಾಗಿಟ್ಟುಕೊಂಡು ಮೂಲಕೃತಿಯನ್ನು ಎಲ್ಲಿಯೂ ಬದಲಾವಣೆ ಮಾಡದೆ ಚಿತ್ರಿಸಿದ್ದಾರೆ.

ಗಂಗೂ ಎಂಬ ಪ್ರಖ್ಯಾತ ವಕೀಲರೊಬ್ಬರ ಪುತ್ರಿ ಕಾಲೇಜಿನಲ್ಲಿ ಓದುವಾಗ ಯುವಕನೊಬ್ಬನನ್ನು ಪ್ರೀತಿಸಿ, ತಂದೆಗೆ ಹೆದರಿಕೊಂಡು ಯುವಕನೊಂದಿಗೆ ಮುಂಬೈ ನಗರಕ್ಕೆ ಪಲಾಯನ ಮಾಡಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುತ್ತಾಳೆ. ಆದರೆ, ಆತ ಅವಳನ್ನು ವೇಶ್ತಾವೃತ್ತಿಯ ಕಾಮಾಟಿಪುರದ ಘರ್‌ವಾಲಿಯೊಬ್ಬಳಿಗೆ ಮಾರಾಟ ಮಾಡಿ ತಲೆ ತಪ್ಪಸಿಕೊಳ್ಳುತ್ತಾನೆ. ಇಂತಹ ಧಾರುಣದ ಬದುಕಿನ ನಡುವೆಯೂ ವಿದ್ಯಾವಂತಳಾದ ಗಂಗೂ ಘರ್‌ವಾಲಿಯ ಮನೆಯಲ್ಲಿದ್ದ ಇತರೆ ವೇಶ್ಯೆಯರಿಗಿಂತ ಭಿನ್ನವಾಗಿ ಧೈರ್ಯವಂತಳಾಗಿ ಅವರಿಗೆ ಮಾರ್ಗದರ್ಶಿಯಾಗಿ ಇರುತ್ತಾಳೆ. ಒಮ್ಮೆ ಆ ಕಾಲದ ಖ್ಯಾತ ಮಾಫಿಯಾ ದೊರೆ ಕರೀಂ ಲಾಲನ ಶಿಷ್ಯನೊಬ್ಬ ಬೆಳಗಿನ ಜಾವ ಈಕೆಯ ಮನೆಗೆ ಬಂದು ಅತ್ಯಾಚಾರ ಮಾಡುವುದರ ಜೊತೆಗೆ ಹೀನಾಯ ಸ್ಥಿತಿ ತಲುಪುವಂತೆ ಆಕೆಯನ್ನು ಥಳಿಸಿಹೋಗಿರುತ್ತಾನೆ.

ಎದೆಗುಂದದ ಗಂಗೂಬಾಯಿ ಶುಕ್ರವಾರದಂದು ಮಸೀದಿಯ ಬಳಿ ಕಾಯ್ದು ಕರೀಂಲಾಲನನ್ನು ಭೇಟಿ ಮಾಡಿ ತನ್ನ ದುಸ್ಥಿತಿಯನ್ನು ಆತನಿಗೆ ಬಣ್ಣಿಸುತ್ತಾಳೆ. ತಾನು ಆಡಿದ ಮೊದಲ ಮಾತಿನಲ್ಲಿ ಅಣ್ಣಾ ಎಂದು ಕರೆದ ಹಿಂದೂ ಹೆಣ್ಣುಮಗಳ ಮಾತಿಗೆ ಮನಕರಗಿದ ಕರೀಂ ಲಾಲ, ಶಿಷ್ಯನನ್ನು ಮಾರಣಾಂತಿಕ ಥಳಿಸಿ ಬುದ್ಧಿ ಕಲಿಸುತ್ತಾನೆ. ಕಾಮಾಟಿಪುರದ ಮೇಲೆ ನಿಯಂತ್ರಣ ಹೊಂದಿದ್ದ ಕರೀಂಲಾಲನ ಜೊತೆ ಗಂಗೂಬಾಯಿ ಇರಿಸಿಕೊಂಡ ಸಹೋದರ ಸಂಭಂಧ ಇಡೀ ಅವಳ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ.

