ಅಮೇರಿಕನ್ ಕ್ರೈಂ ಸ್ಟೋರಿ ಎನ್ನುವ ಈ ಸರಣಿ ಹೆಸರಿನೊಂದಿಗೆ ಅಮೇರಿಕಾವನ್ನು ತಳುಕು ಹಾಕಿಕೊಂಡಿದ್ದರೂ ಇಲ್ಲಿಯ ವಸ್ತು ಮತ್ತು ಅದರ ನಿರ್ವಹಣೆಯನ್ನು ಮಾನವಿಕ ಆಸಕ್ತಿಯ ನೆಲೆಯಿಂದ ವೀಕ್ಷಿಸಿದಾಗ ಇದಕ್ಕೆ ಜಾಗತಿಕ ಸಾಮ್ಯ ಕಾಣುತ್ತದೆ.

Season : Impeachment.
Impeachment ಎಂದರೆ ದೋಷಾರೋಪಣೆ. ಅಮೇರಿಕಾದ ಮಟ್ಟಿಗೆ ಹೇಳುವುದಾದರೆ ಉನ್ನತ ಸಾರ್ವಜನಿಕ ಪದವಿಯಲ್ಲಿರುವವರು ತಮ್ಮ ಕಾರ್ಯನಿರ್ವಹಣೆ ಮಾಡುವಾಗ ನ್ಯಾಯ ಮತ್ತು ನೈತಿಕತೆಗೆ ಅಪಚಾರ ಎಸಗಿದಾಗ ಆ ವ್ಯಕ್ತಿಯ ಮೇಲೆ ದೋಷಾರೋಪಣೆ ಮಾಡುವುದನ್ನು ಇಂಪೀಚ್ಮೆಂಟ್ ಎಂದು ಕರೆಯಲಾಗುತ್ತದೆ. ಇದೊಂದು ಅಪಮಾನಕರ ಸಂಘಟನೆ. ಅಮೇರಿಕಾದ ಇತಿಹಾಸದಲ್ಲಿ ಅಲ್ಲಿನ ಅತ್ಯುನ್ನತ ಸರ್ಕಾರಿ ಸ್ಥಾನದಲ್ಲಿರುವ ಮೂರು ಮಂದಿ ಅಧ್ಯಕ್ಷರ ಮೇಲೆ ಹೀಗೆ ದೋಷಾರೋಪವನ್ನು ಮಾಡಲಾಗಿದೆ. 1868ರಲ್ಲಿ ಆಂಡ್ರ್ಯೂ ಜಾನ್ಸನ್, 1998ರಲ್ಲಿ ಬಿಲ್ ಕ್ಲಿಂಟನ್ ಮತ್ತು 2019 ಮತ್ತು 2021ರಲ್ಲಿ ಡೊನಾಲ್ಡ್ ಟ್ರಂಪ್. ಬಿಲ್ ಕ್ಲಿಂಟನ್ ಮೇಲೆ ನಡೆದ ದೋಷಾರೋಪ ಮೇಲೆ ಹೇಳಿದ ವೆಬ್ ಸರಣಿಯ ಕಥಾವಸ್ತು.