ತನ್ನ ಕಣ್ಣೆದುರು ವೇಶ್ಯಾವಾಟಿಕೆಗೆ ಮಾರಲ್ಪಟ್ಟ ಹೆಣ್ಣು ಮಕ್ಕಳನ್ನು ರಕ್ಷಿಸುವುದು, ಅವರನ್ನು ವಾಪಸ್ ಊರಿಗೆ ಕಳಿಸುವುದು, ಇಲ್ಲವೆ ವಿವಾಹ ಮಾಡಿ ಬದುಕನ್ನು ರೂಪಿಸುವುದರ ಮೂಲಕ ತನ್ನ ಬದುಕಿನಲ್ಲಿ ಎರೆಗಿದ ಈ ದುರಂತ ಯಾವೊಬ್ಬ ಹೆಣ್ಣುಮಗಳಿಗೂ ಬರಬಾರದು ಎಂದು ಬದುಕುವ ಗಂಗೂಬಾಯಿ, ಘರ್ ವಾಲಿಯ ನಿಧನವಾದ ನಂತರ ತಾನೇ ಆ ಪಟ್ಟವನ್ನೇರುತ್ತಾಳೆ. ವೇಶ್ಯೆಯರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿ ಅವರ ಶಿಕ್ಷಣಕ್ಕೆ ದಾರಿ ಮಾಡುತ್ತಾಳೆ. ಎಂಬತ್ತರ ದಶಕದ ಮುಂಬೈ ನಗರದ ಮಾಫಿಯಾ ಲೋಕದ ಪರಿಚಯವಿದ್ದವರಿಗೆ ಈ ಚಿತ್ರ ಮನತಟ್ಟುತ್ತದೆ.

ತಮಿಳು ಚಿತ್ರರಂಗದ ಮಣಿರತ್ನಂ ಅವರ ‘ನಾಯಗನ್’ ಸಿನಿಮಾಕ್ಕೆ ಸ್ಪೂರ್ತಿಯಾದ ವರದರಾಜ ಮೊದಲಿಯಾರ್ ಎಂಬಾತ ತಮಿಳುನಾಡಿನ ತೂತ್ತುಕುಡಿ ಎಂಬ ಬಂದರು ಪಟ್ಟಣದಿಂದ ಮುಂಬೈ ನಗರಕ್ಕೆ ವಲಸೆ ಬಂದು ಕಳ್ಳ ಬಟ್ಟಿ ಸಾರಾಯಿ ಮೂಲಕ ವರದಾಬಾಯಿ ಎಂಬ ಹೆಸರಿನಲ್ಲಿ ನಾಯಕನಾಗಿದ್ದ. ಹಾಜಿ ಮಸ್ತಾನ್ ಚಿನ್ನದ ಕಳ್ಳಸಾಗಾಣಿಕೆ ಮೂಲಕ ಹಾಗೂ ಕರೀಂಲಾಲ ಸಾರಾಯಿ ಮಾರಾಟ ಮತ್ತು ವೇಶ್ಯಾವಾಟಿಕೆ ಕೇಂದ್ರಗಳ ಮೇಲಿನ ನಿಯಂತ್ರಣಗಳ ಮೂಲಕ ಅಲ್ಲಿನ ಭೂಗತ ಜಗತ್ತಿನ ನಾಯಕರಾಗಿದ್ದರು. ಆ ವೇಳೆಯಲ್ಲಿ ಮಹಾರಾಷ್ಟ ಪೋಲಿಸ್ ಇಲಾಖೆಯ ಹೆಡ್ ಕಾನ್ಸಟೇಬಲ್ ಆಗಿದ್ದ ವ್ಯಕ್ತಿಯೊಬ್ಬನ ಪುತ್ರ ದಾವೂದ್ ಇಬ್ರಾಹಿ ಇನ್ನು ಬೆಳಕಿಗೆ ಬಂದಿರಲಿಲ್ಲ.

1985ರಿಂದ ನಿರಂತರವಾಗಿ ಮುಂಬೈ ನಗರಕ್ಕೆ ಹೋಗುತ್ತಿದ್ದ ನನಗೆ ಅಲ್ಲಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಕಚೇರಿಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತ ಹೆಗ್ಡೆ ಎಂಬುವರು ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಮೂಲಕ ಪರಿಚಯವಾಗಿದ್ದರು. ಅವರ ಮೂಲಕ ಇಡೀ ಮುಂಬೈ ಬದುಕು ಪರಿಚಯವಾಗಿತ್ತು. ವರದರಾಜನ್ ನೂರಾರು ಯುವಕರನ್ನು ತಮಿಳುನಾಡಿನಿಂದ ಕರೆತಂದು ಅವರ ಬದುಕಿಗೆ ಆಶ್ರಯವಾಗಿದ್ದ. ಅದೇ ರೀತಿ ಕರೀಂಲಾಲ ಮತ್ತು ಹಾಜಿಮಸ್ತಾನ್ ತಮ್ಮ ಭೂಗತ ಚಟುವಟಿಕೆಗಳಿಂದ ಸಂಪಾದಿಸುತ್ತಿದ್ದ ಹಣವನ್ನು ಬಡವರಿಗೆ ವಿನಿಯೋಗಿಸುವುದು, ಬಡ ಮುಸ್ಲಿಂ ಹೆಣ್ಣು ಮಕ್ಕಳ ವಿವಾಹ ನೆರವೇರಿಸುವುದು ಹೀಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರು.

ಹಾಜಿ ಮಸ್ತಾನ್ ತನ್ನ ಮನೆಯ ಮುಂದೆ ಇರಿಸಲಾಗಿದ್ದ ಮರದ ದಿಮ್ಮಿಯ ಮೇಲೆ ಬೀಡಿ ಸೇದುತ್ತಾ ಕುಳಿತುಕೊಂಡು ಮನೆ ಬಳಿ ಸಹಾಯಕ್ಕೆ ಬಂದವರ ಜೊತೆ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ ದೃಶ್ಯವನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ಎಂಬತ್ತರ ದಶಕದ ಪತ್ರಿಕೋದ್ಯಮದಲ್ಲಿ ಅಪರಾಧದ ಪತ್ರಿಕೋದ್ಯಮದ ಜೊತೆಗೆ ಮಾನವೀಯ ಮುಖವುಳ್ಳ ವರದಿಗೂ ವಿಶೇಷ ಪ್ರಾಧಾನ್ಯತೆ ಇತ್ತು. ಹಾಗಾಗಿ ವೇಶ್ಯಾವಾಟಿಕೆಗೆ ಸಿಲುಕಿದ ಅನೇಕ ಹೆಣ್ಣು ಮಕ್ಕಳ ಕಥನ, ಮಾಫಿಯಾ ಜಗತ್ತಿನ ದೊರೆಗಳ ಮಾನವೀಯ ಮುಖಗಳ ವರದಿ ಕೂಡ ಮುಂಭೈ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು.