ಅಮೇರಿಕನ್ ಕ್ರೈಂ ಸ್ಟೋರಿ ಎನ್ನುವ ಈ ಸರಣಿ ಹೆಸರಿನೊಂದಿಗೆ ಅಮೇರಿಕಾವನ್ನು ತಳುಕು ಹಾಕಿಕೊಂಡಿದ್ದರೂ ಇಲ್ಲಿಯ ವಸ್ತು ಮತ್ತು ಅದರ ನಿರ್ವಹಣೆಯನ್ನು ಮಾನವಿಕ ಆಸಕ್ತಿಯ ನೆಲೆಯಿಂದ ವೀಕ್ಷಿಸಿದಾಗ ಇದಕ್ಕೆ ಜಾಗತಿಕ ಸಾಮ್ಯ ಕಾಣುತ್ತದೆ. ಈ ಸರಣಿಯ ಮೊದಲ ಕಥೆ ‘ಪೀಪಲ್ ವರ್ಸಸ್ ಓಜೆ ಸ್ಯಾಂಪ್ಸನ್’. ಓಜೆ ಸ್ಯಾಂಪ್ಸನ್ ಎನ್ನುವ ಆಫ್ರೋ ಅಮೇರಿಕನ್ ಆಟಗಾರನ ಮೇಲೆ ಅವನ ವಿಚ್ಚೇದಿತ ಅಮೇರಿಕನ್ ಹೆಂಡತಿ ಮತ್ತಾಕೆಯ ಗೆಳೆಯನನ್ನು ಕೊಂದ ಆರೋಪ ಮತ್ತದರ ವಿಚಾರಣೆ ಕಥಾವಸ್ತು. ಆತ ಜನಗಳ ಮೆಚ್ಚಿನ ಆಟಗಾರ, ಅದರಲ್ಲೂ ಆಫ್ರೋ ಅಮೇರಿಕನ್ನರ ಪಾಲಿಗಂತೂ ಆತ ಆರಾಧ್ಯ ದೈವ. ಆದರೆ ಆತ ಪ್ರಸಿದ್ಧಿಯ ಬೆನ್ನನ್ನು ಏರಿದಾಗಿನಿಂದ ತನ್ನನ್ನು ತಾನು ಹೆಚ್ಚಾಗಿ ಬಿಳಿಯರ ಜೊತೆಯಲ್ಲಿಯೇ ಗುರುತಿಸಿಕೊಂಡಿದ್ದಾನೆ. ಅವನು ಮದುವೆಯಾಗಿರುವುದು ಬಿಳಿಯ ಹೆಣ್ಣನ್ನು, ಆತನ ಮನೆ ಇರುವುದು ಬಿಳಿಯರ ಕಾಲನಿಯಲ್ಲಿ. ಅವನ ಮೇಲೆ ಆರೋಪ ಬಂದಾಗ ಬಹುತೇಕ ಬಿಳಿಯರು ಆತನ ಕೈ ಬಿಡುತ್ತಾರೆ, ಆದರೆ ಆಫ್ರೋ ಅಮೇರಿಕನ್ನರ ದೊಡ್ಡ ಸಮೂಹ ಅವನ ಬೆನ್ನಿಗೆ ನಿಲ್ಲುತ್ತದೆ. ಅದು ಕೇವಲ ಆತ ಪ್ರಖ್ಯಾತ ಎನ್ನುವ ಕಾರಣಕ್ಕಲ್ಲ. ಇತಿಹಾಸದುದ್ದಕ್ಕೂ ಅಧಿಕಾರ ಅವರ ಮೇಲೆ ತನ್ನ ಚಾವಟಿಯನ್ನು ಬೀಸುತ್ತಲೇ ಬಂದಿದೆ. ಅವರ ತಪ್ಪೇ ಇಲ್ಲದಾಗಲೂ ಸಹ ಅವರನ್ನು ಪ್ರಶ್ನಿಸಲಾಗುತ್ತದೆ, ಶಿಕ್ಷಿಸಲಾಗುತ್ತದೆ.

ಕಪ್ಪುವರ್ಣೀಯನೊಬ್ಬ ಒಳ್ಳೆಯ ಕಾರನ್ನು ಓಡಿಸಿಕೊಂಡು ಬಂದರೆ ಇನ್ನೊಂದು ಕ್ಷಣ ಯೋಚಿಸದೆ ಆ ಕಾರನ್ನು ನಿಲ್ಲಿಸಲಾಗುತ್ತದೆ, ಅದು ಕದ್ದ ಮಾಲೇ ಎನ್ನುವುದು ಖಾತ್ರಿ ಇದ್ದ ಹಾಗೆ! ಒಬ್ಬ ಪೋಲಿಸ್ ಅಧಿಕಾರಿಯಂತೂ ಸಾರ್ವಜನಿಕವಾಗಿಯೇ ಅದನ್ನು ಒಪ್ಪಿಕೊಂಡಿರುತ್ತಾನೆ, ಅದೂ ಒಂದಿನಿತೂ ಪಶ್ಚಾತ್ತಾಪ ಇಲ್ಲದೆ. ಅದೇ ಅಧಿಕಾರಿ ಓಜೆ ಯ ಕೇಸಿನಲ್ಲೂ ಇರುತ್ತಾನೆ. ಕಾಲಾಂತರದ ಅನುಭವ ಅವರಿಗೆ ಕಲಿಸಿರುವುದು ತಮ್ಮವನನ್ನು ನಂಬಬೇಕೆ ಹೊರತು ಅಧಿಕಾರಶಾಹಿಯನ್ನಲ್ಲ ಎನ್ನುವುದನ್ನು. ಈ ಎಲ್ಲಾ ಹಿನ್ನೆಲೆಯಲ್ಲಿ ಈ ವಿಚಾರಣೆ, ಅಮೇರಿಕಾದ ಜ್ಯೂರಿ ಪದ್ಧತಿ, ಅಲ್ಲಿನ ಕಪ್ಪುವರ್ಣೀಯರು ಇಂದಿಗೂ ಅನುಭವಿಸುವ ಅವಮಾನ, ಅಪಮಾನ, ಅಧಿಕಾರವನ್ನು ಕುರಿತು ಅವರಿಗಿರುವ ಅಪನಂಬಿಕೆ ಎಲ್ಲವನ್ನೂ ಕಟ್ಟಿಕೊಡಲಾಗಿದೆ. ಇದು ವರ್ಣ ಆಧಾರಿತ ಶ್ರೇಣೀಕರಣ, ಆದರೆ ಇದೆಲ್ಲದರ ನಡುವೆ ಅಲ್ಲಿ ಇನ್ನೊಂದು ಶ್ರೇಣಿಕೃತ ವ್ಯವಸ್ಥೆಯ ಲೆಕ್ಕಾಚಾರವೂ ನಡೆಯುತ್ತಿದೆ. ಈ ಕೇಸಿನ ಸರಕಾರಿ ವಕೀಲೆಯನ್ನು ಆಕೆ ಹೆಣ್ಣು ಎನ್ನುವ ಕಾರಣಕ್ಕೆ ನ್ಯಾಯಾಂಗ ವ್ಯವಸ್ಥೆ, ಅದನ್ನು ಪ್ರತಿನಿಧಿಸುವ ಜನ, ಮಾಧ್ಯಮ ಹೇಗೆ ಭೂತಕನ್ನಡಿಯ ಮೂಲಕ ನೋಡಿ, ಸ್ಯಾಂಪ್ಸನ್ನನ ಬದಲಿಗೆ ಅವಳ ವಿಚಾರಣೆಯನ್ನು ಮುಂಚೂಣಿಗೆ ತರುತ್ತದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಅವಳ ಆತ್ಮವಿಶ್ವಾಸ ಅಹಂಕಾರವಾಗಿ ಬಿಂಬಿತವಾಗುತ್ತದೆ, ಅವಳ ಕೇಶವಿನ್ಯಾಸ, ಬಟ್ಟೆ ಎಲ್ಲದರ ಬಗ್ಗೆ ಕಾಮೆಂಟ್ ಮಾಡಲಾಗುತ್ತದೆ. ಗಂಡನಿಂದ ವಿಚ್ಚೇದನ ಪಡೆಯುತ್ತಿರುವ ಆಕೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತೋರಿಸಿಕೊಂಡರೆ ಅವಳು ವೃತ್ತಿಪರತೆ ಇಲದವಳಾಗಿಯೂ, ತೋರಿಸಿಕೊಳ್ಳದಿದ್ದರೆ ಶೀತಲ ಹೃದಯದವಳಾಗಿಯೂ ಬಿಂಬಿತವಾಗುವ ವಿಡಂಬನೆ ಸಹ ಇಲ್ಲಿ ಕಂಡುಬರುತ್ತದೆ.