ಮುಂಬೈ ನಗರದಲ್ಲಿರುವ ಕೊಳಚೆಗೇರಿ ಧಾರಾವಿ ನಗರವನ್ನು ಬಹುತೇಕ ಮಂದಿ ಅಕ್ರಮ ಚಟುವಟಿಕೆಗಳ ಮತ್ತು ವಲಸಿಗರ ಕೇಂದ್ರವೆಂದು ಕರೆಯುತ್ತಿದ್ದ ಸಂದರ್ಭದಲ್ಲಿ ಕಲ್ಪನಾ ಶರ್ಮಾ ಎಂಬ ಹಿಂದೂ ಪತ್ರಿಕೆಯ ಹಿರಿಯ ಪತ್ರಕರ್ತೆಯೊಬ್ಬರು ಬರೆದ ‘ಧಾರಾವಿ’ ಹೆಸರಿನ ಇಂಗ್ಲೀಷ್ ಕೃತಿ ಜಗತ್ತಿನ ಕಣ್ಣು ತೆರೆಸಿತು. ಸಣ್ಣ ಕೈಗಾರಿಕೆಗಳ ಕೇಂದ್ರವಾಗಿರುವ ಧಾರಾವಿಯಲ್ಲಿ ಎಲ್ಲಾ ಜಾತಿಯ, ಭಾಷೆಯ ಹಾಗೂ ಧರ್ಮಗಳ ಜನತೆ ಒಟ್ಟಾಗಿ ವಾಸಿಸುವ ಬಗೆ ಹಾಗೂ ಎಂದಿಗೂ ಕೋಮು ಜ್ವಾಲೆಯ ದಳ್ಳುರಿಗೆ ಸಿಲುಕದೆ ಅಲ್ಲಿನ ಜನತೆ ಬದುಕಿರುವ ಕುರಿತು ಗಮನ ಸೆಳೆದರು. ಕೋವಿಡ್ ಸಂದರ್ಭದಲ್ಲಿ ಅತ್ಯಂತ ಜನದಟ್ಟನೆಯ ಈ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಅತ್ಯಂತ ಕಡಿಮೆಯಲ್ಲಿತ್ತು. ಈ ಸಂಗತಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು.

ಗಂಗೂಬಾಯಿ ಕೊತ್ವಾಡಿ ಸಿನಿಮಾದಲ್ಲಿ ಸಂಜಯ್ ಲೀಲಾ ಬನ್ಸಾರಿ ಏಕಕಾಲಕ್ಕೆ ವೇಶ್ಯೆಯೊಬ್ಬಳ ಕಥೆ ಹೇಳುತ್ತಾ, ಈ ದೇಶದ ಹೆಣ್ಣು ಮಕ್ಕಳ ಧಾರಣ ಬದುಕಿನ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಸಿನಿಮಾದಲ್ಲಿ ಅಶಿಕ್ಷಿತ ವೇಶ್ಯೆಯೊಬ್ಬಳು ಗಂಗೂಬಾಯಿ ಮೂಲಕ ತನ್ನ ತಂದೆ ತಾಯಿಗೆ ಪತ್ರ ಬರೆಸುವ ದೃಶ್ಯವನ್ನು ನೋಡುತ್ತಿದ್ದಂತೆ ನನಗೆ ಆ ಕಾಲದ ಮುಂಬೈ ನಗರದ ಬದುಕು ನೆನಪಾಯಿತು. ಮುಂಬೈ ನಗರದ ವಿ.ಟಿ. ಎಂದು ಕರೆಸಿಕೊಳ್ಳುವ ವಿಕ್ಟೋರಿಯಾ ಟರ್ಮಿನಲ್ ರೈಲ್ವೆ ಸ್ಠೇಶನ್ ಹಿಂಭಾಗ ಬಂದರು ಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಹೆಡ್ ಪೋಸ್ಟ್ ಆಫೀಸ್ ಕಚೇರಿ ಇದೆ. ಕಚೇರಿಯ ಮುಂಭಾಗ ಸುಮಾರು ಮಂದಿ ಸಣ್ಣ ಬರೆಯುವ ಟೇಬಲ್ ಇಟ್ಟುಕೊಂಡು ಹಿಂದಿ, ಮರಾಠಿ, ತೆಲುಗು, ಕನ್ನಡ, ತಮಿಳು ಭಾಷೆಯಲ್ಲಿ ಪತ್ರ ಬರೆದುಕೊಡುವ ಕೆಲಸ ಮಾಡುತ್ತಿದ್ದರು. ನಲವತ್ತು ಪೈಸೆಯ ಇನ್ ಲ್ಯಾಂಡ್ ಲೆಟರ್ ಬರೆದುಕೊಡಲು ನಾಲ್ಕಾಣೆ, ಮನಿ ಆರ್ಡರ್ ಮಾಡಲು ಒಂದು ರೂಪಾಯಿ ಪಡೆಯುತ್ತಿದ್ದರು. ಹೋಟೆಲ್ ಕಾರ್ಮಿಕರು, ಕೂಲಿ ಕೆಲಸಗಾರರು, ವೇಶ್ಯೆಯರು ತಮ್ಮ ದುಡಿಮೆಯ ಒಂದು ಭಾಗವನ್ನು ತಂದೆ ತಾಯಿಗಳಿಗೆ ಕಳಿಸಿಕೊಡುವ ದೃಶ್ಯವನ್ನು ನಾನು ವಿ.ಟಿ. ಅಂದೇರಿ ಮತ್ತು ಮಾತುಂಗ ಹಾಗೂ ಚೆಂಬೂರ್ ಪೋಸ್ಟ್ ಆಫೀಸ್ ಬಳಿ ನೋಡಿದ್ದೆ. ಆ ವೇಳೆ ಭಾಳ್ ಥ್ಯಾಕರೆಯ ಶಿವಸೇನೆಯ ಕಾರ್ಯಕರ್ತರು ಉಚಿತವಾಗಿ ಈ ಕೆಲಸ ಮಾಡುತ್ತಿದ್ದರು.

ಈ ಸಿನಿಮಾಕ್ಕೆ ಬನ್ಸಾಲಿಯವರು ಆಲಿಯ ಭಟ್ ಎಂಬ ಯುವತಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ನನಗೆ ತಪ್ಪು ಮಾಡಿದ್ದಾರೆ ಎನಿಸಿತ್ತು. ಆದರೆ, ಚಿತ್ರನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ ತನ್ನ ಅಭಿನಯ ಮತ್ತು ಡೈಲಾಗ್ ಡೆಲಿವರಿ ಮೂಲಕ ಇಡೀ ಚಿತ್ರವನ್ನು ಆಕ್ರಮಿಸಿಕೊಂಡಿದ್ದಾಳೆ. ಇತ್ತೀಚೆಗಿನ ವರ್ಷಗಳಲ್ಲಿ ನಾನು ನೋಡಿದ ನಾಯಕಿಯೊಬ್ಬಳ ಅತ್ಯುತ್ತುಮ ಅಭಿನಯ ಇದಾಗಿದೆ. ದಕ್ಷಿಣ ಭಾರತದ ಖ್ಯಾತ ನಟಿ ಸಾವಿತ್ರಿ ಅವರ ಜೀವನ ಆಧಾರಿತ ತೆಲುಗು ಚಿತ್ರ ‘ಮಹಾನಟಿ’ ಸಿನಿಮಾದಲ್ಲಿ ಕೀರ್ತಿ ಸುರೇಶ್ ಎಂಬ ನಟಿಯಿಂದ ಇಂತಹ ಅಭಿನಯವನ್ನು ನಾನು ನೋಡಿದ್ದೆ. ಅತಿಥಿ ನಟನಾಗಿ ಕರೀಂಲಾಲನ ಪಾತ್ರದಲ್ಲಿ ನಟಿಸಿರುವ ಅಜಯ್ ದೇವಗನ್ ನಟನೆ ಬಹುಕಾಲ ಪ್ರೇಕ್ಷಕರ ಮನದಲ್ಲಿ ನಿಲ್ಲುತ್ತದೆ. ಗಂಗೂಬಾಯಿಯ ಬದುಕನ್ನು ಹೊರಜಗತ್ತಿಗೆ ಪರಿಚಯಿಸುವ ಪತ್ರಕರ್ತನ ಪಾತ್ರ ಕೂಡ ಗಮನ ಸೆಳೆಯುವಂತಹದ್ದು.