ಈ ಸರಣಿಯ ಎರಡನೆಯ ಕಥೆ ಸಲಿಂಗ ಪ್ರೇಮದ ಕಾರಣಕ್ಕೆ ಜರುಗಿದ ವರ್ಸಾಚೆಯ ಕೊಲೆಯ ಕಥೆ. ಇದೇ ಸರಣಿಯ ಮೂರನೆಯ ಕಥೆ ಇಂಪೀಚ್ಮೆಂಟ್. ಬಿಲ್ ಕ್ಲಿಂಟನ್ ಮತ್ತು ಮೋನಿಕಾ ಲೆವೆನ್ಸ್ಕಿಯ ಪ್ರಕರಣವನ್ನು ಕುರಿತಾದ್ದು. 1995-96ರಲ್ಲಿ 22-23 ವರ್ಷದ ಮೋನಿಕಾ ಶೇತಭವನದಲ್ಲಿ ಇಂಟರ್ನ್ ಆಗಿದ್ದಾಗ ಆಕೆ ಮತ್ತು ಅವಳ ದುಪ್ಪಟ್ಟು ವಯಸ್ಸಿನ, ಆಗ ಅಮೇರಿಕಾ ಅಧ್ಯಕ್ಷನಾಗಿದ್ದ ಬಿಲ್ ಕ್ಲಿಂಟನ್ ಅವರ ನಡುವಿನ ಸಂಬಂಧವನ್ನು ಇದರಲ್ಲಿ ಸೋಸಲಾಗಿದೆ. ಕ್ಲಿಂಟನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೌಲಾ ಜಾನ್ಸನ್ ಎನ್ನುವ ಮಹಿಳೆ ಮಾಡಿದ ಆರೋಪ ಅನೇಕ ತಿರುವುಗಳನ್ನು ತೆಗೆದುಕೊಳ್ಳುತ್ತದೆ. ಕ್ಲಿಂಟನ್ನನ ರಾಜಕೀಯ ವಿರೋಧಿಗಳು, ಅವನ ವಿರುದ್ಧದ ಶಕ್ತಿಗಳು, ರಿಪಬ್ಲಿಕನ್ ಪಕ್ಷ ಎಲ್ಲರೂ ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತಾರೆ. ಪೌಲಾ, ಮೋನಿಕಾ, ಲಿಂಡಾ ಟ್ರಂಪ್ ಎಲ್ಲರೂ ಇಲ್ಲಿ ಚದುರಂಗದ ಕಾಯಿಗಳಂತೆ ಬಳಕೆಯಾಗುತ್ತಾರೆ.

ಕ್ಲಿಂಟನ್ ಗವರ್ನರ್ ಆಗಿದ್ದಾಗ ತನ್ನ ಮೇಲೆ ಬಲಾತ್ಕಾರ ಎಸಗಿದ್ದ ಎಂದು ಮಹಿಳೆಯೊಬ್ಬಳು ಹೇಳಿದ ಸಾಕ್ಷ್ಯವನ್ನು ವಕೀಲನೊಬ್ಬನು ತಂದಾಗ ಕ್ಲಿಂಟನ್ ವಿರುದ್ಧ ವರದಿ ತಯಾರಿಸುವ ಕೆನೆತ್ ಸ್ಟಾರ್ ಹೇಳುವುದು, ’ಇಲ್ಲ ಇಲ್ಲ ಅದನ್ನು ಬಿಡು, ಅದರಿಂದ ಈ ಕೇಸಿಗೇನು ಲಾಭ ಇಲ್ಲ, ಅವನು ನ್ಯಾಯ ನಿರ್ವಹಣೆಗೆ ಅಡ್ಡಿ ಎಸಗಿದ್ದರೆ ಮಾತ್ರ ಅದು ನಮಗೆ ಸಹಾಯವಾಗುತ್ತದೆ’ ಎನ್ನುತ್ತಾನೆ. ವಕೀಲ ಅಲ್ಲಿಗೆ ನಿಲ್ಲಿಸದೆ, ಮತ್ತೆ ಒತ್ತಿ ಹೇಳುತ್ತಾನೆ, ’ಆದರೆ ಆಕೆಯ ಮೇಲೆ ಬಲಾತ್ಕಾರವಾಗಿದೆ…’, ಒಂದುನಿಮಿಷವೂ ಯೋಚಿಸದೆ ಕೆನೆತ್ ಸ್ಟಾರ್ ಹೇಳುತ್ತಾನೆ, ’ಸರಿ ಅವಳನ್ನು ಫುಟ್ ನೋಟ್ ನಲ್ಲಿ ಹಾಕಿ’. ಅಷ್ಟೇ! ಈ ರಾಜಕೀಯ ಚದುರಂಗದಾಟದಲ್ಲಿ ಆಕೆ ಒಂದು ಫುಟ್ ನೋಟ್ ಮಾತ್ರ… ಆಕೆ ಅಷ್ಟೇ ಅಲ್ಲ, ಸ್ವತಃ ಮೋನಿಕಾ ಸಹ ಇಲ್ಲಿ ಒಂದು ಕಾಯಿ ಮಾತ್ರ. ಕ್ಲಿಂಟನ್ ಗೆ ಹೇಗಾದರೂ ಪದವಿಯಲ್ಲಿ ಉಳಿಯುವ ಹಪಾಹಪಿ. ಅದಕ್ಕಾಗಿ ಆತ ಮೋನಿಕಾ ಬಗ್ಗೆ ಸುಳ್ಳು ಹೇಳುತ್ತಾನೆ, ಆಕೆ ನ್ಯಾಯಾಂಗಕ್ಕೆ ಸುಳ್ಳು ಪ್ರಮಾಣ ಸಲ್ಲಿಸುವಂತೆ ಮಾಡುತ್ತಾನೆ, ಧ್ವನಿಯಲ್ಲಿ ಒಂದು ಕ್ಷಣ ಕೂಡಾ ತಡವರಿಸದಂತೆ ಹಿಲರಿಗೆ ಸುಳ್ಳು ಹೇಳುತ್ತಾನೆ, ಟಿವಿ ಮುಂದೆ ನಿಂತು ಇಡೀ ಜಗತ್ತಿಗೆ ಸುಳ್ಳು ಹೇಳುತ್ತಾನೆ. ಮೂಲತಃ ಅವನೊಬ್ಬ ಬೇಟೆಗಾರ. ತನ್ನ ಮೋಡಿಯಿಂದ, ಅಧಿಕಾರದಿಂದ ಹೆಣ್ಣುಗಳನ್ನು ಆಕರ್ಷಿಸುವುದು, ಆಗದಿದ್ದರೆ ಬಲವಂತ ಮಾಡುವುದು ಅವನ ವೃತ್ತಿಜೀವನದುದ್ದಕ್ಕೂ ನಡೆಯುತ್ತಲೇ ಬಂದಿರುವುದಕ್ಕೆ ನಂತರ ಹಲವಾರು ಸಾಕ್ಷ್ಯಗಳು ಸಿಗುತ್ತಾ ಹೋಗುತ್ತವೆ. ಆದರೆ ಕೆನೆತ್ ಸ್ಟಾರ್ ಸಹ ಇನ್ನೊಂದು ರೀತಿಯ ಬೇಟೆಗಾರನೇ. ಕ್ಲಿಂಟನ್ ಬೇಟೆ ಹೆಣ್ಣಾದರೆ, ಕೆನೆತ್ ಸ್ಟಾರ್ ಬೇಟೆ ಕ್ಲಿಂಟನ್, ಆ ಹಾದಿಯಲ್ಲಿ ಮಿಕ್ಕವರೆಲ್ಲಾ ಕೇವಲ ಕೊಲಾಟರಲ್ ಡ್ಯಾಮೇಜ್ ಅಷ್ಟೇ.

ಇಡೀ ಸರಣಿಯಲ್ಲಿ ಇವರಿಬ್ಬರ ಕ್ರೌರ್ಯದಷ್ಟೇ ಕ್ರೌರ್ಯ ಮತ್ತು ವಂಚನೆ ಲಿಂಡಾ ಟ್ರಿಪ್ ಳದು. ಬುಷ್ ಆಡಳಿತದಲ್ಲಿ ಶ್ವೇತಭವನದಲ್ಲಿ, ಅಧಿಕಾರ ಮಧ್ಯದಲ್ಲಿ ಕೆಲಸ ಮಾಡುತ್ತಿದ್ದ ಅವಳನ್ನು ನಂತರ ಪೆಂಟಗನ್ ಗೆ ವರ್ಗಾಯಿಸಲಾಗುತ್ತದೆ. ಅದೊಂದು ರೀತಿಯಲ್ಲಿ ಪನಿಷ್ಮೆಂಟ್ ಟ್ರ್ಯಾನ್ಸ್ಫರ್. ಅವಳಿಗೆ ತನ್ನ ಪ್ರಾಮುಖ್ಯತೆಯ ಬಗ್ಗೆ ಇನ್ನಿಲ್ಲದ ನಂಬಿಕೆ ಮತ್ತು ಅಭಿಮಾನ. ಶ್ವೇತಭವನದಿಂದ ಹೊರಬಂದ ಅವಳಿಗೆ ಅದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸಿದಾಗ ರಾಜಕೀಯವನ್ನು ಕುರಿತು ಪುಸ್ತಕ ಬರೆದು ಎಲ್ಲವನ್ನೂ ಬಿಚ್ಚಿಡುವ ಪ್ರಸ್ತಾಪ ಬರುತ್ತದೆ. ಅದು ಸರಿ ಹೋಗುವುದಿಲ್ಲ. ಪೆಂಟಗನ್ ಕೆಲಸ ಬೋರು ಹೊಡೆಸುತ್ತಿರುತ್ತದೆ. ಅದೇ ಸಮಯದಲ್ಲಿ ಅಲ್ಲಿ ಅವಳಿಗೆ ಸಿಗುವ ಹುಡುಗಿ ಮೋನಿಕಾ. ಒಂದು ರೀತಿಯಲ್ಲಿ ಅವಳದೂ ಕೂಡ ಪನಿಷ್ಮೆಂಟ್ ಟ್ರ್ಯಾನ್ಸ್ಫರ್. ಅಷ್ಟರಲ್ಲಿ ಅಮೇರಿಕಾ ಅಧ್ಯಕ್ಷರೊಡನೆ ಅವಳ ಪ್ರಣಯ ಅಲ್ಲಿನ ಕಿವಿ ಮತ್ತು ಗೋಡೆ ಮತ್ತು ಬಾಗಿಲುಗಳನ್ನು ತಲುಪಿ, ಅಧ್ಯಕ್ಷರನ್ನು ’ಕಾಪಾಡಲು’ ಇವಳನ್ನು ಹೊರಗೆ ಕಳಿಸಲಾಗಿರುತ್ತದೆ. ತಮ್ಮಿಬರ ನಡುವೆ ನಿಜಕ್ಕೂ ಪ್ರೇಮದ ಕ್ಷಣಗಳಿದ್ದವು ಎಂದು ನಂಬುವ ಮೋನಿಕಾ ಇನ್ನೂ ಆತನ ಬರುವಿಕೆಗೆ, ಆತನ ಒಂದು ಫೋನ್ ಕರೆಗೆ ಕಾಯುತ್ತಲೇ ಇರುತ್ತಾಳೆ. ಜಗಕ್ಕೆ ಹೇಳಿಕೊಳ್ಳಲಾರದ ಪ್ರೇಮವನ್ನು ಯಾರಾದರೊಬ್ಬರಿಗೆ ಹೇಳಬೇಕು ಎಂದು ಚಡಪಡಿಸುತ್ತಿರುವ ಮೋನಿಕಾ ಲಿಂಡಾಗೆ ಎಲ್ಲವನ್ನೂ ಹೇಳುತ್ತಾ ಹೋಗುತ್ತಾಳೆ, ಲಿಂಡಾ ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳುತ್ತಾ ಹೋಗುತ್ತಾಳೆ. ಅಷ್ಟೇ ಅಲ್ಲ ಅಧ್ಯಕ್ಷರ ಜೊತೆಗಿನ ಸಂಬಂಧವನ್ನು ಮುಂದುವರೆಸಲು ಪ್ರೋತ್ಸಾಹಿಸುತ್ತಾಳೆ ಕೂಡಾ.