ಕಾಮಾಟಿಪುರವೆಂದರೆ, ಅದು ವೇಶ್ಯೆಯರ ಪ್ರತ್ಯೇಕ ಬಡಾವಣೆಯಲ್ಲ. ಮುಂಬೈ ನಗರದ ಕೇಂದ್ರಭಾಗದಲ್ಲಿರುವ ಈ ಪ್ರದೇಶವನ್ನು ನಾನು ವಿ.ಟಿ. ಸ್ಟೇಶನ್‌ನಿಂದ ಆಗಸ್ಟ್ ಕ್ರಾಂತಿ ಮೈದಾನಕ್ಕೆ ಹೋಗುತ್ತಿದ್ದ ರೂಟ್ ನಂಬರ್ 21ರ ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣಿಸುವಾಗ ಹಲವಾರು ಬಾರಿ ನೋಡಿದ್ದೀನಿ. ಇಡೀ ಕಾಮಾಟಿಪುರವನ್ನು ಪ್ರತ್ಯೇಕ ಸೆಟ್ ಮೂಲಕ ಅಲ್ಲಿನ ಚಟುವಟಿಕೆ, ಪಾತ್ರಗಳು, ಸಂಭಾಷಣೆ ಇವುಗಳನ್ನು ಯಥಾವತ್ತಾಗಿ ಹಿಡಿದಿಡುವುದರ ಮೂಲಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಗಂಗೂಬಾಯಿ ಕಾಮಾಟಿಪುರ ಎತ್ತಂಗಡಿಯನ್ನು ವಿರೋಧಿಸಿ ಅಂದಿನ ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡುವ ದೃಶ್ಯ ಕೂಡ ಮನ ಸೆಳೆಯುತ್ತದೆ.

ಇಂದಿನ ಡಿಜಿಟಲ್ ಮಾಧ್ಯಮದ ಪತ್ರಿಕೋದ್ಯಮದ ಯುಗದಲ್ಲಿ ಮಾನವೀಯ ವರದಿಗಳು ಸತ್ತುಹೋಗಿವೆ. ತಮ್ಮದಲ್ಲದ ತಪ್ಪಿಗೆ ಅಪಹರಣ, ವಂಚನೆ ಮತ್ತು ಬಡತನ ಕಾರಣಕ್ಕಾಗಿ ಭಾರತದ ಕೊಲ್ಕತ್ತ ನಗರದ ಸೋನಾ ಗಂಜ್, ದೆಹಲಿಯ ಜಿ.ಬಿ.ರೋಡ್, ಪೂನಾದ ಬುಧವಾರ ಪೇಟ್ ಹಾಗೂ ಮುಂಬೈ ನಗರದ ಕಾಮಾಟಿಪುರಕ್ಕೆ ದಿನನಿತ್ಯ ಸಾವಿರಾರು ಅಮಾಯಕ ಹೆಣ್ಣುಮಕ್ಕಳು ಜಮೆಯಾಗುತ್ತಿದ್ದಾರೆ. ಇವರ ಕಣ್ಣೀರಿನ ಹಾಗೂ ನೋವಿನ ಕಥನ ಕೇಳುವವರು ಯಾರೂ ಇಲ್ಲ. ಇಂತಹ ಹೆಣ್ಣು ಮಕ್ಕಳ ಧಾರುಣ ಬದುಕು ನನ್ನ ಬರವಣಿಯ ಮೇಲೆ ದಟ್ಟವಾದ ಪ್ರಭಾವ ಬೀರಿದೆ. ನಾನು ಅನುವಾದ ಮಾಡಿರುವ ಕೃತಿಗಳಲ್ಲಿ ಮತ್ತು ಅಧ್ಯಯನದ ಕೃತಿಗಳಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳ ಜೀವನ ಪ್ರಾಧಾನ್ಯತೆ ಪಡೆದಿರುವುದು ಇಂತಹ ಅನಾಮಿಕ ಅಕ್ಕತಂಗಿಯರ ಕಾರಣದಿಂದಾಗಿಯೇ ಹೊರತು ಬೇರೇನೂ ಇಲ್ಲ.

Previous articleತಿಳಿಹಾಸ್ಯದ ನಿರೂಪಣೆಯಲ್ಲಿ ಗಂಭೀರ ವಿಷಯ; ‘ಹರೀಶ ವಯಸ್ಸು 36’
Next articleಈಗೇನಿದ್ದರೂ ಎರಡು ವಾರಗಳ ಸಿನಿಮಾ ಅಷ್ಟೆ!; ನಿರ್ದೇಶಕ ಪ್ರೇಮ್‌

LEAVE A REPLY

Connect with

Please enter your comment!
Please enter your name here