ಇದೆಲ್ಲವನ್ನೂ ಬಿಟ್ಟು ಬೇರೆ ಊರಿಗೆ ಹೋಗಬೇಕೆಂದುಕೊಂಡಿರುವ ಮೋನಿಕಾಳನ್ನು ’ವಿಚಾರಣೆ’ಗೆಂದು ಕರೆದುಕೊಂಡು ಹೋಗುವ ಎಫ್‌ಬಿಐ, ಒಬ ಕ್ರಿಮಿನಲ್ ಗಿಂತಾ ಕೆಟ್ಟದಾಗಿ ಆ 23-24ರ ಯುವತಿಯನ್ನು ನಡೆಸಿಕೊಳ್ಳುತ್ತದೆ. ಅದಕ್ಕೂ ಆಕೆ ಕೇವಲ ಒಂದು ಕಾಯಿ ಮಾತ್ರ. ಪೌಲಾಳ ಸಂಸಾರ ಮುರಿಯುತ್ತದೆ, ರಾಜಕೀಯ ಲಾಭಕ್ಕಾಗಿ ಅವಳನ್ನು ಬಳಸಿಕೊಂಡು ನಂತರ ಕೈಬಿಡಲಾಗುತ್ತದೆ. ಮೋನಿಕಾ ಬದುಕು ಅಲ್ಲೋಲಕಲ್ಲೋಲವಾಗುತ್ತದೆ. ಕ್ಲಿಂಟನ್ ರಾಜಕೀಯ ಭವಿಷ್ಯ ಮಣ್ಣಾಗುತ್ತದೆ. ಹಿಲರಿ ಮುನ್ನೆಲೆಗೆ ಬರುತ್ತಾಳೆ. ಉದ್ದಕ್ಕೂ ಮೋನಿಕಾ ತಮ್ಮಿಬ್ಬರದ್ದೂ ಒಪ್ಪಿತ ಸಂಬಂಧವೆಂದೇ ಹೇಳುತ್ತಾಳೆ. ಆದರೆ ಈ ಸಂಬಂಧದಲ್ಲಿ ಹೆಚ್ಚಿನ ಜವಾಬ್ದಾರಿ ಯಾರದ್ದು? ಏಕೆಂದರೆ ಇದು ಅ-ಸಮ ಸಂಬಂಧ ಎನ್ನುವುದರಲ್ಲಿ ಅನುಮಾನವೇ ಇಲ್ಲ. ತನ್ನ ವಯಸ್ಸಿನ ಅರ್ಧ ವಯಸ್ಸಿನ, ತನ್ನ ಕಛೇರಿಯಲ್ಲಿ ಇಂಟರ್ನ್ ಆಗಲೆಂದು ಕೆಲಸಕ್ಕೆ ಸೇರಿದ ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಸಂಬಂಧ ಬೆಳೆಸುವಾಗ ತನಗಿರುವ ಸ್ಥಾನದ ಮಹತ್ತನ್ನು ಗಣನೆಗೆ ತೆಗೆದುಕೊಂಡು, ಆ ಕಾರಣದಿಂದ ತನ್ನ ನಡೆನುಡಿಗಳನ್ನು ಪ್ರಶ್ನಾರ್ಹವಲ್ಲದಂತೆ ಇಟ್ಟುಕೊಳ್ಳುವ ಜವಾಬ್ದಾರಿ ಯಾರದ್ದು? ಈ ಸರಣಿ ಬೆಟ್ಟು ಮಾಡಿ ತೋರಿಸದೆಯೂ ಆ ಬಗ್ಗೆ ಮಾತನಾಡುತ್ತದೆ. ಮೋನಿಕಾ ಆಗಿ Beanie Feldstein, ಕ್ಲಿಂಟನ್ ಆಗಿ Clive Owen ಮತ್ತು ಲಿಂಡಾ ಆಗಿ Sarah Paulson ತಾವೇ ಕಥೆಯ ಮೂಲಪಾತ್ರಗಳಾಗಿದ್ದಾರೆ.

ಸರಣಿಯ ಸ್ಕ್ರೀನ್ ಪ್ಲೇ ಲೀನಿಯರ್ ಆಗಿಲ್ಲದೆ ಇರುವುದು, ಈ ಬಗೆಯ ಕಥೆಗಳಿಗೆ ಬೇಕಾದ ಸಂಕೀರ್ಣತೆಯನ್ನು ಕೊಡುತ್ತದೆ. ಆದರೆ ಇಡೀ ಸರಣಿಯ ನಿರೂಪಣೆಯಲ್ಲಿ ಲಿಂಡಾಳ ದ್ರೋಹ ಮತ್ತು ಅವಳ ವೈಯಕ್ತಿಕ ಸೋಲು ಮಾತ್ರ ಪ್ರಧಾನವಾಗಿ ಸ್ವಲ್ಪಮಟ್ಟಿಗೆ ಉಳಿದವರು ಸುಲಭವಾಗಿ ತಪ್ಪಿಸಿಕೊಂಡು ಬಿಡುತ್ತಾರೆ. ಒಂದು ಸನ್ನಿವೇಶದಲ್ಲಿ ಆಗ ಇರಾಕ್ ನಲ್ಲಿ ಬಾಂಬಿಂಗ್ ನಡೆಯುತ್ತಿರುತ್ತದೆ. ಆಗಷ್ಟೇ ಹಿಲರಿಗೆ ಮೋನಿಕಾ ವಿಷಯ ಗೊತ್ತಾಗಿದೆ. ಹಿಲರಿ ಮತ್ತು ಕ್ಲಿಂಟನ್ ಸ್ನೇಹಿತರ ಮನೆಗೆ ಹೋಗಲೆಂದು ಲಾಂಗ್ ಐಲ್ಯಾಂಡ್ ಬೀಚ್ ಗೆ ಹೋಗಿರುತ್ತಾರೆ. ಹಿಲರಿಯ ಶೀತಲ ಕೋಪ ಕ್ಲಿಂಟನ್ ನನ್ನು ಬೆಂಕಿಯಂತೆ ಸುಡುತ್ತಲಿರುತ್ತದೆ. ಸಮುದ್ರ ದಂಡೆಯಲ್ಲಿ ನಿಂತ ಅವನ ಕಣ್ಣುಗಳಿಂದ ನೀರು ಸುರಿಯುತ್ತಿರುತ್ತದೆ. ಬಾಂಬಿಂಗ್ ಬಗ್ಗೆ ಚರ್ಚಿಸಲು ಸಹಾಯಕನೊಬ್ಬ ಅದೇ ಸಮಯಕ್ಕೆ ಬರುತ್ತಾನೆ. ಜಗತ್ತಿನ ಸೋಕಾಲ್ಡ್ ಅತ್ಯಂತ ಬಲಿಷ್ಠ ರಾಷ್ಟ್ರದ, ಸೋಕಾಲ್ಡ್ ಅತ್ಯಂತ ಬಲಿಷ್ಠ ಮನುಷ್ಯನ ಆ ಕ್ಷಣದ ತೊಳಲಾಟ ಆ ಪಾತ್ರವನ್ನು ಸ್ವಲ್ಪ ಮಟ್ಟಿಗೆ ಮಾನವೀಯಗೊಳಿಸಿಬಿಡುತ್ತದೆ. ಆದರೆ ಲಿಂಡಾ ಮತ್ತು ಹಿಲರಿ ಮಾತ್ರ ಕಗ್ಗಲ್ಲಿನಂತೆಯೇ ಚಿತ್ರಿತಗೊಂಡಿದ್ದಾರೆ. ಈ ಸರಣಿಯಲ್ಲಿನ ಮೊದಲ ಮತ್ತು ಮೂರನೆಯ ಕಥೆಗಳು ವೈಯಕ್ತಿಕವಾಗಿ ನನಗೆ ಬಹಳ ಇಷ್ಟವಾದವು. ನೀವೂ ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

LEAVE A REPLY

Connect with

Please enter your comment!
Please enter your name here